Thursday, September 25, 2025

ಸತ್ಯ | ನ್ಯಾಯ |ಧರ್ಮ

ಮಾ.ಕೃ ಹೆಡ್ ಪೂಜಾರಿ v/s ಸಾಮ್ರಾಟ ನಮೋ : ಮಣಿಪುರ ಎಂಬ “ದೇಶದೋಳ್”!

ಮಣಿಪುರ ಎಂಬ ದೇಶದೋಳ್ ಮಾಧವ ಕುಟೀರದ ಹೆಡ್ ಪೂಜಾರಿ ಮತ್ತು ಸಾಮ್ರಾಟ ನಮೋ ನಡುವಿನ ಶೀತಲ ಸಮರದ ಒಂದು ಝಲಕ್. ಹಾಸ್ಯಾಸ್ಪದ ರಾಜಕೀಯ ವಿಡಂಬನೆಯನ್ನು ಸಾಹಿತಿಗಳಾದ ಚಂದ್ರಪ್ರಭ ಕಠಾರಿಯವರು ಕಟ್ಟಿಕೊಟ್ಟ ಬಗೆಯನ್ನು ಓದಲು ಮರೆಯದಿರಿ..

ಮಾ ಕೃ ಕುಟೀರದ ಹೆಡ್ ಪೂಜಾರಿ – ಬಬ್ರುವಾಹನ ಡಬ್ಬಲ್ ಆಕ್ಟಿಂಗ್

ಕಾಲ – ಶೋಭಾಕೃತ ನಾಮ ಸಂವತ್ಸರ – ಭಾಗ ಒಂದು

“ನೀನೆನೋ ವೀರ ಬಬ್ರುವಾಹನ…ಮಣಿಪುರದ ಅರಸು…ತುಂಬಿದ ಸಭೆಯಲ್ಲಿ ನಮ್ಮವರ ಮುಂದೆ ನೀನು ಏನು ಹೇಳಿದೆ? ನಿಮ್ಮ ಚಿಕ್ಕಪ್ಪ…ಚಿಕ್ಕ ಅಪ್ಪನೇ ಹೊರತು ಇಲ್ಯಾರಿಗೂ ದೊಡ್ಡ ಅಪ್ಪನಲ್ಲವೆಂದು ಬಾಯಿಗೆ ಬಂದಂದೆ ಹರಟಿದ ನೀನು…ಈಗ ಶರಣಾರ್ಥಿಯಾಗಿ ಬಂದಿರೋದನ್ನ ನೋಡಿದರೆ…ಪಾಪ…ನಮಗೆ ಕನಿಕರವಾಗ್ತಿದೆ. ಪ್ರಾಣಭೀತಿಯಿಂದ ತಲೆತಗ್ಗಿಸಿದವರ ಕಾಯುವುದೇ ಪಾಂಡವರ ಧರ್ಮ. ಕ್ಷಮಿಸಿದ್ದೇನೆ. ಏಳು ಮೇಲೆ…”

ರಾಜಕುಮಾರರ ʼಬಬ್ರುವಾಹನʼ ಸಿನಿಮಾವನ್ನು ನೋಡುತ್ತಿದ್ದ ಮಾಧವ ಕೃಪಾಕಟಾಕ್ಷ ಕುಟೀರದ ಹೆಡ್ ಪೂಜಾರಿ, ರಿಮೋಟಿನಿಂದ ಸಿನಿಮಾದ ಆ ದೃಶ್ಯಕಟ್ಟನ್ನು ಸ್ಥಿರೀಕರಿಸಿದ. “ವಾಹ್! ಕಿತಿ ಸುಂದರ್ ಡಬ್ಬಲ್ ಆಕ್ಟಿಂಗ್ ಆಹೆ ಮೂವೀ ಮಾಧ್ಯೆ” ಎಂಬ ಮರಾಠಿ ಮಾತು ತಾನಾಗಿಯೇ ಬಾಯಿಂದ ಹೊರಟಿತು.

