Wednesday, June 19, 2024

ಸತ್ಯ | ನ್ಯಾಯ |ಧರ್ಮ

ಹೆಚ್.ಡಿ ಕುಮಾರಸ್ವಾಮಿಯಿಂದ ಸಿಎಂ ಮೇಲೆ ಕೀಳು ಮಟ್ಟದ ನಿಂದನೆ ; ಸೋಲಿನ ಹತಾಶೆಯೋ/ ಜಾತಿಯ ಅಹಮ್ಮಿಕೆಯೋ?

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ ಜೆಡಿಎಸ್ ಪಕ್ಷದ ನಾಯಕ ಕುಮಾರಸ್ವಾಮಿ, ಬಿಜೆಪಿ ಪಕ್ಷಕ್ಕಿಂತ ಒಂದು ಹೆಜ್ಜೆ ಮುಂದೇ ನಿಂತು ಸರ್ಕಾರವನ್ನು ಟೀಕಿಸುತ್ತಿರುವುದು ರಾಜ್ಯದ ಜನತೆ ಗಮನಿಸಿರುವಂತದ್ದು. ಇದು ವಿರೋಧ ಪಕ್ಷದ ಜವಾಬ್ದಾರಿ ಕೂಡಾ. ಆದರೆ ಆ ಟೀಕೆ ಎನ್ನುವುದು ವಯಕ್ತಿಕ ನಿಂದನೆ, ಕೀಳು ಮಟ್ಟದ ಪದ ಪ್ರಯೋಗದ ಹಂತಕ್ಕೆ ಬಂದರೆ ಸಾಂವಿಧಾನಿಕ ಜವಾಬ್ದಾರಿ ಎನ್ನುವುದಕ್ಕಿಂತ ವಯಕ್ತಿಕ ದ್ವೇಷ ಎನ್ನದೇ ಇರಲು ಸಾಧ್ಯವೇ ಇಲ್ಲ.

ಸಧ್ಯ ರಾಜಕೀಯ ವಲಯದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಟ್ವಿಟ್ ಈಗ ತೀರಾ ಚರ್ಚೆಗೆ ಗುರಿ ಮಾಡಿದೆ. ಕುಮಾರಸ್ವಾಮಿಯವರ ಅಧಿಕೃತ ಟ್ವಿಟ್ಟರ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಬಂದ ಬರಹ ಅದರಲ್ಲಿ ಬಳಸಿದ ಪದ ಪ್ರಯೋಗ ನೋಡಿದರೆ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಗಿಂತ ವಯಕ್ತಿಕ ದ್ವೇಷವೇ ಎದ್ದು ಕಾಣುತ್ತಿದೆ. ಒಂದು ಹಂತದಲ್ಲಿ ಇದು ‘ಮಾಜಿ ಮುಖ್ಯಮಂತ್ರಿ’ಯೊಬ್ಬರ ಅಧಿಕೃತ ಟ್ವಿಟ್ಟರ್ ಖಾತೆಯೇ ಎಂಬ ಅನುಮಾನ ಮೂಡದಿರದು.

ಅದರಲ್ಲೂ ಹೆಚ್.ಡಿ.ಕುಮಾರಸ್ವಾಮಿರವರು ಚುನಾವಣೆಯಿಂದ ಈಚೆಗೆ ಅವರ ಟ್ವೀಟ್ ಮತ್ತು ಜಾಲತಾಣದ ಆಚೆಗೆ ಸರ್ಕಾರದ ಮೇಲೆ ಮಾಡುತ್ತಿರುವ ಆಕ್ರಮಣ ಒಮ್ಮೊಮ್ಮೆ ಬಿಜೆಪಿ ಪಕ್ಷಕ್ಕಿಂತ ಕೆಳ ಮಟ್ಟಕ್ಕೆ ಇಳಿದು ದಾಳಿ ಇಡುತ್ತಿದ್ದಾರೆ. ಇದು ಅವರ ಪಕ್ಷದ ಕಳಪೆ ಮಟ್ಟದ ಸೀಟು ಗಳಿಕೆಯ ಒಂದು ಕಾರಣವಾದರೆ, ಇನ್ನೊಂದು ಸಿದ್ದರಾಮಯ್ಯ ಮೇಲಿನ ವಯಕ್ತಿಕ ದ್ವೇಷ. ಆ ದ್ವೇಷ ರಾಜಕೀಯದ ಹೊರತಾಗಿಯೂ ಅವರೊಳಗಿರುವ ಜಾತಿಯ ವೈಷಮ್ಯ ಎಂಬುದು ಅವರ ಮತ್ತು ಅವರ ಕಾರ್ಯಕರ್ತರು ಮಾಡುತ್ತಿರುವ ವಯಕ್ತಿಕ ಮಟ್ಟದ ಟೀಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸಧ್ಯ ಮಂಗಳವಾರದ ದಿನ ಕುಮಾರಸ್ವಾಮಿ ಮಾಡಿರುವ ಕೀಳು ಮಟ್ಟದ ಟ್ವಿಟ್ ಇಂತಹ ಹಲವು ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ. ಸಿದ್ದರಾಮಯ್ಯನವರ ಮೇಲೆ ಬಳಸಿದ ಭಾಷಾ ಪ್ರಯೋಗಗಳಲ್ಲಿ.. ಮಾನಗೇಡಿ, ಲಜ್ಜೆಗೇಡಿ, ವಕ್ಕರಿಸು, ‘ಸಿದ್ದಕಲೆ’, ಸ್ವಯಂಘೋಷಿತ ನಕಲಿ ಸಂವಿಧಾನ ತಜ್ಞ, ಎತ್ತುವಳಿ ಗಿರಾಕಿ, ನಕಲಿ ರಾಮ, ಅಪ್ಪಯ್ಯ ಮತ್ತು ಅತೀಂದ್ರ, ಟಿಕ್ ಟಿಕ್ ಸಿದ್ದರಾಮಯ್ಯ ಹೀಗೆ ಇವೆಲ್ಲವುಗಳಲ್ಲಿ ಯಾವುದಾದರೂ ರಾಜಕೀಯ ಟೀಕೆ ಮಾತ್ರ ಎನ್ನಿಸುವುದೇ?

ಕುಮಾರಸ್ವಾಮಿಯವರು ಮಾಡಿರುವ ಈ ಟ್ವಿಟ್ ಈಗ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚಿತವಾಗುತ್ತಿದೆ. ಇದೇ ಟ್ವಿಟ್ ಗೆ ಪ್ರತಿಕ್ರಿಯೆಗಳಾಗಿ ಬಂದ ಬಹುತೇಕ ಎಲ್ಲಾ ಟ್ವಿಟ್ ಗಳು ಕುಮಾರಸ್ವಾಮಿಯ ಭಾಷಾ ಪ್ರಯೋಗದ ಬಗ್ಗೆಯೇ ಪಾಠ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಈ ಮಟ್ಟದ ಭಾಷೆ ನಿಮಗೆ ಶೋಭೆ ತರುವಂತದ್ದಲ್ಲ ಎಂದು ಕುಮಾರಸ್ವಾಮಿಗೆ ಕೆಲವರು ತಿಳಿ ಹೇಳಿ, ಇನ್ನೂ ಕೆಲವರು ಕುಟುಕಿ ಹೇಳಿದ್ದಾರೆ.

ಇದೇ ಟ್ವಿಟ್ ನ್ನು ರಿಟ್ವಿಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಈ ಮಟ್ಟಿಗಿನ ಭಾಷಾ ಪ್ರಯೋಗ ಸರಿಯೇ ಎಂದು ನೇರವಾಗಿ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ. ಚುನಾವಣಾ ಸೋಲಿನ ಸುಳಿಯಲ್ಲಿ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದು ಎಂದೂ ಸಿದ್ದರಾಮಯ್ಯ ತಮ್ಮ ಟ್ವೀಟ್ ಮೂಲಕ ಸಣ್ಣ ಅಸಮಾಧಾನ ಹೊರಹಾಕಿದ್ದಾರೆ.಼

