Sunday, June 23, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯತ್ತ ಹೊರಟ ಕುಮಾರಸ್ವಾಮಿ : ಆತ್ಮರಕ್ಷಣೆಯೋ ಆತ್ಮಹತ್ಯೆಯೋ?

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಅಲ್ಲೊಂದು ಇಲ್ಲೊಂದು ಮಾತುಗಳು, ಊಹಾಪೋಹಗಳ ನಡುವೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸುಳಿವನ್ನು ಬಿಟ್ಟಿದ್ದಾರೆ. ಆ ಮೂಲಕ ಕರ್ನಾಟಕದ ಮಟ್ಟಿಗೆ ಎರಡೂ ಪಕ್ಷಗಳಿಗೂ ಈ ಮೈತ್ರಿ ಅನಿವಾರ್ಯವಾಗಿದೆ ಎನ್ನುವ ರೀತಿಯಲ್ಲಿ ಮಹತ್ವದ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ‌.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಿದ್ದೆಗೆಡಿಸಿದೆ. ಅದರಲ್ಲೂ ಹೆಚ್.ಡಿ.ಕುಮಾರಸ್ವಾಮಿಯವರಂತೂ ಪಕ್ಷ ಸೋತ ಬೇಸರ ಒಂದು ಕಡೆಯಾದರೆ, ಇನ್ನೊಂದು ಕಡೆ ತನ್ನ ಮಗ ನಿಖಿಲ್ ಸೋತ ಬಗ್ಗೆ ಕಂಡಕಂಡಲ್ಲೆಲ್ಲ ಕಾಂಗ್ರೆಸ್ ಪಕ್ಷದ ಮೇಲೆ ಹರಿಹಾಯುತ್ತಿದ್ದಾರೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ನಾಗಾಲೋಟಕ್ಕೆ ಸರಿಯಾದ ತಿರುಗೇಟು ನೀಡಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ದೊಡ್ಡ ತಯಾರಿಗೆ ಹೆಜ್ಜೆ ಇರಿಸಿವೆ.

ಸಧ್ಯ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿ ನಿರ್ಣಾಯಕವಾಗಲಿದೆ ಎಂದು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಇಂದು ನಡೆಯುತ್ತಿರುವ ಕಾಂಗ್ರೆಸ್ ಮಿತ್ರಪಕ್ಷಗಳ ಸಭೆ, ನಾಳೆ ನಡೆಯಲಿರುವ NDA ಮೈತ್ರಿಕೂಟದ ಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಅನಿವಾರ್ಯತೆ ಬಗ್ಗೆ ಪ್ರಶ್ನೆಗಳು ಬಂದಾಗ ಈ ರೀತಿಯಾಗಿ ಉತ್ತರಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮಾಡಿಕೊಳ್ಳುವ ಸೂಚನೆ ನೀಡುತ್ತಿದ್ದಾರೆ. ಆದರೆ, ಇಂದು ಬೆಳಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷಕ್ಕೆ ‘ಮಹಾಘಟಬಂಧನ್’ ಅಥವಾ ‘ಎನ್‌ಡಿಎ’ಯಿಂದ ಯಾವುದೇ ಆಹ್ವಾನ ಬಂದಿಲ್ಲ ಎಂದು ಹೇಳಿದ್ದಾರೆ. ಆದರೆ ಜೆಡಿಎಸ್ ಪಕ್ಷದ ನಡೆ ಮಾತ್ರ ಕಾಂಗ್ರೆಸ್ ವಿರೋಧಿಯಾಗಿ, ಬಿಜೆಪಿ ಜೊತೆಗೆ ಕೈ ಜೋಡಿಸಲು ಉತ್ಸುಕತೆ ತೋರಿರುವಂತೆ ಕಂಡುಬರುತ್ತಿದೆ.

