Home ಜನ-ಗಣ-ಮನ ಕ್ಯಾಂಪಸ್ ಕನ್ನಡಿ ಲೈಫ್ ಲೀಡ್ ಮಾಡೋದು ಅಂದ್ರೆ…

ಲೈಫ್ ಲೀಡ್ ಮಾಡೋದು ಅಂದ್ರೆ…

0

ಬದುಕು ಬರೇ ಹೂವಿನ ಹಾಸಿಗೆಯಲ್ಲ. ಬದುಕೆಂಬ ಮನೆ ನೋವು ನಿಟ್ಟುಸಿರುಗಳಲ್ಲಿ ಒಮ್ಮೆ ಕುಸಿದರೂ ಸಾವರಿಸಿಕೊಂಡು ಎದ್ದು ಆ ಮನೆಯನ್ನು ನಾವೇ ಕಷ್ಟಪಟ್ಟು ಸಿಂಗರಿಸಿಕೊಂಡಾಗ ಬದುಕು ಮತ್ತೆ ಸಂಭ್ರಮಿಸುತ್ತದೆ. ಸಂದರ್ಭ ಏನೇ ಆಗಿರಲಿ, ಆ ಸಂದರ್ಭವನ್ನು ಪರಿಪೂರ್ಣವಾಗಿ ಅನುಭವಿಸಿ ಜೀವಿಸಬೇಕು ಎನ್ನುವುದು ಪತ್ರಿಕೋದ್ಯಮ ಪದವೀಧರೆ ಮಹಾಲಕ್ಷ್ಮಿ ದೇವಾಡಿಗ ಅವರ ಭರವಸೆಯ ನುಡಿಗಳು

ಒಬ್ಬನಿಗೆ/ಳಿಗೆ ಆತ್ಮ ವಿಶ್ವಾಸ ಅನ್ನೋದೆ ಅತಿದೊಡ್ಡ ಅಸ್ತ್ರ. ಯಾವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಹೇಗೆ ಉಪಯೋಗ ಮಾಡ್ತೇವೆ ಅನ್ನೋದು ನಮ್ಮ ಬುದ್ಧಿಶಕ್ತಿಯ ಮೇಲಿದೆ. ಸೋಲು ಸರ್ವೇ ಸಾಮಾನ್ಯವಾದ ಎರಡಕ್ಷರದ ಪದ, ಆದ್ರೆ ಅದನ್ನ ನಾವು ಯಾವ ರೂಪದಲ್ಲಿ ಸ್ವೀಕರಿಸ್ತೇವೋ ಅನ್ನೋದ್ರ ಮೇಲೆ ಅದರ ಪರಿಣಾಮ ನಿಂತಿದೆ.

ವೈಜ್ಞಾನಿಕವಾಗಿ ಹೇಳೋದಾದ್ರೆ ಒಂದು ಮಗು ಗರ್ಭ ಸೇರೋ ಮೊದ್ಲೆ ಕನಿಷ್ಠ ಮೂರು ಮಿಲಿಯನ್ ವೀರ್ಯಾಣುಗಳನ್ನು ಹಿಂದೆ ಹಾಕಿ ಗರ್ಭದಲ್ಲಿ ತನ್ನ ರೂಪ ಪಡೆದುಕೊಂಡು ಭೂಮಿಗೆ ಕಾಲಿಡುತ್ತೆ. ಹುಟ್ಟೋ ಮುಂಚೆನೇ ಸೋಲನ್ನು ಗೆದ್ದು ಬಂದ ಮಾನವನಿಗೆ ಹುಟ್ಟಿದ ನಂತರ ಅದನ್ನು ಅರಗಿಸಿಕೊಳ್ಳುವ ಶಕ್ತಿ ಬಹಳ ಕಡಿಮೆಯಾಗುತ್ತೆ. ಯಾಕೆ ಹೀಗಾಯ್ತು ಎಂದು ನಮಗೆ ನಾವೇ ಯಾವತ್ತಾದರೂ ಪ್ರಶ್ನೆ ಮಾಡಿಕೊಂಡಿದ್ದೇವಾ? ಇಲ್ಲ.

ಹುಟ್ಟಿನಿಂದ ಬೆಳೆದು ಒಂದು ಮಟ್ಟ ತಲುಪುವ ವರೆಗೂ ಮಾನವನಿಗೆ ಎದುರಾಗುವ ಕಷ್ಟ-ನಷ್ಟಗಳ ಲೆಕ್ಕಚಾರ ಮಾಡೋದು ಸಾಮಾನ್ಯ ಅಲ್ಲ. ಆದ್ರೆ ಅದನ್ನ ಗೆದ್ದು ಕೆಟ್ಟ ಸಮಯವನ್ನು ಹಿಂದಿಟ್ಟು ಮುಂದೆ ಬರುವವರ ಬದುಕು, ಭವಿಷ್ಯದಲ್ಲಿ ಇನ್ನೋರ್ವರಿಗೆ ಆದರ್ಶ ಆಗುವುದಂತೂ ಸತ್ಯ.

ಹುಟ್ಟಿನಿಂದ ಬೆಳೆದು ಒಂದು ಮಟ್ಟ ತಲುಪುವ ವರೆಗೂ ಮಾನವನಿಗೆ ಎದುರಾಗುವ ಕಷ್ಟ-ನಷ್ಟಗಳ ಲೆಕ್ಕಚಾರ ಮಾಡೋದು ಸಾಮಾನ್ಯ ಅಲ್ಲ. ಆದ್ರೆ ಅದನ್ನ ಗೆದ್ದು ಕೆಟ್ಟ ಸಮಯವನ್ನು ಹಿಂದಿಟ್ಟು ಮುಂದೆ ಬರುವವರ ಬದುಕು, ಭವಿಷ್ಯದಲ್ಲಿ ಇನ್ನೋರ್ವರಿಗೆ ಆದರ್ಶ ಆಗುವುದಂತೂ ಸತ್ಯ.

ಲೈಫ್‌ ನಲ್ಲಿ ಯಾವಾಗ ಏನ್ ಆಗ್ತದೆ, ಅಂತ ಹೇಳೋಕ್ಕೆ ಆಗದೆ ಇರ್ಬಹುದು ಆದ್ರೆ ಇಂತದ್ದು ನಡಿಯಬಹುದೇನೋ!!  ಅಂತ ಕೆಲವೊಮ್ಮೆ ಅಂದಾಜು ಮಾಡಬಹುದು. ಒಮ್ಮೊಮ್ಮೆ ನಾವು ಅಂದುಕೊಂಡ ಹಾಗೆ ಆಗ್ತದೆ. ಓಮ್ಮೊಮ್ಮೆ ಆಗೋದಿಲ್ಲ. ಏನೇ ಆದ್ರೂ ಪರ್ವಾಗಿಲ್ಲ ಮುಂದೆ ನನ್ನ ಬದುಕು ಉತ್ತಮವಾಗಿ ಇರ್ತದೆ ನಾನು ಉತ್ತಮವಾಗಿ ರೂಪಿಸಿಕೊಳ್ತೇನೆ ಅನ್ನೋ ಛಲ ಒಂದಿದ್ರೆ ಸಾಕು ನಮ್ಮ ಜೀವನದಲ್ಲಿ ಅದೇನೇ ಆದ್ರೂ ನಿಭಾಯಿಸಲು ಆಗ್ತದೆ.

ಇತ್ತೀಚಿನ ದಿನಗಳಲ್ಲಿ ನಾವು ಕೂಡ ಹಲವು ಕಡೆಯಿಂದ ಕೇಳ್ತಾ, ನೋಡ್ತಾ ಬರ್ತಾ ಇದ್ದೇವೆ. ಜೀವನದಲ್ಲಿ ಅತಿಯಾಗಿ ಸೋಲುಂಡಾಗಲೋ ಅಥವಾ ಮುಖ್ಯವಾದ ವ್ಯಕ್ತಿಯನ್ನು ಕಳೆದುಕೊಂಡಾಗ್ಲೋ ಮನುಷ್ಯರು ಸಾವನ್ನು ಅತಿಯಾಗಿ ಪ್ರೀತಿಸಿ ಅದರ ಮಡಿಲು ಸೇರಲು ಇಚ್ಛಿಸುತ್ತಾರೆ. ಬದುಕಿನಲ್ಲಿ ಹೀಗ್ ಇರ್ಬೇಕು, ಹೀಗ್ ಇರಬಾರ್ದು ಅಂತ ಒಬ್ಬರಿಗೆ ಹೇಳೋ ಹಕ್ಕು ನಮ್ಮಗಿಲ್ಲವಾದ್ರು ಒಂದೊಳ್ಳೆ ಹಿತೈಷಿಯಾಗಿ ಕಿವಿಮಾತು ಹೇಳಬಹುದಷ್ಟೆ. 

