Friday, June 14, 2024

ಸತ್ಯ | ನ್ಯಾಯ |ಧರ್ಮ

ಬಸವ ಕುವೆಂಪು ಅವರ ಕರ್ನಾಟಕ ಉಳಿಸಿಕೊಳ್ಳಲು ಕೊನೆಯ ಅವಕಾಶ

ಕೇವಲ ಕರ್ನಾಟಕದ ವಿಧಾನಸಭೆಗೆ ಸಂಬಂಧಿಸಿದ ಚುನಾವಣೆಯಲ್ಲಇದು. ಮುಂದಿನ ವರುಷ ನಡೆಯಲಿರುವ ಲೋಕಸಭೆಯ ಚುನಾವಣೆಯ ಚಹರೆಯನ್ನು ನಿರ್ಧರಿಸುವ ಚಾರಿತ್ರಿಕ ಮಹತ್ವವನ್ನೂ ಇದು ಹೊಂದಿದೆ. ಫ್ಯಾಸಿಸಂನಿಂದ ತತ್ತರಿಸಿರುವ ಇಡೀ ದೇಶ ಕನ್ನಡಿಗರತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಅವರನ್ನು ನಾವು ನಿರಾಶೆಗೊಳಿಸಬಾರದು. ಸಂವಿಧಾನ ವಿರೋಧಿ ಪಕ್ಷಕ್ಕೆ ಸೋಲಾಗಬೇಕು  ಜನತೆಯ ಆಶಯಗಳಿಗೆ ಜಯವಾಗಬೇಕು – ಶ್ರೀನಿವಾಸ ಕಾರ್ಕಳ

ಕರ್ನಾಟಕದ ಚರಿತ್ರೆಯನ್ನು ಸ್ಥೂಲವಾಗಿ ನೋಡಿದರೆ, ಅದು ಸದಾಕಾಲಕ್ಕೂ ಬಸವಣ್ಣನವರ ‘ಇವ ನಮ್ಮವ, ಇವ ನಮ್ಮವ’ ಎಂಬ ಮಾತಿನಂತೆ ನಡೆದುಕೊಂಡ ಪ್ರದೇಶ ಎಂಬುದು ತಿಳಿದೀತು. ‘ಅತಿಥಿ ದೇವೋಭವ’ ಅದರ ಅನನ್ಯ ಪರಂಪರೆ. ಹೊರಗಿನಿಂದ ಬಂದ ಎಲ್ಲರನ್ನೂ ಅದು ಉದಾರವಾಗಿ ಸ್ವಾಗತಿಸಿ, ಅವರನ್ನು ಪ್ರೀತಿಯಿಂದ ತಮ್ಮವರನ್ನಾಗಿಸಿಕೊಂಡಿದೆ. ಕರ್ನಾಟಕದ್ದು ಹೊರಗಿಡುವ ಸಂಸ್ಕೃತಿಯಲ್ಲ. ಒಳಗೊಳಿಸಿಕೊಳ್ಳುವ ಸಂಸ್ಕೃತಿ.

