Saturday, January 18, 2025

ಸತ್ಯ | ನ್ಯಾಯ |ಧರ್ಮ

ವಿಶ್ವವೇ ಮನೆಯಾಗಿ ಸಂಬಂಧಗಳು ಬೆಸೆಯಲಿ: ಗೊಲ್ಲಹಳ್ಳಿ ಶಿವಪ್ರಸಾದ್

ಕೋಲಾರ : ಇಡೀ ಜಗತ್ತಿನ ಆದಿಮ ಸಂಸ್ಕೃತಿಯಾದ ಜಾನಪದವು ಪ್ರಕೃತಿಯ ಸತ್ಯಗಳನ್ನು ಮಾತಾಡುತ್ತಾ ಜನಸಮುದಾಯಗಳ ನಡುವೆ ಸಂಬಂಧಗಳನ್ನು ಬೆಸೆಯಿತೇ ಹೊರತು ಬೇಧಗಳನ್ನು ಸೃಷ್ಟಿಸಲಿಲ್ಲ. ಸಿಮಾತೀತ ಜಾನಪದವಿವೇಕವನ್ನು ಆಧುನಿಕರು ಅರಿಯುವ ಮೂಲಕ ವಿಶ್ವವೇ ಮನೆಯಾಗಿ ಸಂಬಂಧಗಳು ಬೆಸೆಯುವಂತಾಗಲಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಶ್ರೀ ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಅಭಿಪ್ರಾಯಪಟ್ಟರು.


ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಮೆರಿಕಾದ ಕನ್ನಡ ಸಾಹಿತ್ಯ ರಂಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಶಿಷ್ಟ ಪರಂಪರೆ ಮತ್ತು ಜಾನಪದ ಲೋಕ’ ಕುರಿತಾಗಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಮಾನವಜೀವನದ ಹುಟ್ಟಿನಿಂದ ಚಟ್ಟದವರೆಗೂ ಜಾನಪದ ಜೊತೆಯಾಗಿರುವಂಥದ್ದು. ಹಾಡಾಗಿ ಪಾಡಾಗಿ ಶ್ರಮಸಮುದಾಯವನ್ನು ಕಟ್ಟುತ್ತಾ ಬಂದ ಜಾನಪದವು ತನ್ನ ಜೀವನಪ್ರೀತಿ ಹಾಗೂ ಜೀವಪರತೆಯಿಂದ ಸದಾ ಜೀವಂತವಾಗಿದೆ. ಆಧುನಿಕತೆಯ ಅಸಂಖ್ಯಸಂಗತಿಗಳ ಅಭಿವ್ಯಕ್ತಿಯಲ್ಲಿ ಜಾನಪದವೇ ತಾಯಿಬೇರಾಗಿ ಕಂಡುಬರುತ್ತದೆ. ನಾಗರಿಕತೆಯ ನಾಗಾಲೋಟದಲ್ಲಿ ನಾವೆಲ್ಲರೂ ಖಂಡಿತ ಉನ್ನತ ವ್ಯಕ್ತಿಗಳಾಗೋಣ. ಆದರೆ ಕೆಡಹುವ ಉನ್ನತ ವ್ಯಕ್ತಿಗಳಾಗದೆ ಕಟ್ಟುವ, ಕೂಡಿಸುವ ಉನ್ನತ ವ್ಯಕ್ತಿಗಳಾಗಬೇಕು. ನಮ್ಮ ಜಾನಪದ ಪರಂಪರೆಯು ಕಲಿಸಿದ್ದು ಇಂತಹ ಕಟ್ಟುವ ಉನ್ನತ ವ್ಯಕ್ತಿಗಳಾಗುವುದನ್ನು. ಜಾನಪದರು ಕೆರೆಕುಂಟೆಗಳನ್ನು ಕಟ್ಟಿದರು, ಗಿಡಸಸಿಗಳನ್ನು ನೆಟ್ಟರು. ಮುಂದಿನ ತಲೆಮಾರಿಗಿರಲಿ ಅಂತ ಎಲ್ಲವನ್ನೂ ಕೊಟ್ಟರು. ಹೀಗೆ ಜಾನಪದರು ಕಟ್ಟಿದ್ದು, ನೆಟ್ಟಿದ್ದು, ಕೊಟ್ಟಿದ್ದು ಬಿಟ್ಟರೆ ಏನನ್ನೂ ಕೆಡಹುವ ಕೆಲಸ ಎಂದೂ ಮಾಡಿದವರಲ್ಲ. ಹೀಗಾಗಿ ಜಾನಪದರು ಸದಾಸ್ಮರಣೀಯ ಸಾಧಕರಾಗಿದ್ದಾರೆ ಎಂದರು.