ಈ ವಿವಾದವನ್ನು ಇನ್ನೊಂದು ಆಯಾಮದಿಂದ ನೋಡುವುದಾದರೆ ಹಲವು ದಿನಗಳಿಂದ ಹೆಚ್.ಡಿ.ಕುಮಾರಸ್ವಾಮಿ ಬಳಸುತ್ತಿರುವ ಟ್ವಿಟ್ ಆಗಿರಬಹುದು, ಅದರಾಚೆಗೆ ಸಿದ್ದರಾಮಯ್ಯನವರ ಮೇಲಿನ ಆಕ್ರಮಣದಲ್ಲಿ, ಜಾತಿಯ ಅಹಮ್ಮಿಕೆ ಕೂಡಾ ಎದ್ದು ಕಾಣುತ್ತಿದೆ ಎಂಬುದು ಪಕ್ಷಗಳ ಹೊರತಾಗಿ ಇರುವ ರಾಜಕೀಯ ಪಂಡಿತರ ಲೆಕ್ಕಾಚಾರ. ಅಹಿಂದ ಸಮುದಾಯಗಳ ಪ್ರತಿನಿಧಿಯಾಗಿ ಗುರುತಿಸಿಕೊಂಡ ಸಿದ್ದರಾಮಯ್ಯ ತನಗಿಂತ ಜಾತಿಯಲ್ಲಿ ಕೆಳಗಿನವರು ಎಂಬ ಜಾತಿಯ ತಾರತಮ್ಯ ಕೂಡಾ ಕುಮಾರಸ್ವಾಮಿಗೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಎದ್ದಿರುವ ವಿವಾದದ ಅಡಿಯಲ್ಲಿ ನೋಡುವುದಾದರೆ ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಂತಿದ್ದ ಮಂಡ್ಯ ಜಿಲ್ಲೆ ಈಗ ಬಹುತೇಕ ಕಾಂಗ್ರೆಸ್ ಪಾಲಾಗಿದೆ. ಪಕ್ಕದ ರಾಮನಗರ ಕೂಡ, ಚನ್ನಪಟ್ಟಣ ಹೊರತುಪಡಿಸಿ ಪೂರ್ತಿ ಕಾಂಗ್ರೆಸ್ ಮಯ. ರಾಮನಗರ ಕ್ಷೇತ್ರದಲ್ಲಿ ಸ್ವತಃ ತಮ್ಮ ಮಗ ನಿಖಿಲ್ ನನ್ನು ಗೆಲ್ಲಿಸಲೂ ಹೆಣಗಾಡಿ ಸೋತ ಕುಮಾರಸ್ವಾಮಿ ಈಗ ಅಕ್ಷರಶಃ ಹತೋಶ ಭಾವವನ್ನು ಹೊರ ಹಾಕುತ್ತಿರಬಹುದು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನು ರಾಜ್ಯಪಾಲರಿಗೆ ಬರೆದ ನಕಲಿ ಪತ್ರ ಕೂಡಾ ಕುಮಾರಸ್ವಾಮಿ ಸೃಷ್ಟಿ ಎಂಬುದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಸರ್ಕಾರದ ಮೇಲೆ ಶತಾಯಗತಾಯ ಕುಮಾರಸ್ವಾಮಿ ಏನೇ ತಂತ್ರ ಹೆಣೆದರೂ ಅದು ತನಗೇ ತಿರುಮಂತ್ರವಾಗುತ್ತಾ ಸಾಗುವುದು ಕೂಡಾ ಕುಮಾರಸ್ವಾಮಿ ನಿದ್ದೆಗೆಡಿಸಿದೆ. ಅಕಸ್ಮಾತ್ ‘ನಕಲಿ ದೂರು ಪತ್ರ’ದ ಬಗ್ಗೆ ಎದ್ದಿರುವ ಅನುಮಾನದ ಹಿಂದೆ ಕುಮಾರಸ್ವಾಮಿ ಕೈವಾಡ ಇದ್ದರೂ ಇದೂ ಸಹ ಉಲ್ಟಾ ಹೊಡೆದರೆ ಕುಮಾರಸ್ವಾಮಿ ಸ್ಪಷ್ಟವಾಗಿ ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಏನೇ ಇರಲಿ, ಕುಮಾರಸ್ವಾಮಿ ತನ್ನ ರಾಜಕೀಯ ವಿರೋಧಿ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರ ಮೇಲೆ ಈ ರೀತಿಯ ವಯಕ್ತಿಕ ಕೀಳು ಅಭಿರುಚಿಯ ನಿಂದನೆಯಿಂದ ಜನರ ಗಮನ ಸೆಳೆಯಬಹುದೇ ಹೊರತು, ರಾಜಕೀಯವಾಗಿ ಕುಮಾರಸ್ವಾಮಿಯ ಹೆಸರೇ ಕೆಡುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇನ್ನು ಈ ಕೆಸರೆರಚಾಟ ಯಾವ ಮಟ್ಟಕ್ಕೆ ತಲುಪಬಹುದು ಎಂಬುದು ಮಾತ್ರ ಕುತೂಹಲ ಹುಟ್ಟಿಸಿದೆ.

Related Articles

ಇತ್ತೀಚಿನ ಸುದ್ದಿಗಳು