Home ರಾಜ್ಯ ಕೆಪಿಎಸ್‌ಸಿ ನೇಮಕಾತಿ ಹಗರಣ: ಅಮಾನತುಗೊಂಡಿದ್ದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ ಇಡಿ ವಶಕ್ಕೆ

ಕೆಪಿಎಸ್‌ಸಿ ನೇಮಕಾತಿ ಹಗರಣ: ಅಮಾನತುಗೊಂಡಿದ್ದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ ಇಡಿ ವಶಕ್ಕೆ

0

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಅಮಾನತಿನಲ್ಲಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಹಾಗೂ ಆಯೋಗದ ಸದಸ್ಯೆ ಬಿ.ವಿ. ಗೀತಾ ಅವರನ್ನು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಇಬ್ಬರ ನಿವಾಸಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಇಡಿ ತಂಡಗಳು, ಸುದೀರ್ಘ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿವೆ.

ಪಶುಸಂಗೋಪನಾ ಇಲಾಖೆಯ 400 ಗೆಜೆಟೆಡ್ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆಯನ್ನು ಇಡಿ ತೀವ್ರಗೊಳಿಸಿದೆ. ಪರೀಕ್ಷೆಯ ಹಿಂದಿನ ದಿನ ರಾತ್ರಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವುದು, ಉದ್ಯೋಗಕ್ಕಾಗಿ ಲಂಚದ ಬೇಡಿಕೆ ಹಾಗೂ ಸಂದರ್ಶನದ ವೇಳೆ ಭಾರೀ ಹಣ ವಸೂಲಿ ಮಾಡಿರುವ ಆರೋಪಗಳು ಕೇಳಿಬಂದಿವೆ.

ಈ ಪ್ರಕರಣದಲ್ಲಿ ಈಗಾಗಲೇ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ, ಕೆಪಿಎಸ್‌ಸಿ ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗವಾರ್ ಹಾಗೂ ರಾಜಕೀಯ ಕಾರ್ಯಕರ್ತ ಬಸವರಾಜ ಕನ್ನಾಳೆ ಅವರನ್ನು ಬಂಧಿಸಲಾಗಿದ್ದು, ಅವರಿಬ್ಬರೂ ಸದ್ಯ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಶಿವಶಂಕರಪ್ಪ ಅವರ ನಿಕಟವರ್ತಿ ಹಾಗೂ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಸುಗುರೇಶ್ ಎಂಬಾತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು, ಆತನ ಹೇಳಿಕೆಯ ಆಧಾರದ ಮೇಲೆಯೇ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಕೃಷಿ ಇಂಜಿನಿಯರಿಂಗ್ ಪದವೀಧರರಾಗಿರುವ ಶಿವಶಂಕರಪ್ಪ ಅವರು 2019 ರಲ್ಲಿ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡು, 2021 ರಲ್ಲಿ ಅಧ್ಯಕ್ಷರಾಗಿದ್ದರು.

ಈ ಹಿಂದೆ ನಕಲಿ ಆದಾಯ ಪ್ರಮಾಣಪತ್ರ ನೀಡಿ ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಯತ್ನಿಸಿದ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ತೀವ್ರ ಛೀಮಾರಿ ಎದುರಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಇವರನ್ನು ಅಮಾನತುಗೊಳಿಸಲು ನಿರ್ಧರಿಸಿತ್ತು. ಸಿಐಡಿ ತನಿಖೆಯ ಜೊತೆಗೆ, ಮಧ್ಯವರ್ತಿಗಳ ಮೂಲಕ ನಡೆದ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಜಾಲವನ್ನು ಭೇದಿಸಲು ಇಡಿ ಪ್ರಸ್ತುತ ತನಿಖೆ ಮುಂದುವರಿಸಿದೆ.

You cannot copy content of this page

Exit mobile version