ನಿಮ್ಮ ಹಿತೈಷಿಯಾಗಿ ನಾನು ಹೇಳೋದಿಷ್ಟೆ  ಲೈಫ್ ಅಂತ ಇದ್ಮೇಲೆ ಗೆಲುವು ಸೋಲು ಸಾಮಾನ್ಯ. ನಗು ಅಳು ಸಾಧಾರಣ. ಹುಟ್ಟು ಸಾವು ಲೋಕ ನಿಯಮ, ಇನ್ನೂ ಇದರ ಮಧ್ಯೆ ಇರೋ ನಮ್ಮ ಆಯಸ್ಸು , ಸ್ನೇಹ, ಸಂಬಂಧಗಳು, ಪ್ರೀತಿ, ದ್ವೇಷ ಇತ್ಯಾದಿಗಳೆಲ್ಲ ನಿಮಿತ್ತ ಮಾತ್ರ. ಈ ಲೋಕದಲ್ಲಿ ಎಲ್ಲವೂ ಶಾಶ್ವತವಲ್ಲ ನೆನಪು ಕೂಡ ಒಂದು ಲೆಕ್ಕದಲ್ಲಿ ಮರೀಚಿಕೆಯೇ ಸರಿ ಈ ಯುಗದಲ್ಲಿ. 

ಎಲ್ಲ ಆದಿಗೂ ಒಂದು ಅಂತ್ಯ ಇರ್ತದೆ. ಲೈಫ್ ಅಲ್ಲಿ ಸೋತ್ರು ಗೆದ್ರು ಆ ಕ್ಷಣನ, ಆ ಸಮಯವನ್ನ ಜೀವಿಸಿ. ಪರಿಸ್ಥಿತಿ ಎಂತಹುದೇ ಆಗಿರಬಹುದು ಅದನ್ನ ಯಾವ ತರ  ತೆಗೆದುಕೊಂಡು ನಿಭಾಯಿಸಿ ನಮ್ಮ ಲೈಫ್ ನ ಲೀಡ್ ಮಾಡ್ತೇವೆ, ಅನ್ನೋದು ನಮ್ಮ ಕೈಲಿ ಇದೆ. ನೋವು ಅನ್ನೋದು ಹೊಸತಲ್ಲ. ಸೋಲು ಯಾವುದರ ಕೊನೆಯೂ ಅಲ್ಲ. ಹೀಗಿರುವಾಗ ನಮ್ಮ ಉಸಿರನ್ನು ಬಲವಂತವಾಗಿ ಅಂತ್ಯಗೊಳಿಸೋ ಹುಚ್ಚು ಪ್ರಯತ್ನ ಮಾಡೋದ್ರಿಂದ ನಮ್ಮ ಪಾಲಿಗೆ ಗೆಲುವು ಅನ್ನೋದು ಓಡಿ ಬಂದು ಅಪ್ಪಿಕೊಳ್ಳಲ್ಲ  ಅನ್ನೋದು ನೆನಪಿರಲಿ.

ಸಂದರ್ಭ ಏನೇ ಆಗಿರಲಿ ಆ ಸಂದರ್ಭವನ್ನು ಪರಿಪೂರ್ಣವಾಗಿ ಅನುಭವಿಸಿ ಜೀವಿಸಬೇಕು. ಪ್ರತಿದಿನ ಪ್ರತಿಕ್ಷಣ ಏನಾದರೂ ಹೊಸ ಪರೀಕ್ಷೆ ನಮಗೆಂದು ಕಾದಿರುತ್ತದೆ

