Tuesday, October 1, 2024

ಸತ್ಯ | ನ್ಯಾಯ |ಧರ್ಮ

ಹೆಚ್‍ಎಂಟಿ ಕಾರ್ಖಾನೆಯ ಭೂಮಿಯ ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ: ರಮೇಶ್ ಎನ್ ಆರ್

ಬೆಂಗಳೂರು: ಹೆಚ್‍ಎಂಟಿ ಕಾರ್ಖಾನೆಯ ಭೂಮಿಗಳನ್ನು ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್ ಆರ್ ಆರೋಪ ಮಾಡಿದ್ದಾರೆ.

1953 ರಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಸ್ಥಾಪನೆಯಾದ ಹೆಚ್‌ಎಂಟಿ ಕಾರ್ಖಾನೆ ಸುಮಾರು 647 ಎಕರೆಗಳಷ್ಟು ವಿಸ್ತೀರ್ಣದ ಭೂಮಿಯನ್ನು ಹೊಂದಿದೆ. ಈ ಭೂಮಿಯಲ್ಲಿ 200 ಎಕರೆಗಳಷ್ಟು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ದಾನವಾಗಿ ನೀಡಿದ್ದರು. ಉಳಿದ 447 ಎಕರೆಗಳಷ್ಟು ಭೂಮಿಯನ್ನು ಸ್ಥಳೀಯ ರೈತರಿಂದ ಸ್ವಾಧೀನಪಡಿಸಿಕೊಂಡು ಹೆಚ್‍ಎಂಟಿ ಕಾರ್ಖಾನೆಯನ್ನು ನಿರ್ಮಿಸಲಾಗಿದೆ.  ಸುಮಾರು ಐದಾರು ದಶಕಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಚ್‍ಎಂಟಿ ಕಾರ್ಖಾನೆಯನ್ನು, ಅದರಲ್ಲೂ ವಾಚ್ ತಯಾರಿಕಾ ಘಟಕವು ಬೇರೆ ಖಾಸಗಿ ಕಂಪನಿಗಳ ಸ್ಪರ್ಧೆಗಳನ್ನು ಎದುರಿಸಲಾಗದೇ ಮತ್ತು ಆಡಳಿತ ವೈಪಲ್ಯದಿಂದಾಗಿ ಅಪಾರ ಪ್ರಮಾಣದ ನಷ್ಟವನ್ನು ಕಂಡು ಕಳೆದ 20 ವರ್ಷಗಳಿಂದೀಚೆಗೆ ಉತ್ಪಾದನೆಯನ್ನು ನಿಲ್ಲಿಸಿದೆ.

2004 ರ ನಂತರ ಹೆಚ್‍ಎಂಟಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ನಡೆಸಿರುವ ಅಧಿಕಾರಿಗಳು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ತಳವೂರಿ ಕುಳಿತಿದ್ದ ಸರ್ಕಾರಿ ನೆಲಗಳ್ಳರು ಕಾಲಾನುಕಾಲದಲ್ಲಿ ಈ ಜಮೀನನ್ನು ಮಾರಾಟ ಮಾಡಿದ್ದಾರೆ. ಸಾರ್ವಜನಿಕ ಉದ್ಯಮವಾಗಿರುವ ಹೆಚ್‍ಎಂಟಿ ಕಾರ್ಖಾನೆಯ ಸೊತ್ತು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಸೇರಿದ್ದು, ಕೇಂದ್ರ ಸರ್ಕಾರದ ಗಮನಕ್ಕೆ ಬರದಂತೆ ಮತ್ತು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯದೇ ಸ್ಥಳೀಯ ಮಟ್ಟದಲ್ಲಿ “ಕಾರ್ಖಾನೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸುವ” ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ರಮೇಶ್ ಎನ್ ಆರ್ ಆರೋಪಿಸಿದ್ದಾರೆ.

ಸುಮಾರು 2,000 ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ಸುಮಾರು 241 ಎಕರೆಗಳಷ್ಟು ವಿಸ್ತೀರ್ಣದ ಹೆಚ್‍ಎಂಟಿ ಕಾರ್ಖಾನೆಯ ಸ್ವತ್ತನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಈಗಾಗಲೇ ಹರಿದು ಹಂಚಿ ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದು ತಾವು ಯಾವುದೇ ಹೇಳಿಕೆಯನ್ನು ನೀಡುವ ಮೊದಲು ಸಂಬಂಧಪಟ್ಟ ಮಾಹಿತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಮತ್ತು ಅಧ್ಯಯನ ಮಾಡಿದ ನಂತರವೇ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಮ್ಮ ಹೇಳಿಕೆಗಳನ್ನು ನೀಡಬೇಕು. ಆದರೆ,ಹೆಚ್‍ಎಂಟಿ ಕಾರ್ಖಾನೆಗೆ ಸೇರಿದ ಸುಮಾರು 2,000 ಕೋಟಿಗೂ ಹೆಚ್ಚು ಮೌಲ್ಯದ 241 ಎಕರೆಗಳಷ್ಟು ವಿಸ್ತೀರ್ಣದ ಅಮೂಲ್ಯ ಸರ್ಕಾರಿ ಸ್ವತ್ತನ್ನು ತಮ್ಮದೇ ಪಕ್ಷದ ಕೆಲವು ಹಿರಿಯ ಮುಖಂಡರು ಮತ್ತು ಕೆಲವು ಅತ್ಯಂತ ಪ್ರಭಾವೀ ಅಧಿಕಾರಿಗಳು ಈಗಾಗಲೇ ಕಾನೂನು ಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವ “ಹೆಚ್‍ಎಂಟಿ ಭೂ ಹಗರಣ”ದ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಅಧ್ಯಯನ ಮೇಲೆಯೇ ತಮ್ಮ ಅಭಿಪ್ರಾಯವನ್ನು ಹೇಳಬೇಕೆಂದು ರಮೇಶ್ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page