Friday, June 14, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಂಬೇಡ್ಕರ್ ಜಯಂತಿಯನ್ನೂ ನಡೆಸುವಂತಾಗಲಿ

ಅಂಬೇಡ್ಕರ್‌ ಜಯಂತಿ ಆಚರಣೆ ಸಮಾಜ ಕಲ್ಯಾಣ ಇಲಾಖೆಯದು ಮಾತ್ರ ಎಂಬುದನ್ನು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ಬಾಬಾ ಸಾಹೇಬರಿಗೂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಯಾಕೆ ಸಂಬಂಧ ಇಲ್ಲ ಎನ್ನುವುದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬಾಬಾ ಸಾಹೇಬರನ್ನು ಅಪ್ರಸ್ತುತಗೊಳಿಸುವ ತಂತ್ರಕ್ಕೆ ಸರಕಾರವೇ ನೀರೆರೆಯಲು ಅಣಿಯಾದಂತಾಗುತ್ತದೆ – ಶಿವರಾಜ್‌ ಮೋತಿ, ಕಾನೂನು ವಿದ್ಯಾರ್ಥಿ

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಆಯೋಜನೆ ಮಾಡುತ್ತಾರೆ. ಉಳಿದಂತೆ ಸಾಕಷ್ಟು ಮಹನೀಯರು ಹಾಗೂ ಸಾಧು‌ ಸಂತರು, ಶರಣರ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆ ಮಾಡುತ್ತದೆ.

ಮೊದಲಿನಿಂದಲೂ ಅಂದರೆ ಕಾಂಗ್ರೆಸ್ ಕಾಲದಿಂದಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿಲ್ಲ. ಬದಲಾಗಿ ಅದಕ್ಕಿಂತ ದೊಡ್ಡ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ವತಿಯಿಂದ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ನಿಗದಿಯಾದ ಜಯಂತಿಗಳನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಅದರ ಸಹಯೋಗದೊಂದಿಗೆ ಆಯೋಜಿಸುವ (ಏಪ್ರಿಲ್ ತಿಂಗಳ) ಮಹನೀಯರ ಜಯಂತಿಗಳ ಪಟ್ಟಿ ಪ್ರಕಟಿಸಿ ಬಿಡುಗಡೆಗೊಳಿಸಿದೆ. ಅದರಲ್ಲಿ ಏಪ್ರಿಲ್ 14 ಕ್ಕೆ ಬರುವ ಬಾಬಾ ಸಾಹೇಬರ ಜಯಂತಿಯ ಉಲ್ಲೇಖವಿಲ್ಲ. ಮಹತ್ವ ಕೊಟ್ಟು ಸಾಂಕೇತಿಕವಾಗಿಯಾದರೂ ಉಲ್ಲೇಖಿಸಿ ಅದರ ಮುಂದೆ ಸಮಾಜ ಕಲ್ಯಾಣ ಇಲಾಖೆಗೆ ಒಳಪಡುತ್ತದೆ ಎಂದು ಬರೆಯಬಹುದಿತ್ತು. ಆ ರೀತಿ ಒಂದು ಇಲಾಖೆ ಮತ್ತೊಂದು ಇಲಾಖೆಯ ಬಗ್ಗೆ ಬರೆಯಲಾರದು, ಬರೆಯಕೂಡದು ಕೂಡ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಗೆ ಬಾಬಾ ಸಾಹೇಬರ ಜಯಂತಿ ಬರುವುದಿಲ್ಲವೆಂದಾಗ ಅದನ್ನು ಬಿಟ್ಟೇ ಬಿಡುವುದೇ? ಸಮಾಜ ಕಲ್ಯಾಣ ಇಲಾಖೆ SC-ST‌ ಗಳ ಆಸ್ತಿ ಆದರೆ ಬಾಬಾಸಾಹೇಬರು ಯಾರ ಸ್ವತ್ತು!? ಬರೀ SC/ST ಗಳ ಹಣದಲ್ಲಿ ಈ ಕಾರ್ಯಕ್ರಮ ರೂಪಿಸಿ ಒಂದು ಜನಾಂಗಕ್ಕೆ ಬಾಬಾ ಸಾಹೇಬರನ್ನು ವ್ಯವಸ್ಥಿತವಾಗಿ ಸೀಮಿತ ಮಾಡುವ ಹುನ್ನಾರವೇ? ಇಷ್ಟು ದಿ‌ನ ಈ ಪ್ರಕ್ರಿಯೆ ಹೇಗಾದರೂ ನಡೆದುಕೊಂಡು ಬಂದಿದೆ. ಆದರೆ ಈಗಲಾದರೂ ಇಂತಹ ಮಂಕುಬೂದಿ ಎರಚುವ ನೀತಿ-ನಿಯಮಗಳು ಈ ಕ್ಷಣವೇ ನಿಲ್ಲುವಂತಾಗಲಿ”.

ಅಂಬೇಡ್ಕರ್ ಜಯಂತಿ ಯಾವುದೇ ಇಲಾಖೆಗೆ ಮಾತ್ರ ಸಂಬಂಧಪಡುವುದಿಲ್ಲ. ಅದು ಸರಕಾರದ್ದಾಗಿರುತ್ತದೆ. ಹಾಗಾಗಿ ಸರಕಾರದ ಅಂಗಗಳಾದ ಎಲ್ಲ ಇಲಾಖೆಗಳೂ ಈ ಜಯಂತಿಯನ್ನು ಆಚರಿಸಬೇಕು. ಕಟ್ಟುನಿಟ್ಟಾಗಿ ಎಲ್ಲ ಕಡೆಯೂ ಬಾಬಾ ಸಾಹೇಬರ ಫೋಟೋ ಇಡಬೇಕು.

ಜಯಂತಿ ಆಚರಣೆಯ  ಕೆಲಸ ಸಮಾಜ ಕಲ್ಯಾಣ ಇಲಾಖೆಯದು ಮಾತ್ರ ಎಂಬುದನ್ನು ಯಾವುದೇ ಕಾರಣಕ್ಕೂ ಒಪ್ಪತಕ್ಕದ್ದಲ್ಲ. ಬಾಬಾ ಸಾಹೇಬರಿಗೂ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಯಾಕೆ ಸಂಬಂಧ ಇಲ್ಲ ಎನ್ನುವುದರ ಬಗ್ಗೆ ಗಂಭೀರ ಚಿಂತನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬಾಬಾ ಸಾಹೇಬರನ್ನು ಅಪ್ರಸ್ತುತಗೊಳಿಸುವ ತಂತ್ರಕ್ಕೆ ಸರಕಾರವೇ ನೀರೆರೆಯಲು ಅಣಿಯಾದಂತಾಗುತ್ತದೆ.

ಪ್ರತಿ ಸಲ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದರಿಂದಲೇ ತಿಂಗಳ ಮುಂಚಿತವಾಗಿಯೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಏಪ್ರಿಲ್ 14 ಬಾಬಾ ಸಾಹೇಬರ ಜಯಂತಿ ಮುಗಿದ ನಂತರ ಘೋಷಿಸಿ ಎಂದು ಚುನಾವಣಾ ಆಯೋಗಕ್ಕೂ ಸರಣಿಯಾಗಿ ಮನವಿಪತ್ರಗಳು ಕರ್ನಾಟಕದಿಂದ ತಲುಪಿದರೂ ಕ್ಯಾರೇ ಎನ್ನದ ಚುನಾವಣಾ ಆಯೋಗ ಎಷ್ಟರ ಮಟ್ಟಿಗೆ ಜನತೆಯ ಅಭಿಪ್ರಾಯಗಳನ್ನು ತಲೆದೂಗಿ ಗೌರವಿಸುತ್ತದೆ…?

ಚುನಾವಣಾ ನೀತಿ ಸಂಹಿತೆ ಹೆಸರಲ್ಲೂ ಬಾಬಾ ಸಾಹೇಬರ ಜಯಂತಿಯನ್ನು ಮರೆಸುತ್ತಿರುವ ಇವರಿಗೆ ಇದೊಂದು ಬರೀ ಜಯಂತಿ ಎನಿಸಿದರೆ ದೇಶವಾಸಿಗಳಿಗೆ, ನಿರ್ಗತಿಕರಿಗೆ ಇದೊಂದು ಹಬ್ಬವೆಂದು ಮನವರಿಕೆ ಆಗುವುದಾದರೂ ಯಾವಾಗ? ಅದೇನೆ ಇರಲಿ, ಭಾರತದಲ್ಲಿ ಇಂದು ಬಾಬಾಸಾಹೇಬರನ್ನು ನೆನೆಯದವರು ಈ ಭೂಮಿಯ ಮೇಲೆ ಬದುಕಲಿಕ್ಕೂ ಅಯೋಗ್ಯರು, ಉಸಿರಾಡಲಿಕ್ಕೂ ಅರ್ಹತೆ ಇಲ್ಲದವರು.

ಯಾವುದೇ ಒಬ್ಬ ರಾಷ್ಟ್ರನಾಯಕರ ಕಾರ್ಯಕ್ರಮವು ವಿಶೇಷವಾಗಿ ಯುವಕರು, ದೇಶ ಇತ್ಯಾದಿ ವಿಷಯಗಳು ಬಂದೊಡನೇ ಬಾಬಾಸಾಹೇಬರನ್ನು ಹಾಗೂ ಸಂವಿಧಾನವನ್ನು ನೆನೆಯಲಿಲ್ಲವೆಂದರೆ ಅದು ಪೂರ್ಣಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುವುದಾದರೂ ಹೇಗೆ?

ಇದು ಕಾಂಗ್ರೆಸ್‌ನವರ ಕೆಲಸ, ಬಿಜೆಪಿಯವರ ಕೆಲಸ ಅಂತ ಆರೋಪ-ಪ್ರತ್ಯಾರೋಪ ಮಾಡುತ್ತಾ ಕೂರುವ ಸಮಯ ಮತ್ತು ವಿಷಯವೂ ಕೂಡ ಅಲ್ಲ. ಏಕೆಂದರೆ ಬಾಬಾ ಸಾಹೇಬರು ಭಾರತದ ಉಸಿರು. ಹೌದು ಇನ್ನು ಮುಂದೆ ಕಡ್ಡಾಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲೂ ಪ್ರತ್ಯೇಕವಾಗಿ ಬಾಬಾ ಸಾಹೇಬರ ಜಯಂತಿಯೂ ನಡೆಯಲಿ. ಸರಕಾರ ಅದಕ್ಕೆ ಅನುಮೋದನೆ ನೀಡುವಂತೆ ಆಗಬೇಕಿದೆ.

ಶಿವರಾಜ್ ಮೋತಿ

ಕಾನೂನು ವಿದ್ಯಾರ್ಥಿ

Related Articles

ಇತ್ತೀಚಿನ ಸುದ್ದಿಗಳು