ಜಾನಪದ ಪಾಂಡಿತ್ಯವು ಅಪರಿಮಿತವಾದುದು. ವಿಶ್ವವಿದ್ಯಾಲಯಗಳ ಪಠ್ಯಗಳನ್ನು ಮೀರಿದ ಪಾಂಡಿತ್ಯ ಜಾನಪದರದ್ದು. ಅಕಾಡೆಮಿಕ್ ವಲಯಗಳಲ್ಲಿ ತಜ್ಞರು, ವಿದ್ವಾಂಸರು ಎನ್ನಿಸಿಕೊಂಡವರ ಜ್ಞಾನಮೂಲವೇ ಜಾನಪದವಾಗಿದೆ. ಭಿನ್ನಬೇಧಗಳಿಲ್ಲದ, ದ್ವೇಷಾಸೂಯೆಗಳಿಲ್ಲದ ಜಾನಪದರ ಪಾಂಡಿತ್ಯವನ್ನು ವಿದ್ಯಾವಂತರು ಕಲಿಯಬೇಕಿದೆ. ಈ ಸಂಬAಧವಾಗಿ ಜಾನಪದದ ಮಹಾಪ್ರಯಾಣದಲ್ಲಿ ಕಲಾವಿದರು ಹಾಗೂ ವಿದ್ವಾಂಸರು ಜೋಡೆತ್ತುಗಳಂತೆ ನಡೆದುಕೊಂಡು ಹೋಗಬೇಕಿದೆ. ಜೀವನದ ಬಂಡಿಯನ್ನು ಜಾನಪದ ವಿವೇಕದಿಂದ ಮುಂದೊಯ್ಯಬೇಕಾದ ಜವಾಬ್ದಾರಿ ಕಲಾವಿದರು ಹಾಗೂ ವಿದ್ವಾಂಸರ ಮೇಲಿದೆ. ಇವರಿಬ್ಬರೂ ಕೈಕೈ ಹಿಡಿದುಕೊಂಡು ಜಾನಪದದ ತಿರುಳನ್ನು ಜಗತ್ತಿಗೆ ಸಾರಬೇಕಿದೆ ಎಂದು ತಿಳಿಸಿದರು.


ಇಂದು ರಿಯಾಲಿಟಿ ಅಲ್ಲದ ರಿಯಾಲಿಟಿ ಹೆಸರಿನ ಶೋಗಳು ನಮ್ಮನ್ನು ದಿಕ್ಕು ತಪ್ಪಿಸುತ್ತಿವೆ. ಸಂಬಂಧಗಳು ನುಚ್ಚುನೂರಾಗ್ತಾ ಇವೆ. ಇದರ ನಡುವೆ ಸತ್ಯದ ಸೋಗಿನ ಸುಳ್ಳುಗಳು, ಥಳುಕು ಬಳುಕುಗಳು, ನಯವಂಚಕತನಗಳು ಮೆರೆದಾಡುತ್ತಿವೆ. ಸತ್ಯವನ್ನು, ಸಮತೆಯನ್ನು, ಜೀವಪರತೆಯನ್ನು ಜನಪರತೆಯನ್ನು ಬುಲ್ಡೋಜ್ ಮಾಡುವಂಥ ದುರಂತ ಕಾಲದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಸತ್ಯವನ್ನೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಬಂಧುಬಳಗ, ಸತ್ಯವೇ ನಮ್ಮ ದೈವ ಎಂದು ಸತ್ಯಮಾರ್ಗವನ್ನು ತೋರಿದ ಜಾನಪದ ವಿವೇಕ ನಮ್ಮೊಳಗೆ ಅಂತಸ್ಥವಾಗಬೇಕಿದೆ ಎಂದು ತಿಳಿಸಿದರು.


ಜಾನಪದರಾದಿಯಾಗಿ ನಮ್ಮ ನೆಲದಲ್ಲಿ ಸತ್ಯಪರವಾದ, ಜನಪರವಾದ, ಜೀವಪರವಾದ ಅನೇಕ ಸಂತರು, ಶರಣರು, ದಾರ್ಶನಿಕರು, ತತ್ವಪದಕಾರರು, ಅನುಭಾವಿಗಳು, ತತ್ವಜಾನಿಗಳು ನಮಗೆ ಸತ್ಯ-ಸಮತೆಯ ಜೀವನತತ್ವಗಳನ್ನು ಬೋಧಿಸಿಹೋಗಿದ್ದಾರೆ. ಅವರನ್ನು ಜಾನಪದ ಲೋಕವು ತನ್ನ ಪದಗಳಲ್ಲಿ, ಬದುಕುಗಳಲ್ಲಿ ಕಾಪಿಟ್ಟುಕೊಂಡು ಬಂದಿದೆ. ಅದನ್ನು ನಾವೆಲ್ಲರೂ ಸೂಕ್ಷ್ಮವಾಗಿ ಅರಿತುಕೊಳ್ಳಬೇಕಾಗಿದೆ. ನಾವು ಖಂಡಿತ ಉನ್ನತ ವ್ಯಕ್ತಿಗಳಾಗೋಣ. ಆದರೆ ಕೆಡಹುವ ಉನ್ನತ ವ್ಯಕ್ತಿಗಳಾಗದೆ ಕಟ್ಟುವ, ಕೂಡಿಸುವ ಉನ್ನತ ವ್ಯಕ್ತಿಗಳಾಗಬೇಕು. ನಮ್ಮ ಜಾನಪದ ಪರಂಪರೆಯು ಕಲಿಸಿದ್ದು ಇಂತಹ ಕಟ್ಟುವ ಉನ್ನತ ವ್ಯಕ್ತಿಗಳಾಗುವುದನ್ನು. ಜಾನಪದರು ಕೆರೆಕುಂಟೆಗಳನ್ನು ಕಟ್ಟಿದರು, ಗಿಡಸಸಿಗಳನ್ನು ನೆಟ್ಟರು. ಮುಂದಿನ ತಲೆಮಾರಿಗಿರಲಿ ಅಂತ ಎಲ್ಲವನ್ನೂ ಕೊಟ್ಟರು. ಹೀಗೆ ಜಾನಪದರು ಕಟ್ಟಿದ್ದು, ನೆಟ್ಟಿದ್ದು, ಕೊಟ್ಟಿದ್ದು ಬಿಟ್ಟರೆ ಏನನ್ನೂ ಕೆಡಹುವ ಕೆಲಸ ಎಂದೂ ಮಾಡಿದವರಲ್ಲ. ಜಾನಪದರು ಏನೇ ಕೆಲಸ ಮಾಡುತ್ತಿರುವಾಗಲೂ ಪದ ಹಾಡ್ತಾ ಬಂದ್ರು. ಆ ಪದಗಳೇ ಜಾನಪದರ ಬದುಕಾಗಿತ್ತು; ಜಾನಪದರ ಬದುಕೇ ಮಹಾಪದ ಆಗಿತ್ತು ಎಂದರು.


ನಾನು ಈವರೆಗೆ ಏನು ಪದ ಹಾಡಿದ್ದೇನೋ, ಬರೆದಿದ್ದೇನೋ, ಮಾತನಾಡಿದ್ದೇನೋ, ಬದುಕಿದ್ದೇನೋ ಅದೆಲ್ಲ ನನಗೆ ನನ್ನ ನೆಲದ ಜನರ ಪರಂಪರೆಯಿಂದ ಬಂದದ್ದು. ಈ ನೆಲದ ಪರಂಪರೆಯ ಅಜ್ಜಿತನ, ಅಮ್ಮತನ, ಅಪ್ಪತನ, ಅಣ್ಣತನ, ಅಕ್ಕತನ, ಗುರುವುತನ, ದರುವುತನಗಳು ನನ್ನನ್ನು ನುಡಿಸಿದವು, ನಡೆಸಿದವು, ದುಡಿಸಿದವು. ಹೀಗಾಗಿ ನಾವು ಜಾನಪದ ಪರಂಪರೆಯ ತಾಯಿಬೇರಿನಿಂದ ಮಣ್ಣಿನ ವಾಸನೆಯಿಂದ ಅರಳುವ ಕುಸುಮಗಳಾಗಬೇಕೇ ಹೊರತು ಷೋಕೇಸ್ ಪೀಸುಗಳಾಗಬಾರದು. ಸಂಬಂಧಗಳಿಗೆ ಬೆಲೆಯಿಲ್ಲದಂತೆ ದುರಾಸೆಯಿಂದ ದೂರವಾಗಬಾರದು. ಅಂತಹ ಯಾವುದೇ ಬಗೆಯ ಕೆಟ್ಟ ಸಂಸ್ಕೃತಿ-ಪರಂಪರೆಯನ್ನು ನಾವೆಂದೂ ಪೋಷಿಸಬಾರದು, ಪಾಲಿಸಬಾರದು. ಅತಿಯಾದ ಆಧುನಿಕತೆಯ ಅಮಲುಗಳಿಂದ ಅವಸಾನಕ್ಕೆ ಒಳಗಾಗದೆ ಸಂಬಂಜ ಅನ್ನೋದು ದೊಡ್ಡದು ಕಣಾ ಎಂದ ಮಣ್ಣಿನ ಗಟ್ಟಿ ಜೀವಗಳಾಗಬೇಕಾಗಿದೆ ಎಂದು ಕರೆ ನೀಡಿದರು.


Related Articles

ಇತ್ತೀಚಿನ ಸುದ್ದಿಗಳು

You cannot copy content of this page