ಬೆಂಗಳೂರು : ಲೋಕಾಯುಕ್ತ ಅಧಿಕಾರಿಗಳು ಇವತ್ತು ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ (Bengaluru) ಭ್ರಷ್ಟ ಅಧಿಕಾರಿಗಳ ಬೇಟೆಗಿಳಿದಿದ್ದರು (Lokayukta Raid). ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬೆಂಗಳೂರಿನ 6 ಕಡೆ ಮತ್ತು ಮೈಸೂರಿನ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಜನಾರ್ದನ್ಗೆ ಸೇರಿದ ಆರು ಸ್ಥಳಗಳಲ್ಲಿ ದಾಳಿ ಮಾಡಿದ್ದರು. ಲೋಕಾಯುಕ್ತ ದಾಳಿ ವೇಳೆ ಜನಾರ್ದನ್ ಸ್ನೇಹಿತನ ಮನೆಯಲ್ಲಿ ಕಾಸಿನ ಬೆಟ್ಟವೇ ಪತ್ತೆಯಾಗಿದೆ. ಬರೋಬ್ಬರಿ 1 ಕೋಟಿ 70 ಲಕ್ಷ ಗರಿ ಗರಿ ನೋಟು ಸಿಕ್ಕಿದೆ. ಕೋಟಿ ಕೋಟಿ ಹಣ, ಬಂಗಾರ, 6 ಮನೆ, 2 ಶಾಲೆ ಪತ್ತೆ!
ಬೆಂಗಳೂರಿನ ಪದ್ಮನಾಭ ನಗರದಲ್ಲಿರುವ ಪುರುಷೋತ್ತಮ್ ಅವರ ನಾಲ್ಕು ಅಂತಸ್ತಿನ ಭವ್ಯ ಬಂಗಲೆಗೆ ನುಗ್ಗಿದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಸಮಯದಲ್ಲಿ ಪುರುಷೋತ್ತಮ್ ಮನೆಯಲ್ಲೇ ಇದ್ದು, ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿದ್ದಾರೆ. ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆಯೂ ದಾಳಿ ಮುಂದುವರಿದಿದೆ.
ಈ ದಾಳಿಯ ಅತ್ಯಂತ ಆಘಾತಕಾರಿ ಅಂಶವೆಂದರೆ ಪುರುಷೋತ್ತಮ್ ಅವರು ಮೈಸೂರಿನಲ್ಲಿ ಎರಡು ಶಾಲೆಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಸುಮಾರು ಐದಾರು ಸ್ವಂತ ಮನೆಗಳನ್ನು ನಿರ್ಮಿಸಿರುವುದು ಪತ್ತೆಯಾಗಿದೆ.
‘ಇದು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣವಾಗಿದ್ದು, ಮೈಸೂರಿನಲ್ಲಿ 5 ಕಡೆ ಮತ್ತು ಬೆಂಗಳೂರಿನಲ್ಲಿ 6 ಕಡೆ ಪರಿಶೀಲನೆ ನಡೆಸುತ್ತಿದ್ದೇವೆ. ಅವರ ಹೆಸರಿನಲ್ಲಿ ಎರಡು ಶಾಲೆಗಳು, ಹಲವು ಸೈಟ್ ದಾಖಲೆಗಳು, ಮನೆಗಳು ಇರುವುದು ದೃಢಪಟ್ಟಿದೆ’ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ.
7 ಎಕರೆ ತೋಟ ಅಪಾರ ಚಿನ್ನಾಭರಣ
ಶಿವಮೊಗ್ಗದಲ್ಲೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಜನ್ಮ ಜಾಲಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿರೋ ಆರೋಪದಲ್ಲಿ ದಾವಣಗೆರೆಯ ಬೆಸ್ಕಾಂ ಎಇಇ ಅರ್ಜುನ್ ಆರ್.ಹೆಚ್ಗೆ ಸೇರಿರೋ ಶಿವಮೊಗ್ಗದಲ್ಲಿರುವ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಅರ್ಜುನ್ ವಾಸವಿದ್ದ ದಾವಣಗೆರೆ ನಗರದ ನಿಟ್ಟುವಳ್ಳಿನಲ್ಲಿ ರೂಮ್, ಕಚೇರಿ ಹಾಗೂ ಶಿವಮೊಗ್ಗದ ಮನೆಯ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಮನೆಯಲ್ಲಿ ಆಸ್ತಿ ಪತ್ರ ಹಾಗೂ ಚಿನ್ನ ಬೆಳ್ಳಿ ಪತ್ತೆಯಾಗಿದ್ದು, ಇನ್ನಷ್ಟು ಮಹತ್ವದ ದಾಖಲೆಗಳನ್ನ ಪತ್ತೆಹಚ್ಚಲು ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
ಈತನಿಗೆ ಸೇರಿರುವ 7 ಎಕರೆ ತೋಟ ಪತ್ತೆ ಹಚ್ಚಿ ಅಲ್ಲಿನ ಫಾರ್ಮ್ ಹೌಸ್‌ನಲ್ಲಿ ಪರಿಶೀಲಿಸಿದ್ದಾರೆ. ಶಿವಮೊಗ್ಗದ ವಿಜಯನಗರದಲ್ಲಿರುವ ಮನೆಯಲ್ಲಿ ಚಿನ್ನಾಭರಣ, ದುಬಾರಿ ಬೆಲೆ ಬಾಳುವ ವಾಚ್, ಬಂಗಾರದ ಗಟ್ಟಿ ಸೇರಿದಂತೆ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಸರ್ವೆ ಇಲಾಖೆಯ ಸೂಪರ್ವೈಸರ್ಗೆ ಶಾಕ್
ಧಾರವಾಡದಲ್ಲೂ ಲೋಕಾಯುಕ್ತ ಅಧಿಕಾರಿಗಳು ಬೇಟೆಯಾಡಿದ್ದಾರೆ. ಸರ್ವೆ ಇಲಾಖೆಯ ಸೂಪರ್‌ವೈಸರ್ ಸೋಮಲಿಂಗಪ್ಪ ಮನೆ ಮತ್ತು ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಒಟ್ಟು ನಾಲ್ಕು ಕಡೆ ದಾಳಿ ಮಾಡಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ವಶಕ್ಕೆ ಪಡೆದಿದ್ದಾರೆ.
