Monday, June 17, 2024

ಸತ್ಯ | ನ್ಯಾಯ |ಧರ್ಮ

ಸಡಿಲ ನೆಲದ ಸವಾಲು ಮತ್ತು ಮರಳು ಮಾಫಿಯಾದ ಮಸಲತ್ತು

ಜೋಶಿಮಠ ವ್ಯಾಪಕ ಭೂ ಕುಸಿತದಿಂದ ಅಪಾಯದ ಅಂಚಿಗೆ ಬಂದು ತಲಪಿದೆ. ಈ ದುರಂತ ತಂದ ಆತಂಕ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಈ ಹೊತ್ತು ಹದತಪ್ಪಿದ ಅಭಿವೃದ್ಧಿ ಯೋಜನೆಗಳು ಹಿಮಾಲಯದ ನವಿರು ಪರಿಸರಕ್ಕೆ ತಂದಿಟ್ಟ ಬಿಕ್ಕಟ್ಟನ್ನು ತಮ್ಮದೇ ಅನುಭವಗಳ ಮೂಲಕ ಲೇಖನವಾಗಿಸಿದ್ದಾರೆ ಖ್ಯಾತ ವಿಜ್ಞಾನ ಬರಹಗಾರ ಕೆ ಎಸ್‌ ರವಿಕುಮಾರ್. ಅವರ ಲೇಖನವನ್ನು ಪೀಪಲ್‌ ಮೀಡಿಯಾ ಜಾಲತಾಣವು ಸರಣಿಯಲ್ಲಿ ಪ್ರಕಟಿಸುತ್ತಿದ್ದು ಸರಣಿಯ ಎರಡನೆಯ ಭಾಗ ಇಲ್ಲಿದೆ. ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಸಡಿಲ ನೆಲದ ಸವಾಲು

