ಮೈಸೂರಿನ ಕೆಆರ್ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಮೇಲೆ ಕಿಡಿಗೇಡಿಯೊಬ್ಬ ಹತ್ತಿ ಪುಂಡಾಟ ಮೆರೆದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇವಲ ಪ್ರತಿಮೆ ಮೇಲೆ ಏರಿದ್ದಲ್ಲದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಾಯಿಗೆ ಬೀಡಿ ಇಟ್ಟು ಹುಚ್ಚಾಟ ಮೆರೆದಿದ್ದಾನೆ.
ವ್ಯಕ್ತಿಯ ಹುಚ್ಚಾಟ ಕಂಡು ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಮೆಯಿಂದ ಕೆಳಗಿಳಿಸಲು ಯತ್ನಿಸಿದರೂ ಆತ ಇಳಿಯದೇ ಉದ್ದಟತನ ತೋರಿದ್ದಾನೆ. ದುರಂತವೆಂದರೆ ನಗರದ ಹೃದಯಭಾಗದಲ್ಲಿ ಈ ಕೃತ್ಯ ನಡೆದರೂ ಪೊಲೀಸರು ಮಾತ್ರ ಎಲ್ಲವೂ ಮುಗಿದ ನಂತರ ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಕಿಡಿಗೇಡಿಯ ಕೃತ್ಯದ ಬಗ್ಗೆ ಇಲಾಖೆಗೆ ಕರೆ ಮಾಡಿ ತಿಳಿಸಲು ಫೋನ್ ಮಾಡಿದರೂ ಇಲಾಖೆಯ ದೂರವಾಣಿ ಎಷ್ಟೇ ಹೊತ್ತಾದರೂ ಸಿಗದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.
ಕಿಡಿಗೇಡಿ ಪ್ರತಿಮೆಯ ಮೇಲೆ ಬೆಂಕಿ ಕಡ್ಡಿ ಗೀರುತ್ತಿದ್ದ. ನಾಲ್ವಡಿಯವರ ಬಾಯಿಗೆ ಬೀಡಿ ಇಡುವ ಪ್ರಯತ್ನ ಮಾಡುತ್ತಿದ್ದ. ಎಷ್ಟೇ ಹೇಳಿದರೂ ಪ್ರತಿಮೆಯ ಆವರಣದಿಂದ ಹೊರಬಂದಿರಲಿಲ್ಲ. ಕೊನೆಗೆ ಪೊಲೀಸ್ ಬರುವ ಸೂಚನೆಯ ಬೆನ್ನಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಅಪರಿಚಿತ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಇದೆ ಎಂದು ದೇವರಾಜ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಘು ಹೇಳಿದ್ದಾರೆ. ಸ್ಥಳಕ್ಕೆ ಹೋದಾಗ ಆತ ಅಲ್ಲಿಂದ ಪರಾರಿಯಾಗಿದ್ದು ಆತನನ್ನು ಪತ್ತೆ ಮಾಡಿ, ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.