‘ಲ್ಯಾಂಡ್ ಲಾರ್ಡ್’ ಸಿನಿಮಾ ನಾಯಕ ನಟ ದುನಿಯಾ ವಿಜಯ್ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ತಮ್ಮ ಹೊಸ ಸಿನಿಮಾ ವೀಕ್ಷಿಸುವಂತೆ ಆಹ್ವಾನ ನೀಡಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “‘ಲ್ಯಾಂಡ್ ಲಾರ್ಡ್’ ಚಿತ್ರತಂಡದವರು ಇಂದು ನನ್ನನ್ನು ಭೇಟಿಯಾಗಿ, ತಮ್ಮ ಚಿತ್ರ ವೀಕ್ಷಣೆಗೆ ಪ್ರೀತಿಯಿಂದ ಆಹ್ವಾನಿಸಿದ್ದಾರೆ” ಎಂದು ತಿಳಿಸಿದ್ದಾರೆ.
‘ಲ್ಯಾಂಡ್ ಲಾರ್ಡ್’ ಸಿನಿಮಾ ಸಮಾಜದಲ್ಲಿನ ಜಾತಿ ಅಸಮಾನತೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಆಧಾರವಾಗಿಸಿಕೊಂಡ ಕಥಾಹಂದರ ಹೊಂದಿದ್ದು, ಸಾಮಾಜಿಕ ಜಾಗೃತಿ ಮೂಡಿಸುವ ದಿಟ್ಟ ಪ್ರಯತ್ನ ಇದಾಗಿದೆ ಎಂದು ಸಿಎಂ ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ವಿಷಯಗಳನ್ನು ಒಳಗೊಂಡ ಸಿನಿಮಾಗಳು ಅಪರೂಪವಾಗಿ ಮೂಡಿಬರುತ್ತಿರುವ ಸಂದರ್ಭದಲ್ಲಿ, ಈ ಚಿತ್ರ ಗಮನಾರ್ಹ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿರುವ ಈ ಸಿನಿಮಾ ಶತದಿನೋತ್ಸವವನ್ನು ಪೂರೈಸಲಿ, ಇಂತಹ ಇನ್ನಷ್ಟು ಅರ್ಥಪೂರ್ಣ ಚಿತ್ರಗಳು ಮೂಡಿಬರಲು ‘ಲ್ಯಾಂಡ್ ಲಾರ್ಡ್’ ಸ್ಪೂರ್ತಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ.
“ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಚಿತ್ರ ವೀಕ್ಷಿಸುತ್ತೇನೆ. ನೀವೂ ನೋಡಿ” ಎಂದು ಅವರು ಮನವಿ ಮಾಡಿದ್ದಾರೆ.
ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಿ ‘ಲ್ಯಾಂಡ್ ಲಾರ್ಡ್’ ಚಿತ್ರತಂಡ ವಿಶೇಷ ಶೋ ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
