ಚಪ್ಪಲಿ, ಛತ್ರಿ, ಬಟ್ಟೆ ಮಾರುವ, ಎಗ್‌ರೈಸ್, ಚಿತ್ರಾನ್ನ ಮಾರಿ ಬದುಕು ಕಟ್ಟಿಕೊಳ್ಳುವ ಬಡವರ ಜಾಗದಲ್ಲಿ ನಿಂತು ನೋಡಿ ಲೋಕ ಬೇರೆಯದೇ ಕಾಣುತ್ತದೆ

“..ಪಾದಚಾರಿಗಳಿಗೆ ಫುಟ್ ಪಾತ್ ಬಿಡಿಸಿಕೊಡುವ ಸರಕಾರಕ್ಕೆ, ಸಚಿವರಿಗೆ, ರಾಜಕೀಯ ಪಕ್ಷಗಳಿಗೆ ಈ ಎಲ್ಲಾ ಜನರಿಗೆ ಬದುಕುವ ಹಕ್ಕು, ಬದುಕಲು ಬೇಕಾದಷ್ಟು ದುಡಿಮೆಯ ಅವಕಾಶ ಒದಗಿಸಿಕೊಡುವ ಕರ್ತವ್ಯವೂ ಇದೆಯಲ್ಲವೆ?..” ಮುನೀರ್ ಕಾಟಿಪಳ್ಳ ಅವರ ಬರಹದಲ್ಲಿ

ಬೆಂಗಳೂರು ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿರುವ ಕೃಷ್ಣ ಬೈರೇಗೌಡರಿಗೆ ಅಭಿನಂದನೆಗಳ ಸುರಿಮಳೆ ಆಗುತ್ತಿದೆ. ಪಾದಚಾರಿಗಳ ಹಕ್ಕಿನ ಕುರಿತು ಬಹಳ ಮಾತುಗಳು, ಕಾಳಜಿಗಳು ವ್ಯಕ್ತ ಆಗುತ್ತಿದೆ. ಕೃಷ್ಣ ಬೈರೇಗೌಡರೂ ಫುಟ್ ಪಾತ್ ಎಂಬುದು ಪಾದಚಾರಿಗಳು ಮೂಲಭೂತ ಹಕ್ಕು ಎಂದು ತಮ್ಮ ಕಾರ್ಯಾಚರಣೆಯನ್ನು ಸಮರ್ಥಿಸಿದ್ದಾರೆ. ಸಂತೋಷ.

ಅದೇ ಸಂದರ್ಭ ಕೃಷ್ಣ ಬೈರೇಗೌಡರು ಹಾಗು ಈ ಕಾರ್ಯಾಚರಣೆಯನ್ನು ಹುಮ್ಮಸ್ಸಿನಲ್ಲಿ ಬೆಂಬಲಿಸುತ್ತಿರುವ ಜ‌ನಗಳು ಬೀದಿ ಬದಿ ವ್ಯಾಪಾರಿಗಳು ಯಾಕಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ. ಭಾರತದ ಜನರ ದುಡಿಮೆಯ ಅವಕಾಶ, ಆದಾಯ, ಕುಟುಂಬ ನಿರ್ವಹಣೆಯ ಕನಿಷ್ಟ ಖರ್ಚುಗಳು, ಸಾಮಾಜಿಕ ಸಮೀಕರಣಗಳನ್ನೂ ಗಮನಿಸಬೇಕಿದೆ. ಬಡತನ, ಬಡವ, ಶ್ರೀಮಂತರ ನಡುವಿನ ಅಂತರ ಅಗಾಧ ಪ್ರಮಾಣದಲ್ಲಿ ಇರುವ ಈ ನಾಡಿನಲ್ಲಿ ನಗರಗಳು, ರಸ್ತೆ, ಪಾರ್ಕಿಂಗ್, ಶಿಸ್ತುಗಳು ದುಬೈ, ನ್ಯೂಯಾರ್ಕ್, ಲಂಡನ್ ಗಳ ರೀತಿ ಇರಲು ಸಾಧ್ಯವೆ?

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಯಾರು ? ದುಡಿಮೆಗೆ, ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಆದಾಯದ ಅವಕಾಶಗಳು ಅವರಿಗೆ ದೊರಕುವಂತಿದ್ದರೆ ಅವರುಗಳು ಬೀದಿ ಬದಿಗೆ ಬಂದು ಇಂತಹ ಅಭದ್ರತೆಯ, ಅವಮಾನದ ದುಡಿಮೆಗೆ ಕೈ ಹಾಕುತ್ತಿದ್ದರೆ?

