ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರಿಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕರಾದ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು, ಸಂಘದ ಕಾನೂನುಬದ್ಧ ಸ್ಥಾನಮಾನ, ಸಂಘಟನಾ ರಚನೆ, ಹಣಕಾಸು ಮೂಲಗಳು ಹಾಗೂ ಸಾರ್ವಜನಿಕ ಉತ್ತರದಾಯಿತ್ವಕ್ಕೆ ಸಂಬಂಧಿಸಿದ ಹಲವು ಪ್ರಶ್ನೆಗಳ ಕುರಿತು ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದಾರೆ.
ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಬಿಡುಗಡೆ ಮಾಡಿರುವ 2025-26ರ ವರದಿಯನ್ನು ಉಲ್ಲೇಖಿಸಿರುವ ಅವರು, ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ಗೆ ಸಾವಿರಾರು ಶಾಖೆಗಳು, ವಾರದ ಬೈಠಕ್ ಮತ್ತು ಮಾಸಿಕ ಮಂಡಲಿಗಳಿದ್ದು, ಲಕ್ಷಾಂತರ ಜನರನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮಗಳು, ಸಮಾವೇಶಗಳು ಹಾಗೂ ಪಥಸಂಚಲನಗಳನ್ನು ಆಯೋಜಿಸುತ್ತಿರುವುದಾಗಿ ಹೇಳಿಕೊಂಡಿದೆ ಎಂದು ಉಲ್ಲೇಖಿಸಿದ್ದಾರೆ.
ಆರ್‌ಎಸ್‌ಎಸ್ ತನ್ನ ಸ್ಥಾಪನೆಯ 100 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿರುವ ಸಚಿವರು, ದೇಶದ ಸಾರ್ವಜನಿಕ ಜೀವನದಲ್ಲಿ ಮಹತ್ವದ ಪ್ರಭಾವ ಮತ್ತು ವ್ಯಾಪಕ ಜಾಲ ಹೊಂದಿರುವ ಯಾವುದೇ ಸಂಸ್ಥೆಯು ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಸಂವಿಧಾನಬದ್ಧತೆಯ ಉನ್ನತ ಮಾನದಂಡಗಳನ್ನು ಪಾಲಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಇಂತಹ ವ್ಯಾಪಕ ಚಟುವಟಿಕೆಗಳನ್ನು ನಡೆಸುವ ಸಂಘಟನೆಯು ತನ್ನ ಕಾನೂನುಬದ್ಧ ಸ್ಥಾನಮಾನ, ಅಧಿಕಾರಿಗಳು, ಆದಾಯದ ಮೂಲಗಳು, ವೆಚ್ಚ ಮತ್ತು ಆಸ್ತಿ ವಿವರಗಳು, ತೆರಿಗೆ ಪಾವತಿ ಸ್ಥಿತಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆದಿರುವ ಅನುಮತಿಗಳ ಕುರಿತು ಮಾಹಿತಿ ನೀಡಬೇಕೆಂಬುದು ಸಹಜ ಮತ್ತು ನ್ಯಾಯಸಮ್ಮತ ನಿರೀಕ್ಷೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.
ಪತ್ರದಲ್ಲಿ ಸಚಿವರು ಈ ಕೆಳಗಿನ ವಿಷಯಗಳ ಕುರಿತು ಮಾಹಿತಿ ಬಹಿರಂಗಪಡಿಸುವಂತೆ ಕೋರಿದ್ದಾರೆ:
- ಸಂಘಟನೆಯ ಕಾನೂನುಬದ್ಧ ಸ್ಥಾನಮಾನ ಮತ್ತು ಸಂಘಟನಾ ರಚನೆ
- ಪದಾಧಿಕಾರಿಗಳು ಮತ್ತು ಅಧಿಕೃತ ಪ್ರತಿನಿಧಿಗಳ ವಿವರಗಳು.
