Thursday, June 13, 2024

ಸತ್ಯ | ನ್ಯಾಯ |ಧರ್ಮ

“ಹರುಕುಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸುಗಳು ಬೆಸುಗೆಯಾಗಲಿ…” ಎಂದಿದ್ದೇಕೆ ಆಯನೂರು?!

ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಲಜ್ಜೆ ಇರಬೇಕು. ಸಾಮಾಜಿಕ ಸಾಮರಸ್ಯ, ಶಾಂತಿ ಕಾಪಾಡುವಾಗ  ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಮಾತನಾಡಬೇಕು. ಸಾರ್ವಜನಿಕ ಬದುಕಿನಲ್ಲಿ ಲಜ್ಜೆ ಮಾಯವಾದರೆ  ಅಸಹ್ಯವಾಗುತ್ತದೆ.  ಆದರೆ ಲಜ್ಜೆ ಗೆಟ್ಟವರ ಮಾತಿನಿಂದಲೇ ಇಂದು ಶಿವಮೊಗ್ಗದಲ್ಲಿ ಶಾಂತಿ -ಸೌಹಾರ್ದತೆ ಕದಡಿ ಕೂಲಿಕಾರ್ಮಿಕರು, ಆಟೋ ಓಡಿಸಿ ಜೀವನ ನಡೆಸುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ : ಆಯನೂರು ಮಂಜುನಾಥ

ಶಿವಮೊಗ್ಗದಲ್ಲಿ ಶಾಂತಿ -ಸೌಹಾರ್ದತೆ ಕಾಪಾಡಲು ಶಿವಮೊಗ್ಗ  ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ತಮಗೆ ಟಿಕೆಟ್ ನೀಡಬೇಕೆಂದು ಬಹಿರಂಗವಾಗಿ ಹಕ್ಕು ಮಂಡಿಸಿರುವ ಹಾಲಿ ಬಿಜೆಪಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು  ಶಿವಮೊಗ್ಗದಲ್ಲಿ ಕೋಮುಸಾಮರಸ್ಯ ಕದಡಲು ಅವರದ್ದೇ ಪಕ್ಷದ ನಾಯಕರಾದ ಕೆ.ಎಸ್ ಈಶ್ವರಪ್ಪ ಅವರೇ ಕಾರಣ ಎಂಬುದನ್ನು ಪರೋಕ್ಷವಾಗಿ ಸಾರಿದ್ದಾರೆ.

ಮೊನ್ನೆಯಷ್ಟೇ ಆಯನೂರು ಮಂಜುನಾಥ್ ಅವರು  ಹಿಂದು ಮತ್ತು ಮುಸ್ಲಿಂರಿಗೆ ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯಗಳ ಹೆಸರಿನಲಿ  “ಹರುಕುಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸುಗಳು ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ-ಸೌಹಾರ್ದತೆ  ನೆಲೆಸಲಿ, ಈ ಬಾರಿ ಆಯನೂರು ಮಂಜುನಾಥ್” ಎಂದು ನಗರದೆಲ್ಲೆಡೆ ಫ್ಲೆಕ್ಸ್ ಹಾಕಿದ್ದು. ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಹೆಸರಿನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆಲ್ಲಾ ಉತ್ತರವೆಂಬಂತೆ ಇಂದು ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ಆಯನೂರು ಮಂಜುನಾಥ್ ನನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಟೀಕಿಸಿದವರು ಪಕ್ಷದ  ಕಾರ್ಯಕರ್ತರಲ್ಲ.  ಅವರೆಲ್ಲಾ ಓರ್ವ ವ್ಯಕ್ತಿಯ ಬೆಂಬಲಿಗರು. ಪಕ್ಷಕ್ಕಾಗಿ ನಾನೂ ದುಡಿದಿದ್ದೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಟಿಕೇಟ್ ಕೇಳುವುದು ನನ್ನ ಹಕ್ಕು, ಅದನ್ನೇ ನಾನು ಮಾಡಿದ್ದೇನೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಲಜ್ಜೆ ಇರಬೇಕು. ಸಾಮಾಜಿಕ ಸಾಮರಸ್ಯ, ಶಾಂತಿ ಕಾಪಾಡುವಾಗ  ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ಮಾತನಾಡಬೇಕು. ಸಾರ್ವಜನಿಕ ಬದುಕಿನಲ್ಲಿ ಲಜ್ಜೆ ಮಾಯವಾದರೆ  ಅಸಹ್ಯವಾಗುತ್ತದೆ.  ಆದರೆ ಲಜ್ಜೆ ಗೆಟ್ಟವರ ಮಾತಿನಿಂದಲೇ ಇಂದು ಶಿವಮೊಗ್ಗದಲ್ಲಿ ಶಾಂತಿ -ಸೌಹಾರ್ದತೆ ಕದಡಿ ಕೂಲಿಕಾರ್ಮಿಕರು, ಆಟೋ ಓಡಿಸಿ ಜೀವನ ನಡೆಸುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ.  ಇದಕ್ಕೆಲ್ಲಾ ಮುಕ್ತಿ ದೊರೆಯಬೇಕು ಆದ್ದರಿಂದಲೆ ನಾನು ಪಕ್ಷದ ಟಿಕೆಟ್ ಕೇಳುತ್ತಿದ್ದೇನೆ ಎಂದರು.

ಅಲ್ಪಸಂಖ್ಯಾತರೊಂದಿಗೆ ಸೌಹಾರ್ದತೆಯಿಂದ ಬದುಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಕೊಟ್ಟಿದ್ದಾರೆ. ಸಂಘದ  ಸರಸಂಘಚಾಲಕರೆ  ಮಸೀದಿಗಳಿಗೆ ಭೇಟಿ ನೀಡಿ ಹಿಂದೂ ಮುಸ್ಲಿಂ ಬಾಂಧವ್ಯ ಬೆಸೆಯುತ್ತಿರುವಾಗ ಅದಕ್ಕೆ ತದ್ವಿರುದ್ಧವಾಗಿ   ನಡೆದುಕೊಂಡರೆ ಅವರು ಮೋದಿ ವಿರೋಧಿ ಆಗುತ್ತಾರೆ. ಪಕ್ಷದ ವಿರೋಧಿ ಆಗುತ್ತಾರೆ.  ನಾನು ಪ್ರಧಾನಿ ನರೇಂದ್ರ  ಮೋದಿ ಅವರ ಕರೆಯನ್ನು ಪಾಲಿಸುತ್ತಿದ್ದೇನೆ. ಅವರ  ಆಶಯದಂತೆ ಶಾಂತಿ -ಸೌಹಾರ್ದತೆ ನೆಲೆಸಬೇಕೆಂದು ಮಾತನಾಡುತ್ತಿದ್ದೇನೆ ಇದು ಪಕ್ಷ ವಿರೋಧಿ ಚಟುವಟಿಕೆ ಯಾಗುತ್ತದಾ? ಎಂದು  ಆಯನೂರು ಮಂಜುನಾಥ್  ಪರೋಕ್ಷವಾಗಿ ಕೆ.ಎಸ್ ಈಶ್ವರಪ್ಪ ಅವರ ವಿರುದ್ಧ ಮಾತುಗಳ ಬಾಣಗಳನ್ನು ಬಿಟ್ಟರು.

ಕೆ.ಎಸ್ ಈಶ್ವರಪ್ಪ ಅವರಿಗೆ ಪಕ್ಷ 32 ವರ್ಷಗಳ ಕಾಲ  ಸೋತಾಗಲೂ, ಗೆದ್ದಾಗಲೂ ಪಕ್ಷ ಅಧಿಕಾರ ಕೊಟ್ಟಿದೆ. ಈಗ ಅವರಿಗೆ ಅಥವಾ ಅವರ ಪುತ್ರನಿಗೆ ಟಿಕೆಟ್  ಕೇಳುತ್ತಿದ್ದಾರೆ. ಭಾನುಪ್ರಕಾಶ್, ಗಿರೀಶ್ ಪಟೇಲೆರಂತ ಹಿರಿಯರೂ  ಪಕ್ಷದಲ್ಲಿದ್ದಾರೆ.  ಅವರನ್ನು ಹೊರತು ಪಡಿಸಿ ತಮ್ಮ ಪುತ್ರನಿಗೆ ಟಿಕೆಟ್ ಕೇಳುತ್ತಿದ್ದಾರೆ. ನಾನೂ ಕೂಡ ಪಕ್ಷ ಕಟ್ಟಿದವನು ಈ ಬಾರಿ ನನಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಲ್ಲಿ ಕೇಳುತ್ತಿದ್ದೇನೆ. ನಾನು ನನ್ನ ಸಂತತಿ ಎಂಬುದು ಪಕ್ಷದ ನೀತಿಯಲ್ಲ. ಅಂತಹ ಧೋರಣೆಯನ್ನು ಖಂಡಿಸಿಯೇ ರಂಗಪ್ರವೇಶ ಮಾಡಿದ್ದೇನೆ.  ಹಾಗೊಮ್ಮೆ ಈಶ್ವರಪ್ಪ ಅಥವಾ ಅವರ ಪುತ್ರನಿಗೆ ಟಿಕೇಟ್ ಕೊಟ್ಟಿದ್ದೇ ಆದರೆ ನನ್ನ ತೀರ್ಮಾನ ಏನೆಂದು ಹೇಳುತ್ತೇನೆ. ಆದರೆ ಪಕ್ಷ ನನಗೆ ಟಿಕೆಟ್ ಕೊಡುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಆಯನೂರು ಮಂಜುನಾಥ್,

ಆಯನೂರು ಶಿಸ್ತು ಉಲ್ಲಂಘನೆ?

ಆಯನೂರು ಮಂಜುನಾಥ್ ಹೇಳಿಕೆ ಮತ್ತು ನಡವಳಿಕೆಗಳ ಬಗ್ಗೆ ಜಿಲ್ಲಾ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರಿಗೆ ವರದಿಯೊಂದನ್ನು ಸಲ್ಲಿಸಿದೆ. ಪಕ್ಷಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಮಾನದಂಡಗಳಿವೆ. ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕೆ, ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸಿದ್ದಕ್ಕೆ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೈ ಜೋಡಿಸಿದ್ದಕ್ಕೆ ಅಂಕಗಳನ್ನು ನೀಡಲಾಗುವುದು ಇವೆಲ್ಲವು ಟಿಕೆಟ್ ನೀಡುವ ಮಾನದಂಡಗಳೇ ಆಗಿವೆ ಎನ್ನುತ್ತಾರೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮೇಘರಾಜ್.

ಆಯನೂರು ಮಂಜುನಾಥ್ ಅವರು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ.  ಟಿಕೆಟ್ ಬೇಡಿಕೆ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದು,  ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಈ ಬಗ್ಗೆ ಆಯನೂರು ಮಂಜುನಾಥ್ ಅವರಿಗೆ ರಾಜ್ಯ ಸಮಿತಿ ಸೂಕ್ತ ನಿರ್ದೇಶನ ನೀಡಬೇಕೆಂದು  ಎಂದು ಜಿಲ್ಲಾ ಬಿಜೆಪಿ ರಾಜ್ಯ ಸಮಿತಿಗೆ ಸಲ್ಲಿಸಿರುವ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಕೃಪೆ : ShimogaTelex

Related Articles

ಇತ್ತೀಚಿನ ಸುದ್ದಿಗಳು