Monday, June 17, 2024

ಸತ್ಯ | ನ್ಯಾಯ |ಧರ್ಮ

ಲೆಕ್ಕಾಚಾರ ತಪ್ಪೋಯ್ತು..

ತೆಗೆದಿದ್ದ ಟಿಕೇಟು ಜನರಲ್ ಕಂಪಾರ್ಟ್ ಮೆಂಟು, ಏರಿದ್ದು ಮಾತ್ರ ಎಸಿ ಚೇರ್ ಕಾರು! ಮಕ್ಕಳು ಮರಿ ಹೊತ್ಕೊಂಡು ಜನರಲ್ ಬೋಗಿಯ ರಶ್ಶಿನಲ್ಲಿ ಹೋಗೋದ್ಯಾಕೆ‌ ಎಂದು ಅಲ್ಲಿಯೇ ತಂಗಿದೆವು. ಮುಂದೇನಾಯ್ತು ಓದಿ…

ಇದು ಲೇಖಕ ‘ರೋಹಿತ್‌ ಅಗಸರಹಳ್ಳಿ’ಯವರು ಪ್ರತಿ ಬುಧವಾರ ಬರೆಯಲಿರುವ ಅವರ ತಿರುಗಾಟದ ಅನುಭವದ ಮೊದಲ ಕಂತು.

ಗೆಳೆಯ ದಿನೇಶ್ ಅವರು ಒಮ್ಮೆ ನಾರ್ತ್ ಇಂಡಿಯಾ ಟೂರ್ ಹೋಗೋಣ ಎಂದು ಆಸೆ ಹುಟ್ಟಿಸಿದ್ದರು. ಸಮಾನ ಮನಸ್ಕರು ಸಿಕ್ಕಾಗೊಮ್ಮೆ ಇಂಥ ಹತ್ತಾರು ಆಲೋಚನೆಗಳು ಹುಟ್ಟಿ, ಮುರುಟಿ ಹೋಗುವುದು ಸಹಜವೇ ಆದ್ದರಿಂದ ಹ್ಞೂಂಗುಟ್ಟಿ ಸುಮ್ಮನಾಗಿದ್ದೆವು. ಡ್ರೈವಿಂಗ್ ಮತ್ತು ಓಡಾಟದ ಕ್ರೇಝ್ ಇರುವ ಅವರು ಗಂಭೀರವಾಗಿಯೇ ಹೇಳಿದ್ದರೆನ್ನೋದು ವಾರೊಪ್ಪೊತ್ತಿನಲ್ಲಿ ಅರ್ಥವಾಗಿತ್ತು.

ಎಲ್ಲಿ, ಹೇಗೆ, ಇತ್ಯಾದಿ ಸಂಗತಿಗಳನ್ನು ಅವರಿಗೇ ಬಿಟ್ಟೆವು. ಉತ್ತರ ಭಾರತ ಅಂದ ಕೂಡಲೆ ಡೆಲ್ಲಿ – ಆಗ್ರಾ ಅನ್ನೋದು ಸ್ಟೀರಿಯೋಟೈಪ್ ಆಗ್ಬಿಟ್ಟಿದೆ. ನಾವು ಕೂಡ(ನಾನು  ಮತ್ತು ಸಹಧರ್ಮಿಣಿ ಸುಜಾತ ತಳವಾರ್) ೨೦೧೦ ರಲ್ಲಿ ಹೀಗೆ ಪ್ರವಾಸ ಹೋದಾಗ ಡೆಲ್ಲಿ – ಆಗ್ರಾ ಜೊತೆಗೆ ಶಿಮ್ಲಾ ಕುಲು ಮನಾಲಿ ಕೂಡ ಯೋಜಿಸಿದ್ದೆವು. ಶಿಮ್ಲಾ ನೋಡಿದರೂ ಕುಲು ಮತ್ತು ಮನಾಲಿ ಕಣಿವೆಗಳು ಮಿಸ್ ಆದವು.

ಬೆಂಗಳೂರಿನ ಯಶವಂತಪುರ ನಿಲ್ದಾಣ( ಫೋಟೋ ಸೆಷನ್ ಉದ್ಘಾಟನೆ!)