1976ರ ಮೇ 7ರಲ್ಲೇ ಒಂದು ಎಚ್ಚರಿಸುವ ದನಿ ತನ್ನ ಕಾಳಜಿಯನ್ನು ವರದಿಯೊಂದರಲ್ಲಿ ದಾಖಲಿಸಿತ್ತು. ಗರ್ವಾಲ್ ಕಮಿಷನರ್ ಆಗಿದ್ದ ಮಹೇಶ್‍ಚಂದ್ರ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ 18 ಸದಸ್ಯರ ಸಮಿತಿಯು ಜೋಶಿಮಠ ಮತ್ತು ಅದರ ಸುತ್ತಮುತ್ತಲ ಪರಿಸರದ ನಾಜೂಕುತನದ ಬಗ್ಗೆ ಒಂದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಜೋಶಿಮಠ, ನಿತಿ ಮತ್ತು ಮಾನಾ ಕಣಿವೆಯ ಪ್ರದೇಶಗಳೆಲ್ಲ ಹಿಂದೆ ಯಾವಾಗಲೂ ಗ್ಲೇಸಿಯರ್‌ಗಳು ತಂದು ಸುರಿದ ಕಲ್ಲುಬಂಡೆ, ಮಣ್ಣು, ಹೂಳುಗಳ ದೊಡ್ಡ ಗುಪ್ಪೆಗಳು, ಈ ಗುಪ್ಪೆಗಳು ಎಲ್ಲಾ ಕಾಲಕ್ಕು ಸಡಿಲವಾಗಿರುತ್ತವಾದ್ದರಿಂದ ಅವುಗಳ ಮೇಲೆ ಯಾವುದೇ ಬಗೆಯ ದೊಡ್ಡ ಕಟ್ಟಡಗಳನ್ನು ಕಟ್ಟುವುದಾಗಲಿ, ಅವುಗಳ ಮೇಲೆ ಬೆಳೆದ ಮರಗಳನ್ನು ಕಡಿಯುವುದಾಗಲಿ, ಅವುಗಳನ್ನು ಕೊರೆದು ಸುರಂಗ, ಒಳಚರಂಡಿ ನಿರ್ಮಿಸುವುದಾಗಲಿ, ಇಳಿಜಾರಿನಲ್ಲಿ ನೀರು ನಿಲ್ಲಿಸಿ ಗದ್ದೆ ಮಾಡುವುದಾಗಲಿ, ಮಳೆಯ ನೀರಿನ ಹರಿವನ್ನು ಅಡ್ಡಗಟ್ಟುವುದಾಗಲಿ ಹೀಗೆ ಯಾವುದೇ ಬಗೆಯ ಕಾಮಗಾರಿಯನ್ನು ಕೈಗೊಳ್ಳಕೂಡದೆಂದು ವರದಿ ನಿಖರವಾಗಿ, ರಾಜಿರಹಿತವಾಗಿ ಸೂಚಿಸಿತ್ತು. ಹಾಗೆ ನೋಡಿದರೆ ಜೋಶಿಮಠ ಮಾತ್ರವಲ್ಲ ಹಿಮಾಲಯದ ನೆಲ ಇರುವುದೇ ಸಡಿಲವಾಗಿ. ಜಗತ್ತಿನ ಬೇರಾವುದೇ ಬೆಟ್ಟಗಳ ಸಾಲಿಗೆ ಹೋಲಿಸಿದರೆ ಹಿಮಾಲಯ ತೀರಾ ಎಳೆಯ ಹರೆಯದಲ್ಲಿದೆ. ನಮ್ಮ ಪಶ್ಚಿಮ ಘಟ್ಟಗಳಿಗೆ 300 ಕೋಟಿ ವರುಷಗಳಷ್ಟು ವಯಸ್ಸಾಗಿದ್ದರೆ ಹಿಮಾಲಯದ್ದು 3 ಕೋಟಿ ವರುಷಗಳಷ್ಟೆ. ಅದಿನ್ನೂ ಗಟ್ಟಿಗೊಳ್ಳಬೇಕು. ಜಿಯಾಲಜಿಯ ಈ ಮಾಹಿತಿಗಳೆಲ್ಲ ಸರ್ಕಾರಗಳ ಕಲ್ಲಿನಷ್ಟು ಗಡುಸಾದ ಮಂಡೆಯೊಳಕ್ಕೆ ಹೊಕ್ಕುವುದು ಅಷ್ಟು ಸುಲಭವಲ್ಲ. ಹೊಕ್ಕಿದರೂ ಅಲ್ಲಿನ ‘ಹಾರ್ಡ್‍ಡಿಸ್ಕಿ’ನಲ್ಲಿ ಜಾಗ ಕಂಡುಕೊಳ್ಳುವುದು ಸಾಧ್ಯವೇ ಇಲ್ಲ. ಹೇಗೋ, ಮಿಶ್ರಾ ವರದಿಯ ಕಾರಣಕ್ಕೊ, ಮತ್ತಾವುದೋ ಕಾರಣಕ್ಕೊ ಜೋಶಿಮಠದಲ್ಲಾಗಲಿ, ಹಿಮಾಲಯದ ಬೇರಾವುದೇ ಭಾಗದಲ್ಲಾಗಲಿ ಭಾರೀ ಯೋಜನೆಗಳು 20ನೇ ಶತಮಾನದ ಕಡೆವರೆಗೂ ಮೈದಳೆಯಲಿಲ್ಲ. ಆದರೆ ಜಾಗತೀಕರಣ ಗರಿಗಟ್ಟಿದ ಮೇಲೆ ಹಳೆಯ ಎಚ್ಚರಿಕೆಗಳೆಲ್ಲ ಗಾಳಿ ಪಾಲಾದವು. ಉತ್ತರಾಖಂಡ್ ರಾಜ್ಯ 2000ನೇ ಇಸವಿಯಲ್ಲಿ ಹುಟ್ಟಿಕೊಂಡ ಮೇಲಂತೂ ಅಭಿವೃದ್ಧಿಯ ಪರಿಕಲ್ಪನೆಗಳು ಬೇರೆಯೆ ಆಯಾಮಗಳ ಕಡೆ ದೌಡಾಯಿಸಿದವು. ಹೊಸ ರಾಜ್ಯ ಉತ್ತರಾಖಂಡವನ್ನು ಇತರ ರಾಜ್ಯಗಳ ಸಮಕ್ಕೆ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಅಗಾಧವಾದ ಯೋಜನೆಯ ಕನಸುಗಳು ಚಿಗುರೊಡೆದವು. ರಾಜ್ಯ ಹಾಗೂ ಒಕ್ಕೂಟ ಸರ್ಕಾರಗಳ ಕಡೆಯಿಂದ ಸಾಲು ಸಾಲು ಯೋಜನೆಗಳು ಪ್ರಕಟಗೊಳ್ಳತೊಡಗಿದವು. ಆದರೆ ಈ ಸರ್ಕಾರಗಳಿಗೆ ಉತ್ತರಾಖಂಡ್ ಎಂಬ ರಾಜ್ಯ ಹಿಮಾಲಯದ ಸಡಿಲ ನೆಲದ ಮೇಲಿದೆ ಎಂಬ ಸತ್ಯವೇ ಹೊಳೆಯಲಿಲ್ಲ! ಒಂದರ ಹಿಂದೊಂದು ಯೋಜನೆಗಳಿಗೆ ಅಡಿಗಲ್ಲು ನೆಡುವುದು ಶುರುವಾಯಿತು. ಈ ಯೋಜನೆಗಳ ಸಾಲಿನಲ್ಲಿ ಬಂದದ್ದು ಮೊದಲಿಗೆ ದೊಡ್ಡ ಅಣೆಕಟ್ಟುಗಳು, ಆಮೇಲೆ ಹೈಡೆಲ್ ಪವರ್ ಪ್ರೊಜೆಕ್ಟ್‌ಗಳು, ಹೆದ್ದಾರಿಗಳು, ರೈಲು ಮಾರ್ಗದ ನಿರ್ಮಾಣ ಮುಂತಾದವು. ಇನ್ನು ವಾಣಿಜ್ಯ ಉದ್ದೇಶದ ಖಾಸಗಿ ಕಟ್ಟಡಗಳಂತೂ ನದಿಗಳ ದಡವನ್ನಾಕ್ರಮಿಸಿ ಅಕ್ರಮವಾಗಿ ಕಳೆಗಿಡಗಳಂತೆ ಪುಟಿದೆದ್ದವು.