ಮಣಿಪುರದಲ್ಲಿ ನಡೆಸಿದ ʼಧರ್ಮ ಸಂಸ್ಥಾಪನಾರ್ಥಾಯ ಅಭಿಯಾನʼದಲ್ಲಿ ಕಂಡು ಬಂದ ಸನಾತನ ಧರ್ಮಕ್ಕಿರುವ ಉಪೇಕ್ಷೆ ಮಾ.ಕೃ.ಕು ಹೆಡ್ ಪೂಜಾರಿಯನ್ನು ಕಂಗೆಡಿಸಿತ್ತು. ಧರ್ಮಕ್ಕೆ ಒದಗಿದ ಆಪತ್ತಿನ ಬಗ್ಗೆ ಚಿಂತೆಯಲ್ಲಿರುವಾಗ –  ಕುಟೀರದಲ್ಲಿದ್ದ ಚಡ್ಡಿಧಾರಿ, ಕರುನಾಡಿನ ಯುವಕನೊಬ್ಬ “ಪೂಜಾರ್ರೇ…ಮಣಿಪುರದ ಅರಸು ಬಬ್ರುವಾಹನನ ಕನ್ನಡ ಸಿನಿಮಾ ನೋಡಿ. ನಮ್ಮ ರಾಜಕುಮಾರರ ಆಕ್ಟಿಂಗ್ ಮಸ್ತ್ ಇದೆ” ಎಂದು ಯುಟೂಬಿನ ಲಿಂಕನ್ನು ಹಂಚಿಕೊಂಡಿದ್ದ.

ಸಿನಿಮಾ ನೋಡುತ್ತ ರಾಜಕುಮಾರರ ನಟನೆಗೆ ಮಾರು ಹೋದ ಪೂಜಾರಿಯ ಮನದಲ್ಲಿ ತಟ್ಟನೆ ವಿಷಾದ ಆವರಿಸಿತು.
ಭರತಖಂಡವನ್ನು ಒಗ್ಗೂಡಿಸುವುದಕ್ಕಾಗಿ ನಮ್ಮ ಪುರಾತನರು, ಕಾಗಕ್ಕ ಗುಬ್ಬಕ್ಕರೊಂದಿಗೆ ಸೇರಿ ಏನೆಲ್ಲಾ ಕತೆ ಕಟ್ಟಿ ಜನಮಾನಸದಲ್ಲಿ ಸನಾತನ ಧರ್ಮವನ್ನು ಪ್ರತಿಷ್ಠಾಪಿಸಿದರು! ಬಬ್ರುವಾಹನನ ಕತೆಯಂತೆ ಒಂದೊಂದು ಕಪೋಲಕಲ್ಪಿತ ಕತೆಗಳು ಎಂಥಾ ಅಮೋಘವಾದವು! ಅಮೂಲ್ಯವಾದವು!

ಪುರಾಣ ಕತೆಗಳನ್ನು ಹೊಸೆದು ಇತಿಹಾಸಕ್ಕೆ ತಳಕು ಹಾಕಿ ಮಣಿಪುರ ಕಣಿವೆಯ ಸಮತಟ್ಟು ಪ್ರದೇಶದ ಸಮುದಾಯವನ್ನು ಹೇಗೋ ತಮ್ಮ ಬುಟ್ಟಿಗೆ ಹಾಕಿಕೊಂಡೆವು. ಆದರೆ, ಗುಡ್ಡಗಾಡು ಜನರು ಬಗ್ಗಲಿಲ್ಲ. ಕಾರಣ, ಪರಂಗಿಗಳು ಬಂದು ಅವರ ತಲೆ ನೇವರಿಸಿ ಯಾಮಾರಿಸಿ – ಅನ್ನ, ಬಟ್ಟೆ, ಮನೆ, ಶಿಕ್ಷಣ ಕೊಟ್ಟು ಅವರನ್ನು ಕಿರಿಸ್ತಾನಿಗಳನ್ನಾಗಿ ಮತಾಂತರ ಮಾಡಿಬಿಟ್ಟರು. ಆ ಹೊತ್ತಿನಲ್ಲಿ ಕತೆ ಕೇಳಲು ನಿರುತ್ಸಾಹ ತೋರಿದ ಗುಡ್ಡಗಾಡಿನ ಜನರನ್ನು ಉಪೇಕ್ಷೆ ಮಾಡಿದ್ದೇ ಪ್ರಮಾದವಾಯಿತು. ಹಳೇ ಕಟ್ಟುಕತೆಗಳು  ಕಿರಿಸ್ತಾನಿಗಳಾದ ಈ ಗುಡ್ಡಗಾಡು ಜನರಿಗೆ ಕಟ್ಟುಕತೆಗಳಾಗಿ ರುಚಿಸದೆ ಹೋಯಿತು. ಮಣಿಪುರದ ಭವ್ಯ ಸನಾತನ ವೈಭೋಗಕ್ಕೆ ಕಾರ್ಮೋಡ ಕವಿಯಿತು.  

