Thursday, July 4, 2024

ಸತ್ಯ | ನ್ಯಾಯ |ಧರ್ಮ

ವಿವೇಕಾನಂದರ ಕೊನೆಯ ದಿನಗಳು


‘ನಾನು ನನ್ನ ನಲವತ್ತನೆಯ ವರ್ಷದ ವಸಂತ ಋತುವನ್ನು ನೋಡಲಿಕ್ಕಿಲ್ಲ’ ಎಂದು ಸ್ವಾಮಿ ವಿವೇಕಾನಂದರು ಆಗಾಗ ಹೇಳುತ್ತಿದ್ದುದುಂಟು. ಅದರಂತೆಯೇ ಅವರು ನಲುವತ್ತರ ಮೊದಲೇ ಮಹಾಸಮಾಧಿಯನ್ನೇರಿದರು. ಬಹುಶಃ ಅವರು ಮೊದಲಿನಿಂದಲೇ ತಮ್ಮ ಮೃತ್ಯುವಿನ ತಿಥಿ ಯನ್ನು ನಿಶ್ಚಿತಪಡಿಸಿಕೊಂಡಂತಿತ್ತು. ತಮ್ಮ ಅಂತಿಮ ದಿನಗಳಲ್ಲಿ ಸ್ವಾಮೀಜಿಯವರು ಮಠಾದಿ ಸಂಬಂಧವಾದ ಎಲ್ಲ ಕಾರ್ಯಭಾರಗಳನ್ನು ತಮ್ಮ ಶಿಷ್ಯರ ಮೇಲೆ ಬಿಡತೊಡಗಿದ್ದರು. ಬಹುಶಃ ಅದು ಅವರ ಮಹಾ ಯಾತ್ರೆಯ ಪ್ರಥಮ ಘಟ್ಟವಾಗಿರಬೇಕು.

ಆ ದಿನಗಳಲ್ಲಿ ಅವರ ಸ್ವಾಸ್ಥ್ಯವೂ ಚೆನ್ನಾಗಿತ್ತು. ಮಾತುಕತೆಯಲ್ಲಿಯೂ ಅದೇ ಮೊದಲಿನ ಮೃದುಹಾಸ ಅವರ ಮುಖದಿಂದ ತೇಲಿ ಬರುತ್ತಿತ್ತು. ಆದರೆ ಒಂದು ಪರಿವರ್ತನೆ ಮಾತ್ರ ಅವರಲ್ಲಿ ಸ್ಪಷ್ಟವಾಗಿ ಎದ್ದು ಕಾಣತೊಡಗಿತ್ತು. ಸಮಾಧಿಯ ಅವಧಿ ಉತ್ತರೋತ್ತರವಾಗಿ ವೃದ್ಧಿಯಾಗುತ್ತ ನಡೆದಿತ್ತು. ಮೃತ್ಯುವಿಗಿಂತ ಒಂದು ತಿಂಗಳು ಮೊದಲಂತೂ ಸಮಾಧಿಯ ಅವಧಿ ದೀರ್ಘವಾಗಿ ಬೆಳೆದು ನಿಂತಿತ್ತು.

“ನಾನು ಮೃತ್ಯುವಿಗಾಗಿ ಸಿದ್ಧವಾಗ ತೊಡಗಿದ್ದೇನೆ. ನನ್ನ ಅವಸಾನ ಕಾಲವು ಸಮೀಪಿಸಿದೆ” ಎಂಬ ನುಡಿಗಳು ಆಕಸ್ಮಿಕವಾಗಿ ವಿವೇಕಾನಂದರ ಮುಖದಿಂದ ಹೊರಬಿದ್ದಾಗ ಅವರ ಗುರು, ಬಂಧು ಹಾಗು ಶಿಷ್ಯರು ದುಃಖದಿಂದ ವಿಹ್ವಲರಾದರು.

