Monday, October 20, 2025

ಸತ್ಯ | ನ್ಯಾಯ |ಧರ್ಮ

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ ನಿಗದಿ: ಸಿಎಂ

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗೆ ಸಭೆ ಕರೆದು ಭೂ ಪರಿಹಾರಕ್ಕೆ ದರ ನಿಗದಿ ಮಾಡಲಾಗುವುದು. ರೈತರು ಯಾರೂ ಪರಿಹಾರ ಕೊಡಿ ಎಂದು ನ್ಯಾಯಾಲಯಕ್ಕೆ ಹೋಗಬಾರದು. ಇದರಿಂದ ವಿಳಂಬವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಅವರು ಇಂದು ಜಲಸಂಪನ್ಮೂಲ ಇಲಾಖೆ ಹಾಗೂ ಕೃಷ್ಣ ಜಲ ಭಾಗ್ಯ ನಿಗಮ ನಿಯಮಿತ ಇವರ ವತಿಯಿಂದ ಆಯೋಜಿಸಲಾಗಿದ್ದ ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ವನ್ನು ಅರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ರೈತ ಹೋರಾಟಗಾರರೊಂದಿಗೆ ಹಿಂದೆಯೇ ಬೆಳಗಾವಿಯಲ್ಲಿ ಸಭೆ ನಡೆಸಿತ್ತು. ಅಲ್ಲಿ ಎಲ್ಲರೂ ಒಪ್ಪಿಗೆ ಪ್ರಶಸ್ತಿ ನೀಡಿ ಎಂದಿರುವ ಹಿನ್ನೆಲೆಯಲ್ಲಿ ಸರ್ಕಾರವೂ ಒಪ್ಪಿಕೊಂಡಿದೆ. ಉಪಮುಖ್ಯಮಂತ್ರಿಗಳು ಇತ್ತೀಚೆಗೆ ಈ ಭಾಗದ ರೈತರು, ಶಾಸಕರೊಂದಿಗೆ ಸಭೆ ಕರೆದು ಚರ್ಚಿಸಿದ್ದು , ಒಪ್ಪಿಗೆ ಆದೇಶ ನೀಡುವುದು ಒಂದು ಹಂತಕ್ಕೆ ಬಂದಿದೆ. ಎಲ್ಲರ ಒಪ್ಪಿಗೆಯ ಮೇಲೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮುಂದಿನ ವಾರದೊಳಗೆ ಈ ಬಗ್ಗೆ ಇತ್ಯರ್ಥ ಮಾಡಲಾಗುವುದು ಎಂದರು.

ಗೆಜೆಟ್ ಅಧಿಸೂಚನೆಯಾದರೆ ಅಣೆಕಟ್ಟು ಎತ್ತರಿಸಲು ಅನುಕೂಲ
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ 519.6 ಮೀ. ರಿಂದ 524.25 ಮೀಟರ್ ಗೆ ಎತ್ತರಿಸುವುದರಿಂದ 130 ಟಿಎಂಸಿ ನೀರನ್ನು ಸಂಗ್ರಹ ಮಾಡಿಕೊಳ್ಳಬಹುದಾಗಿದ್ದು, ಅದನ್ನು ಬಳಕೆ ಮಾಡಲು ಅನುಕೂಲವಾಗಲಿದೆ. 173 ಟಿಎಂಸಿ ನೀರನ್ನು 6.6 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬಹುದಾಗಿದೆ. . ಮೂರನೇ ಹಂತದ ಬಗ್ಗೆಯೂ ತೀರ್ಮಾನವಾಗಿದ್ದು, ಗೆಜೆಟ್ ಅಧಿಸೂಚನೆಯಾಗಿಲ್ಲ. ಇದಾದರೆ ನೀರಾವರಿ ಹಾಗೂ ಅಣೆಕಟ್ಟು ಎತ್ತರಿಸುವ ಕೆಲಸಗಳು ಆಗಲು ಅನುಕೂಲವಾಗಲಿದೆ ಎಂದರು.

ನೀರಾವರಿ ನಮ್ಮ ಆದ್ಯತಾ ವಲಯ
ಈ ವಿಚಾರಗಳ ಬಗ್ಗೆ ಮೂರು ಬಾರಿ ಸಂಬಂಧಪಟ್ಟ ಕೇಂದ್ರ ಸಚಿವರು ಹಾಗೂ ಪ್ರಧಾನಿಗಳನ್ನು ಭೇಟಿ ಮಾಡಲಾಗಿದೆ. ಉಪಮುಖ್ಯಮಂತ್ರಿ ಐದು ಬಾರಿ ಭೇಟಿಯಾಗಿದ್ದಾರೆ. ನೀರಾವರಿ ನಮ್ಮ ಆದ್ಯತಾ ವಲಯ. ರೈತರಿಗೆ ಅನುಕೂಲವಾಗಬೇಕು. ರೈತರ ಜಮೀನುಗಳಿಗೆ ನೀರು ದೊರೆತು, ರೈತರ ಉತ್ಪನ್ನಗಳು ಹೆಚ್ಚಾಗಬೇಕು ಹಾಗೂ ಅವರ ಬದುಕು ಹಸನಾಗಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕೃಷ್ಣಾ ಭಾಗ್ಯ ಜಲನಿಗಮದ ಕಚೇರಿ ವಿಜಯಪುರ ಮತ್ತು ಬೆಂಗಳೂರಿನಲ್ಲಿದ್ದರೂ, ರೈತರ ಬದುಕನ್ನು ಹಸನುಗೊಳಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಉದ್ದೇಶವನ್ನು ಹೊಂದಿದೆ. ಸರ್ಕಾರ ರೈತರ ಬವಣೆಯನ್ನು ನಿವಾರಿಸಿ, ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ಕೃಷ್ಣೆಯ ನೀರನ್ನು ಉಳಿಸಿ, ರೈತರ ಕೃಷಿ ಚಟುವಟಿಕೆಗೆ ಬಳಸುವಂತಾಗಬೇಕೆಂಬ ಆಶಯವನ್ನು ಮುಖ್ಯಮಂತ್ರಿಗಳು ಹಾಗೂ ನಾನು ಹೊಂದಿದ್ದು, ಈ ದಿಸೆಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಹಂತಹಂತವಾಗಿ ಸ್ಥಾಪನೆ

ವಿಜಯಪುರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪಿಸುವ ಗುರಿಯಿದೆ. ಹಂತಹಂತವಾಗಿ ಈ ಗುರಿಯನ್ನು ಸಾಧಿಸಲಾಗುವುದು,. 2025-26 ನೇ ಬಜೆಟ್ ನಲ್ಲಿ ಬಾಗಲಕೋಟೆ, ಮಂಗಳೂರು, ಕೋಲಾರ ನಂತರ ವಿಜಯಪುರದಲ್ಲಿಯೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆಯ ಯೋಜನೆ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಲೇಜು ನಿರ್ಮಿಸಿ, ಸರ್ಕಾರಿ ದರದಲ್ಲಿ ಚಿಕಿತ್ಸೆ ನೀಡಬೇಕೆಂದು ಸೂಚನೆಯಂತೆ , ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page