Wednesday, November 19, 2025

ಸತ್ಯ | ನ್ಯಾಯ |ಧರ್ಮ

ನವೆಂಬರ್ 28ಕ್ಕೆ ಅಂಗನವಾಡಿಗಳಲ್ಲಿ ಎಲ್‌ಕೆಜಿ ತರಗತಿಗಳು ಶುರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ತುಮಕೂರು: ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆ (ICDS) 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕವಾದ ಮೂರು ಮಹತ್ವದ ಯೋಜನೆಗಳಿಗೆ ನವೆಂಬರ್ 28 ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಈ ಯೋಜನೆಗಳಲ್ಲಿ 5,000 ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಸೇರಿದೆ.

ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಐಸಿಡಿಎಸ್ ಸುವರ್ಣ ಮಹೋತ್ಸವ, ‘ಅಕ್ಕಪಡೆ’ ಲೋಕಾರ್ಪಣೆ ಹಾಗೂ ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತ ರಾಜ್ಯಮಟ್ಟದ ಸಮಾವೇಶದ ಪೂರ್ವಭಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಈ ಮೂರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದರು.

ರಾಜ್ಯದಲ್ಲಿನ ಒಟ್ಟು ಅಂಗನವಾಡಿ ಕಾರ್ಯಕರ್ತೆಯರ ಪೈಕಿ 17 ಸಾವಿರ ಕಾರ್ಯಕರ್ತೆಯರು ಪದವೀಧರರು ಮತ್ತು 4 ಸಾವಿರ ಕಾರ್ಯಕರ್ತೆಯರು ಸ್ನಾತಕೋತ್ತರ ಪದವೀಧರರು ಎಂದು ಗುರುತಿಸಲಾಗಿದೆ. ಇವರನ್ನು ಬಳಸಿಕೊಂಡು, ಮೊದಲ ಹಂತದಲ್ಲಿ 5 ಸಾವಿರ ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಯೋಜನೆಯನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

1.27 ಕೋಟಿ ಮಹಿಳೆಯರಿಂದ ಬ್ಯಾಂಕ್‌ನ ಸದಸ್ಯತ್ವದ ನಿರೀಕ್ಷೆ

‘ಗೃಹಲಕ್ಷ್ಮಿ’ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ಇದೇ ನವೆಂಬರ್ 28 ರಂದು ರಾಜ್ಯಾದ್ಯಂತ ಗೃಹಲಕ್ಷ್ಮಿ ವಿವಿಧೋದ್ದೇಶ ಸ್ವಸಹಾಯ ಸಹಕಾರ ಬ್ಯಾಂಕ್‌ ಅನ್ನು ಆರಂಭಿಸಲಾಗುತ್ತಿದೆ ಎಂದು ಹೆಬ್ಬಾಳ್ಕರ್ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಹಣದಿಂದ ಮಹಿಳೆಯರು ₹1,000 ಅನ್ನು ನೇರವಾಗಿ ಬ್ಯಾಂಕ್‌ಗೆ ವರ್ಗಾಯಿಸುವ ಮೂಲಕ ಶೇರು (ಷೇರುದಾರರಾಗಿ) ಪಡೆದುಕೊಳ್ಳಬೇಕು.

ಪ್ರತಿ ತಿಂಗಳು ಕನಿಷ್ಠ ₹200 ಉಳಿತಾಯ ಮಾಡಿ, ಕನಿಷ್ಠ 6 ತಿಂಗಳು ಉಳಿತಾಯ ಮಾಡಿದ ಸದಸ್ಯರಿಗೆ ₹3,000 ದಿಂದ ₹6,00,000 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು.

ಕನಿಷ್ಠ 1.27 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಬ್ಯಾಂಕ್‌ನ ಸದಸ್ಯತ್ವವನ್ನು ಪಡೆಯುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page