ಮರಳು ಮಾಫಿಯಾದ ಮಸಲತ್ತು

ಎಲ್ಲ ಕಾಮಗಾರಿಗಳಿಗೆ ಮರಳು ಬೇಕಲ್ಲ. ಉತ್ತರಾಖಂಡ ಹಿಂದೆಂದೂ ಕಾಣದಿದ್ದಂತಹ ಮರಳು ದಂಧೆ ಸಾರ್ವಜನಿಕ ಬದುಕಿನ ಎಲ್ಲ ಮಜಲುಗಳಲ್ಲೂ ಆಳವಾಗಿ ಬೇರು ಬಿಟ್ಟಿತು. ನದಿಗಳಿಂದ ಮರಳನ್ನು ತೆಗೆದು ತೆಗೆದು ಕಂಬಗಳು ಹೊರಕಾಣಿಸಿ ಕ್ರಮೇಣ ಸಡಿಲಗೊಂಡು ಸೇತುವೆಗಳು ಕುಸಿದವು. ಮರಳು ತಳದಲ್ಲುಳಿದು ಹರಿವ ನೀರಿನ ವೇಗಕ್ಕೆ ಕಡಿವಾಣ ಹಾಕುತ್ತದೆ. ಅದನ್ನು ತೆಗೆದ ಮೇಲೆ ನದಿಯ ಆಳ ಅಸಹಜವಾಗಿ ಹೆಚ್ಚುತ್ತದೆ. ಆಚೀಚೆ ದಡಗಳ ಮೇಲೆ ಹೊರಳಿಕೊಂಡು ಚಲಿಸಬೇಕಿದ್ದ ಹೆಚ್ಚಿನ ಪ್ರಮಾಣದ ನೀರು ಇಕ್ಕಟ್ಟಾದ ನಡುವಿನ ಆಳದಲ್ಲಿ ಬಾಣ ಬಿಟ್ಟಂತೆ ಹರಿದು ಬರುತ್ತದೆ. ನೆರೆಯ ವೇಳೆಯಲ್ಲಂತೂ ವಿಪರೀತ ವೇಗದಿಂದ ಹರಿಯುವ ಹಿಮಾಲಯದ ನದಿಗಳು ಸೇತುವೆಯ ಕಂಬಗಳಿಗೆ ಬಂದು ಅಪ್ಪಳಿಸುತ್ತವೆ. ಆಗ ನದಿ ನೀರು ಹೇರುವ ಹೆಬ್ಬೊತ್ತಡವನ್ನು ಕಳಪೆ ಕಾಮಗಾರಿಯ ಕಂಬಗಳು ಹೇಗೆ ತಡೆದಾವು? ಅಕ್ರಮ ಮರಳು ಸುಲಭದಲ್ಲಿ ಸಿಗುವಾಗ ಅದನ್ನೇ ಹೆಚ್ಚು ಬೆರೆಸಿ, ಬಳಸಬೇಕಿದ್ದ ಅನುಪಾತದಲ್ಲಿ ಬಳಕೆಯಾಗದೆ ಉಳಿದ ಕಾಂಕ್ರಿಟ್ ಗುತ್ತಿಗೆದಾರರು ಮತ್ತು ಸರ್ಕಾರಿ ಭ್ರಷ್ಟರ ಕಿಸೆ ತುಂಬಿತು. ಡೆಹ್ರಾಡೂನ್-ರಿಷಿಕೇಶ ನಡುವಿನ ಜಾಕನ್ ನದಿ ಸೇತುವೆ ಕುಸಿಯಿತು. ಈ ಸೇತುವೆ ಹಿಂದಿನ ಮುಖ್ಯಮಂತ್ರಿ ಟಿ.ಎಸ್.ರಾವತ್ ಅವರ ದೊಯಿವಾಲ ಚುನಾವಣಾ ಕ್ಷೇತ್ರದಲ್ಲೆ ಇದೆ ಎನ್ನುವುದು ಚೋದ್ಯದ ಸಂಗತಿ. ಈ ಸೇತುವೆ ಬಹಳ ಗಟ್ಟಿಮುಟ್ಟು, ಕನಿಷ್ಠ ನೂರು ವರುಷ ಬಾಳಿಕೆ ಬರುತ್ತದೆ ಎಂದು PWD ಎಂಜಿನಿಯರುಗಳು ಬೆನ್ನು ತಟ್ಟಿಕೊಂಡಿದ್ದರಂತೆ. ಆಮೇಲೆ ಸೋಂಗ್ ನದಿಗೆ ಕಟ್ಟಿದ ಸೇತುವೆ ಕುಸಿದಾಗ ಸರ್ಕಾರ ಮತ್ತು ಲೋಕೋಪಯೋಗಿ ಅಧಿಕಾರಿಗಳು ಕುಸಿತಕ್ಕೆ ಮೋಡ ಸಿಡಿತ (cloud bursting) ತಂದ ಭೀಕರ ಮಳೆನೆರೆಯೆ ಕಾರಣ ಎಂದು ರೆಡಿಮೇಡ್ ಪ್ರತಿಕ್ರಿಯೆಯನ್ನು ವಾಂತಿ ಮಾಡಿಕೊಂಡರು. ಇದೆಲ್ಲ ಸಾಲದ್ದಕ್ಕೆ ಮರಳು ತುಂಬಿದ ಲಾರಿಗಳು (ನಮ್ಮ ಕರುನಾಡಿನಲ್ಲಿ ಅಂದು ಅದಿರು ಲಾರಿಗಳು