Wednesday, August 14, 2024

ಸತ್ಯ | ನ್ಯಾಯ |ಧರ್ಮ

ಸೋರುತಿಹುದು ನೂತನ ಸಂಸತ್ ಭವನ: ವೀಡಿಯೊ ಹಂಚಿಕೊಂಡ ಕಾಂಗ್ರೆಸ್ ಸಂಸದ

ಹೊಸದಿಲ್ಲಿ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ನೂತನ ಸಂಸತ್ ಭವನದ ಆವರಣದೊಳಗೆ ನೀರು ಸೋರಿಕೆಯಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಬೇಕು ಎಂಬ ನೊಟೀಸ್‌ ಅನ್ನು ಕಾಂಗ್ರೆಸ್ ಸಂಸದ ಮಾನಿಕಮ್ ಠಾಗೋರ್ ಸಲ್ಲಿಸಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಸದನದ ಆವರಣದಲ್ಲಿ ಮಳೆ ನೀರು ಸೋರುತ್ತಿರುವ ಕುರಿತು ಠಾಗೋರ್‌ ಅವರು ವಿಡಿಯೊವೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರ ಸತ್ಯಾಸತ್ಯತೆಯನ್ನ ಸ್ವತಂತ್ರವಾಗಿ ದೃಢಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದೂ hindustantimes.com ವರದಿ ತಿಳಿಸಿದೆ.

ನೂತನ ಸಂಸತ್ ಭವನಕ್ಕೆ ರಾಷ್ಟ್ರಪತಿಗಳು ಪ್ರವೇಶಿಸುವ ಪಥ ಸೇರಿದಂತೆ ಸಂಸತ್ತಿನ ಆವರಣದೊಳಗೆ ನೀರು ಸೋರಿಕೆಯಾಗುತ್ತಿರುವ ವಿಷಯವನ್ನು ತಾನು ಪ್ರಸ್ತಾಪಿಸಲು ಬಯಸಿರುವುದಾಗಿ ಠಾಗೋರ್ ತಮ್ಮ ನೋಟಿಸ್ ನಲ್ಲಿ ಹೇಳಿದ್ದಾರೆ.

ನೂತನ ಸಂಸತ್ ಭವನ ನಿರ್ಮಾಣಗೊಂಡು ಇನ್ನು ಒಂದು ವರ್ಷವೂ ಮುಗಿದಿಲ್ಲ. ಕೇವಲ ಒಂದು ವರ್ಷ ಮುಕ್ತಾಯಗೊಳ್ಳುವುದರೊಳಗಾಗಿ ಸಂಸತ್ ಭವನದ ಕಟ್ಟಡದ ನಿರ್ಮಾಣದಲ್ಲಿ ಗಂಭೀರ ಸ್ವರೂಪದ ಸಮಸ್ಯೆಗಳಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಟ್ಟಡದ ಆಳವಾದ ಪರೀಕ್ಷೆಗಾಗಿ ಎಲ್ಲ ಪಕ್ಷಗಳ ಸಂಸದರನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಸೋರಿಕೆಯ ಕಾರಣಗಳತ್ತ ಗಮನ ಹರಿಸಿ, ವಿನ್ಯಾಸ ಮತ್ತು ಬಳಕೆಯಾಗಿರುವ ಸಾಮಗ್ರಿಗಳ ಮೌಲ್ಯಮಾಪನ ಮಾಡುವ ಜೊತೆಗೆ ಅಗತ್ಯ ದುರಸ್ತಿ ಕ್ರಮಗಳನ್ನು ಶಿಫಾರಸು ಮಾಡುವಂತಾಗಬೇಕು ಎಂದು ಅವರು ಆಶಿಸಿದ್ದಾರೆ. ಠಾಗೋರ್‌ ಹಂಚಿಕೊಂಡಿರುವ ವಿಡಿಯೋ ಲಿಂಕ್‌ ಇಲ್ಲಿದೆ.

.

Related Articles

ಇತ್ತೀಚಿನ ಸುದ್ದಿಗಳು

You cannot copy content of this page