Saturday, June 15, 2024

ಸತ್ಯ | ನ್ಯಾಯ |ಧರ್ಮ

‘ಕ್ರಾಂತಿ ಚಿರಾಯುವಾಗಲಿ’ ಘೋಷಣೆಯ ಕುರಿತು

(ಮಾಡರ್ನ್ ರಿವ್ಯೂ ಪತ್ರಿಕೆಯಲ್ಲಿ ರಮಾನಂದ ಚಟರ್ಜಿ ಅವರು ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಸಂಪಾದಕೀಯಕ್ಕೆ ‘ಸಂಪಾದಕರಿಗೊಂದು ಪತ್ರ’ದ ಮೂಲಕ ಪ್ರತಿಕ್ರಿಯೆ ನೀಡಿದ ಭಗತ್ ಸಿಂಗ್ ಆ ಘೋಷಣೆಯ ಅರ್ಥ, ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಈ ಪತ್ರವನ್ನು 1929ರ ಡಿಸೆಂಬರ್ 24ರಂದು ‘ದ ಟೆಲಿಗ್ರಾಫ್’ ಪತ್ರಿಕೆ ಪ್ರಕಟಿಸಿತು.)

ಸಂಪಾದಕರು,

ಮಾಡರ್ನ್ ರಿವ್ಯೂ, ತಮ್ಮ ಮಾನ್ಯ ಪತ್ರಿಕೆಯ ಡಿಸೆಂಬರ್ (1929) ಸಂಚಿಕೆಯಲ್ಲಿ ‘ಕ್ರಾಂತಿ ಚಿರಾಯುವಾಗಲಿ’ ಎಂಬ ಶೀರ್ಷಿಕೆಯಡಿ ತಾವು ಟಿಪ್ಪಣಿಯೊಂದನ್ನು ಬರೆದಿದ್ದೀರಿ. ಅಲ್ಲದೆ ಆ ಪದಪುಂಜದ ಅರ್ಥಹೀನತೆಯ ಬಗ್ಗೆಯೂ ಅದರಲ್ಲಿ ಬೊಟ್ಟು ಮಾಡಿದ್ದೀರಿ. ಎಚ್ಚೆತ್ತ ಭಾರತೀಯರೆಲ್ಲರ ಅಪಾರ ಮೆಚ್ಚುಗೆಗೆ ಪಾತ್ರರಾಗಿರುವ ತಮ್ಮಂತಹ ಒಬ್ಬ ಹಿರಿಯ, ಅನುಭವಿ, ಶ್ರೇಷ್ಠ ಮತ್ತು ಖ್ಯಾತ ಪತ್ರಕರ್ತನ ಹೇಳಿಕೆಯನ್ನು ಅಲ್ಲಗಳೆಯಲು ಅಥವಾ ವಿರೋಧಿಸಲು ಯತ್ನಿಸುವುದು ನಮ್ಮ ಪಾಲಿನ ಅಧಿಕಪ್ರಸಂಗತನವೇ ಆದೀತು. ಆದರೂ ಆ ಘೋಷಣೆಯ ಮೂಲಕ ಏನು ಹೇಳಲು ಹೊರಟಿದ್ದೇವೆಂದು ವಿವರಿಸುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ. ಹಾಗೆಯೇ ಈ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿ ಈ “ಕೂಗುಗಳಿಗೆ” ಪ್ರಚಾರ ನೀಡಬೇಕಿದೆ ಎಂದೂ ಸಹ ನಮಗನ್ನಿಸಿದೆ.

ಈ ಕೂಗನ್ನು ಹುಟ್ಟುಹಾಕಿದವರು ನಾವಲ್ಲ. ಇದೇ ಕೂಗು ರಷ್ಯಾದ ಕ್ರಾಂತಿಕಾರಿ ಚಳವಳಿಯಲ್ಲೂ ಬಳಕೆಯಾಗಿತ್ತು. ಅಪ್ಟನ್ ಸಿಂಕ್ಲೇರ್ ಎಂಬ ಖ್ಯಾತ ಸಮಾಜವಾದಿ ಬರಹಗಾರ, ಬೋಸ್ಟನ್ ಮತ್ತು ಆಯಿಲ್ ಎಂಬ ತನ್ನ ಇತ್ತೀಚಿನ ಕಾದಂಬರಿಗಳಲ್ಲಿ ಕೆಲವು ಅರಾಜಕತಾವಾದಿ ಕ್ರಾಂತಿಕಾರಿ ಪಾತ್ರಗಳ ಮೂಲಕ ಈ ಘೋಷಣೆಯನ್ನು ಮೊಳಗಿಸಿದ. ರಕ್ತಪಾತದ ಹೋರಾಟ ಸದಾಕಾಲ ಮುಂದುವರಿಯಬೇಕು ಎಂದಾಗಲಿ ಅಥವಾ ಸ್ವಲ್ಪ ಸಮಯಕ್ಕಾದರೂ ಯಾವುದೊಂದೂ ಸ್ತಬ್ಧವಾಗಕೂಡದು ಎಂದಾಗಲಿ ಈ ಘೋಷಣೆಯ ಅರ್ಥವಲ್ಲ. ಈ ಘೋಷಣೆಯನ್ನು ದೀರ್ಘಕಾಲ ಬಳಸುವುದರಿಂದ ಅದು ಪಡೆಯುವ ಮಹತ್ವಕ್ಕೆ ವ್ಯಾಕರಣಾತ್ಮಕವಾಗಿ ಇಲ್ಲವೇ ಪದಸಂರಚನಾತ್ಮಕವಾಗಿ ಅಷ್ಟೇನೂ ಸಮರ್ಥನೆ ಸಿಗದಿರಬಹುದು. ಆದರೆ ನಾವು ಅದರ ಮೂಲಕವೇ ಈ ಘೋಷಣೆಗೆ ಸಂಬಂಧಿಸಿದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಅಂತಹ ಎಲ್ಲ ಕೂಗುಗಳೂ ತಮ್ಮೊಳಗೆ ಭಾಗಶಃ ಅಂತರ್ಗತವಾಗಿರುವ ಮತ್ತು ಭಾಗಶಃ ಹೊರಗಿನಿಂದ ಪಡೆದುಕೊಂಡಿರುವ ಸಾಮಾನ್ಯ ಗ್ರಹಿಕೆಯನ್ನು ಸೂಚಿಸುತ್ತವೆ. ಉದಾಹರಣೆಗೆ, ನಾವು “ಜತಿನ್ ದಾಸ್ ಚಿರಾಯುವಾಗಲಿ” ಎಂಬ ಘೋಷಣೆಯನ್ನು ಮೊಳಗಿಸುವಾಗ ಅದರಿಂದ ದಾಸ್ ದೈಹಿಕವಾಗಿ ಬದುಕಿರಬೇಕೆಂದು ನಾವು ಅರ್ಥೈಸಲು ಸಾಧ್ಯವಿಲ್ಲ ಅಥವಾ ಅರ್ಥೈಸುವುದಿಲ್ಲ. ಅಷ್ಟೆಲ್ಲ ನೋವುಂಡ ಆ ಮಹಾ ಹುತಾತ್ಮನಿಗೆ ಇಂತಹ ಪರಮೋಚ್ಛ ತ್ಯಾಗ ಮಾಡಲು ಪ್ರೇರೇಪಿಸಿದ ಚಿಂತನೆಯ ಅದಮ್ಯ ಚೇತನದ ಜೊತೆಗೆ ಅವನ ಬದುಕಿನ ಶ್ರೇಷ್ಠ ವಿಚಾರಗಳು ಚಿರವಾಗಿ ಉಳಿಯಬೇಕು ಎಂಬುದನ್ನು ಈ ಘೋಷಣೆ ಮೊಳಗಿಸುವ ಮೂಲಕ ನಾವು ಹೇಳಲು ಬಯಸುತ್ತೇವೆ. ಈ ಕೂಗನ್ನು ಮೊಳಗಿಸುವುದರಿಂದ ನಾವು ನಮ್ಮ ಆದರ್ಶದ ಬೆಂಬತ್ತಿ ಹೋಗುವಾಗಲೂ ಅದೇ ಎದೆಗಾರಿಕೆಯನ್ನು ಪ್ರದರ್ಶಿಸಬಹುದೆಂದು ಅಪೇಕ್ಷಿಸುತ್ತೇವೆ. ಆ ಉತ್ಸಾಹವನ್ನೇ ನಾವಿಲ್ಲಿ ಪ್ರಾಸಂಗಿಕವಾಗಿ ಸೂಚಿಸುತ್ತಿರುವುದು.

ಹಾಗೆಯೆ ಯಾರೂ “ಕ್ರಾಂತಿ” ಪದವನ್ನು ಅದರ ಶಬ್ದಾರ್ಥದಲ್ಲಿ ವ್ಯಾಖ್ಯಾನಿಸಬಾರದು. ತಮ್ಮ ಅನುಕೂಲಕ್ಕಾಗಿ ಬಳಸುವ ಇಲ್ಲವೆ ದುರ್ಬಳಕೆ ಮಾಡಿಕೊಳ್ಳುವವರ ಮನಸ್ಥಿತಿಗೆ ಅನುಗುಣವಾಗಿ ಈ ಪದಕ್ಕೆ ಹಲವು ಅರ್ಥಗಳನ್ನೂ ತಾತ್ಪರ್ಯಗಳನ್ನೂ ಕಲ್ಪಿಸಲಾಗಿದೆ. ಸ್ಥಾಪಿತ ವ್ಯವಸ್ಥೆಯಿಂದ ಹಿಡಿದು ಶೋಷಕ ಸಂಸ್ಥೆಗಳವೆರಗೂ ಕ್ರಾಂತಿ ಶಬ್ದವು ರಕ್ತದ ಕಲೆ ಅಂಟಿರುವ ಭಯಾನಕ ಭಾವವನ್ನು ಕಣ್ಣಿಗೆ ಕಟ್ಟುತ್ತದೆ. ಆದರೆ ಕ್ರಾಂತಿಕಾರಿಗಳಿಗೆ ಅದು ಪವಿತ್ರ ಶಬ್ದವೇ ಸರಿ. ಶಾಸನಸಭೆಯ ಬಾಂಬ್ ಎಸೆತ ಪ್ರಕರಣದ ವಿಚಾರಣೆಯಲ್ಲಿ ನಾವು ದೆಹಲಿಯ ಸೆಷನ್ಸ್ ನ್ಯಾಯಾಧೀಶರ ಎದುರು ನೀಡಿದ ಹೇಳಿಕೆಯಲ್ಲಿ “ಕ್ರಾಂತಿ” ಪದದ ಅರ್ಥವನ್ನು ಸ್ಪಷ್ಟವಾಗಿ ವಿವರಿಸಲು ಯತ್ನಿಸಿದ್ದೆವು.

ಕ್ರಾಂತಿ ಎಂದರೆ ರಕ್ತಪಾತದ ಹೋರಾಟ ಮಾತ್ರವೇ ಅಲ್ಲ ಎಂದು ಅಲ್ಲಿ ನಾವು ಹೇಳಿದ್ದೆವು. ಅದು ಬಾಂಬ್ ಮತ್ತು ಪಿಸ್ತೂಲು ಪಂಥಕ್ಕೆ ಸೇರಿದ್ದಲ್ಲ. ಕ್ರಾಂತಿಯ ಸಾಧನೆಗಾಗಿ ಅವು ಒಮ್ಮೊಮ್ಮೆ ಬರೀ ಸಾಧನಗಳಾಗುತ್ತವೆ, ಅಷ್ಟೇ. ಕೆಲವು ಚಳವಳಿಗಳಲ್ಲಿ ಅವು ಮಹತ್ವದ ಪಾತ್ರ ವಹಿಸುತ್ತವೆ ಎಂಬುದೂ ನಿಜವೇ. ಆದರೆ ಅದೊಂದೇ ಕಾರಣಕ್ಕಾಗಿ ಅವೆರಡೂ ಒಂದೇ ಆಗುವುದಿಲ್ಲ. ದಂಗೆಯೇ ಕ್ರಾಂತಿಯಲ್ಲ. ಅದು ಅಂತಿಮ ಗುರಿಯತ್ತ ಒಯ್ಯಬಹುದಷ್ಟೇ.

ಉತ್ತಮ ವ್ಯವಸ್ಥೆಯನ್ನು ರೂಪಿಸುವ ಸಲುವಾಗಿ ಬದಲಾವಣೆ ತರುವ ಹೆಬ್ಬಯಕೆ ಮತ್ತು ಉತ್ಸಾಹದಿಂದ ಆ ಪದಪುಂಜದಲ್ಲಿ ಕ್ರಾಂತಿ ಎಂಬ ಶಬ್ದದ ಪ್ರಯೋಗವಾಗಿದೆ. ಜನರು ಸಾಮಾನ್ಯವಾಗಿ ಸ್ಥಾಪಿತ ವ್ಯವಸ್ಥೆಗೆ ಹೊಂದಿಕೊಂಡಿರುತ್ತಾರೆ. ಅಲ್ಲದೆ ಬದಲಾವಣೆ ಎಂಬ ಒಂದು ಆಲೋಚನೆಯೇ ವ್ಯವಸ್ಥೆಯಲ್ಲಿ ನಡುಕ ಹುಟ್ಟಿಸುತ್ತದೆ. ಈ ಜಡತ್ವದ ಬದಲು ನಾವು ಕ್ರಾಂತಿಕಾರಿ ಚೈತನ್ಯವನ್ನು ಮೈಗೂಡಿಸಿಕೊಳ್ಳಬೇಕಿದೆ. ಇಲ್ಲವೆಂದಾದರೆ ಅವನತಿ ಮೇಲುಗೈ ಸಾಧಿಸುತ್ತದೆ ಮತ್ತು ಪ್ರತಿಗಾಮಿ ಶಕ್ತಿಗಳು ಇಡೀ ಮನುಷ್ಯತ್ವವನ್ನೇ ಕೆಟ್ಟ ದಾರಿಯಲ್ಲಿ ಒಯ್ಯುತ್ತವೆ. ಇದು ಮಾನವ ಪ್ರಗತಿಯಲ್ಲಿನ ಜಡv ಮತ್ತು ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ಪ್ರತಿಗಾಮಿ ಶಕ್ತಿಗಳು ಒಟ್ಟುಗೂಡದಂತೆ (ಅವುಗಳ ಪ್ರಾಬಲ್ಯ ಹೆಚ್ಚಾಗದಂತೆ) ಮತ್ತು ಅವುಗಳ ಶಾಶ್ವತ ಮುನ್ನಡೆಯನ್ನು ತಡೆಗಟ್ಟುವ ಸಲುವಾಗಿ, ಕ್ರಾಂತಿಯ ಚಿಲುಮೆ ಸದಾಕಾಲ ಮಾನವೀಯತೆಯನ್ನು ವ್ಯಾಪಿಸುವಂತೆ ಗಮನ ವಹಿಸಬೇಕು. ಹೊಸದೊಂದು ವ್ಯವಸ್ಥೆಯ ಉದಯಕ್ಕೆ ದಾರಿ ಮಾಡಿಕೊಡಲು ಹಳೆಯ ವ್ಯವಸ್ಥೆ ಸ್ಥಿರವಾಗಿ ಮತ್ತು ಚಿರವಾಗಿ ಬದಲಾಗಬೇಕು. ಒಂದು “ಒಳ್ಳೆಯ” ವ್ಯವಸ್ಥೆ ಹುಟ್ಟಿದರೆ ಅದು ಇಡೀ ವಿಶ್ವವನ್ನೇ ಭ್ರಷ್ಟವಾಗದಂತೆ ತಡೆಗಟ್ಟುತ್ತದೆ. ನಾವು “ಕ್ರಾಂತಿ ಚಿರಾಯುವಾಗಲಿ” ಎಂಬ ಘೋಷಣೆ ಮೊಳಗಿಸುವುದು ಈ ಅರ್ಥದಿಂದಲೇ.

 ತಮ್ಮ ವಿಶ್ವಾಸಿ,

 ಸಹಿ/-

 ಭಗತ್ ಸಿಂಗ್, ಬಿ. ಕೆ. ದತ್

(ಈ ಲೇಖನವನ್ನು ನವಕರ್ನಾಟಕ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ, ಜ್ಯೋತಿ ಎ. ಅನುವಾದಿಸಿರುವ “ಭಗತ್ ಸಿಂಗ್ ಇಂಕ್ವಿಲಾಬ್ ಜಿಂದಾಬಾದ್! ಆಯ್ದ ಬರಹಗಳು ಮತ್ತು ಭಾಷಣಗಳು” ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)

ಇದನ್ನೂ ನೋಡಿ: ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು