Home ಜನ-ಗಣ-ಮನ ಕ್ಯಾಂಪಸ್ ಕನ್ನಡಿ Letter To CM : ಕಾಲೇಜು, ವಿವಿ ಕ್ಯಾಂಪಸ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ ;...

Letter To CM : ಕಾಲೇಜು, ವಿವಿ ಕ್ಯಾಂಪಸ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ ; ಅಗತ್ಯ ವಿಚಾರವೊಂದನ್ನು ಪರಿಗಣಿಸುತ್ತಾ ಸರ್ಕಾರ?

0

ಸರ್ಕಾರಿ ಕಾಲೇಜು ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಕಾಲೇಜು ಮತ್ತು ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ಕ್ಯಾಂಟೀನ್ ಗಳನ್ನು ಸ್ಥಾಪನೆ ಮಾಡುವಂತೆ ಬೆಂಗಳೂರಿನ ಬದುಕು ಕಮ್ಯೂನಿಟಿ ಸಂಸ್ಥೆಯ ಒಡನಾಡಿ ಪ್ರಾಣೇಶ್ ನೆಲ್ಯಾಡಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

‘ಸರ್ಕಾರಿ ಶಾಲಾ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ತಮ್ಮ ಹಣಕಾಸಿನ, ವೈಯಕ್ತಿಕ ಹಾಗೂ ದೂರದ ಊರಿನಿಂದ ಬರುವ ಕಾರಣಕ್ಕೆ  ತಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಹೆಚ್ಚಾಗಿ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರು ಆರ್ಥಿಕವಾಗಿ ಹಿಂದುಳಿದಿರುವ ಹಿನ್ನಲೆಯಿಂದ ಬಂದವರಾಗಿರುತ್ತಾರೆ‌ ಹಾಗೂ ಸರಿಯಾದ ಕ್ಯಾಂಟೀನ್ ವ್ಯವಸ್ಥೆಯು ಇಲ್ಲದೆ ಮದ್ಯಾಹ್ನದ ಆಹಾರ ಸಹ ಪಡೆಯಲು ಸಾದ್ಯವಾಗುತ್ತಿಲ್ಲ’ ಎಂದು ಪ್ರಾಣೇಶ್ ನೆಲ್ಯಾಡಿಯವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅಷ್ಟೆ ಅಲ್ಲದೆ ‘ಕೆಲವು ವಿದ್ಯಾರ್ಥಿಗಳು ವೈಯಕ್ತಿಕ ಕಾರಣದಿಂದ ಮನೆಯಿಂದ ಬುತ್ತಿ ಕಟ್ಟಿ ಊಟವನ್ನು ತರಲಾಗುವುದಿಲ್ಲ. ಬಹು ದೂರದಿಂದ ಬರುವ ಎಷ್ಟೋ ವಿದ್ಯಾರ್ಥಿಗಳು ಬೆಳಿಗ್ಗಿನ ಉಪಹಾರ ಸೇವಿಸದೇ ಬರುವುದೂ ಇದೆ. ಮದ್ಯಾಹ್ನ ಹೋಟೇಲ್ ಗಳಲ್ಲಿ ಊಟ ಮಾಡಬಹುದೆಂದರೆ  ದಿನಾಲೂ ಹಣ ಕೊಟ್ಟು ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಹಣ ಇದ್ದರೂ ಕೆಲವು ಕಾಲೇಜುಗಳಲ್ಲಿ ಕ್ಯಾಂಟೀನ್ ಗಳೇ ಇರುವುದಿಲ್ಲ. ಸರ್ಕಾರಿ ಕಾಲೇಜುಗಳ ಕಟ್ಟಡಕ್ಕೆ ಪೇಟೆಯಿಂದ ಬಹುದೂರ ಜಮೀನು ನೀಡಿರುವುದರಿಂದ ಕಾಲೇಜಿನ ಅಕ್ಕಪಕ್ಕದ ಅಂಗಡಿ ಹೋಟೇಲ್ ಗಳು ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಸುಮಾರು 24ಕ್ಕೂ ಹೆಚ್ಚು ವಿವಿಗಳು, 3800ಕ್ಕೂ ಹೆಚ್ಚು ಸರಕಾರಿ ಕಾಲೇಜುಗಳಿವೆ. ಇವುಗಳಲ್ಲಿ ಅಂದಾಜು 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಸರಕಾರ ಅಂಕಿ ಅಂಶಗಳ ಆಧಾರವಾಗಿ ತುರ್ತು ಅಗತ್ಯವೆನ್ನಿಸುವ, ಹೆಚ್ಚಿನ ವಿದ್ಯಾರ್ಥಿಗಳಿರುವ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದರೆ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ವಿದ್ಯಾರ್ಥಿಗಳು ಮತ್ತು ಅವರಿಗೆ ಅಗತ್ಯ ಇರುವ ಮಧ್ಯಾಹ್ನದ ಬಿಸಿಯೂಟದ ಅಗತ್ಯತೆ ಬಗ್ಗೆ ಪ್ರಾಣೇಶ್ ನೆಲ್ಯಾಡಿಯವರು ಬೆಳಕು ಚೆಲ್ಲಿದ್ದಾರೆ.