ರೋಹಿಣಿ- ದಿನೇಶ್ ಅವರ ಮನೆಯಲ್ಲಿಯೇ ಕೂತು ರಜೆ ಹೊಂದಾಣಿಕೆ ಮಾಡಿಕೊಂಡು ರೈಲೋ ವಿಮಾನವೋ ಎಂದು ಚರ್ಚಿಸಿ ಹವಾಯಿ ಜಹಾಜ್ ಎಟುಕಲಾರದೆಂದು ಟ್ರೈನ್ ಬುಕ್ ಮಾಡಿದೆವು. ಎಲ್ಲರೂ ಡೆಲ್ಲಿಗೆ ಹೋಗ್ತಾರೆ ನಾವ್ಯಾಕೆ ಡೆಲ್ಲಿಯನ್ನು ಅವಾಯ್ಡ್ ಮಾಡಬಾರದೆಂದೆಣಿಸಿ ನೇರ ಜೈಪುರಕ್ಕೆ‌ ಬುಕ್ ಮಾಡಿದೆವು. ತಿರುಗಿ ಬರೋದು ಕೂಡ ಆಗ್ರಾ ಟು ಬೆಂಗಳೂರಿಗೆ ಬುಕ್ ಮಾಡಿ ರಿಸರ್ವೇಶನ್ ಕನ್ಫರ್ಮ್ ಆಗಲೆಂದು ಕಾಯ್ದಿದ್ದೇ ಬಂತು. ವೇಟಿಂಗ್ ಲಿಸ್ಟಲ್ಲಿ ನಮ್ಮ ನಂಬರ್ ಏರುಪೇರಾಗದೆ ಸ್ಥಿರವಾಗಿ ಉಳಿದು ಆತಂಕಕ್ಕೆ ದೂಡಿತು. ಈ ರಿಸರ್ವೇಶನ್ ಸೆಷನ್ಗೋಸುಗವೇ ಚಿಕನ್ ಬಿರಿಯಾನಿ ತಿಂದಿದ್ದಷ್ಟೇ ಫಾಯ್ದೆ!

ಮತ್ತೆ ಆನ್ಲೈನ್ ಸಭೆ ಸೇರಿ ಕಾರಣಗಳನ್ನು ಹುಡುಕಲಾಗಿ‌ ತಿಳಿದು ಬಂದ ಸಂಗತಿ; ಜೈಪುರ‌ ಮತ್ತು ಆಗ್ರಾಗಳು ರೈಲು ಹೊರಡುವ ಸ್ಥಳಗಳಾಗಿರದ ಕಾರಣ, ಅಲ್ಲಿಗೆ ಕಡಿಮೆ ಸೀಟುಗಳನ್ನು ಕಾಯ್ದಿರಿಸಲಾಗುವುದೆಂದೂ ಆ ಕಾರಣಕ್ಕೆ ಬುಕ್ಕಿಂಗ್ ಕನ್ಪರ್ಮ್ ಆಗುತ್ತಿಲ್ಲವೆಂದು ನಮಗೆ ಕನ್ಫರ್ಮ್ ‌ಆಯ್ತು. ಮತ್ತೆ ಹೊಸ ಬುಕ್ಕಿಂಗ್. ಬೆಂಗಳೂರಿಂದ ಡೆಲ್ಲಿ- ಡೆಲ್ಲಿಯಿಂದ ಬೆಂಗಳೂರು. ಕಳೆದ ಹತ್ತು ವರ್ಷಗಳಲ್ಲಿ ರೈಲು ಚಾರ್ಜು ಮೂರು ಪಟ್ಟು ಏರಿದೆ ಎಂದು ತಿಳಿಯಿತು.

