ಬೆಂಗಳೂರು | ಬ್ರೇಕ್ ಅಪ್ ಮಾಡಿಕೊಂಡಿದ್ದಕ್ಕೆ ಕಾನೂನು ವಿದ್ಯಾರ್ಥಿನಿಯ ಚಾಕು ಇರಿದು ಕೊಂದ ಪ್ರಿಯಕರನ ಸಹೋದರ

ಬೆಂಗಳೂರು: ಪ್ರಿಯಕರನಿಗೆ ಬ್ರೇಕ್ ಅಪ್ ಹೇಳಿದ ಕಾರಣಕ್ಕೆ ಆಕ್ರೋಶಗೊಂಡ ಆತನ ಸಹೋದರನೋರ್ವ ಯುವತಿಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೂರು ದಿನಗಳ ನಂತರ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಖ್ಯ ಆರೋಪಿಯೊಂದಿಗೆ ಆಕೆಯ ಪ್ರಿಯಕರನನ್ನೂ ಬಂಧಿಸಿದ್ದಾರೆ.

ನಗರದ ಕೋಡಿಹಳ್ಳಿ ಪ್ರದೇಶದಲ್ಲಿ ವಾಸವಾಗಿದ್ದ ಅಮೃತಾ ಕೊಲೆಯಾದ ದುರ್ದೈವಿ. ಈಕೆ ಕಾನೂನು (ಲಾ) ವ್ಯಾಸಂಗ ಮಾಡುತ್ತಿದ್ದು, ಪಿಜ್ಜಾ ಔಟ್‌ಲೆಟ್ ಒಂದರಲ್ಲಿ ಪಾರ್ಟ್-ಟೈಮ್ ಕೆಲಸವನ್ನೂ ಮಾಡುತ್ತಿದ್ದಳು.

ಅಮೃತಾಗೆ ಧನುಷ್ ಎಂಬಾತನ ಪರಿಚಯವಾಗಿದ್ದು, ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಧನುಷ್‌ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವಾಗಿದೆ ಮತ್ತು ಆತನಿಗೆ ಒಂದು ಮಗುವೂ ಇದೆ ಎಂಬ ಸತ್ಯ ಅಮೃತಾಗೆ ಇತ್ತೀಚೆಗೆ ತಿಳಿದುಬಂದಿದೆ. ಮದುವೆಯ ವಿಷಯವನ್ನು ತನ್ನಿಂದ ಮುಚ್ಚಿಟ್ಟಿದ್ದ ಕಾರಣಕ್ಕೆ ಅಮೃತಾ ಆತನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಳು.

ಅಮೃತಾಳ ಈ ನಿರ್ಧಾರದಿಂದ ಧನುಷ್ ಸಹೋದರ ಸೂರ್ಯ ಎಂಬಾತ ತೀವ್ರ ಆಕ್ರೋಶಗೊಂಡಿದ್ದಲ್ಲದೆ, ಆಕೆಗೆ ಬೆದರಿಕೆಯನ್ನೂ ಹಾಕಿದ್ದನು. ಜುಲೈ 13 ರಂದು ಅಮೃತಾಳ ಮನೆ ಬಳಿ ಆಕೆಯನ್ನು ಅಡ್ಡಗಟ್ಟಿದ ಸೂರ್ಯ ಜಗಳ ತೆಗೆದಿದ್ದಾನೆ. ಈ ವೇಳೆ ವಾಗ್ವಾದ ತಾರಕಕ್ಕೇರಿದಾಗ ಸೂರ್ಯ ತನ್ನ ಬಳಿಯಿದ್ದ ಚಾಕುವಿನಿಂದ ಅಮೃತಾಳ ಎದೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಇರಿದು ಸ್ಥಳದಿಂದ ಪರಾರಿಯಾಗಿದ್ದನು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಮೃತಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೂರು ದಿನಗಳ ನಂತರ ಆಕೆ ಕೊನೆಯುಸಿರೆಳೆದಿದ್ದಾಳೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿ.ವಿ. ರಾಮನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಕೃತ್ಯ ಎಸಗಿದ ಮುಖ್ಯ ಆರೋಪಿ ಸೂರ್ಯ ಹಾಗೂ ಪ್ರೇರಣೆ ನೀಡಿದ ಆರೋಪದ ಮೇಲೆ ಧನುಷ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು