ಬೆಂಗಳೂರು, ಡಿಸೆಂಬರ್ 3: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಎಚ್.ಡಿ. ಪ್ರಜ್ವಲ್ ರೇವಣ್ಣ ಅವರಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ.
ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಮತ್ತು ವೆಂಕಟೇಶ್ ನಾಯಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ವಾದ-ಪ್ರತಿವಾದ ಆಲಿಸಿ ತೀರ್ಪು ನೀಡಿದ್ದು, ಪ್ರಜ್ವಲ್ ಪರ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಬಿಡುಗಡೆ ಭಾಗ್ಯ ಎದುರು ನೋಡುತ್ತಿದ್ದ ಪ್ರಜ್ವಲ್ ರೇವಣ್ಣನಿಗೆ ಪರಪ್ಪನ ಅಗ್ರಹಾರ ಜೈಲು ಶಿಕ್ಷೆ ಮುಂದುವರಿಯುವುದು ಖಚಿತವಾಗಿದೆ.
ನ್ಯಾಯಾಲಯವು ಲಭ್ಯವಿರುವ ದಾಖಲೆಗಳು ಮತ್ತು ಅಪರಾಧದ ಗಂಭೀರತೆಯನ್ನು ಪರಿಗಣಿಸಿದೆ. ಪ್ರಜ್ವಲ್ ಅವರನ್ನು ಬಿಡುಗಡೆ ಮಾಡಿದರೆ ಅದು ಇತರರ ಮೇಲೆ ಉಂಟು ಮಾಡುವ ಪರಿಣಾಮವನ್ನು ಪರಿಗಣಿಸಿ, ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಶಿಕ್ಷೆಯನ್ನು ಬದಿಗಿಟ್ಟು ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ವಿಚಾರಣಾಧೀನ ನ್ಯಾಯಾಲಯದಲ್ಲಿ ಈಗಾಗಲೇ ಸಾಕ್ಷ್ಯ ವಿಚಾರಣೆ ನಡೆದಿದ್ದು, ಮತ್ತೆ ಹೈಕೋರ್ಟ್‌ನಲ್ಲಿ ಸಾಕ್ಷಿಯ ವಿಚಾರಣೆ ನಡೆಸಲಾಗದು. ಅಲ್ಲೊಂದು ಇಲ್ಲೊಂದು ಇರುವ ತೀರ್ಪಿನ ಲೋಪಗಳನ್ನು ನೋಡಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಡಿಸೆಂಬರ್ 1 ರಂದು ನಡೆದ ಅರ್ಜಿ ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದ್ದರು. ಪ್ರಜ್ವಲ್ 2024 ರ ಏಪ್ರಿಲ್ 24ರಂದು ದೇಶ ತೊರೆಯುವಾಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ; ಪ್ರಕರಣ ದಾಖಲಾಗಿದ್ದು ಏಪ್ರಿಲ್ 28ರಂದು ಎಂದು ಅವರು ತಿಳಿಸಿದ್ದರು.
“ನನ್ನ ಕಕ್ಷಿದಾರ ಯಾವುದೇ ರೀತಿಯಲ್ಲೂ ದೇಶ ತೊರೆಯುವುದಿಲ್ಲ,” ಎಂದು ವಕೀಲರು ವಾದಿಸಿದ್ದರು. ಅಲ್ಲದೆ, ಐಪಿಸಿ ಸೆಕ್ಷನ್ 201ರ ಅಡಿ ಸಾಕ್ಷ್ಯ ನಾಶಪಡಿಸಿರುವುದಕ್ಕೆ ಪ್ರಾಸಿಕ್ಯೂಟ್ ಮಾಡಲಾಗಿದೆಯೇ? ವಿಚಾರಣಾಧೀನ ನ್ಯಾಯಾಧೀಶರು ಜಿಯೊ ಮ್ಯಾಪ್ ಅನ್ನು ಪರಿಗಣಿಸಿದ್ದಾರೆ, ಆದರೆ ಪ್ರಜ್ವಲ್ ಮಾಜಿ ಕಾರು ಚಾಲಕನ ವಿರುದ್ಧ ದೂರು ನೀಡಿದ್ದರೂ ಅದರ ವಿಚಾರಣೆ ನಡೆದಿಲ್ಲ. ಇದು ಪ್ರತೀಕಾರವಲ್ಲವೇ? ಎಂದು ಅವರು ಪ್ರಶ್ನಿಸಿದ್ದರು.
ಆಗಸ್ಟ್ 2 ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಜೀವಾವಧಿ ಸೆರೆವಾಸ ಶಿಕ್ಷೆಯ ಜೊತೆಗೆ ₹11.60 ಲಕ್ಷ ರೂ. ದಂಡ ವಿಧಿಸಿತ್ತು. ಇದರಲ್ಲಿ ಸಂತ್ರಸ್ತೆಗೆ ₹11.25 ಲಕ್ಷ ಪರಿಹಾರದ ರೂಪದಲ್ಲಿ ನೀಡಲು ಆದೇಶಿಸಿತ್ತು.
ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376(2)(ಎನ್) (ಪದೇ ಪದೇ ಅತ್ಯಾಚಾರ), 376(2)(ಕೆ) (ಪ್ರಭಾವಿ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ), 354(ಬಿ), 354(ಎ), 354(ಸಿ), 201 ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿಯಲ್ಲಿ ವಿವಿಧ ಅವಧಿಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ಪ್ರಜ್ವಲ್ ಅವರು ಈ ತೀರ್ಪನ್ನು ಬದಿಗಿರಿಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