ಸ್ನೇಹಿತರು ಅಂತರ್ಜಾಲದ ಬಲೆಯಲ್ಲಿ ಮಿಂದೆದ್ದು ಎಲ್ಲವನ್ನೂ ಅಳೆದು ತೂಗಿ ಡೆಲ್ಲಿಗೆ ಒಂದೂ ಮುಕ್ಕಾಲು ದಿನ, ಅಲ್ಲಿಂದ ಜೈಪುರದಲ್ಲಿ ಒಂದು ದಿನ, ಅಜ್ಮೇರ್ ನಲ್ಲಿ ಎರಡು ದಿನ. ನಂತರ ಆಗ್ರಾದಲ್ಲಿ ಒಂದು ದಿನ ಉಳಿದು ತಾಜಮಹಲು, ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿ ನೋಡಿ ಡೆಲ್ಲಿಯಿಂದ ಹೊರಡೋ ರೈಲನ್ನು ಆಗ್ರಾದಲ್ಲಿಯೇ ಏರುವುದು ಎಂದು ಯೋಜಿಸಿಟ್ಟರು. ಅವರ ಕರಾರುವಾಕ್ ಲೆಕ್ಕಾಚಾರಕ್ಕೆ ಬೆರಗಾದೆ. ವಾಸ್ತವ ನಮ್ಮ ಲೆಕ್ಕಾಚಾರಗಳನ್ನು ಮೀರಿರುತ್ತವೆ‌ ಎಂಬುದು ಬೇಗ ಅರ್ಥವಾಯ್ತು ಹೊರಟ ಮೇಲೆ!

ತುರಂತೋ ಎಕ್ಸೆಪ್ರೆಸ್ ನಲ್ಲಿ ಸುಜಾತಾ- ರೋಹಿತ್

 ಹತ್ತು ದಿನಕ್ಕೆಂದು ಲಗ್ಗೇಜ್ ಕೊಂಚ ಹೆಚ್ಚೇ ಇದ್ದ ಕಾರಣಕ್ಕೆ  ಹಾಸನದಿಂದ ಬೆಂಗಳೂರಿಗೆ ಟ್ರೇನಿನಲ್ಲೆ ಹೋಗುವುದೊಳಿತೆಂದು ತೀರ್ಮಾನಿಸಿದೆವು. ತೆಗೆದಿದ್ದ ಟಿಕೇಟು ಜನರಲ್ ಕಂಪಾರ್ಟ್ ಮೆಂಟು, ಏರಿದ್ದು ಮಾತ್ರ ಎಸಿ ಚೇರ್ ಕಾರು! ಮಕ್ಕಳು ಮರಿ ಹೊತ್ಕೊಂಡು ಜೆನರಲ್ ಬೋಗಿಯ ರಶ್ಶಿನಲ್ಲಿ ಹೋಗೋದ್ಯಾಕೆ‌ ಎಂದು ಅಲ್ಲಿಯೇ ತಂಗಿದೆವು. ಡಿಫರೆನ್ಸ್ ಹಣ ತುಂಬೋಕೆ ಹೋದಾಗ ತಿಳಿದದ್ದು, ಚೇರ್ ಕಾರಿಗೆ ಜೆನರಲ್ ಟಿಕೇಟಿನ ಎಂಟು ಪಟ್ಟು ಇದೆ ಅಂತ. ರಾತ್ರಿ ಎಂಟಕ್ಕೆ ತಲುಪಬೇಕಿದ್ದ ರೈಲು ಯಶವಂತಪುರ ತಲುಪಿದ್ದು ಹತ್ತೂವರೆಗೆ. 

ರಾತ್ರಿ ಊಟ ಮುಗಿಸಿ ತುರಂತೋ ಎಕ್ಸ್‌ ಪ್ರೆಸ್ಸಿಗೆ ಕೂತರೆ ಆರಾಮವಾಗಿ‌ ಡೆಲ್ಲಿಯಲ್ಲಿ ಇಳಿಯುತ್ತೇವೆ ಎಂದು ಹೋಟೆಲು ಹುಡುಕಿದರೆ ಸಿಕ್ಕದ್ದು ಪ್ಲಾಟ್ ಫಾರ್ಮಿನಲ್ಲೇ ಇದ್ದ irctc ಯ ಹೋಟೆಲು ಮಾತ್ರ. ಸೌತ್ ಇಂಡಿಯನ್ ಥಾಲಿ ಹೆಸರಲ್ಲಿ ಅವ ಕೊಟ್ಟದ್ದರಲ್ಲಿ ಥಾಲಿಯಷ್ಟೇ ಸತ್ಯ ಉಳಿದದ್ದೆಲ್ಲ ಮಿಥ್ಯ.

 ಈ ತುರಂತೋ ಎಕ್ಸ್ ಪ್ರೆಸ್ ಸೂಪರ್ ಫಾಸ್ಟ್ ಅಂತೆ. ಉಳಿದೆಲ್ಲವೂ ಡೆಲ್ಲಿ ತಲುಪೋಕೆ ೩೮ ಗಂಟೆ ತೊಗೊಂಡ್ರೆ ಇದು ಕೇವಲ ೩೨ ಗಂಟೆಗಳಲ್ಲಿ ತಲುಪುತ್ತೆ. ಮಮತಾ ಬ್ಯಾನರ್ಜಿ ರೇಲ್ವೇ ಮಂತ್ರಿಯಾಗಿದ್ದ ಕಾಲದಲ್ಲಿ ಆರಂಭವಾಗಿದ್ದು ಇದು. ಟ್ರೇನಲ್ಲಿ ಕುಳಿತ ಕೆಲವೇ ಗಂಟೆಗಳಲ್ಲಿ ಸ್ಟೇಟಸ್ ನೋಡಿಯೋ ಏನೊ ಊರುದಿರುಗ ಗೆಳೆಯ ಮೆಸೇಜು ಮಾಡಿ ತುರಂತೋ ದಲ್ಲಿ ಎಸಿ ಅಧಿಕವೂ ಮತ್ತು ಊಟ ಅಧಮವೂ ಎಂದು ದೂರಿದರು. ಅವರ ಮಾತನ್ನು ರೇಲ್ವೇಯವರು ಹುಸಿಗೊಳಿಸಲಿಲ್ಲ. ಎರಡೆರಡು ಕಂಬಳಿ ಹೊದ್ದು ಮಲಗಿದೆವು. ಮೂಗಿನೆರಡೂ ಹೊರಳೆ ಮುಚ್ಚಿಯೇ ಟಾಯ್ಲೆಟ್ ಬಳಸಬೇಕಾಯ್ತು.

 ಡೆಲ್ಲಿಯಲ್ಲಿ ಹಲವು ರೇಲ್ವೇ ಸ್ಟೇಷನ್ ಗಳಿವೆ. ಅದರಲ್ಲಿ ನಾವು ಇಳಿದದ್ದು ಸರಾಯಿ ರೋಹಿಲ್ಲಾ. ನಿಗದಿತ ಸಮಯಕ್ಕೆ ಹೆಚ್ಚೂ ಕಡಮೆ ಇಳಿಸಿದ. ದೆಹಲಿ ಔಟ್ ಸ್ಕರ್ಟ್ ತಲುಪುತ್ತಿದ್ದಂತೆಯೇ ಅಲ್ಲಿನ ಕಸದ ದರ್ಶನವೂ ಆಯ್ತು. ಹಾಸನದಲ್ಲಿ ಬಿಜಿವಿಎಸ್ ಮತ್ತು ಹಲವು‌ ಪರಿಸರಾಸಕ್ತರು ನಡೆಸುತ್ತಿರುವ “ಪ್ಲಾಸ್ಟಿಕ್ ಬಂಧನ, ಪರಿಸರ ಸ್ಪಂದನ” ಮೂಮೆಂಟ್ ನೆನಪಾಗಿ ಇಲ್ಲಿರೋ ಪ್ಲಾಸ್ಟಿಕ್ ಬಂಧಿಸಲು ಮುಂದಿನ ನೂರು ವರ್ಷವಾದರೂ ಬೇಕೇನೊ‌ ಎಂದುಕೊಂಡೆ.

