Sunday, June 16, 2024

ಸತ್ಯ | ನ್ಯಾಯ |ಧರ್ಮ

ಮನೆಗೆ ಬಂದ ಲಕ್ಷ್ಮಿಯಂಥ ಲಕ್ಷ್ಮಿ

(ಈ ವರೆಗೆ…)

ಸೀನಪ್ಪನನ್ನು ಮದುವೆಯಾಗಿ ದೇವೀರಮ್ಮ ನಾರೀಪುರಕ್ಕೆ ಬರುತ್ತಾಳೆ. ಅದಾಗಲೇ ಗರ್ಭಿಣಿಯಾದ ಆಕೆಯನ್ನು ಬೇಗನೆ ತವರಿಗೆ ಕಳುಹಿಸಿ ಸೀನಪ್ಪ ಊರವರ ಬಾಯಿಗೆ ಬೀಳುವುದರಿಂದ ಪಾರಾಗುತ್ತಾನೆ. ದೇವೀರಮ್ಮನ (ಮೊದಲ ಗಂಡನ ಹಾಗೂ ಈಗಿನ ಗಂಡನ)ಇಬ್ಬರು ಮಕ್ಕಳೂ ಮದುವೆಯಾಗಿ ಸಂಸಾರಸ್ಥರಾದರು. ಮುಂದಿನ ಕತೆಗೆ ಓದಿ ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಮೂವತ್ತೆರಡನೆಯ ಕಂತು.

ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಬಾಗಿಲಿಗೊರಗಿ ಕೂತಿದ್ದ ದೇವಿರಮ್ಮನನ್ನು ಮಗಳು ಮಂಜುಳಿ ಬಂದು ಎಚ್ಚರಿಸಿದಳು. ತನ್ನ ಎರಡು ವರ್ಷದ ಕೂಸು ಅಲಮೇಲಿಯನ್ನು ಅವ್ವನ ಮಡಿಲಿಗೆ ಹಾಕುತ್ತಾ “ಈ ಹಾಳಾದ್ ಹೆಣ್ಣು ಕೈಯೇ ಬುಡಕಿಲ ಅಂತದೆ. ಅವ್ವ ಹೇಳ್ತು ಮನ್ದುಂಬುಸ್ಕೊಳಕೆ ನೀನು ಬತ್ತಿದ್ಯ ಅಂತ.  ನಾನ್ ವಸಿ ಮುಂದಾಗ್ಹೋಗಿ ಸಾಸ್ರುಕ್ ರೆಡಿ ಮಾಡ್ಕಬೇಕು ನೀನ್ ಬತ್ತಾ ಮಗಿನ್ ಕರ್ಕಬಂದ್ಬುಡು” ಎಂದು ಹೇಳಿ  ಮೂಗಿನಿಂದ ಸೋರುತ್ತಿದ್ದ ಗೊಣ್ಣೆಯನ್ನು ನಾಲಿಗೆಯಿಂದ ಎಟಕಿಸಿ ಎಟಕಿಸಿ  ಸವಿಯುತ್ತಿದ್ದ ಅಲಮೇಲಿಯನ್ನು ಬಿಟ್ಟು ಸರ ಸರನೇ ಕೆಳಗಿನ ಬೀದಿಯಕಡೆ ಹೆಜ್ಜೆ ಹಾಕಿದಳು.

ತಂಗಿ ಸಾಕಿ ಏನೋ “ನೀನು ಬರ್ಲೇಬೇಕು ಆಟೆಯ” ಎಂದು ಪಟ್ಟೆ ಬರೆದವಳಂತೆ ಕರೆದು ನಿಸುರಾಗಿ ಹೋಗಿಬಿಟ್ಟಿದ್ದಳು. ಆದರೆ ಅಲ್ಲಿ ಹೋಗಿ ತನ್ನ ಮಾಜಿ ಪತಿ ಬೋಪಯ್ಯನ ಹೂಂಕಾರ ಟೇಂಕಾರಗಳನ್ನು ಹೇಗೆ ಎದುರಿಸಿ ನಿಲ್ಲುವುದು   ಎಂಬ ಸಂದಿಗ್ಧದಲ್ಲಿ ತೊಳಲಾಡುತ್ತಿದ್ದ ದೇವಿರಮ್ಮನಿಗೆ ಈಗ ಮೊಮ್ಮಗಳು ಒಂದು ನೆಪವಾಗಿ ಸಿಕ್ಕಿದ್ದು  ತಸು ನೆಮ್ಮದಿ ಎನಿಸಿತು. 

ಇತ್ತ ಊರ ಬಾಗಿಲಿಗೆ ಬಂದ ಮದುಮಕ್ಕಳನ್ನು ದಾರಿ ಉದ್ದಕ್ಕೂ ಪ್ರತಿ ಮನೆಯವರು ಅಕ್ಷತೆ ಹಾಕಿ ಆರತಿ ಎತ್ತಿ ಊರ ಒಳಗೆ ಕರೆದುಕೊಂಡರು. ಮದುವೆಗೆ ಬಾರದೆ ಉಳಿದ ಊರ ಹಲವು ಮಂದಿ ತೀರಿಕೊಂಡ ಲಕ್ಷ್ಮಿಯ ಪ್ರತಿರೂಪದಂತೆಯೇ ಇದ್ದ ಯಶೋಧೆಯನ್ನು ಕಂಡು ಆಶ್ಚರ್ಯ ಚಕಿತರಾದರು.   “ಅಯ್ಯೋ ಸಿವನೇ ಒಂದೇ ತರಿಕೆ ಹಿಂಗೂ ಇರಕ್ ಸಾಧ್ಯುವ”  ಎಂದು ಬಾಯಿಮೇಲೆ ಬೆರಳಿಟ್ಟು ಕೊಂಡರು. ಗಂಡನ ಹೆಸರು ಕೇಳಿದ ಊರವರಿಗೆಲ್ಲಾ ನಾಚುತ್ತಾ ತಲೆತಗ್ಗಿಸಿಯೇ “ಚಂದ್ರು ಹಾಸ್ ಗೌಡ್ರು” ಎಂದು ಉದ್ದಕ್ಕೂ  ಹೆಸರು ಹೇಳಿ ಹೇಳಿ ಸುಸ್ತಾದ ಯಶೋಧೆ, ಅಂತೂ ಇಂತೂ ಗಂಡನ ಮನೆ ಬಾಗಿಲಿಗೆ ಬಂದು ನಿಂತಳು.

ಮೊಮ್ಮಗಳು ಅಲಮೇಲಿಯನ್ನು ಕಂಕುಳಿಗೆ ಹಾಕಿಕೊಂಡು ಅಂಜುತ್ತಲೇ ಜಗಲಿ ಕಟ್ಟೆಯ ಬಳಿ ಬಂದ ದೇವಿರಮ್ಮ, ಅಲ್ಲಿ ಸೇರಿದ್ದ ಜನರ ಹಿಂಡಿನಲ್ಲಿ ತೂರಿ ಮರೆಯಾಗಲು ಜಾಗಕ್ಕಾಗಿ ಕಣ್ಣಾಯಿಸುತ್ತಿದ್ದಳು. ಅಷ್ಟರಲ್ಲಿ ಬೀದಿ ಬಾಗಿಲು ದಾಟಿ ಒಳಗೆ  ಬಂದ ಬೋಪಯ್ಯನನ್ನು ಕಂಡ ಕೂಸು ಅಲಮೇಲಿ ತಾತ ತಾತ ಎಂದು ತೊದಲುತ್ತಾ ದೇವಿರಮ್ಮನ ಕಂಕುಳಿನಿಂದ ಜಡೆ ಬಿದ್ದು ಪಕ್ಕದಲ್ಲೇ ಸಾಗುತ್ತಿದ್ದ ತಾತಾ ಬೋಪಯ್ಯನ ಕಡೆಗೆ  ಪಟಕ್ಕನೆ ನೆಗೆಯಿತು. 

ಹೀಗೆ ಅನಿರೀಕ್ಷಿತವಾಗಿ ಎಷ್ಟೋ ವರ್ಷಗಳ ನಂತರ ಇಷ್ಟು ಹತ್ತಿರದಿಂದ ಬೊಪಯ್ಯನ ಸೌಮ್ಯವಾದ ಮುಖ ನೋಡಿದ  ದೇವಿರಮ್ಮ ಕ್ಷಣ ಪುಳಕಗೊಂಡಳು. ಆದರೆ ಬೋಪಯ್ಯ ಮಾತ್ರ ಯಾವುದೇ ಭಾವ ಸಂಚಾರವಿಲ್ಲದೆ ತಣ್ಣಗೆ ಮೊಮ್ಮಗಳನ್ನು ಎತ್ತಿಕೊಂಡು ಒಳ ಬಂದ ಬಿರುಸಿನಲ್ಲೇ ಹೊರ ನಡೆದು ಹೋದ. ಹೀಗೆ ಬೋಪಯ್ಯನ ಮುಖದಲ್ಲಿ ಯಾವ ಪ್ರತಿಭಟನೆಯ ಛಾಯೆಯು ಕಾಣದ್ದರಿಂದ ದೇವಿರಮ್ಮ ತುಸು  ನಿರಾಳವಾಗಿ ನಿಂತು  ಶಾಸ್ತ್ರ ನೋಡಿದಳು.

ಅಕ್ಕ ಪಕ್ಕದ ಮನೆಯ ಮದುವೆಗಳಲ್ಲಿ ಹೆಣ್ಣು ಗಂಡನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಬಹಳ ಕುತೂಹಲದಿಂದ ನೋಡಿ “ನಾನು ಒಂದಪ ಹಿಂಗ್ ಕೂತ್ಕೊಂಡು ಗಂಡು ಹೆಣ್ಣ ಏನೇನೋ ಪ್ರಶ್ನೆ ಕೇಳ್ ಬೇಕು”. ಎಂದು ಬಹಳ ಸಮಯ ದಿಂದ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ ಗಂಗೆಗೆ, ತನ್ನ ಆಸೆ ಪೂರೈಸಿ ಕೊಳ್ಳಲು ಇದೊಂದು ಸುವರ್ಣಾವಕಾಶವಾಗಿತ್ತು. ಹಾಗಾಗಿ ಅವ್ವನೊಂದಿಗೆ ಹಟ ಹಿಡಿದು ತಾನೇ ನಡುಹೊಸ್ತಿಲಲ್ಲಿ ತಲೆ ಮೇಲೆ ಕಂಬಳಿ ಗುಬ್ಬುರು ಹಾಕಿಕೊಂಡು ಮದು ಮಕ್ಕಳು ಒಳ ಹೋಗದಂತೆ ತಡೆಯೊಡ್ಡಿ ಕೂತಳು. 

ಮಗಳ ಅಧಿಕ ಪ್ರಸಂಗತನದ ಅರಿವಿದ್ದ ಸಾಕವ್ವ ಮೊದಲೇ “ನೋಡ್ನೇ ಗಂಗೂ ಅಲ್ಲಿದ್ದೋರು ಏನ್ ಹೇಳ್ಕೊಡ್ತರೋ ಅದುನ್ನ ಮಾತ್ರ ಕೇಳ್ಬೇಕು. ನಿನ್ ತಲೆಗೆ ಬಂದಿದ್ದು ಒದ್ರುಬ್ಯಾಡ ಗೊತ್ತಾಯ್ತಾ”. ಎಂದು ತಾಕೀತು ಮಾಡಿ ಕೂರಿಸಿದ್ದಳು. ಹೂಂ ಎಂದು ತಲೆ ಆಡಿಸಿ ಕೂತ ಗಂಗೆಗೆ, ತಲೇ ಮೇಲೆ ಕಂಬಳಿಯ ಮುಸುಕು ಬಿದ್ದದ್ದೇ  ತಾನು ಇದುವರೆಗೂ ನೋಡಿದ ಶಾಸ್ತ್ರಗಳಲ್ಲಿ ಗಂಡು ಹೆಣ್ಣಿಗೆ ಯಾರ್ಯಾರ ಮನೆಯಲ್ಲಿ ಏನೇನು ಪ್ರಶ್ನೆ ಕೇಳಿದ್ದರು, ನಾನು ಏನನ್ನು ಕೇಳ ಬೇಕು ಎನ್ನುವ ವಿಚಾರ ತಲೆಯೊಳಗೆ ಓತಪ್ರೋತವಾಗಿ ಹರಿಯ ತೊಡಗಿತ್ತು.

