ಬೆಂಗಳೂರು : ಗುತ್ತಿಗೆದಾರರೊಬ್ಬರಿಗೆ ಕಿರುಕುಳ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಇಬ್ಬರು ಪೊಲೀಸ್ ಸೇರಿದಂತೆ ಐವರನ್ನು ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕುಮಾರ್ ಪರಾರಿಯಾಗಿದ್ದಾನೆ. ಈ ಕುಮಾರ್ ಗೆ ಕಳೆದ ಸಾಲಿನ ಮುಖ್ಯಮಂತ್ರಿ ಪದಕ ಘೋಷಣೆಯಾಗಿತ್ತು.
– ಅನ್ನಪೂರ್ಣೇಶ್ವರಿ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಕಿರುಕುಳ ಆರೋಪ
– 4 ಕೋಟಿ ಮೌಲ್ಯದ ಮನೆಯನ್ನ 60 ಲಕ್ಷಕ್ಕೆ ಹೇಳಿದವರಿಗೆ ಕೊಡುವಂತೆ ಕಿರುಕುಳ
– ಡೀಲ್ ಮಾಡುತ್ತಿದ್ದ ಇಬ್ಬರು ಪೊಲೀಸ್ ಪೇದೆಗಳ ಮೇಲೆ ಲೋಕಾ ದಾಳಿ
ಚನ್ನೇಗೌಡ ಎಂಬ ಗುತ್ತಿಗೆದಾರರ ಬಳಿ ಮನೆಯನ್ನು ಕೊಳ್ಳಲು ಮುಂದಾಗಿದ್ದ ಕುಮಾರ್ ಅವರೊಡನೆ ಕರಾರು ಮಾಡಿಕೊಂಡಿದ್ದ. ಆದರೆ 4 ಕೋಟಿ ರೂ. ಮೌಲ್ಯದ ಮನೆಯನ್ನು ಕಡಿಮೆ ಹಣಕ್ಕೆ ನೋಂದಣಿ ಮಾಡಿಸಿಕೊಡುವಂತೆ ಪೀಡಿಸಿ ತನ್ನ ಸಿಬ್ಬಂದಿಗಳೊಂದಿಗೆ ಬೆದರಿಕೆ ಒಡ್ಡಿದ್ದ. ಇದರಿಂದ ರೋಸಿಹೋಗಿದ್ದ ಚನ್ನೇಗೌಡ ಲೋಕಾಯುಕ್ತ ಬಳಿ ದೂರು ದಾಖಲಿಸಿದ್ದರು.
ನಾಗರಬಾವಿಯ ಬಳಿಯಿರುವ ಖಾಸಗಿ ಹೋಟೆಲ್ ಒಂದರಲ್ಲಿ ಇವರೆಲ್ಲಾ ಕಲೆತಿರುವಾಗ ಧಿಡೀರ್ ದಾಳಿ ನಡೆಸಿದ ಲೋಕಾಯುಕ್ತ ಐವರನ್ನು ಬಂಧಿಸಿ ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಕುಮಾರ್ ಗೆ ಪತ್ತೆ ಕಾರ್ಯ ಆರಂಭವಾಗಿದೆ.