ಆಗಿನ ಕತೆಗಳಾದರೊ ಪುರಾಣ ಕಟ್ಟುಕತೆ ಇತಿಹಾಸ ಯಾವ ಪ್ರಕಾರಕ್ಕೆ ಹಾಕಿದರೂ ಸಲ್ಲುತ್ತಿದ್ದವು. ಈಗ ಅಂಥಹ ಹೊಸ ಕತೆ ಹೊಸೆದು ಗುಡ್ಡಗಾಡು ಜನರನ್ನು ಮರುಳು ಮಾಡೋಣವೆಂದರೆ ಕಾಗಕ್ಕ ಗುಬಕ್ಕನ ಸಂತತಿಗಳು ಸಹಕರಿಸುತ್ತಿಲ್ಲ. ಈವರೆಗೆ ನಮ್ಮ ಕುಲಕ್ಕೆ ಬಂದಿರುವ ಅಪಕೀರ್ತಿಯೇ ಸಾಕಷ್ಟಿದೆ ಎಂದು ಅವರು ಹತ್ತಿರ ಸುಳಿಯುತ್ತಿಲ್ಲ.

ಚಿಂತಿಸುತ್ತ ಕೂತ ಕತ್ತಲೆಗಟ್ಟಿದ ಮನದ ಮೂಲೆಯಲ್ಲಿ ಫಳಕ್ಕೆಂದು ಮಿಂಚೊಂದು ಸಂಚರಿಸಿದಂತಾಯಿತು. ಕಣ್ಣಗಲಿಸಿ ತನ್ನ ಸಮುದ್ರಸಿಂಹದ ಚಿತ್ಪಾವನ ಮೀಸೆಯನ್ನು ತಿರುವುತ್ತ ಪೂಜಾರಿ ಎದ್ದು ನಿಂತು, ಹೆಣವೇಶಧಾರಿಗಳ ಸಭೆಗಾಗಿ ಕೂಗು ಹಾಕಿದ. 

ಬೃಹತ್ ಮೈದಾನದಲ್ಲಿ ಸಾವಿರಾರು ಹೆಣವೇಶಧಾರಿಗಳು ಶಿಸ್ತಿನಿಂದ ಸಾಲಾಗಿ ಲಾಠಿಗಳನ್ನು ಹಿಡಿದು ನಿಂತರು. ಒಬ್ಬಾತ ಬಂದು ಮೈಕನ್ನು ಕುಟ್ಟಿ “ಏಕ್…ದೊ…ಏಕ್…ದೊ” ಎಂದು ಧ್ವನಿವರ್ಧಕವನ್ನು ಪರಿಶೀಲಿಸಿದ.  

ಕಣ್ಣಲ್ಲಿ ಕೆಂಡದುಂಡೆ ಇಟ್ಟುಕೊಂಡು ದುಮುಗುಡುತ್ತ ಬಂದ ಪೂಜಾರಿ, ಗಂಟಲು ಸರಿಪಡಿಸಿಕೊಂಡು  “ನನ್ನ ಪ್ರೀತಿಯ ಹೆಣವೇಶಧಾರಿ ಸನಾತನ ಸೈತಾನಿಗಳೇ…” ಎಂದದ್ದೇ, ಸಾಲುಗಟ್ಟಿ ನಿಂತವರು ದಂಗಾಗಿ ಹೋದರು.

