Wednesday, June 26, 2024

ಸತ್ಯ | ನ್ಯಾಯ |ಧರ್ಮ

ಕುಕಿ, ಚಿನ್ ಮತ್ತು ಮಿಜೋ ಸಮುದಾಯಗಳ ಏಕೀಕರಣಕ್ಕೆ ಕಾರಣವಾದ ಭಾರತ, ಬಾಂಗ್ಲಾದೇಶ ಮತ್ತು ಮಯನ್ಮಾರ್ ದೇಶಗಳಲ್ಲಿನ ಘಟನೆಗಳು

ಮಣಿಪುರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿಂದೆ ನೂರಾರು ವರ್ಷಗಳ ಹಿಂದಿನ ಘಟನೆಗಳ ಹಿನ್ನೆಲೆಯಿದೆ. ಭಾರತದ ಈಶಾನ್ಯ ರಾಜ್ಯಗಳ ರಾಜಕೀಯ ಬೆಳವಣಿಗೆಗಳು ದಕ್ಷಿಣಕ್ಕೆ ಒಂದಷ್ಟು ಅಪರಿಚಿತವೇ ಎನ್ನವಹುದು. ಈ ಕುರಿತು ಒಂದಷ್ಟು ಹೊಳಹು ನೀಡಬಲ್ಲ, ಶುಭಜ್ಯೋತಿ ಘೋಷ್‌ ಅವರು ಹಿಂದಿಯಲ್ಲಿ ಬರೆದ ಲೇಖನವನ್ನು ಪೀಪಲ್‌ ಮೀಡಿಯಾ ನಿಮಗಾಗಿ ಕನ್ನಡದಲ್ಲಿ ತಂದಿದೆ

1892ರ ಜನವರಿ ತಿಂಗಳಿನಲ್ಲಿ ಆಗಿ ಬ್ರಿಟಿಷ್‌ ಭಾರತದ ರಾಜಧಾನಿಯಾಗಿದ್ದ ಕಲ್ಕತ್ತಾದಲ್ಲಿ ಒಂದು ಬಹಳ ಮುಖ್ಯವಾದ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನವನ್ನು ಆಗಿನ ಕಿರಿಯ ಲಾಟ್ ಸಾಬ್ ಅಂದರೆ ಬಂಗಾಳದ ಲೆಫ್ಟಿನೆಂಟ್ ಗವರ್ನರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಬಂಗಾಳ, ಅಸ್ಸಾಂ ಮತ್ತು ಬರ್ಮಾಗಳ ಗಡಿಯಲ್ಲಿರುವ ಪರ್ವತ ಪ್ರದೇಶದ ಆಡಳಿತಾತ್ಮಕ ಚೌಕಟ್ಟು ಹೇಗಿರಬೇಕೆನ್ನುವುದನ್ನು ನಿರ್ಧರಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿತ್ತು.

ಈ ವೇಳೆಗಾಗಲೇ ಬ್ರಿಟಿಷರು ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಕುಕಿ-ಚಿನ್-ಲುಸಾಯ್ (ಕುಕಿ-ಚಿನ್-ಮಿಜೋ ಎಂದೂ ಕರೆಯುತ್ತಾರೆ) ಜನಾಂಗೀಯ ಗುಂಪಿನೊಂದಿಗೆ ಐದು ಬಾರಿ ಹೋರಾಡಿ, ಇನ್ನೂ ಮೂರು ಹೋರಾಟಗಳ ತಯಾರಿಯಲ್ಲಿದ್ದರು.

ಹೀಗಿರುವಾಗ, ಕಲ್ಕತ್ತಾದಲ್ಲಿ ನಡೆದ ಕುಕಿ-ಚಿನ್-ಲುಸಾಯ್ ಸಮ್ಮೇಳನದಲ್ಲಿ ಆ ಜನಾಂಗೀಯ ಗುಂಪುಗಳ ಜನರು ವಾಸಿಸುವ ವಿಶಾಲ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲು ನಿರ್ಧರಿಸಲಾಯಿತು. ಚಿನ್ ಹಿಲ್ಸ್ ಬೆಟ್ಟವನ್ನು ಬರ್ಮಾ,  ಲುಸಾಯ್ ಬೆಟ್ಟಗಳ ದಕ್ಷಿಣ ಭಾಗವನ್ನು ಬಂಗಾಳ ಮತ್ತು ಉತ್ತರ ಭಾಗವನ್ನು ಅಸ್ಸಾಂ ನಿಯಂತ್ರಿಸುವುದೆಂದು ಈ ಸಭೆಯ ಕೊನೆಯಲ್ಲಿ ತೀರ್ಮಾನಿಸಲಾಯಿತು.

ಕುಕಿ ಚಿನ್‌ ಮತ್ತು ಲುಸಾಯಿ ಬುಡಕಟ್ಟುಗಳ ಜನರು ತಾವೆಲ್ಲರೂ ಒಂದೇ ಜನಾಂಗೀಯ ಗುಂಪಿಗೆ ಸೇರಿದವರು ಮತ್ತು ನಾವೆಲ್ಲರೂ ಸಾಂಸ್ಕೃತಿವಾಗಿ ಒಂದು ಎಂದು ಭಾವಿಸುವಲ್ಲಿ 125 ವರ್ಷಗಳ ಹಿಂದೆ ಎಳೆಯಲ್ಪಟ್ಟ ಈ ವಿಭಜನಾ ರೇಖೆಯು ಕಾರಣವಾಯಿತು.