ಕ್ರಿಸ್ತಪೂರ್ವ 3 ನೇ ಶತಮಾನದ ಚಂದ್ರಗುಪ್ತ ಮೌರ್ಯನ ಆಡಳಿತ ಕಾಲದಲ್ಲಿ  ಉತ್ತರಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. ಆಗ ದಕ್ಷಿಣಾಪಥಕ್ಕೆ ವಲಸೆ ಬಂದ  ಭದ್ರಬಾಹು ಭಟಾರರು ಮತ್ತು ಸಂಪ್ರತಿ ಚಂದ್ರಗುಪ್ತರು ತುಲನಾತ್ಮಕವಾಗಿ ಆ ಕಾಲದಲ್ಲಿ ಹೆಚ್ಚು ಫಲವತ್ತಾಗಿದ್ದ ತಮಿಳುನಾಡಿನ ಚೋಳಮಂಡಲ- ತಂಜಾವೂರು ಪ್ರದೇಶಕ್ಕೆ ಹೋಗಲಿಲ್ಲ. ಬದಲಿಗೆ, ಬಂದು ನೆಲೆ ನಿಂತದ್ದು ಮಹಾಬಂಡೆಗಳ ಕನ್ನಡ ಪ್ರದೇಶವಾದ ಶ್ರವಣಬೆಳಗೊಳದಲ್ಲಿ. ಜೈನರು ಮುಂದೆ ಕನ್ನಡವನ್ನೇ ಉಸಿರಾಗಿಸಿಕೊಂಡು ಕನ್ನಡ ಭಾಷಾ ಪ್ರದೇಶವನ್ನು ‘ಜಿನಧರ್ಮದ ಆಡುಂಬೊಲಂ’ ಮಾಡಿಕೊಂಡರು.

ಅಶೋಕ ಚಕ್ರವರ್ತಿಯು ತಾನು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ಆನಂತರ ಮಧ‍್ಯ ಕರ್ನಾಟಕವನ್ನು  ಬೌದ್ಧ ಧರ್ಮದ ಪ್ರಸಾರ ಕೇಂದ್ರವನ್ನಾಗಿ ಮಾಡಿಕೊಂಡ. ಸನ್ನತಿ, ಕೊಪ್ಪಳ, ಮಸ್ಕಿ, ಡಂಬಳ, ಐಹೊಳೆ, ಬ್ರಹ್ಮಗಿರಿ, ಕದರಿ ಮೊದಲಾದ ಪ್ರದೇಶಗಳೆಲ್ಲ ಗತಕಾಲದ ಈ ಭವ್ಯ ಚರಿತ್ರೆಗೆ ಸಾಕ್ಷಿಗಳು.

ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಆರಿಸಿಕೊಂಡುದು ಕನ್ನಡ ಮಣ್ಣನ್ನು.

ಮುಸ್ಲಿಮರಿಗೆ ಬಿಜಾಪುರ, ಗುಲ್ಬರ್ಗ, ಬೀದರ್ ಗಳು ಆಸರೆ ನೀಡಿದರೆ, ಆಧುನಿಕ ಸಂದರ್ಭದಲ್ಲಿ ಮಂಗಳೂರು ಕ್ರಿಶ್ಚಿಯನ್ ಮಿಷನರಿಗಳನ್ನು ತೆರೆದ ಬಾಹುಗಳಿಂದ ಸ್ವಾಗತಿಸಿತು. ಈ ಮಿಶನರಿಗಳು ಶಿಕ್ಷಣ, ಮುದ್ರಣ, ಉದ್ಯಮ ಕ್ಷೇತ್ರದಲ್ಲಿ ಕನ್ನಡನಾಡಿಗೆ ಕೊಟ್ಟ ಕೊಡುಗೆ ಅನನ್ಯ ಮತ್ತು ಅಪಾರ.

ವರ್ತಮಾನ ಕಾಲದಲ್ಲಿ ಉತ್ತರಭಾರತದ ಲಕ್ಷಾಂತರ ಜನರು ಉದ್ಯೋಗ ಅರಸಿಕೊಂಡು ಬರುತ್ತಿದ್ದು ಅವರಿಗೂ ಕನ್ನಡ ನಾಡು ಆಸರೆ ಕೊಟ್ಟಿದೆ.

ಸರ್ವಜನಾಂಗದ ಶಾಂತಿಯ ತೋಟ

‘ಮಾನವ ಜಾತಿ ತಾನೊಂದೆವಲಂ’ ಎಂದು ನಮ್ಮ ಆದಿಕವಿ ಪಂಪ ಸಾವಿರ ವರ್ಷದ ಹಿಂದೆಯೇ ಸಾರಿದ. ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎಂದು ಘೋಷಿಸಿದ ಶರಣರು. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ..’ ಎಂದು ಕರೆ ಕೊಟ್ಟರು ದಾಸರು. ‘ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ!..’ ಎಂದು ಲಿಂಗ ಸಮಾನತೆಯನ್ನು ಅಂದೇ ಸಾರಿದ ಜೇಡರ ದಾಸಿಮಯ್ಯ. ‘ಸೋರುತಿಹುದು ಮನೆಯ ಮಾಳಿಗೆ’ ಎಂದು ಎಚ್ಚರಿಸುತ್ತಾ ಕನ್ನಡ ಸಾಹಿತ್ಯಕ್ಕೆ ತಾತ್ವಿಕ ಶಕ್ತಿಯನ್ನು ತಂದುಕೊಟ್ಟರು ಸೂಫಿ ಸಂತರು. ‘ನಮ್ಮದು ಸರ್ವಜನಾಂಗದ ಶಾಂತಿಯ ತೋಟ’ ಎಂದು ಕೊಂಡಾಡಿದವರು ಕುವೆಂಪು.

ಇಂಥ ನಾಡಿನಲ್ಲಿ ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಸಿಖ್ ಮೊದಲಾದ ಧಾರ್ಮಿಕ ಪರಂಪರೆಗಳು ಭಯವಿಲ್ಲದೆ ಬೆಳೆದವು. ಇವುಗಳ ಜತೆಗೆ ಮಲೆ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಬೀರಪ್ಪ, ಮೈಲಾರ, ಎಲ್ಲಮ್ಮ, ಹುಲಿಗೆಮ್ಮ, ಮಾರಮ್ಮ, ಭೂತಾರಾಧನೆ ಮೊದಲಾದ ಜನಪದ ಪರಂಪರೆಗಳೂ ಬದುಕುಳಿದವು. ಸುಮಾರು 72 ಭಾಷೆಗಳು ಇಲ್ಲಿ ಜತೆಯಾಗಿ ಅರಳಿವೆ. ‘ಊರಿನ ಜನರಿಗೆ ಅಮೃತದ ಹಾಲೆರೆಯುತ್ತೇವೆ’ ಅನ್ನುತ್ತವೆ ನಮ್ಮ ತುಳುನಾಡ ದೈವಗಳು.

ಇದನ್ನೂ ಓದಿhttps://peepalmedia.com/party-politics/ http://ಸಂಘಪರಿವಾರದ ಹೆಣ ರಾಜಕಾರಣ

ಅಪಾಯದಲ್ಲಿದೆ ಕನ್ನಡ ಸಂಸ್ಕೃತಿ

ಇಂಥ ಮಹೋನ್ನತ ಪರಂಪರೆಯ ನಾಡಿನಲ್ಲಿ ಇವತ್ತು ಜನರ ನಡುವೆ ವಿಷ ಹಂಚಲಾಗುತ್ತಿದೆ. ದ್ವೇಷ ಭಾಷಣಗಳು ಎಗ್ಗಿಲ್ಲದೆ ಮುಂದುವರೆಯುತ್ತಿವೆ. ಸ್ವಾತಂತ್ರ್ಯಾನಂತರದ ಇತಿಹಾಸದಲ್ಲೇ ಕಂಡಿಲ್ಲದ ಕೆಡುಕಿನ ದಿನಗಳನ್ನು ಕಳೆದ ನಾಲ್ಕು ವರ್ಷಗಳ ಕರ್ನಾಟಕ ಕಂಡಿದೆ. ಜನಮತವಿಲ್ಲವಾದರೂ ಅನೈತಿಕವಾಗಿ ಅಧಿಕಾರ ಕಬಳಿಸಿದ ಸರ್ಕಾರ ಈ ನಾಡಿಗೆ ತಂದದ್ದು ಅವನತಿ ಮಾತ್ರ. ಎಂದೆಂದೂ ಕಾಣದಂತಹ ಭ್ರಷ್ಟಾಚಾರ, ಸಾಮಾನ್ಯರ ಬದುಕು ಹಿಂಡುವ ಬೆಲೆ ಏರಿಕೆ, ಯುವಜನರ ಕನಸು ಕಮರಿಸುವ ನಿರುದ್ಯೋಗ, ಕುಸಿದಿರುವ  ವಹಿವಾಟು, ಮಿತಿಮೀರಿ ಹೆಚ್ಚಾಗಿರುವ ಮಹಿಳೆಯರ ಮೇಲಿನ ಹಿಂಸೆ, ಜಾತಿ ಹೆಸರಿನಲ್ಲಿ ದೌರ್ಜನ್ಯ ‘ದಂಡ-ಬಹಿಷ್ಕಾರಗಳು’, ಅಸ್ಪೃಶ್ಯರಾಗುತ್ತಿರುವ ಅಲ್ಪಸಂಖ್ಯಾತರು, ಬಾಯಿಬಿಟ್ಟರೆ ಧಾರ್ಮಿಕ ದ್ವೇಷದ ದುರ್ಗಂಧ ಇವೆಲ್ಲ ಈ ಸರ್ಕಾರದ ಆಳ್ವಿಕೆಯ ಫಲಗಳು. ಎಲ್ಲ ಅರ್ಥದಲ್ಲಿಯೂ ಇದು ಭ್ರಷ್ಟ, ದುಷ್ಟ, ಲೂಟಿಕೋರ, ನಯವಂಚಕ ಮತ್ತು ಮನೆಮುರುಕ ಸರ್ಕಾರವಾಗಿದೆ.

ಕೊನೆಯ ಅವಕಾಶ

ಈ ದುರಂತಮಯ ವಾತಾವರಣದಿಂದ ಕರ್ನಾಟಕವನ್ನು ಹೊರತರುವ ಒಂದು ಸಾಧ್ಯತೆ ಈಗ ನಾಡಿನ ಮುಂದಿದೆ. ಚುನಾವಣೆ ಬಂದಿದೆ. ನಾಡಿನ ಅಸ್ಮಿತೆ, ಪರಂಪರೆ, ಬದುಕು ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ನಿರ್ಧಾರಕ್ಕೆ ಇದು ಸುವರ್ಣಾವಕಾಶ ಮಾತ್ರವಲ್ಲ, ಕೊನೆಯ ಅವಕಾಶ.

ಇದು ಕೇವಲ ಕರ್ನಾಟಕದ ವಿಧಾನಸಭೆಗೆ ಸಂಬಂಧಿಸಿದ ಚುನಾವಣೆಯಲ್ಲ. ಇದು ಮುಂದಿನ ವರುಷ ನಡೆಯಲಿರುವ ಲೋಕಸಭೆಯ ಚುನಾವಣೆಯ ಚಹರೆಯನ್ನು ನಿರ್ಧರಿಸುವ ಚಾರಿತ್ರಿಕ ಮಹತ್ವವನ್ನೂ ಹೊಂದಿದೆ. ಫ್ಯಾಸಿಸಂನಿಂದ ತತ್ತರಿಸಿರುವ ಇಡೀ ದೇಶ ಕನ್ನಡಿಗರತ್ತ ಆಸೆಗಣ್ಣಿನಿಂದ ನೋಡುತ್ತಿದೆ. ಅವರನ್ನು ನಾವು ನಿರಾಶೆಗೊಳಿಸಬಾರದು.