ಇತ್ತ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು “‘ಮಹಾಘಟಬಂಧನ್’ ಗೆ ಜೆಡಿಎಸ್ ನ್ನು ವಿಶೇಷವಾಗಿ ಆಹ್ವಾನಿಸುವ ಅಗತ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ  ಬಿಜೆಪಿ ಸೋಲಿಸಲು ಒಂದಾಗುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂಪ್ರೇರಿತರಾಗಿ ಕೈ ಜೋಡಿಸಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ಪ್ರತ್ಯೇಕ ಆಹ್ವಾನ ಅನಗತ್ಯ” ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ನಡೆಯ ಬಗ್ಗೆ ಜೆಡಿಎಸ್ ನಲ್ಲೇ ಅತೃಪ್ತಿ!
ಆದರೆ ಹೆಚ್.ಡಿ.ಕುಮಾರಸ್ವಾಮಿ ಮಾತ್ರ ನಾಳೆ ದೆಹಲಿಯಲ್ಲಿ ನಡೆಯಲಿರುವ NDA ಮೈತ್ರಿಕೂಟದ ಸಭೆಗೆ ಹಾಜರಾಗುವ ಬಗ್ಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಇನ್ನೊಂದು ಕಡೆ ಕುಮಾರಸ್ವಾಮಿಯವರ ಈ ನಡೆ ಸ್ವಪಕ್ಷೀಯರಿಗೇ ಇರಿಸು ಮುರಿಸು ಉಂಟುಮಾಡಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಸೋಲಿಸುವ ನಿಟ್ಟಿನಲ್ಲಿ ಕೋಮುವಾದಿ ಮನಸ್ಥಿತಿಯ ಬಿಜೆಪಿ ಜೊತೆಗೆ ಕೈಜೋಡಿಸುವುದು ಹಾಗೂ ತನ್ನ ಪುತ್ರ ನಿಖಿಲ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿರುವುದು, ಕುಮಾರಸ್ವಾಮಿಯವರ ಧೃತರಾಷ್ಟ್ರನ ಪ್ರೇಮವನ್ನು ಎತ್ತಿ ಹಿಡಿದಂತಿದೆ. ತನ್ನ ಒಳಗಿನ ಕಿಚ್ಚಿಗೆ ಇಡೀ ಪಕ್ಷವನ್ನೇ ಕುಮಾರಸ್ವಾಮಿ ಬಲಿ ಕೊಡಲಿದ್ದಾರಾ ಎಂಬ ಬಗ್ಗೆಯೂ ಪ್ರಾಮಾಣಿಕವಾಗಿ ಪಕ್ಷದ ಪರ ನಿಂತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈಗ ಜೆಡಿಎಸ್ ನಲ್ಲಿರುವ 19 ಮಂದಿ ಶಾಸಕರಲ್ಲಿ ಬಹುತೇಕರಿಗೆ ಬಿಜೆಪಿ ಜೊತೆಗಿನ ಮೈತ್ರಿಗೆ ಸಮ್ಮತವಿಲ್ಲ. ಒಂದು ಕಡೆ ‘ಜಾತ್ಯತೀತ’ ಎಂಬ ಹಣೆಪಟ್ಟಿ ಹೊಂದಿ, ಕೋಮುವಾದಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಡುವ ಬಗ್ಗೆ ಈಗಾಗಲೇ ಜೆಡಿಎಸ್ ಪಾಳಯದಲ್ಲೇ ಸಣ್ಣ ಬಿರುಕುಂಟಾಗಿದೆ. ಈ ಹಿಂದೆ ದುಡುಕಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ತಪ್ಪಿಗೆ ಈಗಲೂ ಜೆಡಿಎಸ್ ನ್ನು ದೂರುವ ಮಂದಿ ಇದ್ದಾರೆ. ಹೀಗಿರುವಾಗ ನೇರಾನೇರ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಪಕ್ಷದ 19 ಮಂದಿ ಶಾಸಕರಲ್ಲಿ ಅರ್ಧ ಭಾಗಕ್ಕಿಂತ ಹೆಚ್ಚು ಮಂದಿ ಪಕ್ಷ ಬಿಡುವ ಅಥವಾ ಕಾಂಗ್ರೆಸ್ ಜೊತೆ ಕೈಜೋಡಿಸುವ ಬಗ್ಗೆ ಅನುಮಾನವೇ ಇಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ.

ಮಹಾರಾಷ್ಟ್ರವನ್ನೇ ಉದಾಹರಣೆಯಾಗಿ ತಗೆದುಕೊಳ್ಳುವುದಾದರೆ ಶಿವಸೇನೆಯನ್ನು ಇಬ್ಭಾಗ ಮಾಡಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಿತ್ತು ಬಿಜೆಪಿ. ಈಗ ಮತ್ತೆ NCP ಯನ್ನು ಕೂಡಾ ಇಬ್ಭಾಗ ಮಾಡಿ ಸರ್ಕಾರ ರಚನೆಯ ಪಾಲುದಾರಿಕೆ ಕೊಟ್ಟಿದೆ. ಮೇಲ್ನೋಟಕ್ಕೆ ಈಗ ಶಿವಸೇನೆ-NCP ಮೈತ್ರಿಯ ಸರ್ಕಾರ ಎಂದಾದರೂ ಇದರ ಸಂಪೂರ್ಣ ಜವಾಬ್ದಾರಿ ಬಿಜೆಪಿಯದ್ದಾಗಿದೆ. ಇದೇ ರೀತಿಯಲ್ಲಿ ಜೆಡಿಎಸ್ ಪಕ್ಷವನ್ನೂ ಸಹ ತನ್ನ ತೆಕ್ಕೆಗೆ ತಗೆದುಕೊಂಡರೆ ಜೆಡಿಎಸ್ ನ ಅಸ್ಥಿತ್ವವೇ ಇಲ್ಲದಂತಾಗುವುದರಲ್ಲಿ ಅನುಮಾನವಿಲ್ಲ.

ಒಟ್ಟಾರೆ ಮುಂಬರುವ ಜೆಡಿಎಸ್ ನಡೆ ಕುಮಾರಸ್ವಾಮಿ Vs ಜೆಡಿಎಸ್ ಎನ್ನುವ ರೀತಿಯಲ್ಲಿ, ಪಕ್ಷದಲ್ಲಿ ದೊಡ್ಡ ಮಟ್ಟದ ಬಿರುಕಿಗೆ ಕುಮಾರಸ್ವಾಮಿಯವರೇ ವೇದಿಕೆ ಸೃಷ್ಟಿ ಮಾಡಲಿದ್ದಾರಾ ಎಂಬ ಅನುಮಾನ ಸೃಷ್ಟಿಯಾಗಿದೆ. ಒಂದು ಕಡೆ ಕಾಂಗ್ರೆಸ್ ಮೇಲಿನ ದ್ವೇಷ ಇನ್ನೊಂದು ಕಡೆ ಕುಮಾರಸ್ವಾಮಿಯವರ ಧೃತರಾಷ್ಟ್ರ ಪ್ರೇಮ ಜೆಡಿಎಸ್ ಅವನತಿಗೆ ಈ ಬಾರಿಯ ಲೋಕಸಭಾ ಚುನಾವಣೆ ಸಾಕ್ಷಿ ಆಗಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

Related Articles

ಇತ್ತೀಚಿನ ಸುದ್ದಿಗಳು