ಹಿಂದೆ ಕಾವಲುಗಾರರಂತೆ ನಿಂತಿದ್ದ ಒಬ್ಬ ಹೆಣವೇಷಧಾರಿ “ಪೂಜಾರ್ರೇ…ಏನ್ ಹೇಳ್ತಿದ್ದೀರ?” ಎಂದು ಎಚ್ಚರಿಸುವ ಹೊತ್ತಿಗೆ, ಅಚಾನಾಕ್ಕಾಗಿ ಬಾಯಿಂದ ಹೊರಟ ಅಪದ್ಧ ನುಡಿಗೆ ಪೂಜಾರಿ ನಾಲಿಗೆ ಕಚ್ಚಿಕೊಂಡ.

ಛೇ…ಛೇ…ದಿನಬೆಳಗಾದರೆ ಸಾಮಾಜಿಕ ಜಾಲತಾಣದಲ್ಲಿ ಯಾವನೋ ಧರ್ಮದ್ರೋಹಿ ಹಾಗೆ ಹಂಗಿಸಿ ಬರೆಯುವುದನ್ನು ಓದಿ…ಓದಿ ತಲೆಯಲ್ಲಿ ಕೂತದ್ದು ನಾಲಿಗೆಯಿಂದ ಹೊರ ಬಿತ್ತು. ಅಕಟಕಟಾ!!

ಸಾವರಿಸಿಕೊಂಡು “ ಕೃಪಯ ಮಮ್ ಕ್ಷಮಸ್ವ…ನನ್ನ ಪ್ರೀತಿಯ ಹೆಣವೇಶಧಾರಿ ಸನಾತನ ಸೈನಿಕರೇ…ಈಗ ನೀವು ಯುದ್ಧಕ್ಕೆ ಸನ್ನದ್ಧರಾಗಬೇಕಾದ ಕಾಲ ಬಂದಿದೆ” ಎಂದ ಕೂಡಲೇ ಎಲ್ಲರೂ ಲಾಠಿ ಝಳಪಿಸಿದರು.

“ಇಲ್ಲ…ಇದು ಲಾಠಿವರಸೆಯ ಯುದ್ಧವಲ್ಲ. ಲಾಠಿ ಇರೋದು ನಾವು ಎಲ್ಲಕ್ಕೂ ಸಿದ್ದ ಎಂದು ವೈರಿಗಳಿಗೆ ತೋರಿಸುವುದಕ್ಕಷ್ಟೇ ಮಾತ್ರ. ಆದರೆ, ಪವಿತ್ರವಾದ ನಮ್ಮ ಕೈಗಳನ್ನು ರಕ್ತದಿಂದ ಮಲಿನಗೊಳಿಸಿಕೊಳ್ಳಬಾರದು. ಬುದ್ದಿ ಉಪಯೋಗಿಸಿ, ಸನಾತನ ಧರ್ಮವನ್ನು ಎತ್ತಿ ಹಿಡಿಯುವುದಕ್ಕಾಗಿ ಜನರನ್ನು ಎತ್ತಿಕಟ್ಟಬೇಕು. ಕದನ ಮಾಡಿಸಬೇಕು. ರಕ್ತ ಹರಿಸಬೇಕು. ನೀವುಗಳೆಲ್ಲ ಅಡುಗೆಮನೆ ಹೋಗಿ…ಅಲ್ಲಿರುವ ಪತಂಜಲಿ ರೋಗಿಬಾಬಾ ತಯಾರಿಸಿದ ಶುದ್ಧ ಮಸಾಲೆಗಳನ್ನು ತೆಗೆದುಕೊಂಡು ಹೊರಡಿ…ಹೆಣವೇಷಧಾರಿಗಳಾಗಿ ಅಲ್ಲ. ಎಲ್ಲರೂ ಮಾರುವೇಷದಲ್ಲಿರಬೇಕು. ಹೊರಡಿ…ನಿಮಗೆ ಜಯವಾಗಲಿ”