ಕುಕಿ ಸಮುದಾಯದ ಜನರು ಎಲ್ಲಿ ನೆಲೆಸಿದ್ದಾರೆ?

ಪ್ರಸ್ತುತ ಮಾನವಶಾಸ್ತ್ರಜ್ಷರಿಂದ ಒಟ್ಟಾರೆಯಾಗಿ ʼಜೋʼ ಎಂದು ಕರೆಯಲ್ಪಡುವ ಈ ಗುಂಪನ್ನು ಧರ್ಮವು ಒಂದು ಛತ್ರಿಯಡಿ ಒಗ್ಗೂಡಿಸಿದೆ. ಇವರಲ್ಲಿ ಹೆಚ್ಚಿನವರು ಕ್ರೈಸ್ತರು.

ಪ್ರಸ್ತುತ, ಈ ಜನರು ಭಾರತದ ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್, ನೆರೆಯ ಮಯನ್ಮಾರ್ ದೇಶದ ಚಿನ್ ರಾಜ್ಯದ ಚಿನ್ ಬೆಟ್ಟಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಬಾಂಗ್ಲಾದೇಶದ ಪರ್ವತ ಪ್ರದೇಶವಾದ ಚಿತ್ತಗಾಂಗ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅಂದರೆ, ಈಗ ಕುಕಿ-ಚಿನ್-ಲುಸಾಯ್ ಬುಡಕಟ್ಟಿನ ಸಾಂಪ್ರದಾಯಿಕ ಆವಾಸಸ್ಥಾನವು ಮೂರು ದೇಶಗಳ ಗಡಿಗಳಾಗಿ ಬದಲಾಗಿದೆ.

ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ನಡೆದ ಘಟನೆಗಳು ʼಜೋʼ ಬುಡಕಟ್ಟಿನ ಜನರನ್ನು ಒಂದಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಮತ್ತು ಮಿಜೋರಾಂ ಇದ ಕೇಂದ್ರ ಬಿಂದುವಾಗಿ ಹೊರಹೊಮ್ಮಿದೆ.

ಮಣಿಪುರದ ಕುಕಿ ಸಮುದಾಯ ಪ್ರಬಲವಾಗಿರುವ ತೊರ್ಬಾಂಗ್ ಎನ್ನುವ ಗ್ರಾಮವು ಇತ್ತೀಚಿನ ಹಿಂಸಾಚಾರದಿಂದ ಧ್ವಂಸಗೊಂಡಿದೆ

ಉದಾಹರಣೆಗೆ 2021ರಲ್ಲಿ ಮಯನ್ಮಾರಿನಲ್ಲಿ ನಡೆದ ಮಿಲಿಟರಿ ದಂಗೆಯ ನಂತರ, ಅಲ್ಲಿನ ಸೈನ್ಯವು ಚೀನಾದ ಬಂಡುಕೋರರ ವಿರುದ್ಧ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಅಂದಿನಿಂದ ಇದುವರೆಗೆ ಕನಿಷ್ಠ 50,000 ನಿರಾಶ್ರಿತರು ಮಯನ್ಮಾರಿನಿಂದ ಪಲಾಯನ ಮಾಡಿ ಮಿಜೋರಾಮ್‌ ರಾಜ್ಯದಲ್ಲಿ ಆಶ್ರಯ ಪಡೆದಿದ್ದಾರೆ.

ಅಂತೆಯೇ, ಬಾಂಗ್ಲಾದೇಶದ ಪರ್ವತ ಪ್ರದೇಶ ಚಿತ್ತಗಾಂಗ್ ಪ್ರದೇಶದಲ್ಲಿ,  ಸೇನೆ ಮತ್ತು ಸಶಸ್ತ್ರ ಕುಕಿ-ಚಿನ್ ನ್ಯಾಷನಲ್ ಫ್ರಂಟ್ (ಕೆಎನ್ಎಫ್) ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಕುಕಿ-ಚಿನ್ ಸಮುದಾಯದ ನೂರಾರು ಜನರು ಗಡಿಯನ್ನು ದಾಟಿ ಮಿಜೋರಾಂನ ಲಾಂಗ್ಟಾಲೈ ಜಿಲ್ಲೆಯ  ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಗುಂಪನ್ನು ಬಾಂಗ್ಲಾದೇಶದಲ್ಲಿ ಬಾಮ್ ಬುಡಕಟ್ಟು ಎಂದೂ ಕರೆಯಲಾಗುತ್ತದೆ.

12,000 ಕ್ಕೂ ಹೆಚ್ಚು ಜನರು ನಿರಾಶ್ರಿತರು.

ಮತ್ತೊಂದೆಡೆ, ಸುಮಾರು ಎರಡು ತಿಂಗಳ ಹಿಂದೆ ನೆರೆಯ ಮಣಿಪುರದ ಮೈಟಿ ಮತ್ತು ಕುಕಿ ಸಮುದಾಯಗಳ ನಡುವೆ ದೊಡ್ಡ ಪ್ರಮಾಣದ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಕುಕಿ ಬುಡಕಟ್ಟಿನ ಕನಿಷ್ಠ  12,000 ಜನರು ತಮ್ಮ ಮನೆಗಳನ್ನು  ತೊರೆಯಬೇಕಾಯಿತು. ಪ್ರಸ್ತುತ ಅವರೆಲ್ಲರೂ ಕೂಡಾ ಮಿಜೋರಾಂ ರಾಜ್ಯದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿದ್ದಾರೆ.

ಈ ಮಿಜೋರಾಂ ಒಂದು ಸಣ್ಣ ಗುಡ್ಡಗಾಡು ರಾಜ್ಯವಾಗಿದ್ದು ಇದು ಹೊರಗಿನಿಂದ ಬರುವ ಎಲ್ಲರಿಗೂ ಆಶ್ರಯ ನೀಡುತ್ತಿದೆ. ಅವರನ್ನು ತಮ್ಮ ಅಣ್ಣ-ತಂಗಿಯರೆಂದು ಭಾವಿಸಿ ಊಟೋಪಚಾರವನ್ನೂ ಒದಗಿಸುತ್ತಿದೆ. ಆದರೆ ಇದೆಲ್ಲದರ ನಡುವೆ ʼಜೋʼ ಸಮುದಾಯವನ್ನು ನಿರ್ಲಕ್ಷಿಸಿರುವ ಕುರಿತು ಅಸಮಧಾನ ಮತ್ತು ಪ್ರತಿಭಟನೆಗಳೂ ಇವೆ.

‘ಜೋ’ ಬುಡಕಟ್ಟು ಜನಾಂಗವು ರಾಷ್ಟ್ರೀಯ ಚಳುವಳಿಯ ಸುದೀರ್ಘ ಇತಿಹಾಸವನ್ನು ಹೊಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.   ಆದರೆ ಈ ಬುಡಕಟ್ಟಿನ ಜನರು ಇತ್ತೀಚಿನ ಘಟನೆಗಳಿಂದ ಕೆರಳಿದ್ದಾರೆ.

ಕಲ್ಕತ್ತಾ ಸಮ್ಮೇಳನದ ಪರಂಪರೆ

ಕಲ್ಕತ್ತಾದ ಚಿನ್-ಲುಸಾಯ್ ಸಮ್ಮೇಳನವು ‘ಜೋ’ ಜನಾಂಗೀಯ ಗುಂಪಿನ ಭೌಗೋಳಿಕತೆಯನ್ನು ಒಂದು ನಿಗದಿತ ಗಡಿಯಾಗಿ ವಿಂಗಡಿಸಿತ್ತು. ಆದರೆ ಅವರಿಗೆ ಇಲ್ಲಿಯವರೆಗೆ ಅದನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗಿಲ್ಲ.

1892ರ ಜನವರಿ  25ರಿಂದ  29ರವರೆಗೆ ಕಲ್ಕತ್ತಾದ ಫೋರ್ಟ್ ವಿಲಿಯಂನಲ್ಲಿ  ನಡೆದ   ಆ ಸಮ್ಮೇಳನಕ್ಕೆ ಮೊದಲು, ಕುಕಿ-ಚಿನ್ ಮತ್ತು ಲುಸಾಯ್ ಸಮುದಾಯಗಳು ಸಮಾನ ನೆಲೆಯಲ್ಲಿದ್ದವು ಮತ್ತು ಒಗ್ಗಟ್ಟಾಗಿದ್ದವು. ಮಿಜೋರಾಂನ ರಾಜಧಾನಿ ಐಜ್ವಾಲ್ನಲ್ಲಿ, ಈ ಏಕತೆಯ ಮಾತು ಎಲ್ಲಾ ಚರ್ಚೆಗಳು ಮತ್ತು ಸೆಮಿನಾರುಗಳಲ್ಲಿ ತಲೆಯೆತ್ತುತ್ತಲೇ ಇರುತ್ತವೆ.

ಅವಿಭಜಿತ ಬಂಗಾಳದ ಆಗಿನ ಲೆಫ್ಟಿನೆಂಟ್ ಗವರ್ನರ್ ಸರ್ ಚಾರ್ಲ್ಸ್ ಆಲ್ಫ್ರೆಡ್ ಎಲಿಯಟ್ ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಆ ಸಮಾವೇಶದಲ್ಲಿ ಆಯಕಟ್ಟಿನ ಮತ್ತು ನಾಗರಿಕ ಆಡಳಿತದ ಎಲ್ಲಾ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಅವರಲ್ಲಿ ಬ್ರಿಟಿಷ್ ಆಳ್ವಿಕೆಯ ಬರ್ಮಾದ ಮುಖ್ಯ ಕಮಿಷನರ್ ಸರ್ ಅಲೆಕ್ಸಾಂಡರ್ ಮೆಕೆಂಜಿ ಮತ್ತು ಅಸ್ಸಾಂನ ಮುಖ್ಯ ಆಯುಕ್ತ ವಿಲಿಯಂ ಇ ವಾರ್ಡ್ ಕೂಡ ಇದ್ದರು.

ಮಣಿಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಪುನ್ ಖಯಾನ್ ಪಾವ್ ಅವರು ತಮ್ಮ ಸಂಶೋಧನೆಯಲ್ಲಿ, ಆ ಸಮ್ಮೇಳನದಲ್ಲಿ ಹೆಚ್ಚಿನ ಜನರು ಇಡೀ ಚಿನ್-ಲುಸಾಯ್ ಬೆಟ್ಟಗಳನ್ನು ಒಂದೇ ಆಡಳಿತಾತ್ಮಕ ಛತ್ರಿಯಡಿ ತರುವ ಪರವಾಗಿದ್ದರು ಎಂದು ಹೇಳುತ್ತಾರೆ. ಆದರೆ ಆ ಶಿಫಾರಸು ಜಾರಿಗೆ ಬರಲೇ ಇಲ್ಲ.