ಕರ್ನಾಟಕ‌‌‌ದ ಸಹಸ್ರಮಾನ ಕಂಡ ಎರಡು ದೊಡ್ಡ ದೀವಿಗೆಗಳು ಬಸವಣ್ಣ-ಕುವೆಂಪು. ಅವರ ಕನಸಿನ ಕರ್ನಾಟಕ – ಸಮಾಜ ರೂಪುಗೊಳ್ಳಬೇಕು. ಬಸವಣ್ಣ, ಕುವೆಂಪು , ಬಂದೇನವಾಜ, ಶರೀಫ, ಸಿದ್ಧಾರೂಢರ ಕರ್ನಾಟಕವು ಉತ್ತರ ಪ್ರದೇಶ ಆಗದಂತೆ ನೋಡಿಕೊಳ್ಳಬೇಕು.   ಕನ್ನಡ- ಕರ್ನಾಟಕತ್ವ- ಕನ್ನಡಿಗರ ಅಸ್ಮಿತೆಗಳಿಗೆ ಧಕ್ಕೆ ತರುವ ಮತ್ತು ರಾಷ್ಟ್ರೀಯತೆಯ ಹೆಸರಲ್ಲಿ ನಡೆಯುವ ಕೇಂದ್ರೀಕರಣ ಮತ್ತು ಹೇರಿಕೆಗಳಿಗೆ ಅವಕಾಶ ಕೊಡಬಾರದು. ಮತ ಚಲಾಯಿಸುವಾಗ ಈ ವಿಚಾರಗಳು ನಮ್ಮ ಗಮನದಲ್ಲಿರಬೇಕು.

‘ಸರ್ವ ಜನಾಂಗದ ಶಾಂತಿಯ ತೋಟ’ವಾದ ನಮ್ಮ ಕರ್ನಾಟಕದ ಭವಿಷ್ಯ ನಿರ್ಧರಿಸಲಿರುವ ಈ ಚುನಾವಣೆಯ ಸಂದರ್ಭದಲ್ಲಿ, ಆತ್ಮಗೌರವವುಳ್ಳ ಭಾರತದ ಪ್ರಜೆಯಾಗಿ, ಹಣ, ಹೆಂಡ, ಜಾತಿ, ಧರ್ಮ ಮೊದಲಾದ ಯಾವುದೇ ಆಮಿಷಗಳಿಗೆ ಬಲಿಯಾಗದೆ, ನಮಗಾಗಿ, ನಮ್ಮ ಜನರ ಹಿತಕ್ಕಾಗಿ, ಕರ್ನಾಟಕದ ಭವಿಷ್ಯಕ್ಕಾಗಿ  ನಾವು ಮತ ಚಲಾಯಿಸಬೇಕು. ಕಳೆದ ನಾಲ್ಕು ವರ್ಷಗಳಿಂದ ರಾಜ್ಯವನ್ನು ವಿನಾಶದಂಚಿಗೆ  ತಳ್ಳಿರುವ ಜನ ವಿರೋಧಿ,  ಭ್ರಷ್ಟ ಹಾಗೂ ದುಷ್ಟ ಪಕ್ಷದ ವಿರುದ್ಧ ಮತ ಚಲಾಯಿಸಬೇಕು. ಸಂವಿಧಾನ ವಿರೋಧಿ ಪಕ್ಷಕ್ಕೆ ಸೋಲಾಗಬೇಕು  ಜನತೆಯ ಆಶಯಗಳಿಗೆ ಜಯವಾಗಬೇಕು.

ಜೈ ಭಾರತ ಜನನಿಯ ತನುಜಾತೇ, ಜಯ ಹೇ ಕರ್ನಾಟಕ ಮಾತೇ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿhttp://ಉನ್ನತ ನ್ಯಾಯಾಂಗದಲ್ಲಿ ಮೋದಿ ಸರಕಾರದ ಹಸ್ತಕ್ಷೇಪ | ಕುಸಿದ ನ್ಯಾಯ ಪೀಠದ ಘನತೆ https://peepalmedia.com/modi-governments-interference-in-higher-judiciary-dignity-of-fallen-justice-bench/

Related Articles

ಇತ್ತೀಚಿನ ಸುದ್ದಿಗಳು