ಮಾರುವೇಷದಲ್ಲಿ ಎಂದದ್ದೇ ಹೆಣವೇಷಧಾರಿಗಳು ಪುಳಕಿತರಾಗಿ ಮಣಿಪುರದತ್ತ ಧಾವಿಸಿದರು. ಅಚ್ಚ ಖಾರದಪುಡಿ, ಬ್ಯಾಡಗಿ ಮೆಣಿಸಿನಕಾಯಿ ಪುಡಿ, ಪುಳಿವಗ್ಗರೆ ಪುಡಿಯ ಮಸಾಲೆಗಳನ್ನು ಸನಾತನ ಧರ್ಮದ ಪುರಾಣ ಪುಣ್ಯ ಪುರುಷರ ಕತೆಗಳಿಗೆ ಚೆನ್ನಾಗಿ ಬೆರೆಸಿ, ಸಮತಟ್ಟು ಪ್ರದೇಶದ ಜನರ ಕಿವಿಯಲ್ಲಿ ಊದಿದರು. ಕತೆ ಕೇಳಿ ಕೋಪೋದ್ರಿಕ್ತರಾದ ಜನರು ಕಟ್ಟಿಗೆ, ಬಡಿಗೆ, ದೊಂದಿಗಳನ್ನಿಡಿದು ಗುಡ್ಡಗಾಡು ಪ್ರದೇಶದ ಜನರ ಮನೆಗಳಿಗೆ ದಾಳಿ ಇಟ್ಟರು.  ಬೆಂಕಿ ಇಟ್ಟರು. ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದರು. ಗುಡ್ಡಗಾಡು ಜನರು ಪ್ರತಿರೋಧಿಸುತ್ತ ಕದನಕ್ಕೆ ಇಳಿದರು. ಮನೆ ಮನಗಳು ಹೊತ್ತಿ ಉರಿದವು.  ಉರಿಯುತ್ತಿದ್ದ ಬೆಂಕಿಯಲ್ಲಿ ಚಳಿ ಕಾಯಿಸುತ್ತ, ಪೊದೆ ಹಿಂದೆ ಅವಿತು ಕೂತ ಹೆಣವೇಷಧಾರಿಗಳು ಕ್ಷಣಕ್ಷಣದ ಘಟನೆಯ ಸುದ್ದಿಯನ್ನು ಪೂಜಾರಿಗೆ ರವಾನಿಸುತ್ತಿದ್ದರು.

ಹೊತ್ತಿ ಉರಿಯುತ್ತಿದ್ದ ಮಣಿಪುರವನ್ನು ವೀಕ್ಷಿಸುತ್ತ, ವಿಕಟ ನಗೆ ಬೀರುತ್ತಿದ್ದ ಪೂಜಾರಿಗೆ ತಟ್ಟನೆ ಬೃಹತ್ ಮಾಯಕನ್ನಡಿಯಲ್ಲಿ ಸಾಮ್ರಾಟ ನಮೋ ಮುಖ ಕಾಣಿಸಿ, ರಸಭಂಗವಾಗಿ ಇರುಸುಮುರುಸಾಯಿತು.

ಹೆ. ಪೂಜಾರಿ: ಏನಯ್ಯ…ಹೊತ್ತುಗೊತ್ತು ಬೇಡ್ವ? ಬೇಗ ಹೇಳು ಏನು ಬಂದದ್ದು?

ಸಾ. ನಮೋ: ಅದು ಮಣಿಪುರದಲ್ಲಿ ತಾವು ಮಾಡಿಸುತ್ತಿರುವ ಹೋಮಹವನದ ಬಗ್ಗೆ ಮಾಹಿತಿ ಬಂತು…ಅದು…

ಹೆ. ಪೂಜಾರಿ: ಹೌದು ಏನೀಗ?

