Wednesday, June 19, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಲೆಟರ್ ಹೆಡ್ ನಲ್ಲಿ ಕುಮಾರಸ್ವಾಮಿ ಸಹಿ : ಜೆಡಿಎಸ್ ಅಸ್ತಿತ್ವಕ್ಕೆ ಮುಳುವಾದ ಕುಮಾರಸ್ವಾಮಿ ನಡೆ

‘ಜಾತ್ಯತೀತ’ ಜನತಾದಳದ ಇತ್ತೀಚಿನ ನಿಲುವು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಿಜೆಪಿ ಕಡೆಗಿನ ಒಲವು ಎಲ್ಲಾ ಸೇರಿದಂತೆ ಕಳೆದ ಕೆಲವು ದಿನಗಳಿಂದ ಕುಮಾರಸ್ವಾಮಿ ಬಹಳಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಈಗ ಹೆಚ್.ಡಿ.ಕುಮಾರಸ್ವಾಮಿಯವರದ್ದೇ ಎನ್ನಲಾಗುವ ‘ಸಹಿ’ ಒಂದು ಮತ್ತೊಂದು ಚರ್ಚೆ ಹುಟ್ಟಲು ಕಾರಣವಾಗಿದೆ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಗತ್ಯಕ್ಕಿಂತ ಹೆಚ್ಚು ಬಿಜೆಪಿ ಮೇಲೆ ಒಲವು ತೋರುತ್ತಿರುವುದು ಈಗ ರಾಜಕೀಯ ವಲಯದಲ್ಲಿ ಟ್ರೆಂಡಿಂಗ್ ವಿಚಾರ. ಅದು ಕಾಂಗ್ರೆಸ್ ಮೇಲಿನ ದ್ವೇಷಕ್ಕೋ ಅಥವಾ ತಮ್ಮ ಮಗ ನಿಖಿಲ್ ನ ಸೋಲಿನ ಪ್ರತೀಕಾರದ ಕಾರಣಕ್ಕೋ.

ಅದೇನೇ ಇರಲಿ. ಹಿಂದೆ ಬಿಜೆಪಿ ಜೊತೆಗೆ ಕೈ ಜೋಡಿಸಿ ಸರ್ಕಾರ ರಚಿಸಿದಾಗಲೂ ಕುಮಾರಸ್ವಾಮಿ ಒಂದು ಕಡೆ ಜೆಡಿಎಸ್ ಪಕ್ಷ ಕಟ್ಟುವ ಬಗ್ಗೆಯೂ ಅಷ್ಟೆ ಆಸಕ್ತಿ ತೋರಿದ್ದರು. ಆದರೆ ಈಗ ಮಾತ್ರ ತಮ್ಮದೇ ಪಕ್ಷದ ಮೇಲಿನ ಆಸೆಯೂ ಕಡಿಮೆಯಾಗಿ, ಕಾಂಗ್ರೆಸ್ ಮೇಲಿನ ದ್ವೇಷ ಮತ್ತು ಬಿಜೆಪಿ ಮೇಲಿನ ಒಲವು ಮಾತ್ರ ಹೆಚ್ಚಾದಂತೆ ಅವರ ಮಾತುಗಳಲ್ಲಿ ಕೇಳಿ ಬರುತ್ತಿದೆ.

ಅದೇ ಕಾರಣಕ್ಕೆ ಈಗ ಪದೇಪದೆ ದೆಹಲಿ ಭೇಟಿ, ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗೆ ಕ್ಷೇತ್ರದ ಹೊಂದಾಣಿಕೆಯ ಮಾತುಗಳು ಹೆಚ್ಚು ಕೇಳಿ ಬರುತ್ತಿದೆ. ಈಗ ಒಂದು ಹೆಜ್ಜೆ ಮುಂದೆ ಹೋದಂತೆ ಸಧ್ಯ ಕುಮಾರಸ್ವಾಮಿಯವರದ್ದೇ ಎನ್ನಲಾದ ಸಹಿಯೊಂದು ಈಗ ಬಿಜೆಪಿ ಲೆಟರ್ ಹೆಡ್ ನಲ್ಲಿ ಕಂಡಿದ್ದು, ಕುಮಾರಸ್ವಾಮಿಯವರ ಬಿಜೆಪಿ ಸೇರ್ಪಡೆಗೆ ಇದೊಂದು ಮೆಟ್ಟಿಲು ಎನ್ನಲಾಗಿದೆ.

ಜುಲೈ 18 ಮತ್ತು 19 ಕ್ಕೆ ಹೊಸದಾಗಿ ಘೋಷಣೆಯಾದ ‘INDIA’ ಒಕ್ಕೂಟದ ಪ್ರತಿಪಕ್ಷಗಳ ನಾಯಕರ ಬೆಂಗಳೂರು ಸಭೆಗೆ IAS ದರ್ಜೆಯ ಅಧಿಕಾರಿಗಳನ್ನು ಬಳಸಿಕೊಂಡ ಬಗ್ಗೆ ಬಿಜೆಪಿ ಪಕ್ಷ ದೂರು ಸಿದ್ದಪಡಿಸಿತ್ತು. ರಾಜ್ಯದ ರಾಜ್ಯಪಾಲರಿಗೆ ಸೂಚಿಸಿದ ಈ ಪತ್ರ ಬಿಜೆಪಿ ಪಕ್ಷದ ಲೆಟರ್ ಹೆಡ್ ನಲ್ಲಿ ಸಿದ್ದಗೊಂಡಿತ್ತು. ಪತ್ರದಲ್ಲಿ IAS ದರ್ಜೆಯ ಅಧಿಕಾರಿಗಳನ್ನು ಪಕ್ಷದ ಅಥವಾ ಪಕ್ಷಗಳ ಒಕ್ಕೂಟದ ಕೆಲಸಕ್ಕೆ ಬಳಸಿಕೊಂಡ ಬಗ್ಗೆ, ಅಲ್ಲಿನ ಭದ್ರತೆ ವ್ಯವಸ್ಥೆ ನೋಡಿಕೊಳ್ಳಲು ಬಳಸಿಕೊಂಡ ಬಗೆಗಿನ ದೂರು ಅದಾಗಿತ್ತು. ಆದರೆ ಬಿಜೆಪಿ ಸಿದ್ದಪಡಿಸಿದ ದೂರಿನಲ್ಲಿ ಕುಮಾರಸ್ವಾಮಿ ಸಹಿ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಕುಮಾರಸ್ವಾಮಿ ಮಾತ್ರವಲ್ಲ, ಶಾಸಕರಾದ ಜಿ.ಟಿ.ದೇವೇಗೌಡ, ಪರಿಷತ್ ಸದಸ್ಯ ಬೋಜೇಗೌಡ ಹಾಗೂ ಟಿ.ಎ.ಸರವಣ ಅವರ ಸಹಿ ಸಹ ಈ ಲೆಟರ್ ಹೆಡ್ ನಲ್ಲಿ ಕಂಡುಬಂದಿದೆ. ಜೊತೆಗೆ ಬಿಜೆಪಿ ನಾಯಕರುಗಳಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರ್ ಅಶೋಕ್, ಸುನಿಲ್ ಕುಮಾರ್, ಅಶ್ವಥ್ ನಾರಾಯಣ್, ಕೋಟ ಶ್ರೀನಿವಾಸ ಪೂಜಾರಿ ಹೆಸರುಗಳೂ ಸಹ ಪತ್ರದಲ್ಲಿದೆ.

ಮಾಜಿ ಮುಖ್ಯಮಂತ್ರಿಯಾಗಿ, ಒಂದು ರಾಜಕೀಯ ಪಕ್ಷದ ದೊಡ್ಡ ನಾಯಕರಾಗಿ, ರಾಜ್ಯದಲ್ಲಿ ತಮ್ಮದೇ ಪಕ್ಷವೊಂದು ಅಸ್ತಿತ್ವದಲ್ಲಿ ಇದ್ದರೂ ಕುಮಾರಸ್ವಾಮಿ ರಾಜ್ಯಪಾಲರಿಗೆ ಪ್ರತ್ಯೇಕ ದೂರೊಂದನ್ನು ಸಲ್ಲಿಸಬಹುದಿತ್ತು. ಅಲ್ಲಿ ತಮ್ಮ ಪಕ್ಷದ ಅಸ್ಥಿತ್ವಕ್ಕೂ ಒಂದು ಘನತೆ ಇರುತ್ತಿತ್ತು. ಆದರೆ ಅದ್ಯಾವುದನ್ನೂ ಯೋಚಿಸದೆ ಕುಮಾರಸ್ವಾಮಿ ಕಣ್ಮುಚ್ಚಿಕೊಂಡು ಬಿಜೆಪಿ ಲೆಟರ್ ಹೆಡ್ ನಲ್ಲಿ ಸಹಿ ಮಾಡಿದರೇ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಜಕೀಯ ಪಂಡಿತರ ಪ್ರಕಾರ ಜೆಡಿಎಸ್ ಪಕ್ಷ ಬಿಜೆಪಿ ಜೊತೆಗೆ ವಿಲೀನಗೊಳ್ಳಲು ಇದು ಒಂದು ಮೆಟ್ಟಿಲು ಎನ್ನಲಾಗಿದೆ. ಈ ನಡುವೆ ಕುಮಾರಸ್ವಾಮಿ ನಡೆಯಿಂದ ಬೇಸತ್ತ 9 ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ ಎಂಬ ಮಾತುಗಳು ಈ ಬೆಳವಣಿಗೆ ನಡುವೆ ಮಹತ್ವ ಪಡೆದುಕೊಳ್ಳುತ್ತಿದೆ. ಒಟ್ಟಾರೆ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷದ ಅಳಿವು ಉಳಿವನ್ನು ಹೆಚ್.ಡಿ.ಕುಮಾರಸ್ವಾಮಿಯವರ ಇತ್ತೀಚಿನ ನಡೆ ನಿರ್ಧರಿಸಲಿಗೆ ಎಂಬುದು ಸ್ಪಷ್ಟ.

Related Articles

ಇತ್ತೀಚಿನ ಸುದ್ದಿಗಳು