ನವದೆಹಲಿ: ಸಾಕಷ್ಟು ಸುದ್ದಿ ಮಾಡಿರುವ ಅಬಕಾರಿ ನೀತಿಗೆ ಅಂದಿನ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹದಿನೈದು ಮಂದಿ ಸಹಿ ಹಾಕಿದ್ದಾರೆ ಎಂಬುದನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೈಕೋರ್ಟ್ ಮುಂದೆ ಬಯಲು ಮಾಡಿರುವುದಾಗಿ ಬಾರ್ & ಬೆಂಚ್ ವರದಿ ಪ್ರಕಟಿಸಿದೆ.
“ ಅರವಿಂದ ಕೇಜ್ರಿವಾಲ್ ಅವರಿಗೆ ಹಗರಣದ ಬಗ್ಗೆ ಅರಿವಿತ್ತು, ಅವರೇ ಹಗರಣದ ಸೂತ್ರಧಾರ” ಎಂಬ ಸಿಬಿಐ ಪರ ವಕೀಲ ಡಿ ಪಿ ಸಿಂಗ್ ವಾದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಪರ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ʼಅಬಕಾರಿ ನೀತಿ ಪ್ರಕರಣದಲ್ಲಿ ಸುಮಾರು 50 ಅಧಿಕಾರಿಗಳಷ್ಟೇ ಅಲ್ಲದೆ ದೆಹಲಿ ಲೆ. ಗವರ್ನರ್ ಅವರನ್ನು ಕೂಡ ಆರೋಪಿಗಳನ್ನಾಗಿ ಮಾಡಬೇಕಾದೀತು” ಎಂದು ವಾದ ಮಂಡಿಸಿದ್ದಾರೆ ಎಂದು ವಿವರಿಸಲಾಗಿದೆ.
ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ತೀರ್ಪು ಕಾಯ್ದಿರಿಸಿದ್ದಾರೆ.
ಇಡಿ ತನಿಖೆ ನಡೆಸುತ್ತಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು. ಅದರ ಬೆನ್ನಲ್ಲೇ ಇಡಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತಾದರೂ, ಸಿಬಿಐ ಪ್ರಕರಣದಲ್ಲಿ ಇನ್ನೂ ಜಾಮೀನು ದೊರೆಯದೇ ಇರುವುದರಿಂದ ಕೇಜ್ರಿವಾಲ್ ಸೆರೆವಾಸ ಅನುಭವಿಸುತ್ತಿದ್ದಾರೆ.