ಅಂದು ಬರ್ಮಾದ ಕಮಿಷನರ್‌ ಯಾವುದೇ ಕಾರಣಕ್ಕೂ ಚಿನ್‌ ಹಿಲ್ಸ್‌ ಮೇಲಿನ ಹಿಡಿತವನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಚಿತ್ತಗಾಂಗ್‌ ಅಥವಾ ಶಿಲ್ಲಾಂಗ್‌ ಮೂಲಕ ಆಳುವುದಕ್ಕಿಂತಲೂ ರಂಗೂನಿನಿಂದ ಈ ಪ್ರದೇಶವನ್ನು ಆಳುವುದು ಸುಲಭವೆನ್ನುವುದು ಸರ್ ಅಲೆಕ್ಸಾಂಡರ್ ಮೆಕೆಂಝಿ ವಾದವಾಗಿತ್ತು.

ನಿರಾಶ್ರಿತರು ಬಹಳ ಕಠಿಣ ಪರಿಸ್ಥಿತಿಗಳಲ್ಲಿ ಬದುಕುತ್ತಿದ್ದಾರೆ

ಗವರ್ನರ್ ಜನರಲ್ ಲಾರ್ಡ್ ಲ್ಯಾನ್ಸ್ ಡೌನ್ ನಂತರ ಅವರ ಅಭಿಪ್ರಾಯವನ್ನು ಒಪ್ಪಿಕೊಂಡರು.

ಆ ವರ್ಷದ ಆಗಸ್ಟ್ 2ರಂದು, ಭಾರತ ಸರ್ಕಾರವು ರಂಗೂನ್ ಮುಖ್ಯ ಆಯುಕ್ತರಿಗೆ ಕಳುಹಿಸಿದ ಟೆಲಿಗ್ರಾಮ್‌ ಸಂದೇಶದಲ್ಲಿ ಸದ್ಯಕ್ಕೆ ಚಿನ್‌ ಹಿಲ್ಸ್ ಬರ್ಮಾದ ಅಡಿಯಲ್ಲಿ ಉಳಿಯುತ್ತದೆ ಎಂದು ಬರೆದಿತ್ತು.

ನಂತರ ಈ ನಿರ್ಧಾರ ಬದಲಾಗಲೇ ಇಲ್ಲ. (1948ರಲ್ಲಿ)‌ ಸ್ವತಂತ್ರಗೊಳ್ಳುವ ತನಕವೂ ಚಿನ್ ರಾಜ್ಯವು ಆಗಿನ ಬರ್ಮಾ (ಈಗಿನ ಮಯನ್ಮಾರ್) ದೇಶದ ಭಾಗವಾಗಿತ್ತು.

ಮತ್ತೊಂದೆಡೆ, ಭಾರತದ ವಿಭಜನೆಯಿಂದಾಗಿ, ಕುಕಿ-ಚಿನ್ ಮತ್ತು ಮಿಜೋ ಸಮುದಾಯಗಳ ನೂರಾರು ವರ್ಷಗಳ ಹಳೆಯ ಭೂಮಿಯನ್ನು ಮೂರು ದೇಶಗಳ ಗಡಿಗಳಾಗಿ ವಿಂಗಡಿಸಲಾಯಿತು.

ಆದರೆ ಈ ಪ್ರದೇಶಗಳಲ್ಲಿ ಜನರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳಿಗೆ ಅದೇ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಅಕ್ಕಪಕ್ಕದ ದೇಶಗಳ ಜನರು ಒಬ್ಬರಿಗೊಬ್ಬರು ಸಹಾಯಕ್ಕೆ ಒದಗಿದ್ದಾರೆ.

ಉದಾಹರಣೆಗೆ, 1966ರಲ್ಲಿ, ಲಾಲ್ಡೆಂಗಾ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (MNF) ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಚಳುವಳಿಯನ್ನು ಪ್ರಾರಂಭಿಸಿದಾಗ, ಅವರು ಆಗಿನ ಪೂರ್ವ ಪಾಕಿಸ್ತಾನದ ಚಿತ್ತಗಾಂಗ್ ಪ್ರದೇಶದಲ್ಲಿ ಆಶ್ರಯ ಪಡೆದರು.

ಮಿಜೋ ಗೆರಿಲ್ಲಾಗಳು  ಸುಮಾರು 22  ವರ್ಷಗಳಿಂದ ಅಲ್ಲಿಂದ ಸಶಸ್ತ್ರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರು.

ಅದಕ್ಕೂ ಮೊದಲು, 1964ರಲ್ಲಿ, ಬರ್ಮಾದ ಚಿನ್ ನ್ಯಾಷನಲ್ ಫ್ರಂಟ್ ಸ್ವತಂತ್ರ ಚಿನ್‌ ಲ್ಯಾಂಡ್‌ ಬೇಡಿಕೆಯೊಂದಿಗೆ ಹೋರಾಡಲು ಪ್ರಾರಂಭಿಸಿದಾಗ, ಭಾರತದ ಕುಕಿ-ಚಿನ್-ಮಿಜೋ ಸಮುದಾಯದ ಜನರು ಅವರಿಗೆ ಸಹಾಯ ಹಸ್ತ ಚಾಚಿದ್ದರು.

ಇಂದಿಗೂ, ಮಯನ್ಮಾರಿನ ಚಿನ್ ಡಿಫೆನ್ಸ್ ಫೋರ್ಸ್ (ಸಿಡಿಎಫ್) ಮತ್ತು ಚಿನ್ ನ್ಯಾಷನಲ್ ಆರ್ಮಿ (ಸಿಎನ್ಎ) ಬಂಡುಕೋರರು ಮಿಜೋರಾಂನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅವರಿಗೆ ಸ್ಥಳೀಯ ಜನರ ಸಂಪೂರ್ಣ ಬೆಂಬಲವಿದೆ.

ಮತ್ತೊಂದೆಡೆ,  ಸ್ವಲ್ಪ ಸಮಯದ ಹಿಂದೆ ಬಾಂಗ್ಲಾದೇಶದಲ್ಲಿ ರೂಪುಗೊಂಡ ಕುಕಿ-ಚಿನ್ ನ್ಯಾಷನಲ್ ಫ್ರಂಟ್ ಅಥವಾ ಕೆಎನ್ಎಫ್ ಬಗ್ಗೆ ಮಿಜೋರಾಂನಲ್ಲಿ ಸಾಕಷ್ಟು ಸಹಾನುಭೂತಿಯಿದೆ. ಮಣಿಪುರದಿಂದ ಪಲಾಯನ ಮಾಡುವ ಕುಕಿ ಜನರಿಗೂ ಇದು ಅನ್ವಯಿಸುತ್ತದೆ.

ಚಿನ್-ಲುಸಾಯಿ ಸಮ್ಮೇಳನವು ಕಲ್ಕತ್ತಾದ ಫೋರ್ಟ್ ವಿಲಿಯಂನಲ್ಲಿ ನಡೆಯಿತು

ಯಾವ ರಾಷ್ಟ್ರೀಯತೆಯ ಪುನರ್ಜನ್ಮ?

ಇತ್ತೀಚಿನ ಘಟನೆಗಳು ಗೊಂದಲಕಾರಿಯಾಗಿವೆಯೆನ್ನುವುದನ್ನು ವಿಶ್ಲೇಷಕರು ಒಪ್ಪುತ್ತಾರೆಯಾದರೂ,ಕುಕಿ-ಚಿನ್ ಮತ್ತು ಮಿಜೋ ಸಮುದಾಯಗ ಶೀಘ್ರದಲ್ಲೇ ಚಳವಳಿ ಆರಂಭಿಸಬಹುದೆನ್ನುವ ತರ್ಕವನ್ನು ಅವರು ನಂಬಲು ಸಿದ್ಧರಿಲ್ಲ

ಮಿಜೋರಾಂ ವಿಶ್ವವಿದ್ಯಾಲಯದ ಪ್ರೊಫೆಸರ್ ಜೆ. ಡೊಂಗೆಲ್ ಹೇಳುವಂತೆ, ” ಜೋ ಬುಡಕಟ್ಟಿನ ಜನರು ವಿವಿಧ ಪ್ರದೇಶಗಳಲ್ಲಿ ದೌರ್ಜನ್ಯಗಳಿಗೆ ಬಲಿಪಶುಗಳಾಗಿದ್ದರೂ, ಅವರು ಪ್ರಸ್ತುತ ಇಲ್ಲಿ ಸಾರ್ವಭೌಮ ದೇಶಕ್ಕಾಗಿ ಹೋರಾಡುತ್ತಿಲ್ಲ. ಅವರ ಹೋರಾಟದ ಬೇಡಿಕೆಗಳು ಸಹ ಅವರಿರುವ ಪ್ರದೇಶಗಳನ್ನು ಅವಲಂಬಿಸಿ ಭಿನ್ನವಾಗಿವೆ.”

“ಚಿನ್‌ ಜನರು ಮಯನ್ಮಾರ್‌ ದೇಶದಲ್ಲಿ ಪ್ರಜಾಪ್ರಭುತ್ವದ ಸ್ಥಾಪನೆಯ ಉದ್ದೇಶದಿಂದ ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ. “ಅವರು ಮಯನ್ಮಾರ್‌ ದೇಶದಿಂದ ಬೇರಾಗಲು ಬಯಸುತ್ತಿಲ್ಲ, ಬದಲಿಗೆ ಚಿನ್‌ ರಾಜ್ಯದ ಅಡಿಯಲ್ಲಿ ಸ್ವಾಯತ್ತ ಪ್ರದೇಶವನ್ನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಾಗೆಯೇ ಬಾಂಗ್ಲಾ ದೇಶದಲ್ಲಿ ನಿರ್ಲಕ್ಷಿತ ಕುಕಿ ಮತ್ತು ಚಿನ್‌ ಸಮುದಾಯಗಳ ಚಿತ್ತಗಾಂಗ್‌ ಪರ್ವತ ಪ್ರದೇಶದಲ್ಲಿ ಸ್ವಾಯತ್ತ ಪ್ರದೇಶ್ಕಕಾಗಿ ಒತ್ತಾಯಿಸಿ ಹೋರಾಡುತ್ತಿದ್ದಾರೆ.” ಎಂದು ಪ್ರೊಫೆಸರ್‌ ಜೆ ಡೊಂಗೆಲ್‌ ಹೇಳುತ್ತಾರೆ.

