ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಹಲವೆಡೆ ಲೋಕಾಯುಕ್ತ ದಾಳಿ

ಇಂದು ಸೂರ್ಯ ಸರಿಯಾಗಿ ಕಣ್ಣು ಬಿಡುವ ಮೊದಲೇ ಲೋಕಾಯುಕ್ತ ಅಧಿಕಾರಿಗಳು ಹಲವು ಭ್ರಷ್ಟ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

ಕಲಬುರಗಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ವಿವಿಧ ಕಡೆ ಅಧಿಕಾರಿಗಳ ಮನೆಗಳ ದಿಢೀರ್ ಲೋಕಾಯುಕ್ತ ದಾಳಿ ನಡೆಸಿದ್ದಾರೆ.

ಕಲಬುರಗಿ:ಆರ್ ಡಿಪಿಆರ್ ಇಲಾಖೆಯ ಇಇ ಹಾಗು ಪಿಡಿಓ ಮನೆ‌ ಮೇಲೆ ದಾಳಿ: ದಾಖಲೆ ಪರಿಶೀಲನೆ:

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ ಬೆಂಗಳೂರಿನ ಮನೆ ಹಾಗೂ ಕಲಬುರಗಿ ಮನೆ ಕಚೇರಿ ಹಾಗೂ ಸಣ್ಣೂರು ಪಿಡಿಓ ರಾಮಚಂದ್ರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ.

ಇನ್ನೂ‌ ನಾಲ್ಕು ದಿನಗಳಲ್ಲಿ ‌ನಿವೃತಿಯಾಗಲಿದ್ದ ಮಲ್ಲಿಕಾರ್ಜುನ ಅಲಿಪುರ ಮನೆ ಮೇಲೆ ದಾಳಿ ಮಾಡಿದ್ದು ಅಕ್ರಮ ಸಂಪಾದನೆ ಸೇರಿದಂತೆ ಇತರ ಆರೋಪಗಳ ಅಡಿಯಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಅದಲ್ಲದೆ ಸಣ್ಣೂರು ಪಿಡಿಓ ರಾಮಚಂದ್ರ ಅವರಿಗೆ ಸೇರಿದ್ದು ಎನ್ನಲಾದ ಸೇಡಂ ರಸ್ತೆಯ ಮಾನಸ ರೆಸಿಡೆನ್ಸಿ ಮೇಲೆ ದಾಳಿ ಮಾಡಲಾಗಿದೆ ಅದೇ ರೀತಿಯಾಗಿ ವಿಜಯಪುರ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಮನೆ ಮೇಲೆ ದಾಳಿ ಮಾಡಲಾಗಿದೆ.

ಎರಡು ದಾಳಿಯಲ್ಲಿ ನಾಲ್ಕು ಪೊಲೀಸ್ ಅಧಿಕಾರಿ ತಂಡಗಳು ಪ್ರತ್ಯೇಕವಾಗಿ ದಾಖಲೆ ಪರಿಶೀಲನೆ ಮಾಡುತ್ತಿದ್ದು ಉಭಯ ಅಧಿಕಾರಿಗಳ ಕುಟುಂಬದ ಸದಸ್ಯರು ಹಾಗೂ ಅಧಿಕಾರಿಗಳು ಲೋಕಾಯುಕ್ತರಿಗೆ ಸಹಕಾರ ನೀಡುತ್ತಿದ್ದಾರೆಂದು ಪ್ರಾರ್ಥಮಿಕ ವರದಿಗಳು ತಿಳಿಸಿವೆ.

ಕಲಬುರಗಿ ‌ಲೋಕಾ ಎಸ್ಪಿ ಬಿ.ಕೆ.ಉಮೇಶ್,ಡಿವೈಎಸ್ ಪಿ ಗೀತಾ ಬೇನಾಳ ನೈತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಶಿವಮೊಗ್ಗ: ಶಿವಮೊಗ್ಗ, ಶಿಕಾರಿಪುರ ಹಾಗೂ ಹೊಸನಗರದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಸಾವಯವ ಕೃಷಿ ವಿಭಾಗದ ಸಹ ಸಂಶೋಧನಾ ನಿರ್ದೇಶಕರು, ಸಹ ಸಂಶೋಧನಾ ನಿರ್ದೇಶಕ ಡಾ ಎಸ್.ಪ್ರದೀಪ್ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಿವಮೊಗ್ಗದ ಪ್ರಿಯಾಂಕ ಲೇಔಟ್ ನಲ್ಲಿರುವ ಡಾ. ಪ್ರದೀಪ್ ಮನೆ ಹಾಗೂ ಶಿಕಾರಿಪುರ ತಾಲೂಕಿನ ಭದ್ರಾಪುರದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹೊಸನಗರದಲ್ಲೂ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತ ಎಸ್ಪಿ ಎಂ.ಹೆಚ್.ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಎರಡು ತಂಡಗಳು ಲತಾಮಣಿ ನಿವಾಸದಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು