ಬೆಳಗಾವಿ ಡಿ.19: ವಿಧಾನ ಪರಿಷತ್ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಪ್ರಾಸ್ಟಿಟ್ಯೂಟ್ ಎಂದು ಕರೆದಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ಸೌಧದೊಳಗೆ ನುಗ್ಗಿದ ಸಿಟಿ ರವಿ ಮೇಲೆ ಹಲ್ಲೆ ನಡೆಸಿದ್ದಾರೆ. ಸುವರ್ಣ ಸೌಧದಲ್ಲಿ, “ಹುಚ್ಚ ಸಿಟಿ ರವಿ ಹೊರಗೆ ಬಾ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ,” ಆರಂಭಿಸಿದ್ದಾರೆ.
ಸುವರ್ಣ ಸೌಧದ ವಿಐಪಿ ಗೇಟಿನ ಬಳಿ ಕಾರಿನಿಂದ ಇಳಿದಾಗ ಹೊಡೆಯಲು ಬಂದ ಬೆಂಬಲಿಗರಿಂದ ತಪ್ಪಿಸಿಕೊಂಡು ಸಿ.ಟಿ. ರವಿ ಒಳಗೆ ಓಡಿದ್ದರು. ಆಮೇಲೆ ಒಳಗೆ ಸೆಕ್ಯೂರಿಟಿ ಬಾಗಿಲಿನಿಂದ ಒಳಗೆ ಹೋಗುವಾಗ ಲಕ್ಷ್ಮೀ ಆಪ್ತ ಸಹಾಯಕ ಹಾಗೂ ಲಕ್ಷ್ಮೀ ಅವರ ಸಹೋದರ ಚನ್ನರಾಜ್ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಿದ್ದಾರೆ. ಲಕ್ಷ್ಮೀ ಪಿಎ ಸಂಗನಗೌಡ ಹಾಗೂ ಅವರ ಸಹೋದರ ಚೆನ್ನರಾಜ್ ಪಿಎ ಸದ್ದಾಂ ಅವರೂ ಹಲ್ಲೆ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ತಡೆಯಲು ಬಂದರೂ ರವಿ ಮೇಲೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಆಮೇಲೆ ಭದ್ರತಾ ಸಿಬ್ಬಂದಿ ರವಿ ಅವರನ್ನು ಗೇಟಿನ ಒಳಗೆ ಕರೆದುಕೊಂಡು ಹೋಗಿದ್ದಾರೆ.
ಬೆಳಗಾವಿಯ ಅಧಿವೇಶನದ ವೇಳೆ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎಂಬ ಆರೋಪ ಕೇಳಿಬಂತು. ಇದನ್ನು ಕೇಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಣ್ಣೀರಿಡುತ್ತಾ ಪರಿಷತ್ ಸಭೆಯಿಂದ ಹೊರಗೆ ಹೋಗಿ, ಸಭಾಪತಿ ಕಚೇರಿಯಲ್ಲಿ ಕುಳಿತರು. ಸಭಾಪತಿ ಬಂದ ನಂತರ ಸಿ.ಟಿ. ರವಿ ವಿರುದ್ಧ ದೂರು ದಾಖಲಿಸಿ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸಿಟಿ ರವಿ ಆಡಿದ ಮಾತುಗಳ ಆಡಿಯೋ ಮತ್ತು ವಿಡಿಯೋ ಪರಿಶೀಲನೆ ಮಾಡಲು ಸಭಾಪತಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.