ಭಾರತದ ಮಣಿಪುರದ ಕುಕೀ ಸಮುದಾಯದ ಸಮಸ್ಯೆ ಬೇರೆಯೇ ರೀತಿಯದ್ದು.

ಮಿಜೋರಾಂನ ಚಂಪೈ ಹಿಲ್‌ ಪ್ರದೇಶದ ನಿರಾಶ್ರಿತ ಮಹಿಳೆ

ಡೊಂಗೆಲ್‌ ಅವರ ಪ್ರಕಾರ,  ಅಲ್ಲಿನ ಸರ್ಕಾರ ಮತ್ತು ಆಡಳಿತವು ಮೈಟಿ ಸಮುದಾಯವನ್ನು ನೇರವಾಗಿ ಬೆಂಬಲಿಸುವ ಮೂಲಕ ಅಲ್ಪಸಂಖ್ಯಾತ ಕುಕಿ ಜನರಿಗೆ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುತ್ತಿದೆ.

“ಈ ಎಲ್ಲಾ ಘಟನೆಗಳು ಏಕಕಾಲದಲ್ಲಿ ನಡೆಯುತ್ತಿದ್ದು ಇದು ಮಿಜೋರಾಂ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಮಾರಣಾಂತಿಕ ತ್ರಿಪಕ್ಷೀಯ ಒತ್ತಡವನ್ನು ಮಿಜೋರಾಂ ಎಷ್ಟು ಕಾಲ ಸುಲಭವಾಗಿ ತಡೆದುಕೊಳ್ಳಲು ಸಾಧ್ಯವಾಗುತ್ತದೆಯೆನ್ನುವುದನ್ನು ಹೇಳುವುದು ಕಷ್ಟ. ಈ ಪರಿಸ್ಥಿತಿ ದೀರ್ಘಕಾಲದವರೆಗೆ ಮುಂದುವರಿದರೆ ಮುಂದೆ ಏನಾಗಬಹುದೆನ್ನು ಕಳವಳವಿದೆ.” ಎನ್ನುವುದು ಡೊಂಗೆಲ್‌ ಅವರ ಅಭಿಪ್ರಾಯ.

ಪರಿಸ್ಥಿತಿ ಖಂಡಿತವಾಗಿಯೂ ಚಿಂತಾಜನಕವಾಗಿದೆ ಎನ್ನುವುದು ದೆಹಲಿಯ JNU ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್‌ನ ಪ್ರಾಧ್ಯಾಪಕ ಮತ್ತು ಸಮಾಜಶಾಸ್ತ್ರಜ್ಞ ಜೈ ಪಚುವಾಯು ಅವರ ನಂಬಿಕೆ. ಆದರೆ ಇದು ಸದ್ಯದಲ್ಲಿಯೇ ಯಾವುದೇ ‘ಇಂಟಿಗ್ರೇಟೆಡ್‌ ಐಡೆಂಟಿಟಿ ಮೂವ್ಮೆಂಟ್‌’ ಹುಟ್ಟುಹಾಕುವ ಸಾಧ್ಯತೆ ಕಾಣುತ್ತಿಲ್ಲ ಎನ್ನುತ್ತಾರೆ ಅವರು.

“ಈ ಜನಾಂಗೀಯ ಗುಂಪಿನ ಒಂದು ಭಾಗವು ಗ್ರೇಟರ್ ಮಿಜೋರಾಂ ರಚನೆಗಾಗಿ ಆಂದೋಲನ ನಡೆಸಿತ್ತು ಎಂಬುದು ನಿಜ. ಆದರೆ ಆ ಸಮಯದಲ್ಲಿ ಮಯನ್ಮಾರ್ ಮತ್ತು ಬಾಂಗ್ಲಾದೇಶದ ಬಹುಸಂಖ್ಯಾತ ಪ್ರದೇಶಗಳನ್ನು ಸೇರಿಸಬೇಕೆಂಬ ಬೇಡಿಕೆ ಅದರಲ್ಲಿ ಯಾವತ್ತೂ ಇದ್ದಿರಲಿಲ್ಲ.  ಎರಡನೆಯದಾಗಿ,  ಈ ಜನಾಂಗೀಯ ಗುಂಪಿನ ಜನರಲ್ಲಿ ಹೋಲಿಕೆಗಳು ಇರುವಷ್ಟೇ ವ್ಯತ್ಯಾಸಗಳೂ ಇವೆ. ಬುಡಕಟ್ಟು ಜನಾಂಗದ ವಿವಿಧ ಬಣಗಳ ನಡುವೆ ಪೈಪೋಟಿಯೂ ಇದೆ.”

ಇದಕ್ಕೆ ಉದಾಹರಣೆಯಾಗಿ ರಷ್ಯಾ-ಉಕ್ರೇನ್ ಯುದ್ಧದ ಉದಾಹರಣೆಯನ್ನು ಉಲ್ಲೇಖಿಸಿದ ಪಚುಯಾವೂ, ಹಂಗೇರಿ ಮತ್ತು ಪೋಲೆಂಡ್‌ ರೀತಿಯ ಪೂರ್ವ ಯುರೋಪಿನ ದೇಶಗಳು ಯುದ್ಧ ಪೀಡಿತ ಉಕ್ರೇನಿಯನ್ನರಿಗೆ ತಮ್ಮ ಗಡಿಗಳನ್ನು ತೆರೆದಂತೆ, ಮಿಜೋರಾಂ ಸಹ ಹತ್ತಿರದ ಪ್ರದೇಶಗಳಿಂದ ಬರುವ ಕುಕಿ-ಚಿನ್ ಸಮುದಾಯಕ್ಕೆ ತನ್ನ ಬಾಗಿಲುಗಳನ್ನು ತೆರೆದಿದೆ ಎಂದು ಹೇಳಿದರು.

ಪಚೂಯಾವೂ ಹೇಳುವಂತೆ, ಪೋಲಿಷ್‌ ಅಥವಾ ಹಂಗೆರಿಯನ್‌ ಜನರು ತಾವು ಉಕ್ರೇನಿಯನ್‌ ಜನರ ಜೊತೆ ಜನಾಂಗೀಯ ಸಂಬಂಧ ಹೊಂದಿರುವುದಾಗಿ ನಂಬುತ್ತಾರೆ. ಮತ್ತು ಅದೇ ಕಾರಣಕ್ಕಾಗಿ ಅವರು ಉಕ್ರೇನ್‌ ದೇಶದ ಜನರಿಗಾಗಿ ತಮ್ಮ ದೇಶದ ಗಡಿಯನ್ನು ತೆರೆದಿಟ್ಟಿದ್ದಾರೆ. ಮಿಜೋರಾಮಿನಲ್ಲಿ ನಡೆಯುತ್ತಿರುವುದು ಕೂಡಾ ಇದೇ.

ದೆಹಲಿ ಮತ್ತು ಐಜೋಲ್ ರಾಜಕೀಯ

ವಿಶೇಷವೆಂದರೆ, ಮಯನ್ಮಾರ್ ಅಥವಾ ಬಾಂಗ್ಲಾದೇಶದಿಂದ ಬರುವ ಕುಕಿ-ಚಿನ್ ಸಮುದಾಯಕ್ಕೆ ಮಿಜೋರಾಂ ಸರ್ಕಾರ, ಸ್ಥಳೀಯರು ಮತ್ತು ಚರ್ಚ್ ಸಹಾಯ ಹಸ್ತ ಚಾಚಿದ್ದರೂ, ಭಾರತ ಸರ್ಕಾರ ಇನ್ನೂ ಅವರಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡಿಲ್ಲ.

ಈ ಸ್ಥಾನಮಾನದ ಮಾತಿರಲಿ, ಕೇಂದ್ರ ಸರ್ಕಾರವು ಇಲ್ಲಿಯವರೆಗೆ ಅವರ ಆಹಾರ ಮತ್ತು ವಸತಿಗಾಗಿ ಒಂದು ಪೈಸೆ ಸಹಾಯವನ್ನು ಸಹ ನೀಡಿಲ್ಲ.

ಮಿಜೋರಾಂ ಮುಖ್ಯಮಂತ್ರಿ ಜೋರಂಥಂಗಾ ಅವರಿಗೂ ಈ ವಿಷಯದಲ್ಲಿ ತಮ್ಮ ಅಸಮಾಧಾನವನ್ನು ಮರೆಮಾಚಲು ಸಾಧ್ಯವಾಗಿಲ್ಲ.

ಜೋರಂಥಂಗಾ ಅವರ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಬಿಜೆಪಿಯ ಮಿತ್ರ ಪಕ್ಷವೆನ್ನುವುದು ಇಲ್ಲಿ ಗಮನಾರ್ಹ ಅಂಶ.

ಕೆಲವು ತಿಂಗಳುಗಳ ಕೆಳಡ ಅವರು ಐಜೋಲ್‌ನಲ್ಲಿ ಬಿಬಿಸಿ ಬಾಂಗ್ಲಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, “ಆ ಜನರಿಗೆ ನಿರಾಶ್ರಿತರ ಸ್ಥಾನಮಾನವನ್ನು ನೀಡದಿದ್ದರೂ ಸರಿ, ಕನಿಷ್ಟ ಮನುಷ್ಯತ್ವದ ಆಧಾರದಲ್ಲಿಯಾರೂ ಅವರಿಗೆ ವಾಸ್ತವ್ಯ ಮತ್ತು ಆಹಾರದ ವ್ಯವಸ್ಥೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಗೃಹ ಸಚಿವ ಅಮಿತ್ ಶಾ ಅವರ ತನಕ ಪದೇ ಪದೇ ವಿನಂತಿಸಿದ್ದೇನೆ” ಎಂದು ಜೋರಂಥಂಗಾ ಹೇಳಿದ್ದರು

ಆದರೆ ಮುಖ್ಯಮಂತ್ರಿಗಳ ಆ ಮನವಿ ಇದುವರೆಗೆ ಯಾವುದೇ ಪರಿಣಾಮ ಬೀರಿಲ್ಲ.

ಮಯನ್ಮಾರ್‌ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಭಾರತ ಸರ್ಕಾರವು ಅಲ್ಲಿಂದ ಬರುವ ನಿರಾಶ್ರಿತರ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆಯೆನ್ನುವುದು ವಿಶ್ಲೇಷಕರ ಅಭಿಪ್ರಾಯ.