ವಾಸ್ತವ್ಯಕ್ಕೆ ಆ ಮೊದಲೇ ಒಂದು ಗೆಸ್ಟ್ ಹೌಸ್ ಬುಕ್ ಆಗಿತ್ತು. ಅದೊಂದು ಸರ್ಕಾರಿ ಸಂಸ್ಥೆಯ ಗೆಸ್ಟ್ ಹೌಸ್. ಅದಿದ್ದುದು ಪುರಾನಿ ದಿಲ್ಲಿಯಲ್ಲಿ. ಹೀಗಾಗಿ ಚೆಕಿನ್ ಮಾಡಲು ತಾಸುಗಟ್ಟಲೆ ಹಿಡಿಯಿತು; ಆದರೆ ಖರ್ಚು ಸಸ್ತಾ. ತುರಂತೋದಲ್ಲಿಯೇ ಆರಂಭವಾಗಿದ್ದ ನಮ್ಮ ಊಟದ ಒಡಬಾಳು ಇಲ್ಲಿ ಮುಂದುವರೆಯಿತು. ಊಟ ಒದಗಿಸೋವ್ರಿಗೆ ಫೋನಿಸಿ ಆಲೂ ಪರೋಟ ತರಿಸಿ ತಿಂದೆವು. ಇಷ್ಟಾಗೋ ಹೊತ್ತಿಗೆ ಗಂಟೆ ಹನ್ನೊಂದು. ಜೊತೆಯಲ್ಲಿದ್ದ ಗೆಳೆಯ ಡೆಲ್ಲಿ ಎಕ್ಸಪ್ಲೋರ್ ಮಾಡುವುದು ಹೇಗೆ ಎಂದು ಎರಡು ದಿನ ಟ್ರೇನಿನಲ್ಲಿ ವಿವರಿಸಿದ್ದವರು ಸ್ನಾನ ಮುಗಿಸಿ ಬಟ್ಟೆ ತೊಳೆಯಲು ನಿಂತರು! ಸುತ್ತಾಟಕ್ಕೆ ಹೊರಡೋ ಹೊತ್ತಿಗೆ ನಡು ಮಧ್ಯಾಹ್ನ ಒಂದೂವರೆ. ಮೊದಲೇ ತೀರ್ಮಾನಿಸಿದಂತೆ ರಾಜಘಾಟ್ ಮೊದಲ ಆದ್ಯತೆಯಾಗಿತ್ತು.

ಮಹಾತ್ಮರಿಲ್ಲಿ ಮಲಗಿದ್ದಾರೆ

ರಾಜಘಾಟ್ ತಲುಪೋ ಹೊತ್ತಿಗೆ ಬಿಸಿಲು ತನ್ನ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಗಾಂಧಿ ವಿಶ್ರಮಿಸಿರುವ ಅಲ್ಲಿ ನೆರಳಿಗೇ ಬರ. ಎಲ್ಲಾ ಲಾನ್ ಮಯ. ದಶಕದ ಹಿಂದೆ ಡೆಲ್ಲಿಗೆ ಹೋದಾಗ ಮಿಸ್ ಆಗಿದ್ದ ಗಾಂಧಿ ದರ್ಶನ ಈ ಬಾರಿ ನೆರವೇರಿತ್ತು. ಗಾಂಧಿ ಸಮಾಧಿಯಿಂದ ಹೊರಟಾಗ ಇನ್ನೂ ಹಲವು ಗಣ್ಯರ ಸ್ಮಾರಕಗಳೂ ಅದೇ ಆಸುಪಾಸಿನಲ್ಲಿರುವುದು ಕಾಣುತ್ತದೆ. ಆದರೆ ಅಲ್ಲಿಗೆ ಯಾರೂ ಸುಳಿದಂತೆ ಕಾಣಲಿಲ್ಲ. ಎಲ್ಲವುಗಳ ಗೇಟಿನ ಬಳಿಯೂ ಒಬ್ಬೊಬ್ಬ ಸಿಆರ್ಪಿಎಫ್ ಜವಾನ್ ಕಾವಲು ಕಾಯುತ್ತಿದ್ದುದಷ್ಟೇ ಕಾಣುತ್ತಿತ್ತು. ಎಲ್ಲರಿಗೂ‌ ಅಲ್ಲಿ ಸ್ಮಾರಕ ನಿರ್ಮಿಸಿದ ಔಚಿತ್ಯವೇನೊ‌ ನನಗೆ ಅರ್ಥವಾಗಲಿಲ್ಲ. ಕುವೆಂಪು ಅವರು ಭೌತಿಕವಾಗಿ ತೀರಿಕೊಂಡಾಗ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಕಾಂಪೌಂಡಿನಲ್ಲಿ ಸಂಸ್ಕಾರ ಮಾಡಲು ಕೆಲವರು ಹವಣಿಸಿದ್ದು ಕಂಡು ತೇಜಸ್ವಿ‌ ಬೈದು  ಅದನ್ನು ತಪ್ಪಿಸಿ ಕುಪ್ಪಳ್ಳಿಯಲ್ಲಿ ಜರುಗುವಂತೆ ಮಾಡಿದರಂತೆ. ಮೈಸೂರು ವಿ.ವಿ.ಗೆ ಗುರುತು ಮನ್ನಣೆ‌ ತಂದುಕೊಟ್ಟ ಕುವೆಂಪು ಅವರಿಗೆ ಇಂಥ ಗೌರವ ಸಿಗಬೇಕಿತ್ತು, ಏಕೆ ಬೇಡವೆಂದಿರಿ ಎಂದಾಗ; ಅಲ್ರೀ ಅದು ಯೂನಿವರ್ಸಿಟಿಯೇ ಹೊರತು ಸ್ಮಶಾನ ಅಲ್ಲ. ಅದೂ ಅಲ್ಲದೆ ಇದೇ ಪರಂಪರೆ ಹಿಡ್ಕೊಂಡು ಎಲ್ಲ ಮಾಜಿ ವಿ.ಸಿ.ಗಳೂ ಕ್ರಾಫರ್ಡ್ ಹಾಲಿನ ಕಾಂಪೌಂಡಲ್ಲಿ ಗೋರಿ ಕಟ್ಟುಸ್ಕೋತಿದ್ರು ಅಂದ್ರಂತೆ.

ಗಾಂಧಿ ಉಲಿದ ಮಾತು

ಗಾಂಧಿ ಸಮಾಧಿಯ ಬಳಿ ನನಗೆ ಕೊರತೆಯಾಗಿ‌ ಕಂಡದ್ದು ಗಾಂಧಿ ಬರೆದ ಮತ್ತು ಗಾಂಧಿ ಬಗ್ಗೆ ಬರೆಯಲ್ಪಟ್ಟ ಪುಸ್ತಕದಂಗಡಿ ಇಲ್ಲದೇ ಹೋದದ್ದು. ಗಾಂಧಿ ಬಗ್ಗೆ ಜಗತ್ತಿನ ಎಲ್ಲ ಭಾಷೆಗಳೂ‌ ಸೇರಿದಂತೆ‌ ಪ್ರತೀ ದಿನ ಒಂದಾದರೂ ಹೊಸ ಕೃತಿ ಪ್ರಕಟವಾಗುವುದಂತೆ. ಎಲ್ಲ ಭಾರತೀಯ ಭಾಷೆಗಳಲ್ಲಿ ಗಾಂಧಿಯವರ ಸಮಗ್ರ ಬರೆಹಗಳನ್ನ ಮುದ್ರಿಸಿ, ಇಲ್ಲವೇ ಮುದ್ರಣಗೊಂಡವನ್ನು ಕೊಂಡು ಆಸಕ್ತರಿಗೆ ತಲುಪಿಸುವ ಕೆಲಸ ಅವಶ್ಯವಾಗಿ ಆಗಬೇಕು. ಇಲ್ಲದಿದ್ದರೆ‌ ಭಕ್ತರ ವಾಟ್ಸಾಪ್ ಯೂನಿವರ್ಸಿಟಿಯ ಫೇಕ್ ಪಠ್ಯವೇ ನಿಜವೆಂದು ಹಲವರು ತಿಳಿಯಬಹುದೇನೊ.

(ಮುಂದಿನ ಸಂಚಿಕೆಯಲ್ಲಿ ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್…)

ರೋಹಿತ್‌ ಅಗಸರಹಳ್ಳಿ
ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

Related Articles

ಇತ್ತೀಚಿನ ಸುದ್ದಿಗಳು