ಸಾ. ನಮೋ: ಅದು..ಏನಿಲ್ಲ. ನಮಗೂ ತಿಳಿಸಿದ್ದರೆ ಚೆನ್ನಾಗಿತ್ತು. ನಾವೇ…. ಗಂಧದಕಟ್ಟಿಗೆ, ತುಪ್ಪ…ಬೇಕಾದ ಎಲ್ಲವನ್ನು ಕಳಿಸಿ ಇನ್ನು ಅಚ್ಚುಕಟ್ಟಾಗಿ ಮಾಡಿಸುತ್ತಿದ್ದೆವು. 

ಹೆ. ಪೂಜಾರಿ: ಇಷ್ಟು ವರುಷ ಸಿಂಹಾಸನದಲ್ಲಿ ಗೂಟ ಬಡ್ಕೊಂಡ್ ಕೂತಿದ್ದೀಯ! ದಿನೇ ದಿನೇ ಅಲ್ಲಿ ಪರದೇಶಿಗಳು ಹೆಚ್ಚಾಗುತ್ತಿದ್ದಾರೆ. ಸನಾತನ ಧರ್ಮ ಆಪತ್ತಿನಲ್ಲಿದೆ. ಏನಾದ್ರು ಮಾಡ್ದ? ಈಗ ದೊಡ್ಡದಾಗಿ ಬಂದಿದ್ದೀಯ!!

ಸಾ. ನಮೋ: ಕೋಪ ಬೇಡ ಪೂಜಾರ್ರೇ…ಸರಿ…ಹೋಮಹವನ ಎಷ್ಟು ದಿನದ ಕಾರ್ಯಕ್ರಮ… ತಿಳಿದುಕೊಳ್ಳಬಹುದೇ?

ಹೆ. ಪೂಜಾರಿ: ಅದೇನು ಗಣೇಶ ಬ್ರಾಂಡ್ ತೊಗರಿಬೇಳೆನಾ…ಬೇಗ ಬೇಯೋದಿಕ್ಕೆ? ಇದು ಸನಾತನ ತೊ. ಬೇಳೆ. ಎಂದಿಗೆ ಬೇಯುತ್ತೆ ಅಂತ ಹೇಳಲಾಗದು. ಅಲ್ಲಿಯವರೆಗೂ ಹೋಮಹವನ ನಿಲ್ಲೋದಿಲ್ಲ.

ಸಾ. ನಮೋ: ಆದರೆ…

ಹೆ. ಪೂಜಾರಿ: ತಾಳು…ನಿನ್ನ ವರಾತ ನನಗೆ ಗೊತ್ತು. ಹೋಮಹವನ ಮುಗಿಯುವವರೆಗೂ ನೀನು ಅತ್ತ ತಲೆ ಹಾಕಿ ಮಲಗಬೇಡ. ನಿನ್ನ ಹಳೇಚಾಳಿ ಇದೆಯಲ್ಲ! ಫಾರಿನ್ ಟೂರ್ ಹೊಡ್ಕೊಂಡ್ ಕಾಲ ಹಾಕು…ಈಗ ತೊಲಗು..

“ಹಾಗೆ ಆಗಲಿ…ನಿಮ್ಮ ಆಶೀರ್ವಚನದಂತೆ…” ಎನ್ನುವ ಮುಂಚೆಯೇ ಸಾ. ನಮೋವನ್ನು ಪೂಜಾರಿ ಪರದೆಯಿಂದ ಅಳಿಸಿದ.

ಈ ಕಾಲ – ಶ್ರೀ ವಿಶ್ವಾವಸು ನಾಮ ಸಂವತ್ಸರ – ಭಾಗ ಎರಡು

ಕಳೆದ ಮೂರು ಚಿಲ್ಲರೆ ವರ್ಷದಲ್ಲಿ ಸಾಮ್ರಾಟ ನಮೋ ಹಲವಾರು ದೇಶಗಳಿಗೆ ಭೇಟಿ ಇತ್ತ. ಅಲ್ಲಿನ ಪ್ರಧಾನಿ, ಅಧ್ಯಕ್ಷ, ರಾಜರನ್ನು ಕಂಡು, ಅವರು ಕೈ ಕಿತ್ತು ಕೊಳ್ಳುವವರೆಗೆ ಹಸ್ತಲಾಘವವನ್ನು ಲಗಲಗ ಮಾಡಿ, ಆನಂತರವೂ ಅವರನ್ನು ಬಿಡದೆ ತಬ್ಬಿ ಮುದ್ದಾಡಿದ. 