ಬಾಗಿಲ ಹೊರಗೆ ಗಂಡು ಹೆಣ್ಣಿನೊಂದಿಗೆ ನಿಂತಿದ್ದ ಈರಮ್ಮತ್ತೆ ಹೇಳಿಕೊಟ್ಟಂತೆ “ತಂಗಿ ತಂಗಿ ಚಿನ್ನದಂತ ಹೆಂಡ್ತಿನ ಮನೆಗೆ ತಂದೀವ್ನಿ ಬಾಗ್ಲು ಬುಟ್ಟು ಅರ್ಗಾಗವ್ವ” ಎಂದು ಹೇಳಿದ ಚಂದ್ರಹಾಸ. ಗಂಗೆ  “ನಿನ್ನ ಮಗುಂಗೆ ನನ್ನ ಮಗ್ಳುನ್ನ ತಂದುಕೊಳಂಗಿದ್ರೆ ಬಾಗ್ಲು ಬುಟ್ಟು ಅರ್ಗಾಯ್ತಿನಿ ಕನಣ್ಣಯ್ಯ”  ಎಂದು ಈರಮ್ಮತ್ತೆ ಹೇಳಿ ಕೊಟ್ಟ ಮಾತನ್ನು ಬಿಟ್ಟು, “ಇನ್ಮ್ಯಾಕೆ ನಿನ್ನ ಹೆಡ್ತಿನ ನನ್ ಒತ್ತಿಲೇ ಮಲುಗುಸ್ತೀನಿ ಅಂತ ಮಾತ್ಕೊಡು ಆಗ  ಬಾಗ್ಲು ಬುಟ್ಟು ಅರ್ಗಾಯ್ತಿನಿ” ಎಂದು ಹೇಳಿ ಅಲ್ಲಿದ್ದವರೆಲ್ಲ ಗೊಳ್ಳನೆ ನಗುವಂತೆ ಮಾಡಿದಳು. ಗಂಗೆಯ ಪ್ರಶ್ನೆಯಿಂದ ತಬ್ಬಿಬ್ಬಾದ ಚಂದ್ರಹಾಸ, ಯಶೋಧೆಯರು ನಾಚಿ ತಲೆತಗ್ಗಿಸಿದರು. ಸಾಕವ್ವ ಮಾತ್ರ ಮಗಳ ಕಿವಿಯ ಬಳಿ ಬಂದು ” ಜನ್ರು ಎದ್ರಿಗೆ ಹೈಲ್ ಪೈಲಂಗಾಡ್ಬೇಡ ಹೇಳ್ಕೊಟ್ಟಿದ್ದ ಸರ್ಯಾಗಿ ಹೇಳು ಗಂಗೂ” ಎಂದು ಗದರಿ ಪಕ್ಕಕ್ಕೆ ಸರಿದು ನಿಂತಳು.

ಜನರ ನಗು ಕೇಳಿದ ಗಂಗೆ ಮಾತ್ರ ಮತ್ತಷ್ಟು ಹುಮ್ಮಸ್ಸು ತುಂಬಿಕೊಂಡವಳಂತೆ ಪಟ್ಟುಬಿಡದೆ  ಅದೇ ಪ್ರಶ್ನೆಯನ್ನು ಪದೇ ಪದೇ ಕೇಳಿ ಆನಂದಿಸುತ್ತಾ ಅಣ್ಣನ ಉತ್ತರಕ್ಕಾಗಿ ಕಾದಳು. ತಂಗಿಯ  ಅಧಿಕ ಪ್ರಸಂಗತನಕ್ಕೆ  ಉರಿದು ಹೋದ ಚಂದ್ರಹಾಸ “ಎದ್ದೇಳಣೆ ಮ್ಯಾಕೆ ಇಲ್ದಿದ್ರೆ ನಾನೇ ಎಳ್ದು ಈಚೆಗಾಕ್ತಿನಿ ನೋಡು” ಎಂದು ಗುಡುಗಿದ. ಊದ್ಲು ನನ್ಮಗ ಇವತ್ತು ಊದುಸ್ಕೊತನೆ” ಎಂದು ಕಂಬಳಿ ಒಳಗೆ ಗೊಣಗಿ ಕೊಂಡ ಗಂಗೆ, ಎಲ್ಲಿ ಎಲ್ಲರ ಮುಂದೆ ತಪರಾಕಿ ಕೊಟ್ಟು ಬಿಡುವನೋ ಎಂಬ ಅಂಜಿಕೆಯಲ್ಲಿ ಈರಮ್ಮತ್ತೆ ಹೇಳಿಕೊಟ್ಟಂತೆ ಹೇಳಿ,  ಆರತಿ ಬೆಳಗಿ  ಅವನಿಂದ ಐದು ರೂಪಾಯಿ ಪೀಕಿಸಿಕೊಂಡು ಜಾಗ ಖಾಲಿ ಮಾಡಿದಳು.