ಕೃಷ್ಣ ಬೈರೇಗೌಡರ ಮಾತು ಸರಿ ಇದೆ. ಫುಟ್ ಪಾತ್ ಗಳು ಪಾದಚಾರಿಗಳ ಮೂಲಭೂತ ಹಕ್ಕು. ಹಾಗೆಯೆ, ಬದುಕುವುದು ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಲ್ಲವೆ? ಪ್ರತಿಯೊಬ್ಬರಿಗೂ ಕುಟುಂಬ ನಿರ್ವಹಣೆ ನಡೆಸುವಷ್ಟು ದುಡಿಮೆ ಖಾತರಿ ಪಡಿಸುವುದು (ಅಂದರೆ, ಶಿಕ್ಷಣ, ಆರೋಗ್ಯ,ವಸತಿ, ಆಹಾರಗಳು ದೊರಕುವುದು) ಸರಕಾರಗಳು ಕರ್ತವ್ಯ ಅಲ್ಲವೆ ? ಪಾದಚಾರಿಗಳಿಗೆ ಫುಟ್ ಪಾತ್ ಬಿಡಿಸಿಕೊಡುವ ಸರಕಾರಕ್ಕೆ, ಸಚಿವರಿಗೆ, ರಾಜಕೀಯ ಪಕ್ಷಗಳಿಗೆ ಈ ಎಲ್ಲಾ ಜನರಿಗೆ ಬದುಕುವ ಹಕ್ಕು, ಬದುಕಲು ಬೇಕಾದಷ್ಟು ದುಡಿಮೆಯ ಅವಕಾಶ ಒದಗಿಸಿಕೊಡುವ ಕರ್ತವ್ಯವೂ ಇದೆಯಲ್ಲವೆ ? ಫುಟ್ ಪಾತ್ ತೆರವಿಗಾಗಿ ಶಹಬ್ಬಾಸ್ ಗಿರಿ ಕೊಡುವ ನಾಗರಿಕರು ಈ ಕುರಿತೂ ನಿಮ್ಮ ಕರ್ತವ್ಯ ನಿಭಾಯಿಸಿ ಎಂದು ಧ್ವನಿ ಎತ್ತಿ ಮಾತಾಡಬೇಕಲ್ಲವೆ ?

ನಾಳೆ, ಹಸಿವು ನೀಗಿಸಲು ಸಾಧ್ಯ ಆಗದೆ ಈ ಕುಟುಂಬಗಳು ಆತ್ಮಹತ್ಯೆಗೆ ಶರಣಾದರೆ, ತಪ್ಪು ದಾರಿ ತುಳಿದರೆ ಕಣ್ಣೀರು ಸುರಿಸಲು ನಮಗೆ ನೈತಿಕತೆ ಉಳಿಯುತ್ತದೆಯೆ? ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಒಟ್ಟಾರೆಯಾಗಿ ಗ್ರಹಿಸದೆ, ಬಡತನದ ಅಗಾಧತೆಯ, ಅಂತರದ ಅರಿವಿಲ್ಲದೆ ವಾಹ್ ವಾಹ್ ಅಂತ ಚಪ್ಪಾಳೆ ತಟ್ಟುವುದು ಆತ್ಮವಂಚನೆ ಆಗುವುದಿಲ್ಲವೆ?

ಕೃಷ್ಣ ಬೈರೇಗೌಡರಿಗೆ ಮೇಲ್ವರ್ಗದ, ಭೂಮಾಲಕ ಹಿನ್ನಲೆಯ ರಾಜಕಾರಣಿಯ ಕುಟುಂಬದ ಹಿನ್ನಲೆ ಇರದಿರುತ್ತಿದ್ದರೆ ಈವರಗೆ ಅವರಿಗೆ ಸಿಕ್ಕಿದ ಅವಕಾಶಗಳು, ಇಂಗ್ಲಿಷ್ ಕಲ್ಚರ್, ಮೇಲ್ಮದ್ಯಮ ವರ್ಗದ ಜೀವನ ಶೈಲಿ ದೊರಕುತ್ತಿತ್ತೆ ?

ಬೀದಿ ಬದಿಯಲ್ಲಿ ಚಪ್ಪಲಿ, ಛತ್ರಿ, ಬಟ್ಟೆ ಮಾರುವ, ಎಗ್ ರೈಸ್, ಚಿತ್ರಾನ್ನ ಮಾರುವ, ಅಂತಹ ಕಡೆ ಅಗ್ಗದ ವಸ್ತು, ಅಗ್ಗದ ಆಹಾರ ಹುಡುಕಿಕೊಂಡು ಬರುವ ಬಡವರ ಕುಟುಂಬದ ಹಿನ್ನಲೆಯಲ್ಲಿ ಬಂದಿರುವ ಜನಗಳಾಗಿ ಆಲೋಚಿಸಿ. ಲೋಕ ಬೇರೆಯೆ ಆಗಿ ಕಾಣುತ್ತದೆ.

ಉತ್ತಮ ರಸ್ತೆಗಳು, ಆರಾಮವಾಗಿ ನಡೆದಾಡಲು ಅವಕಾಶಗಳುಲ್ಲ ಫುಟ್ ಪಾತ್ ಗಳು ನನ್ನ ನಿರೀಕ್ಷೆಯು ಹೌದು. ಹಾಗೆಯೆ ಹಸಿವು, ಬಡತನ, ಅವಮಾನ ಮುಕ್ತ ಸಮಾಜ, ಎಲ್ಲರಿಗೂ ಕನಿಷ್ಟ ನೆಮ್ಮದಿಯಲ್ಲಿ ಕುಟುಂಬ ನಿರ್ವಹಣೆ ಮಾಡಬಲ್ಲಷ್ಟು ದುಡಿಮೆಗೆ ಅವಕಾಶಗಳುಲ್ಲ ಸಮಾಜ ನನ್ನ ಮೊದಲ ನಿರೀಕ್ಷೆ.

Related Articles

ಇತ್ತೀಚಿನ ಸುದ್ದಿಗಳು