ಜೀವನ  ಅಂದ್ರೆ ಒಂದು ಹಬ್ಬ ಅದನ್ನು ಆಚರಿಸೋಣ. ಬದುಕನ್ನು ನಾವು ದಿನಾಲೂ ಚಲಿಸುವ ದಾರಿ ಅಂತ ನೋಡೋಣ. ದಿನ  ಬೆಳಿಗ್ಗೆ ಎದ್ದು ಹೊರಗೆ ಹೋಗಿ ರಾತ್ರಿ ಮನೆ ಬರುವವರೆಗೂ ನಾವು ಭೇಟಿಯಾಗುವ ಜನರು, ಜಾಗದಿಂದ ಹಿಡಿದು ಹಾದಿಯಲ್ಲಿ ಸಿಗುವ ತಿರುವುಗಳು, ಅಡ್ಡಾದಿಡ್ಡಿ ರಸ್ತೆಗಳು. ಹೊಂಡ-ಕೊಂಡಗಳು ಎಲ್ಲದರಲ್ಲೂ ನಮ್ಮ ಬದುಕನ್ನು ಒಮ್ಮೆ ಚಿತ್ರಿಸಿ ಕೊಳ್ಳೋಣ. ನಗು-ಅಳು, ಏಳುಬೀಳು, ಸಾವು-ನೋವು, ಬಂಧು-ಬಾಂಧವರು ಸ್ನೇಹ ಸಂಬಂಧ ಎಲ್ಲವೂ ನಾವು ನಡೆಯುವ ದಾರಿಯಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ನಮ್ಮ ಸುತ್ತಲೂ ಏನು ನಡೆದಿದೆ ಏನು ನಡೆಯುತ್ತಿದೆ ಎಲ್ಲವೂ ನಾವು ನೋಡುವ ದೃಷ್ಟಿಕೋನದ ಮೇಲೆ ಬಲವಾಗಿ ನಿಂತಿದೆ..

ಜಗತ್ತಿನಲ್ಲಿ ಒಳ್ಳೆಯದು-ಕೆಟ್ಟದು ಎರಡೂ ಇದೆ. ಬದುಕಿಗೆ ಇವೆರಡೂ ಅಗತ್ಯ. ಕೆಟ್ಟದರ ಮೇಲೆ ಹೆಚ್ಚಿನ ಒತ್ತು ಕೊಡುವ ಬದಲು ಒಳ್ಳೆಯದನ್ನು ಹೆಚ್ಚು ನೋಡೋಣ ಒಳ್ಳೆಯದನ್ನು ಹಂಚೋಣ. ಇತರರನ್ನು ಉತ್ತಮರಾಗಿಸುವ ನಾವು ಮೊದಲು ಉತ್ತಮ ರಾಗೋಣ. ನಮ್ಮ ನಗು ನಮ್ಮ ಬಾಳು ಮೊದಲು ನಮಗೆ ತೃಪ್ತಿಯನ್ನು ನೀಡುವಂತಾಗಲಿ. ಉಳಿದವರು ಅವರ ಬದುಕನ್ನು ಅವರಾಗಿಯೇ ರೂಪಿಸಿಕೊಂಡು ಬದುಕುತ್ತಾರೆ. ಸಮಯಕ್ಕೆ ತಕ್ಕಂತೆ ನಾವು ಬದಲಾಗಬಹುದು, ಆದರೆ ನಮ್ಮ ಭೂತಕಾಲ ಎಂದು ಬದಲಾಗದು, ಉಳಿದಂತೆ ನಮ್ಮ ಭವಿಷ್ಯ ವರ್ತಮಾನದಲ್ಲಿ ನಾವು ನಡೆದುಕೊಳ್ಳುವ ರೀತಿ ನೀತಿಯಲ್ಲಿ ನಿಂತಿದೆ.

ಸಂದರ್ಭ ಏನೇ ಆಗಿರಲಿ ಆ ಸಂದರ್ಭವನ್ನು ಪರಿಪೂರ್ಣವಾಗಿ ಅನುಭವಿಸಿ ಜೀವಿಸಬೇಕು. ಪ್ರತಿದಿನ ಪ್ರತಿಕ್ಷಣ ಏನಾದರೂ ಹೊಸ ಪರೀಕ್ಷೆ ನಮಗೆಂದು ಕಾದಿರುತ್ತದೆ. ಪಾಸಾದರೂ ಫೇಲಾದರೂ ಪ್ರಯತ್ನ ಮಾತ್ರ ಬಿಡಬಾರದು. ಜೀವನದಲ್ಲಿ ಏನೇ ಆಗಲಿ, ಏನೇ ಹೋಗಲಿ ಆಯಸ್ಸು ಇರುವವರೆಗೂ ಉಸಿರು ನಿಲ್ಲುವವರೆಗೂ ಸಮಯಕ್ಕೆ ಜೊತೆ ಕೊಡಲೇಬೇಕು.

ಮಹಾಲಕ್ಷ್ಮಿ ದೇವಾಡಿಗ

ಪತ್ರಿಕೋದ್ಯಮ ಪದವೀಧರೆ, ಉಡುಪಿ

You cannot copy content of this page

Exit mobile version