Home ಕ್ರೀಡೆ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ: ಸುರಕ್ಷತಾ ವ್ಯವಸ್ಥೆಗೆ ಬದಲು ಮೂಢನಂಬಿಕೆ ಮೊರೆ ಹೋದ ಕೆಎಸ್‌ಸಿಎ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣ: ಸುರಕ್ಷತಾ ವ್ಯವಸ್ಥೆಗೆ ಬದಲು ಮೂಢನಂಬಿಕೆ ಮೊರೆ ಹೋದ ಕೆಎಸ್‌ಸಿಎ

0

11 ಅಮಾಯಕ ಜೀವಗಳನ್ನು ಬಲಿ ಪಡೆದ ಭೀಕರ ಕಾಲ್ತುಳಿತದ ನಂತರವೂ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ವ್ಯವಸ್ಥೆಗಳ ಬಲವರ್ಧನೆಗಿಂತ ದೇವರ ಮೊರೆ ಹೋಗುವತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಗಮನ ಹರಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ವತಿಯಿಂದ ಹೋಮ–ಹವನ ನಡೆಸಲಾಗಿದ್ದು, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಆದರೆ, ಈ ನಡೆ “ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮೂಢನಂಬಿಕೆಯ ಪ್ರದರ್ಶನ” ಎಂಬ ಆರೋಪಗಳಿಗೆ ಕಾರಣವಾಗಿದೆ.

ಈ ವರ್ಷದ ಜೂನ್ ತಿಂಗಳಲ್ಲಿ ಐಪಿಎಲ್ ಚೊಚ್ಚಲ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದುರಂತದ ಬಳಿಕ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿತ್ತು.

ಇದೀಗ ನೂತನ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಪ್ರಯತ್ನದ ಫಲವಾಗಿ, ಸರ್ಕಾರ ಗೃಹ ಇಲಾಖೆಯ 17 ಷರತ್ತುಗಳೊಂದಿಗೆ ಪಂದ್ಯಗಳಿಗೆ ಅನುಮತಿ ನೀಡಿದೆ. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ಸಮಿತಿಯು ಭದ್ರತೆ, ಜನಸಂದಣಿ ನಿಯಂತ್ರಣ, ತುರ್ತು ನಿರ್ವಹಣೆ ಸೇರಿದಂತೆ ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ.

ಆದರೆ ಈ ಎಲ್ಲ ಆಡಳಿತಾತ್ಮಕ ಮತ್ತು ತಾಂತ್ರಿಕ ಕ್ರಮಗಳ ನಡುವೆಯೇ, ಕ್ರೀಡಾಂಗಣದಲ್ಲಿ ಹೋಮ–ಹವನ ನಡೆಸಿರುವುದು ‘ವೈಜ್ಞಾನಿಕ ಸುರಕ್ಷತಾ ಕ್ರಮಗಳ ಬದಲು ಧಾರ್ಮಿಕ ಆಚರಣೆಗಳ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುವ ಮನೋಭಾವ’ ಎಂದು ಟೀಕಾಕಾರರು ಹೇಳಿದ್ದಾರೆ.

ಸಾರ್ವಜನಿಕ ಸುರಕ್ಷತೆ ದೇವರ ಕೈಗೆ ಬಿಡುವ ವಿಷಯವಲ್ಲ, ಅದು ಆಡಳಿತ ಮತ್ತು ಸಂಸ್ಥೆಗಳ ನೇರ ಜವಾಬ್ದಾರಿ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. “ಹೋಮದಿಂದಲ್ಲ, ಕಠಿಣ ನಿಯಮ ಜಾರಿಗೆ ಮತ್ತು ಪಾರದರ್ಶಕ ನಿರ್ವಹಣೆಯಿಂದ ಮಾತ್ರ ಕಾಲ್ತುಳಿತ ತಪ್ಪಿಸಬಹುದು” ಎಂಬ ಧ್ವನಿಗಳು ಕೇಳಿಬರುತ್ತಿವೆ.

ಇತ್ತ ಗೃಹ ಸಚಿವ ಜಿ. ಪರಮೇಶ್ವರ್, ಇಂದು ಸಮಿತಿಯ ಸಭೆ ನಡೆಯಲಿದ್ದು, ಯಾವ ಪಂದ್ಯಗಳಿಗೆ ಎಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಕೆಎಸ್‌ಸಿಎ ಕೈಗೊಂಡ ಹೋಮ–ಹವನ ಕ್ರಮವು ಆಡಳಿತಾತ್ಮಕ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವೇ ಎಂಬ ಪ್ರಶ್ನೆ ಮಾತ್ರ ಇನ್ನೂ ಉತ್ತರಕ್ಕಾಗಿ ಕಾಯುತ್ತಿದೆ.

You cannot copy content of this page

Exit mobile version