Wednesday, April 30, 2025

ಸತ್ಯ | ನ್ಯಾಯ |ಧರ್ಮ

ಮೋದಿಯವರು ವಾರಕ್ಕೊಮ್ಮೆ ಬರುತ್ತಿರಲಿ: ಶಾಸಕರ ಕಾರ್ಯವೈಖರಿಗೆ ಪೃಥ್ವಿ ರೆಡ್ಡಿ ವ್ಯಂಗ್ಯ

ಬೆಂಗಳೂರು: ಶಾಸಕರು ನಿರಂತರವಾಗಿ ಕೆಲಸ ಮಾಡುತ್ತಿರಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೊಮ್ಮೆ ಬರುತ್ತಿರಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ವ್ಯಂಗಿಸಿದ್ದಾರೆ .

ನವೆಂಬರ್‌ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವುದರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪೃಥ್ವಿ ರೆಡ್ಡಿ ಅವರು, “ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಾರೆಂದರೆ ಖುಷಿಯಾಗುತ್ತದೆ. ಸದಾ ಗೊರಕೆ ಹೊಡೆಯುವ ಇಲ್ಲಿನ ಬಿಜೆಪಿ ಶಾಸಕರು ರಸ್ತೆಗುಂಡಿ ಮುಚ್ಚಿಸುತ್ತಾರೆ. ಸುಣ್ಣಬಣ್ಣ ಹೊಡೆಯುತ್ತಾರೆ. ಹೀಗಾಗಿ ನನ್ನ ಒಂದೇ ಮನವಿ ಮೋದಿಯವರೇ, ನೀವು ಆಗಾಗ ವಾರಕ್ಕೊಮ್ಮೆ ಬರುತ್ತಿರಿ. ನಿಮ್ಮ ಶಾಸಕರು ಆಗಲಾದರೂ ಕೆಲಸ ಮಾಡುತ್ತಾರೋ ನೋಡೋಣʼ ಎಂದು ಟೀಕಿಸಿದ್ದಾರೆ.

ಎಎಪಿಯಿಂದ ʻನಮ್ಮಲ್ಲಿಗೂ ಬನ್ನಿ ಮೋದಿʼ ಅಭಿಯಾನ

ಪ್ರಧಾನಿ ನರೇಂದ್ರ ಮೋದಿಯವರು ಸಂಚರಿಸುವ ರಸ್ತೆಗಳ ಗುಂಡಿಗಳನ್ನು ಮಾತ್ರ ಬಿಬಿಎಂಪಿ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಮ್‌ ಆದ್ಮಿ ಪಾರ್ಟಿಯು  ಬುಧವಾರದಿಂದ “ನಮ್ಮಲ್ಲಿಗೂ ಬನ್ನಿ ಮೋದಿ” ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿಯವರು, ʼಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು ಪ್ರಧಾನಿ ಮೋದಿ ಬರುತ್ತಾರೆಂದರೆ ಮಾತ್ರ ಇವುಗಳನ್ನು ಮುಚ್ಚುತ್ತದೆ. ಆದ್ದರಿಂದ ಮೋದಿಯವರು ಎಲ್ಲ ರಸ್ತೆಗಳಲ್ಲೂ ಸಂಚರಿಸಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯು ವಿನೂತನ ಚಳವಳಿ ಆರಂಭಿಸಿದೆʼಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page