ಸುಮಾರು ಆರು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಬಂದ ಕುಕಿ-ಚಿನ್ ಸಮುದಾಯಕ್ಕೂ ಇದು ಅನ್ವಯಿಸುತ್ತದೆ. ಢಾಕಾದೊಂದಿಗಿನ ಸಂಬಂಧಗಳ ರಾಜತಾಂತ್ರಿಕ ಒತ್ತಡದಿಂದಾಗಿ, ದೆಹಲಿ ಈ ಜನರಿಗೆ ಇನ್ನೂ ನಿರಾಶ್ರಿತರ ಸ್ಥಾನಮಾನವನ್ನು ನೀಡಿಲ್ಲ.

“ದೆಹಲಿ ತನಗೆ ಏನು ಬೇಕೋ ಅದನ್ನೇ ಮಾಡಲಿ, ಕುಕಿ-ಚಿನ್ ಸಮುದಾಯವು ನಮ್ಮ ಕುಟುಂಬವಿದ್ದಂತೆ. ಈ ಜನರು ನಮ್ಮ ತಾಯಂದಿರು ಮತ್ತು ಸಹೋದರ ಸಹೋದರಿಯರು. ನಾವು ಯಾವುದೇ ಸಂದರ್ಭದಲ್ಲೂ ಅವರ ಕೈಬಿಡಲು ಸಾಧ್ಯವಿಲ್ಲ.” ಎಂದು ಮಿಜೋ ನ್ಯಾಷನಲ್ ಫ್ರಂಟಿನ ಉಪಾಧ್ಯಕ್ಷ ಮತ್ತು ಮಾಜಿ ಸಂಸದ ವಾನ್ ಲಾಲ್ಜಾವಾಮಾ ಹತಾಶೆಯ ಧ್ವನಿಯಲ್ಲಿ ಹೇಳುತ್ತಾರೆ.

ನಿರಾಶ್ರಿತರಿಗೆ ಅವರ ಹಕ್ಕುಗಳನ್ನು ನೀಡಲು ನಿರಾಕರಿಸಿದ ಕಾರಣ ಅವರು ದೆಹಲಿಯ ಮೇಲೆ ಈಗಾಗಲೇ ಮುನಿಸಿಕೊಂಡಿರುವುದಾಗಿ ಬಿಬಿಸಿ ಬಾಂಗ್ಲಾ ಜೊತೆಗಿನ ಮಾತುಕತೆಯಲ್ಲಿ ಒಪ್ಪಿಕೊಂಡಿದ್ದರು. ಈಗ ಮಣಿಪುರ ವಿಷಯದಲ್ಲಿ ಕೇಂದ್ರ ಸರಕಾರ ನಡೆದುಕೊಳ್ಳುತಿರುವ ರೀತಿಯು ಬಿಜೆಪಿ ಮತ್ತು MNF ನಡುವಿನ ಸಂಬಂಧವನ್ನು ಇನ್ನಷ್ಟು ದುರ್ಬಲಗೊಳಿಸಿದೆ.

“ಮಣಿಪುರದಲ್ಲಿ ನಮ್ಮ ಕುಕಿ ಸಹೋದರರ ಮನೆಗಳನ್ನು ಸುಡಲಾಗುತ್ತಿದೆ. ಅನಗತ್ಯವಾಗಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮೂಕ ಪ್ರೇಕ್ಷಕನ ಪಾತ್ರ ವಹಿಸುತ್ತಿದೆ. ಇದೆಲ್ಲವನ್ನೂ ನಾವು ಎಷ್ಟು ದಿನ ಸಹಿಸಿಕೊಳ್ಳುವುದು?” ಎಂದು ಅವರು ಕೇಳುತ್ತಾರೆ.

ಇದೇ ಹಿನ್ನೆಲೆಯಲ್ಲಿ, ಈ ವರ್ಷದ ಅಂತ್ಯದ ವೇಳೆಗೆ ಮಿಜೋರಾಂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಕುಕಿ-ಚಿನ್-ಮಿಜೋ  ಅಸ್ಮಿತೆಗಾಗಿ ನಡೆಯುತ್ತಿರುವ ಹೋರಾಟವು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ಸ್ವತಂತ್ರವಾಗಿ ಸ್ಪರ್ಧಿಸುವ ಅನಿವಾರ್ಯತೆಯನ್ನು MNF ಪಕ್ಷಕ್ಕೆ ಸೃಷ್ಟಿಸಲಿದೆ ಎನ್ನುವುದು ಕೆಲವು ವಿಶ್ಲೇಷಕರ ಅಭಿಪ್ರಾಯ.

ಆದರೆ ಮೂರು ದೇಶಗಳಲ್ಲಿ ಕುಕಿ-ಚಿನ್-ಮಿಜೋ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ನಿರ್ಲಕ್ಷ್ಯವು ‘ಜೋ’ ಸಮುದಾಯದ ರಾಜಕೀಯವನ್ನು ಹೊಸ ದಿಕ್ಕಿನತ್ತ ಕರೆದೊಯ್ಯಲಿದೆಯೆನ್ನುವುದು ಸ್ಪಷ್ಟವಾಗುತ್ತಿದೆ.‌

ಶುಭಜ್ಯೋತಿ ಘೋಷ್

ಮೂಲ ಬರಹ: ಬಿಬಿಸಿ ಹಿಂದಿ

ಕನ್ನಡಕ್ಕೆ: ಶಂಕರ ಎನ್‌ ಕೆಂಚನೂರು

Related Articles

ಇತ್ತೀಚಿನ ಸುದ್ದಿಗಳು