ಹೀಗೆ ಯಾವ ಅಡೆತಡೆಯು ಇಲ್ಲದೆ ಚಂದ್ರಹಾಸನ ಮದುವೆ ಸರಳವಾಗಿ ಚೆನ್ನಾಗಿಯೇ  ನಡೆದು ಮನೆಯವರೆಲ್ಲ ನಿರಾಳವಾದರು. ಈ ಐದಾರು ತಿಂಗಳುಗಳಿಂದ ಲಕ್ಷ್ಮಿ ಇಲ್ಲದಿರುವ ನಿರ್ವಾತ ಮನೆಯನ್ನು ತುಂಬಿ ಎಲ್ಲರನ್ನೂ ಮಾನಸಿಕವಾಗಿ ಹೈರಾಣ ಮಾಡಿಬಿಟ್ಟಿತ್ತು. ಮಗಳನ್ನು ಕಳೆದುಕೊಂಡು ಹುಚ್ಚಿಯಂತಾಗಿದ್ದ ಸಾಕವ್ವ ಎಲ್ಲಿ ತನ್ನ ಜೀವಕ್ಕೆ ಸಂಚಕಾರ ತಂದುಕೊಂಡು ಬಿಡುವಳೋ ಎಂದು ಭಯಗೊಂಡಿದ್ದ ಮನೆಯವರು ಮತ್ತು ಊರಿನವರು ದಿನ ದಿನವೂ ಅವಳ ಚೇತರಿಕೆ ಕಂಡು ನಿರಾಳವಾದರು. 

ಯಶೋಧೆ ಮನೆ ಸೇರಿದ ಮೇಲಂತೂ ಸಾಕವ್ವನನ್ನು ಹಿಡಿಯುವವರೇ ಇರಲಿಲ್ಲ. ಸೊಸೆ ಯಶೋಧೆಗೆ ಲಕ್ಷ್ಮಿಯ ಹೆಸರಿಟ್ಟು  ಲಕ್ಷ್ಮಿ…ಲಕ್ಷ್ಮೀ… ಎಂದು ಬಾಯಿತುಂಬಾ ಕರೆಯುತ್ತಾ ಅವಳನ್ನು ಮಹಾರಾಣಿಯಂತೆ ಉಪಚರಿಸತೊಡಗಿದಳು. ಅವ್ವನನ್ನು ಕಳೆದುಕೊಂಡು ಅನಾಥ ಭಾವವನ್ನು ಅನುಭವಿಸಿದ್ದ ಯಶೋಧೆಯೂ ಕೂಡ, ಅತ್ತೆ ಕೊಟ್ಟ ಪ್ರೀತಿಗೆ ಪ್ರತಿಯಾಗಿ ಎಂತಹ ಪರಿಸ್ಥಿತಿಯಲ್ಲೂ ಎರಡಾಡದಂತೆ ಆ ಪ್ರೀತಿಯನ್ನು ಜೋಪಾನ ಮಾಡಿಕೊಂಡು ನಾರಿಪುರಕ್ಕೆ ಮಾದರಿ ಸೊಸೆಯಾಗಿ ನಡೆದಳು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌

ಇದನ್ನೂ ಓದಿ-

Related Articles

ಇತ್ತೀಚಿನ ಸುದ್ದಿಗಳು