“..ಬಿಸಿಲು ನಾಡಿನ ಮೈಸುಟ್ಟುಕೊಂಡ ನೆತ್ತಿ ಸುಟ್ಟುಕೊಂಡ ನೇರ ಹೃದಯಕ್ಕೆ ನಾಟುವ ಕೆಲವು ಸಾಲುಗಳನ್ನು ಓದುವ ಕಥೆಯಲ್ಲಿ ಒಂದರೆಗಳಿಗೆ ಕಳೆದುಹೊಗುವ ಉಮೇದು ಇದ್ದರೆ ನೀವು ಸಾಲಿಯವರ ಕಥೆಗಳನ್ನು ತಪ್ಪಿಸಿಕೊಳ್ಳಲೇಬೇಡಿ..” ಲೇಖಕಿ ಶಿಲ್ಪಾ ಮ್ಯಾಗೇರಿ ಅವರ ಬರಹದಲ್ಲಿ
ಡಾ. ಚಿದಾನಂದ ಸಾಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಹಲವಾರು ಹುದ್ದೆಗಳನ್ನು ಅಲಂಕರಿಸಿ ನಾಡಿನ ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿ ಕೊಂಡವರು.
‘ಪ್ರಸ್ತುತ ಹೊಗೆಯ ಹೊಳೆಯಿದು ತಿಳಿಯದು’ ಕಥೆಸಂಕವನ ನವಿರಿದ ನಿರೂಪಣೆ ಯಿಂದ ನೇಯ್ದ ಕಲಾಕುಸುರಿಯಾಗಿದೆ. ಇವುಗಳನ್ನು ಓದುತ್ತಾ ಓದುತ್ತಾ ಕಳೆದು ಹೋಗುವ ಅನುಭವ ಆಗದಿರದು,
ಪುಸ್ತಕವನ್ನೆತ್ತಿಕೊಂಡ ಕ್ಷಣದಿಂದ ಅವಸರದ ಬದುಕಿನ ಈ ಎಲ್ಲಾ ಸೆಳೆತಗಳನ್ನು ಮರೆತು
ಆತ್ಮಪೂರ್ವಕವಾಗಿ ಖುಷಿ ಪಟ್ಟೆ.
ಈ ಕಥೆಗಳಲ್ಲಿ ಕಥಾಹಂದರ ಬಿಗಿಯಾಗಿದ್ದು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತವೆ.
ಎಷ್ಟೋ ಕಾಲದಿಂದ ಎದೆಗೇರಿಸಿಕೊಂಡ ಯಾವುದು ಯಾವುದೋ ಕದಲಿಕೆಗಳಿಂದ ಹಗ್ಗ ಜಗ್ಗಾಟದಿಂದ ಮುಕ್ತರಾದ ಅನುಭವ ನಕ್ಕು ನಕ್ಕು ನಿರುಮ್ಮಳವಾಗುವ ಖುಷಿ.
ಬೋಧನೆ ಮಾಡುವ,
ಸಂಕಟವನ್ನಷ್ಟೇ ದಾಟಿಸುವ, ಜಾಳುತನದಿಂದ ಕೂಡಿದ ಏಕರೂಪದ ಎಷ್ಟೋ ಕಥೆಗಳಂತಿರದೆ ಸುಂದರ ನಿರೂಪಣೆಯಿಂದ ಕಥೆಗಳು ತುಂಬಾ ಹೃದ್ಯವಾಗಿವೆ.
ಸಂಕಲನದಲ್ಲಿ ಒಟ್ಟು ಐದು ಕಥೆಗಳಿದ್ದು ಒಂದೊಂದು ಕಥೆಯಲ್ಲೂ ಸೂಕ್ಷ್ಮ ಒಳನೋಟಗಳು, ಸರಾಗವಾಗಿಯೇ ಹೇಳುವ ಗಾಢ ಸತ್ಯಗಳು, ಮನಸಿನ ಮುಗಿಯದ ತಹತಹಗಳು, ನಿರಂತರ ಮಗ್ಗಲು ಬದಲಿಸುವ ಮರ್ಕಟ ಲಹರಿಗಳು, ಹಾಸ್ಯದ ಜೊತೆಗೆ ಇರುವ ನಿಜದ ಸೂಜಿ ಮುಳ್ಳುಗಳು.. ಇವೆಲ್ಲವುಗಳಿಂದಾಗಿ ಕಥೆಗಳು ಮತ್ತೆ ಮತ್ತೆ ಕಾಡುತ್ತವೆ.
ಮಯೂರದಲ್ಲಿ ಪ್ರಕಟವಾಗಿದ್ದ ಹುಗ್ಗಿ ಕಥೆ ಓದಿ ಈ ಸಂಕಲನ ಕೈಗೆತ್ತಿಕೊಂಡೆ ಮಧುರ ಭಾವ ಉಕ್ಕಿಸುತ್ತ ಒಂದು ಪ್ರಯಾಣದ ಅನುಭವವನ್ನು ಹೇಳುವ ಕಥೆ ತೋಳ ಬಂದು ಕುರಿಗಳನ್ನು ಕಾವಲು ಕಾದ ಹಾಗನಿಸುತ್ತದೆ, ‘ಐ ವಿಲ್ ಗಿವ್ ಯೂ ಸಚ್ ಎ ಗಿಫ್ಟ್ ದಿಸ್ ನೈಟ್, ದಟ್ ಯೂ ಕೆನಾಟ್ ಫಾಗ್ರೆಟ್ ಥ್ರೊಔಟ್ ಯುವರ್ ಲೈಫ್’ ಎನ್ನುತ್ತಲೆ ಎಲ್ಲದೆಲ್ಲವನ್ನೂ ದೋಚುವ ಟಿಬೇಟಿಯನ್ ಹುಡುಗಿ ಎಲ್ಲರಿಗೂ ಮರೆಯದ ಕಾಣಿಕೆ ನೀಡುವ ‘ಯಾನ’ ಕಥೆ ಮೋಡಿ ಮಾಡುವಂತಿದೆ.
ಪ್ರತಿ ಊರುಗಳಲ್ಲೂ ಪ್ರತಿಮಾ ರೂಪವಾಗಿ ಸಿಗಬಹುದಾದ,
‘ತಾವು ಕಾಣದ ಕಥೆಗಳಿಗೆ,ಯಾರೂ ಕಂಡಿರದ ಬಣ್ಣಗಳನ್ನು ಬೆರೆಸಿ, ಕಣ್ಣಾರೆ ಕಂಡಿದ್ದ ಕ್ಕಿಂತ ಹೆಚ್ಚು ಸತ್ಯವಾಗಿಸಿ ಮೂಳೆ ಮಾಂಸ ತುಂಬಿ ಹಾರಿಬಿಡುವುದು’
‘ಈ ಊರಲ್ಲಿ ಎಲ್ಲರಿಗೂ ಎಲ್ಲರ ಎಲ್ಲವೂ ಗೊತ್ತು ಆದರೆ ಯಾರಿಗೆ ಯಾವುದೂ ಗೊತ್ತಿಲ್ಲ ‘ ಎಂದು ಹೇಳುವಲ್ಲಿ
ಒಂದೇ ಊದುಕಡ್ಡಿಯಲ್ಲಿ ಊರನ್ನೇ ಸುಡುವಂತ ಪ್ರಚಂಡರ ಜೊತೆಗೆ ಬಡಪಾಯಿ ಮಾಸ್ತರನ ಒಳಗುದಿ ಮತ್ತು ಪ್ರೇಮ ನಿವೇದನೆಯಲ್ಲೇ ಎಡವಿದ ವ್ಯಂಗ್ಯ, ಬಹು ಸುಂದರವಾಗಿ ವರ್ಣಿಸಿದ 36 ಹೆಣ್ಣು ದೆವ್ವಗಳ ಕಪೋಲಕಲ್ಪಿತ ಕಥೆ ನೆರಳು ಓದನ್ನು ರುಚಿಸುವಂತೆ ಮಾಡುತ್ತದೆ.
ಎಲ್ಲರಲ್ಲೂ ಇರುವ ಯಾರೂ ತೋರಿಸಿಕೊಳ್ಳದ ಕಪ್ಪು ಈ ‘ಹೊಗೆ’ ಕಥೆಯದು.
ಮುಖಸ್ತುತಿಯ ಪರಾಕಾಷ್ಠೆಯ ನಡುವೆ ಸಾರ್ವತ್ರಿಕ ಮತ್ತು ತೀರಾ ಖಾಸಗಿ ಅನಿಸುವ ಯಾರದೂ ಅಲ್ಲದ ಎಲ್ಲರ ಭಾವಕೋಶವನ್ನೂ ಬಿಚ್ಚಿಡುವ ಇದು ನಮ್ಮ ಕಣ್ಣುಗಳನ್ನೂ ಮಸುಕಾಗಿಸುತ್ತದೆ. ‘ಧಗಧಗ
ಉರಿಯತೊಡಗಿತದು ಜಗದ ಎಲ್ಲ ಹೆಂಗಸರೆದೆಯ ಒಳಗುದಿಯಂತೆ’ ಕಥೆಯ ಕಿಚ್ಚು ಓದುಗರಿಗೆ ತಾಗದಿರದು.