‘ಹೀಗಾಗಿ ಸರ್ಕಾರಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲೇ ಇಂದಿರಾ ಕ್ಯಾಂಟೀನ್  ಮಾದರಿಯ ವ್ಯವಸ್ಥೆ ಆರಂಭವಾಗಲಿ. ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಕನಿಷ್ಟ ಆಹಾರ ದೊರಕುವ ಜತೆಗೆ ಇಲ್ಲಿ‌ ಪೌಷ್ಟಿಕ ಆಹಾರ ದೊರಕುವುದರಿಂದ ವಿದ್ಯಾರ್ಥಿಗಳು ಆರೋಗ್ಯಕರವಾಗಿ‌ ಇರಲು ಸಾಧ್ಯ. ಸರ್ಕಾರಿ ಕಾಲೇಜುಗಳಲ್ಲಿ ಮಧ್ಯಾಹ್ನದ ಊಟವನ್ನು ಲಭ್ಯವಾದರೆ ಸರ್ಕಾರಿ ಕಾಲೇಜುಗಳ ಶಿಕ್ಷಣದ ಪ್ರವೇಶವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ’ ಎಂದು ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಈ ಬಗ್ಗೆ ಪ್ರಾಣೇಶ್ ನೆಲ್ಯಾಡಿ ಬೆಳಕು ಚೆಲ್ಲಿದ್ದಾರೆ.

ಅಷ್ಟೆ ಅಲ್ಲದೆ ಪೀಪಲ್ ಮೀಡಿಯಾ ಜೊತೆಗೂ ಮಾತನಾಡಿದ ಅವರು ‘ಎಷ್ಟೋ ವಿದ್ಯಾರ್ಥಿಗಳು ಮಧ್ಯಾಹ್ನದ ಹಸಿವು ನೀಗಿಸಲು ಶುಚಿತ್ವ ಇಲ್ಲದ ಜಂಕ್ ಫುಡ್ ಗಳನ್ನು ತಿಂದು ಅರೆಬರೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದು ಮುಂದಿನ ದಿನಗಳಲ್ಲೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಹುತೇಕ ಮೂರರಿಂದ ಐದು ವರ್ಷಗಳ ಕಾಲ ಅವರ ಕಾಲೇಜು ವ್ಯಾಸಂಗ ಮಾಡುವ ಹಿನ್ನೆಲೆಯಲ್ಲಿ ಆ ಐದು ವರ್ಷಗಳಲ್ಲೂ ಅವರ ಆಹಾರ ಪದ್ಧತಿಯಲ್ಲಿ ವ್ಯತ್ಯಯ ಆಗುವುದಿದೆ. 10 ನೇ ತರಗತಿಯ ನಂತರ ಕಾಲೇಜು ವ್ಯಾಸಂಗದಲ್ಲಿ ಅವರಿಗೆ ಕಡಿಮೆ ದರದಲ್ಲಿ ಊಟ ಸಿಕ್ಕರೆ ಹೆಚ್ಚಿನ ಸಹಕಾರಿ ಆಗಲಿದೆ’ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಸರ್ಕಾರದ ತಡವಾದ ಪ್ರತಿಕ್ರಿಯೆ ಬಗ್ಗೆ ಬೇಸರ

ಇನ್ನು ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ವಿಚಾರದಲ್ಲೂ ಪ್ರಾಣೇಶ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಸುಮಾರು ಒಂದೂವರೆ ತಿಂಗಳ ಹಿಂದೆಯೇ ನಾನು ಈ ಒಂದು ಸಲಹೆಯನ್ನು ಸರ್ಕಾರಕ್ಕೆ ಬರೆದಿದ್ದರೂ ಅದನ್ನು ನೋಡುವುದಕ್ಕಾಗಿಯೇ ಒಂದೂವರೆ ತಿಂಗಳ ಕಾಲಾವಕಾಶ ತಗೆದುಕೊಂಡಿದ್ದಾರೆ. ಕನಿಷ್ಟ ಈ ಬಗ್ಗೆ ನಮ್ಮ ಪತ್ರ ನೋಡಿದ ಬಗ್ಗೆಯೂ ಪ್ರತಿಕ್ರಿಯೆ ಬಂದಿಲ್ಲ. ಈ ರೀತಿಯ ಇ ಮೇಲ್ (E mail) ಮೂಲಕ ತಲುಪಿಸಿದ ಪತ್ರಕ್ಕೆ ತಕ್ಷಣಕ್ಕೆ ಸ್ಪಂದಿಸುವ ವ್ಯವಸ್ಥೆ ಸರ್ಕಾರದಲ್ಲಿ ಇರಬೇಕು. ಇದು ಅಗತ್ಯ ಎನ್ನಿಸುವ ಕೆಲವು ಸಲಹೆಗಳನ್ನು ತಲುಪಿಸಲು ಅನುಕೂಲ ಆಗಲಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

You cannot copy content of this page

Exit mobile version