ಚಲಿಸಿದಂತೆ) ಕದ್ದುಮುಚ್ಚಿ ಚಲಿಸಿ ಚಲಿಸಿ ಅದೆಷ್ಟೊ ಸಣ್ಣಪುಟ್ಟ ಸೇತುವೆಗಳು ಕುಸಿದು ಹೋದದ್ದು ಚರ್ಚೆಯಾಗಲೇ ಇಲ್ಲ. ಹಲವು ಕಡೆ ಮಣ್ಣಿನ ಗಟ್ಟಿತನದ ಪರೀಕ್ಷೆ ನಡೆಸದೆ, ಬೆಟ್ಟಗಳ ಏರಿಳಿತಗಳನ್ನು ಅಧ್ಯಯನ ಮಾಡದೆ, ನೀರು ಹರಿಯುವ ಜಾಡನ್ನು ಗಮನಿಸದೆ, ತಕ್ಕ ಇತರ ಮುನ್ನೆಚ್ಚರಿಕೆಗಳನ್ನು ಪರಿಗಣಿಸದೆ ಕಟ್ಟಬಾರದ ಕಡೆಯಲ್ಲೆಲ್ಲ ಭಾರೀ ಸೇತುವೆಗಳನ್ನು ಕಟ್ಟಲಾಯಿತು. ಅಂತಹ ಒಂದು ಸೇತುವೆ ಆಗಸ್ಟ್ 2021ರಲ್ಲಿ ಹಾಲ್ದವಾನಿ-ರಾನಿಕೇತ್ ನಡುವೆ ಕುಸಿದು ಬಿತ್ತು. ಜನ ಹುಯಿಲೆಬ್ಬಿಸಿದಾಗ ಸರ್ಕಾರ ಅಲ್ಲೆ ಸಮೀಪದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೊಂದು ಬದಲಿ ಸೇತುವೆ ಕಟ್ಟಿಸಲು ಮುಂದಾಯಿತು. ಇದರ ಕಾಮಗಾರಿ ಈಗ ಶುರುವಾಗಿದೆ. ಇದರ ಕೊನೆಯು ಮುಂಚಿನದರಂತೆಯೆ ಆಗಲಿದೆ. ತೆಹರಿ ಅಣೆಕಟ್ಟೆಯ ನೀರಿನ ಸಂಗ್ರಹದ ಮೇಲೆಯೆ ಅಡ್ಡಲಾಗಿ ವಾಹನಗಳ ಬಳಕೆಗೆಂದು ನಿರ್ಮಿಸಿದ, ಸ್ವತಃ ಮುಖ್ಯಮಂತ್ರಿಯೆ 2020ರಲ್ಲಿ ಉದ್ಘಾಟಿಸಿದ್ದ ಏಷ್ಯಾದ ಅತಿ ಉದ್ದದ ದೊಬ್ರಾ-ಚಂತಿ ತೂಗು ಸೇತುವೆಯಲ್ಲಿ ಕಟ್ಟಿದ ಒಂಬತ್ತು ತಿಂಗಳಲ್ಲೆ ಬಿರುಕುಗಳು ಕಾಣಿಸಿ ಕೊಂಡವು. ಈಗ ಈ ಸೇತುವೆಯ ಮೇಲೆ ಬರಿ ನಡೆಯಬಹುದಷ್ಟೆ, ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಈ ಚೆಂದಕ್ಕೆ ರಾಜ್ಯ ಸರ್ಕಾರ ಖರ್ಚು ಮಾಡಿದ್ದು 2.96 ಕೋಟಿ ರೂಪಾಯಿಗಳು (ಈ ಸೇತುವೆ ಯಾರ ಯಾರ ಕರಿದುಡ್ಡಿನ ತಿಜೋರಿಯನ್ನು ಎಷ್ಟೆಷ್ಟು ತುಂಬಿತೊ ಎಂಬುದನ್ನು ಹೇಳುವರಾರು, ‘ನಾ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ’ ಎಂದು ಗುಡುಗಿದವರು ಹೇಳಬಹುದೆ). ಹೀಗೆ ಉತ್ತರಾಖಂಡದಲ್ಲಿ ಸೇತುವೆ ಸ್ಕ್ಯಾಂಡಲ್‍ಗಳ ಬಗ್ಗೆಯೆ ಒಂದು ನಿಡಿದಾದ ಖಂಡಕಾವ್ಯವನ್ನು ಬರೆಯಬಹುದು.

ಕೆ ಎಸ್‌ ರವಿಕುಮಾರ್

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

Related Articles

ಇತ್ತೀಚಿನ ಸುದ್ದಿಗಳು