ಬರೆಹ ದೊಡ್ಡದಲ್ಲ ಓದೂ ದೊಡ್ಡದಲ್ಲ
ಬದುಕೇ ಎಲ್ಲಕ್ಕಿಂತ ದೊಡ್ಡದು ಎಂದು ಬದುಕಿನ ಸಾರವನ್ನೇ ರಸವತ್ತಾಗಿ ಹೇಳುವ ‘ಹುಗ್ಗಿ’ ಕಥೆಯಂತೂ
ಕೊನೆಯಲ್ಲಿ ಎಷ್ಟೋ ಕಾಲದಿಂದ ಚೌಕಾಸಿ ಮಾಡಿ ಉಳಿಸಿಕೊಂಡ ನಗುವನ್ನೆಲ್ಲ ಹೊರಗೆಳೆದು ಹಾಕುತ್ತದೆ ಸಹೃದಯಿ ಓದುಗನೊಬ್ಬ ಮುದಗೊಳ್ಳುತ್ತಾನೆ.
ಕೊನೆಯ ಕಥೆಯಾದ ‘ಜಡ್ಡು’ ಹೆಚ್ಚೇ ಹೇಳುತ್ತದೆ
ಅನಾರೋಗ್ಯದ ಮುಂದೆ ಅಕ್ಷರಶಃ ಮನುಷ್ಯ ಅಸಹಾಯಕ ಅನ್ನುವ ಸತ್ಯ ಕಣ್ಣಿಗೆ ಕಟ್ಟುತ್ತದೆ.
ಅದೆಷ್ಟೋ ಜನ
ಇಂಥ, ಥೇಟ್ ಇಂತದೆ ಸಂಕಟಗಳನ್ನು ಅನುಭಸಿರುತ್ತಾರೆ.
ನಾನಾ ವೈದ್ಯ ಪದ್ಧತಿಗಳ ನಡುವೆ ಗೊಂದಲ ಮತ್ತು
‘ವೈದ್ಯೋ ನಾರಾಯಣೋ ಹರಿ’ ಮರೆತು ಆಧುನಿಕ ವೈದ್ಯ ನಾರಾಯಣರ ದೋಚುಕೋರತನ
ಎಲ್ಲವನ್ನೂ ನೋಡುತ್ತಾ ಮನಸು ತುಂಬಿ ಬರುತ್ತದೆ
ಎಲ್ಲಕ್ಕಿಂತ ಕಥೆಗಾರರು ಬಳಸಿದ ಸಾದಾ ಸೀದಾ ಭಾಷೆ ಮತ್ತದರಲ್ಲೂ ಅಂಗಿಮೇಲಂಗಿಯಂತೆ ಮೊನಚು ಭಾಷೆ,
ಹಿಡಿದಿಡುವ ನಿರೂಪಣೆ,
ಮತ್ತೆ ಮತ್ತೆ ಕಾಡುವ ಸನ್ನಿವೇಶ ಚಿತ್ರಣ,
ಸಹಜವಾಗಿ ನಗು ಹುಟ್ಟಿಸುವ ಪದಪುಂಜಗಳಿಂದ ಪೋಣಿಸಿದ ಭಾಷೆ.. ಇವೆಲ್ಲವುಗಳನ್ನು ಪೋಣಿಸಿ ಹೆಣೆದ ಹಾರದಂತಿದೆ ಈ ಸಂಕಲನ. ಇಲ್ಲಿನ ಎಲ್ಲಾ ಕಥೆಗಳಲ್ಲಿ ಪ್ರಾದೇಶಿಕ ಭಾಷೆಯನ್ನೆ ನಾಯಕನನ್ನಾಗಿ ಕಾಣಿಸಿರುವುದು ಸಾಲಿಯವರ ಹೆಚ್ಚುಗಾರಿಗೆಯೂ ಹೌದು.
ತುಂಬಾ ದಿನಗಳ ಕಾಲ ನೆನಪುಳಿಯುವಂತ ಕಥೆಗಳನ್ನು ಕೊಟ್ಟದ್ದಕ್ಕಾಗಿ ಸಾಲಿಯವರನ್ನು ಅಭಿನಂದಿಸುವೆ. ಒಂದು ಹೊಸ ಅಲೆಯ ಲಹರಿಯಲ್ಲಿ ಮಿಂದೇಳಲು ಒಮ್ಮೆ ಓದಲೇಬೇಕು ಈ ಅಪರೂಪದ ಕಥಾಗುಚ್ಛ.