- ದೇಣಿಗೆ, ಕೊಡುಗೆ ಹಾಗೂ ಇತರೆ ಆದಾಯದ ಮೂಲಗಳು.
- ವೆಚ್ಚ ಮತ್ತು ಆಸ್ತಿಗಳ ವಿವರಗಳು.
- ಅನ್ವಯವಾಗುವ ತೆರಿಗೆಗಳನ್ನು ಕಾನೂನುಬದ್ಧವಾಗಿ ಪಾವತಿಸಲಾಗುತ್ತಿದೆಯೇ ಎಂಬ ಮಾಹಿತಿ.
- ಅಧಿಕೃತ ನೋಂದಣಿ ಇಲ್ಲದೆ ಚಟುವಟಿಕೆಗಳನ್ನು ನಡೆಸುತ್ತಿರುವ ಕಾನೂನು ಆಧಾರ.
- ಸಾರ್ವಜನಿಕ ಉತ್ತರದಾಯಿತ್ವವಿಲ್ಲದೆ ಇಷ್ಟೊಂದು ವ್ಯಾಪಕವಾಗಿ ಕಾರ್ಯನಿರ್ವಹಿಸುವ ಹಕ್ಕು ಯಾವ ಕಾನೂನು ಅಥವಾ ಸಂವಿಧಾನಾತ್ಮಕ ಚೌಕಟ್ಟಿನಡಿ ದೊರೆತಿದೆ ಎಂಬ ವಿವರ.
- ಸಾರ್ವಜನಿಕ ಸಭೆಗಳು, ಪಥಸಂಚಲನಗಳು ಹಾಗೂ ಇತರೆ ಸಂಘಟಿತ ಕಾರ್ಯಕ್ರಮಗಳಿಗೆ ಪಡೆದಿರುವ ಅನುಮತಿ ಮತ್ತು ಅನುಸರಣೆ ವ್ಯವಸ್ಥೆಗಳ ಮಾಹಿತಿ.
ಭಾರತದ ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಯಾವುದೇ ಸಂಸ್ಥೆ ಕಾನೂನಿನ ವ್ಯಾಪ್ತಿಯಿಂದ ಹೊರತಾಗಿರಲು ಸಾಧ್ಯವಿಲ್ಲ. ಸಾಮಾನ್ಯ ನಾಗರಿಕರು, ಸ್ವಯಂಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳು ಮತ್ತು ಕಂಪನಿಗಳು ಪಾಲಿಸಬೇಕಾದ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಎಸ್‌ಎಸ್ ತನ್ನ ಶತಮಾನೋತ್ಸವವನ್ನು ಕೇವಲ ಸಂಭ್ರಮಾಚರಣೆಯಾಗಿ ಮಾತ್ರವಲ್ಲದೆ, ಸಂವಿಧಾನಾತ್ಮಕ ಆತ್ಮಪರಿಶೀಲನೆಯ ಅವಕಾಶವಾಗಿಯೂ ಬಳಸಿಕೊಳ್ಳಬೇಕು. ತನ್ನ ಚಟುವಟಿಕೆಗಳು, ಹಣಕಾಸು ವ್ಯವಹಾರಗಳು ಮತ್ತು ಕಾನೂನುಬದ್ಧ ಸ್ಥಿತಿಗತಿಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ಪಾರದರ್ಶಕ ಮತ್ತು ಉತ್ತರದಾಯಿ ಸಂಸ್ಥೆಯಾಗಿ ಮಾದರಿ ಸ್ಥಾಪಿಸಬೇಕು ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.

ಸಂಬಂಧಿತ ವಿಷಯಗಳ ಕುರಿತು ಚರ್ಚೆ ನಡೆಸಲು ಆರ್‌ಎಸ್‌ಎಸ್ ತನ್ನ ಅಧಿಕೃತ ಪ್ರತಿನಿಧಿಗಳನ್ನು ನಿಯೋಜಿಸಿ, ಲಿಖಿತ ಉತ್ತರ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಕೇಳಿದ್ದಾರೆ