ಒಂದು ದಿನ ವಿವೇಕಾನಂದರು ಅಕಸ್ಮಾತ್ತಾಗಿ ಬಂಗಾಲಿ ಪಂಚಾಂಗವನ್ನು ಕೇಳಿದಾಗ ಅವರ ಶಿಷ್ಯರಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಅವರು ಅದನ್ನು ತೆಗೆದುಕೊಂಡು ಅಂತರ್ಮುಖರಾಗಿ ಅವಲೋಕಿಸತೊಡಗಿದರು.ಬಹುಶಃ ಅವರು ತಮ್ಮ ಪವಿತ್ರವಾದ ಅಂತಿಮ ಯಾತ್ರೆಗೆ ಒಳ್ಳೆಯ ತಿಥಿಯನ್ನು ಗೊತ್ತುಪಡಿಸುತ್ತಿದ್ದಂತಿತ್ತು.

ಆಶ್ಚರ್ಯದ ಸಂಗತಿಯೆಂದರೆ ಶ್ರೀ ರಾಮಕೃಷ್ಣ ಪರಮಹಂಸರು ಸಹ ತಮ್ಮ ಮಹಾಸಮಾಧಿಯ ನಾಲ್ಕು ದಿವಸ ಮೊದಲು ಬಂಗಾಲಿ ಪಂಚಾಂಗವನ್ನು ತರಿಸಿಕೊಂಡು ನೋಡಿದ್ದರು. ಗುರು-ಬಂಧುಗಳ ಹೃದಯದಲ್ಲಿ ಅಚ್ಚಳಿಯದೇ ನಿಂತ ಆ ದೃಶ್ಯ ಮತ್ತೆ ಮರುಕಳಿಸಿ ಬಂತು. ಏನು ಮಹಾ ಪ್ರಯಾಣದ ಪುನರಾವೃತ್ತಿ ನಡೆಯಿತೆ ? ಎಂಬುದಾಗಿ ಶಿಷ್ಯರು ಶಂಕಿಸಿದರು.

4 ನೇ ಜುಲೈ 1902 ರ ಅಮವಾಸ್ಯೆಯ ಹಿಂದಿನ ದಿವಸ ಸ್ವಾಮಿ ವಿವೇಕಾನಂದರು. ಮಹಾ ಸಮಾಧಿಯನ್ನೇರಿದರು. ಅಮೇರಿಕದ ಸ್ವಾತಂತ್ರ್ಯ ಘೋಷಣೆಯ ತೇದಿಯೂ ಇದೇ ಆಗಿದೆ.
ಇಲ್ಲಿ ಈ ವಿಷಯವನ್ನು ಪ್ರಸ್ಥಾಪಿಸುವ ದರ ಹಿನ್ನೆಲೆಯಲ್ಲಿ ಒಂದು ಮಹತ್ವದ ಸಂಗತಿ ಅಡಗಿದೆ.

ಸ್ವಾಮೀಜಿಯವರು ತಮ್ಮ ಮೃತ್ಯುವಿಗಿಂತ ಪೂರ್ವದಲ್ಲಿ ಅಮೇರಿಕದ ಸ್ವಾತಂತ್ರ್ಯವನ್ನು ಕುರಿತು ‘ಜುಲೈ ನಾಲ್ಕು’ ಎಂಬ ಶೀರ್ಷಿ ಕೆಯ ಕವನದಲ್ಲಿ ವಿವರಿಸಿದ್ದರು. ಅದು ಅಮೇರಿಕದ ನಿವಾಸಿಗಳ ಹೃದಯವನ್ನೇ ಸೂರೆಗೊಂಡಿತು. ಅವರು ವಿವೇಕಾನಂದರನ್ನು ಮುಕ್ತ ಕಂಠದಿಂದ ಹೊಗಳಿದ್ದರು.

ಅವರಿಗೆ ತಾವು ಮಹಾ ಸಮಾಧಿಯನ್ನೇರುವುದು ಎಷ್ಟೊಂದು ಖಚಿತವಾಗಿ ಹೋಗಿತೆಂದರೆ ಎರಡು ದಿನ ಮೊದಲೇ ತಮ್ಮ ಶಿಷ್ಯನೊಂದಿಗೆ ಮಠದ ಪ್ರಾಂಗಣದಲ್ಲಿ ಅಡ್ಡಾಡುತ್ತಿದ್ದಾಗ ‘ನನ್ನ ಅಂತಿಮ ಕ್ರಿಯೆಯನ್ನು ಇಲ್ಲಿಯೇ ನೆರವೇರಿಸಬೇಕು’ ಎಂದು ಹೇಳಿದ್ದರು.

ಮಹಾಸಮಾಧಿಗೆ ಒಂದು ದಿನ ಮೊದಲು, ಗುರುವಾರ ವಿವೇಕಾನಂದರು ಸ್ವತಃ ತಾವೇ ತಮ್ಮ ಶಿಷ್ಯರಿಗೆ, ಗುರು-ಬಂಧುಗಳಿಗೆ, ಭಕ್ತರಿಗೆ ಹಾಲು, ಅಕ್ಕಿ ಮೊದಲಾದ ವಸ್ತುಗಳನ್ನು ದಾನ ಮಾಡಿ, ಅವರಿಗೆ ಔತಣ ಹಾಕಿಸಿ ತೃಪ್ತಿ ಪಡಿಸಿದರು.

ಆ ಸಮಯದಲ್ಲಿ ಅವರು ಅತ್ಯಂತ ಪ್ರಸನ್ನ ಚಿತ್ತರಾಗಿದ್ದು ತಮ್ಮ ರಸಭರಿತವಾದ ಮಾತುಗಳಿಂದ ಶಿಷ್ಯರ ಮನತಣಿಸತೊಡಗಿದ್ದರು.

‘ಭೋಜನಾನಂತರ ಸ್ವತಃ ಸ್ವಾಮೀಜಿ ಯವರೇ ತಮ್ಮ ಶಿಷ್ಯರ ಪಾದಗಳನ್ನು ತೊಳೆಯ ತೊಡಗಿದರು. ಅವರೆಲ್ಲ ಅಚ್ಚರಿಗೊಂಡು ನಮ್ಮ ಪಾದಗಳನ್ನು ನೀವೇಕೆ ತೊಳೆಯುತ್ತಿರುವಿರಿ ಎಂದು ಕೇಳಿದರು. ಆಗ ಸ್ವಾಮಿಜಿ ಮಂದಸ್ಮಿತರಾಗಿ ‘ಏಸೂ ಕ್ರಿಸ್ತ ತನ್ನ ಶಿಷ್ಯರ ಪಾದ ತೊಳೆಯಲಿಲ್ಲವೇನು?’ ಎಂದು ಉತ್ತರಿಸಿದರು. ಅಷ್ಟರಲ್ಲಿ ಒಬ್ಬ ಶಿಷ್ಯ ‘ಅವನು ತನ್ನ ಅವಸಾನ ಕಾಲದಲ್ಲಿ ಹಾಗೆ ಮಾಡಿದ್ದುಂಟು’ ಎಂದು ನುಡಿದೇ ಬಿಟ್ಟ. ಪಾಪ ಅವರಿಗೇನು ಗೊತ್ತು, ಸ್ವಾಮೀಜಿ ಸಹ ತಮ್ಮ ಅಂತ್ಯವನ್ನರಿತೇ ಹೀಗೆ ಮಾಡುತ್ತಿದ್ದಾರೆಂಬುದು?’ ಎಂಬುದಾಗಿ ಒಂದು ಕಡೆಯಲ್ಲಿ ಸೋದರಿ ನಿವೇದಿತಾ ಬರೆದಿದ್ದಾರೆ.

ಬೆಳಿಗ್ಗೆ ‘ಪೂಜಾ’ಗೃಹದಲ್ಲಿ ಸಮಾಧಿಯಲ್ಲಿ ಲೀನವಾಗುವುದಕ್ಕೂ ಮೊದಲು ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿಕೊಳ್ಳುವುದು ಮಧ್ಯಾಹ್ನದ ನಂತರ ಒಬ್ಬ ಶಿಷ್ಯನಿಂದ ಸೇವೆ ಮಾಡಿಸಿ ಕೊಳ್ಳುವುದು ಅವರ ಮಹಾ ನಿರ್ವಾಣದ ಕಾಲಕ್ಕೆ ನಡೆಯಿತು. ಅದಕ್ಕೂ ಮೊದಲು ಅವರೆಂದೂ ಹಾಗೆ ಮಾಡಿರಲಿಲ್ಲ. ಅದಲ್ಲದೆ ಅಂದು ಅವರು ಒಬ್ಬ ಶಿಷ್ಯನಿಂದಗಾಳಿ ಹಾಕಿಸಿ ಕೊಂಡು ಸ್ವಲ್ಪ ಹೊತ್ತು ಕಾಲು ಒತ್ತಿಸಿಕೊಂಡರೆಂದು ಕೆಲವರು ಉಲ್ಲೇಖಿಸುತ್ತಾರೆ.

ಮತ್ತೆ ಅದೇ ಪುನರಾವೃತ್ತಿ. ಶ್ರೀ ಪರಮಹಂಸರ ಮಹಾ ಸಮಾಧಿಯ ಕಾಲಕ್ಕೂ ಸ್ವತಃ ವಿವೇಕಾನಂದರೇ ಅವರಿಗೆ ಗಾಳಿ ಹಾಕಿ ಚರಣಗಳನ್ನೊತ್ತುತ್ತಿದ್ದರು. ಈ ರೀತಿಯಾಗಿ ಪರಮ ಹಂಸರ ಹಾಗೂ ಸ್ವಾಮೀಜಿಯ ನಿರ್ವಾಣ ಕಾಲದಲ್ಲಿಯ ಘಟನೆಗಳಲ್ಲಿ ಸಮಾನ ಹೋಲಿಕೆ ಗಳು ಕಂಡುಬಂದವು. ಈರ್ವರೂ ನಿರ್ವಿಕಲ್ಪ ನಿರ್ವಿಕಾರರಾಗಿ ಸಮಾಧಿಯನ್ನೇರಿದರು.

ಮಹಾಸಮಾಧಿಯ ದಿನ ಬೆಳಗ್ಗೆ ೩ ಗಂಟೆಗೆ ಹಾಸಿಗೆಯಿಂದೆದ್ದ ನಂತರ ಸ್ವಾಮಿ ವಿವೇಕಾ ನಂದರು ‘ಮನ ಚಲ ನಿಜನಿಕೇತನ’ ಎಂಬ ಶ್ಯಾಮಗೀತ ಹಾಡಿ ಏನೇನೊ ತಮ್ಮಷ್ಟಕ್ಕೆ ತಾವೇ ಗುಣುಗುಡುತ್ತ ಮಠದ ಪ್ರಾಂಗಣದ ಕಡೆಗೆ ಹೊರಟು ಹೋದರು.

ಅವರೋರ್ವ ಶಿಷ್ಯ ಚಕಿತನಾಗಿ ಅವರನ್ನೇ ನೋಡತೊಡಗಿದ್ದ. ಅವರ ಅಧರಗಳು ಇನ್ನೂ ಅಲುಗಾಡತೊಡಗಿದ್ದವು. “ಸ್ವಾಮೀಜಿ, ಇದೇನು?" ಎಂದು ಅವನು ಕೇಳಿಯೇ ಬಿಟ್ಟ. ಆಗ ವಿವೇಕಾನಂದರು ಗಂಭೀರ ಭಾವಮುದ್ರೆಯಲ್ಲಿ, “ಒಂದು ವೇಳೆ ಈ ಸಮಯ ದಲ್ಲಿ ಬೇರೊಬ್ಬ ವಿವೇಕಾನಂದನಿದ್ದುದಾಗಿದ್ದರೆ ನಾನೇನು ಮಾಡಿದೆನೆಂಬುದನ್ನರಿತುಕೊಳ್ಳುತಿದ್ದ. ಆದರೂ ಸಮಯ ಬಂದಾಗ ನನ್ನಂಥ ಅನೇಕ ವಿವೇಕಾನಂದರು ಜನ್ಮ ತಾಳುತ್ತಾರೆ" ಎಂದು ಉತ್ತರಿಸಿದರು. ನಿಜವಾಗಿಯೂ ಸ್ವಾಮೀಜಿಯವರು ಯಾವ ಭಾವ ಭೂಮಿಯ ಮೇಲೆ ನಿಂತಿದ್ದರೂ ಅದನ್ನರಿತುಕೊಳ್ಳಬೇಕಾದರೆ ಇನ್ನೊಬ್ಬ ವಿವೇಕಾನಂದನಿಂದಲೇ ಸಾಧ್ಯ ವಿತ್ತು. ವಿವೇಕಾನಂದರು ಪರಮಹಂಸರ ಪ್ರಥಮ ದರ್ಶನದಲ್ಲಿ ಇದೇ ಶ್ಯಾಮಗೀತವನ್ನೇ ಹಾಡಿದ್ದರು. ಇದರಿಂದಲೇ ಪರಮಹಂಸರ ಅತಿ ನಿಕಟವರ್ತಿಗಳಾಗಿ ಪರಮ ಶಿಷ್ಯರಾದರು.

ಸ್ವಾಮಿ ವಿವೇಕಾನಂದರು ತಮ್ಮ ನಿರ್ವಾಣ ದಿವಸಕ್ಕಿಂತ ಐದು ವರುಷ ಮೊದಲು ಅಂದರೆ 9 ನೆಯ ಜುಲೈ 1897 ರಂದು ಓರ್ವ ಅಮೇರಿಕನ್‌ನಿಗೆ ಬರೆದ ಪತ್ರದಲ್ಲಿ ತಮ್ಮ ಮುಂಬರುವ ಮಹಾಯಾತ್ರೆಯನ್ನು ಈ ಶಬ್ದಗಳಲ್ಲಿ ಸ್ಪಷ್ಟ ಪಡಿಸಿದಂತಿದೆ.

“ನಾನು ನಿನಗೆ ಋಣಿಯಾದುದರಿಂದ ನನ್ನ ವೈಯಕ್ತಿಕ ವಿಷಯ ಬಹಳಷ್ಟು ನಿನಗೆ ಹೇಳಬೇಕಾಗಿದೆ. ನನ್ನ ಧೈಯ ಸಾಕಷ್ಟು ಪರಿ ಪೂರ್ಣದಶೆಗೆ ಸಾಗುತ್ತಿದೆ ಎಂಬುದಾಗಿ ನಾನು ಭಾವಿಸುತ್ತೇನೆ. ನನ್ನ ಜೀವನದ ಅವಧಿ ಇನ್ನೂ ಮೂರು ನಾಲ್ಕು ವರ್ಷ ಉಳಿದಿದೆ. ನಾನು ನನ್ನ ಎಲ್ಲ ಆಶೆಗಳನ್ನು ಕಡೆಗಣಿಸಿದ್ದೇನೆ. ಭೌತಿಕ ಸುಖಗಳ ಕಡೆಗೆಂದೂ ಮರೆತಾದರೂ ಒಲಿದಿಲ್ಲ. ನಾನು ನನ್ನ ಕರ್ತವ್ಯದ ಯಂತ್ರವನ್ನು ಪ್ರಬಲಗೊಳಿಸಬೇಕಾಗಿದೆ. ಭಾರತವನ್ನು ಯಾವ ಶಕ್ತಿಯೂ ಹಿಂದಕ್ಕಟ್ಟಲಾರದು. ಮುಂದೇನಾಗುವುದೊ ಎಂಬ ಚಿಂತೆಯಲ್ಲಿ ನಾನೆಂದೂ ನಿದ್ರಿಸುವುದಿಲ್ಲ. ಈಗ ನನ್ನ ಜೀವನದ ಅಲ್ಪ ಸಮಯ ಉಳಿದಿದೆ. ಅದಕ್ಕಾಗಿ ನನಗೇನು ಹೇಳಬೇಕಾಗಿದೆಯೊ ಎಲ್ಲವನ್ನು ಹೃದಯ ಬಿಚ್ಚಿ ಹೇಳ ತೊಡಗಿದ್ದೇನೆ ಜನಕ್ಕೆ ಅದು ಪ್ರಿಯವಾಗಲಿ – ಅಥವಾ ಕಟುವಾಗಲಿ. ನನ್ನಲ್ಲಡಗಿರುವ ಶಕ್ತಿ ಈ ವಿವೇಕಾನಂದನದಲ್ಲ, ಆ ಪರಮ ದಿವ್ಯ ವಿರಾಟ್‌ ಸ್ವರೂಪದ ಸಶ್ವೇಶ್ವರನದ್ದಾಗಿದೆ.” ಎಂದು ವಿವರಿಸಿದ್ದಾರೆ.

ಮಹಾಸಮಾಧಿಯ ದಿನ ಮಂದಿರದಲ್ಲಿ ಅವರ ಸಮಾಧಿ ಎಂಟರಿಂದ ಹನ್ನೊಂದು ಗಂಟೆಯ ವರಗೆ ಸಾಗಿಯೇ ಇತ್ತು. ಸಮಾಧಿಸ್ಥರಾಗುವ ಮೊದಲು ಅವರು ಮಂದಿರದ ಎಲ್ಲ ಕಿಟಕಿ ಬಾಗಿಲುಗಳನ್ನು ಮುಚ್ಚಿಸಿದರು. ಸಮಾಧಿಯಿಂದಿಳಿದ ನಂತರ ಅವರು 'ಮನ ಚಲ ನಿಜ ನಿಕೇತನ' ಶ್ಯಾಮಗೀತ ಹಾಡಿದರು. ಮಧ್ಯಾಹ್ನ ಸಂತಸದ ಭೋಜನ ಮುಗಿದ ನಂತರ ಎರಡೂವರೆ ಗಂಟೆವರೆಗೆ ಶಿಷ್ಯರಿಗೆ ತತ್ರೋಪದೇಶ ಮಾಡಿದರು. ಆಮೇಲೆ ತಮ್ಮೊಬ್ಬ ಗುರು-ಬಂಧುವಿ ನೊಂದಿಗೆ ತಿರುಗಾಡಲು ಹೊರಟರು. ದಾರಿಯಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ವಿಷಯವಾಗಿಯೂ ಚರ್ಚಿಸಿದರು.

ತಿರುಗಾಡಿ ಬಂದ ನಂತರ ಅವರು ಮತ್ತೆ ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿದರು. ಆ ಮೇಲೆ ಅವರು ತಮ್ಮ ಕೋಣೆಯೊಳಗೆ ಹೋಗಿ ಒಬ್ಬ ಶಿಷ್ಯನಿಗೆ ತಮ್ಮ ಜಪಮಾಲೆ ಯನ್ನು ತರಲು ಹೇಳಿದರು. ಮತ್ತೆ ಪದ್ಮಾಸನ ಹಾಕಿಕೊಂಡು ಕುಳಿತು ಕೆಲ ಸಮಯದ ವರೆಗೆ ಹಾಸಿಗೆಯನ್ನೇರಿದರು. ತದನಂತರ ತಮ್ಮ ಶಿಷ್ಯನಿಗೆ ಕಿಟಿಕಿ, ಬಾಗಿಲುಗಳನ್ನು ತೆರೆದು ಬಿಡಲು ಹೇಳಿ ಮೆಲ್ಲಮೆಲ್ಲನೆ ಕಿಟಿಕಿಯ ಕಡೆಗೆ ಸಾಗಿ ಬಹಳ ಹೊತ್ತಿನವರೆಗೆ ಒಂದೇ ಸವನೆ ದಕ್ಷಿಣೇಶ್ವರ ಮಂದಿರದೆಡೆಗೆ ದೃಷ್ಟಿ ಬೀರಿ ನಿಂತರು. ನಾಲ್ಕೂ ಕಡೆ ಗಾಢಾಂಧಕಾರ ಆವರಿಸಿತ್ತು. ಆದರೂ ಅವರ ನೋಟ ದಕ್ಷಿಣೇಶ್ವರದ ಕಡೆಗೇ ಇತ್ತು.

ಕೆಲ ಕ್ಷಣಗಳ ನಂತರ ತಮ್ಮ ಹಾಸಿಗೆಯ ಮೇಲೆ ಹೋಗಿ ಮಲಗಿಕೊಂಡರು. ಅವರ ಕೈಯಲ್ಲಿ ಆಗ ಸಹ ಜಪಮಾಲೆ ಇತ್ತು. ಶಿಷ್ಯನಿಗೆ ಗಾಳಿಹಾಕಲು ಹೇಳಿ ಮಂದ ನಿದ್ರೆಯಲ್ಲಿ ತೇಲಿ ಹೋದರು. ಒಂದು ದೀರ್ಘ ಶ್ವಾಸವನ್ನು ತೆಗೆದುಕೊಂಡು ಮತ್ತೆ ದಿವ್ಯ ಸಮಾಧಿಯಲ್ಲಿ ಮುಳುಗಿ ಹೋದುದನ್ನು ಅವರ ಶಿಷ್ಯ ನೋಡಿದ.

ಸ್ವಾಮಿ ವಿವೇಕಾನಂದರು ಮೊದಲು ಎಡ ಮಗ್ಗುಲಾಗಿ ಮಲಗಿದ್ದರು. ಸ್ವಲ್ಪ ಹೊತ್ತಿನ ನಂತರ ಮಗ್ಗುಲನ್ನು ಬದಲಿಸಿದರು. ಇದರ ಮಧ್ಯದಲ್ಲಿ ಸ್ವಾಮೀಜಿಯವರು ಮತ್ತೊಮ್ಮೆ ದೀರ್ಘಶ್ವಾಸವನ್ನು ತೆಗೆದುಕೊಂಡರು. ತತ್ ಕ್ಷಣವೇ ಅವರ ಮುಖದಿಂದ ಮಕ್ಕಳ ಕಿರುಚುವಿಕೆಯಂತೆ ಒಂದು ಚೀತ್ಕಾರ ಹೊರಟಿತು. ಕೈಗಳು ಕಂಪಿಸಿದವು. ಶರೀರ ನಡುಗಿತು. ತಲೆ ದಿಂಬಿನ ಕಡೆಗೆ ಹೊರಳಿತು. ಸ್ವಲ್ಪ ಹೊತ್ತಿನ ಮೇಲೆ ಮತ್ತೆ ಅವರು ಜಾಗೃತಾವಸ್ಥೆಗೆ ಮರಳಿ ಮತ್ತೊಂದು ಶ್ವಾಸ ತೆಗೆದುಕೊಂಡರು.

ಅವರ ಎರಡೂ ಕಣ್ಣುಗಳು ಹುಬ್ಬುಗಳ ಮಧ್ಯ ಅಂಟಿಸಿದಂತೆ ನಿಂತುಕೊಂಡು ಬಿಟ್ಟವು. ಶಿಷ್ಯ ಅವರ ಕಡೆಗೆ ನೋಡಿದಾಗ- ದಿವ್ಯ ಪ್ರಕಾಶದಿಂದ ಅವರ ಮುಖ ಹೊಳೆಯತೊಡಗಿತ್ತು.

ರಾತ್ರಿಯ ಆವರಣ ದಟ್ಟವಾಗುತ್ತ ನಡೆದಿತ್ತು. ಎಷ್ಟೋ ಡಾಕ್ಟರರು ಬಂದರು. ಆದರೆ ಯಾರಿಗೂ ಮೃತ್ಯುವಿನ ಕಾರಣ ಗುರುತಿಸಲಿಕ್ಕಾಗಲಿಲ್ಲ. ಪ್ರಾತಃಕಾಲ ಡಾಕ್ಟರರು ಸಂನ್ಯಾಸಿಗಳು ಬಂದು ನೋಡಿದಾಗ ಸ್ವಾಮೀಜಿ ಯವರ ಕಣ್ಣುಗಳು ರಕ್ತರಂಜಿತವಾಗಿದ್ದವು. ಅವರ ಬಾಯಿ ಹಾಗು ಮೂಗಿನಿಂದಲೂ ಸ್ವಲ್ಪ ರಕ್ತ ಹರಿಯುತ್ತಿತ್ತು.

ಸೋದರಿ ನಿವೇದಿತಾ ಅನಂತ ದುಃಖದಲ್ಲಿ ಮುಳುಗಿ ಹೋಗಿದ್ದಳು. ವಿವೇಕಾನಂದರ ಶವದ ಬಳಿ ಕುಳಿತು ಶೋಕಪೂರಿತ ಕಣ್ಣು ಗಳಿಂದ ವೀಕ್ಷಿಸತೊಡಗಿದ್ದಳು. ಅವಳ ನಡುಗುವ ಕೈಗಳು ವಿವೇಕಾನಂದರ ಶವವನ್ನು ಆರತಿಗೆ ಒಯ್ಯುವವರೆಗೂ ಗಾಳಿ ಹಾಕುತ್ತಲೇ ಇದ್ದವು.

~ ವಿದ್ಯಾಭೂಷಣ ಗೌರ

Related Articles

ಇತ್ತೀಚಿನ ಸುದ್ದಿಗಳು