ಕರೆಯದೆ ತಮ್ಮ ದೇಶಕ್ಕೆ ಬಂದ ನಮೋ ಆಗಮನದಿಂದ ಮುಜುಗರಗೊಳ್ಳುತ್ತಿದ್ದ ವಿದೇಶದ ಸರ್ಕಾರಗಳು, ಮನಸ್ಸಿಲ್ಲದೆ ಅವನನ್ನು ಸ್ವಾಗತಿಸುತ್ತಿದ್ದವು. ವಿದೇಶಾಂಗ ನೀತಿಯ ಬಗ್ಗೆ ಚರ್ಚಿಸುವಾಗ, ಅದರ ಅಗಾಧತೆ, ಜ್ಞಾನವಿರದ ನಮೋ ಮಧ್ಯೆ ಮಧ್ಯೆ ಪೆದ್ದು ಪೆದ್ದಾಗಿ ನಗುವುದ ಕಂಡ ಅವರು ಒಳಗೊಳಗೆ ಮುಸಿಮುಸಿ ನಗುತ್ತಿದ್ದರು. ಕೊನೆಗೆ ನಮೋ ಅಲ್ಲೇ ಬಹಳ ದಿನ ಟೆಂಟ್ ಹಾಕಿ ಉಳಿದಾಗ, ಉಪಾಯ ಹೂಡಿ, ತಮ್ಮ ದೇಶದ ಅತ್ಯುನ್ನತ ನಾಗರೀಕ ಗೌರವದ ಮೆಡೆಲ್ ಕೊರಳಿಗೆ ಹಾಕಿ ತಮ್ಮ ದೇಶದಿಂದ ಸಾಗ ಹಾಕುತ್ತಿದ್ದರು.

ಅಲ್ಲಿ ಅರಮನೆಯಲ್ಲಿ ಸಾಮ್ರಾಟ ನಮೋ – ಒಟ್ಟು ಮೂವತ್ತೆಂಟು ದೇಶಗಳನ್ನು ಸುತ್ತಿ ಹಿಂತಿರುಗಿ,  ತನಗೆ ದೊರೆತ ಅತ್ಯುನ್ನತ ನಾಗರೀಕ ಮೆಡೆಲ್ ಗಳನ್ನು ಸಾಲಾಗಿ ಜೋಡಿಸಿ, ʼಇಷ್ಟೊಂದು ದೇಶಗಳ ಮಾನಸನ್ಮಾನ ನನ್ನನ್ನು ಬಿಟ್ಟು ಈ ದೇಶದ ಇತಿಹಾಸದಲ್ಲಿ ಯಾರಿಗೂ ದೊರಕಿಲ್ಲʼ ಎಂದು ಹೆಮ್ಮೆಯಿಂದ ಬೀಗುತ್ತಿದ್ದ. ಪರ್ಸನಲ್ ಸೆಕೆಟ್ರರಿ “ಇದು ಅಫ್ಗನಿಸ್ತಾನದ್ದು…ಇದು ನೈಜಿರಿಯಾದ್ದು…ಇದು ಸೌದಿ ಅರೇಬಿಯಾದಲ್ಲಿ ತಮಗೆ ಕೊಟ್ಟದ್ದು…” ಎಂದು ಪ್ರತಿ ದೇಶಗಳ ಮೆಡೆಲನ್ನು ತೋರುತ್ತಿರುವಾಗ ನಮೋ ಎದೆ ಬೆಲೂನಿನಂತೆ ಉಬ್ಬಿ ಹೋಗುತ್ತಿತ್ತು. ತಟ್ಟನೆ ಏನೋ ತಪ್ಪಿ ಹೋಗಿದೆ ಎನ್ನಿಸಿ “ಒಟ್ಟು ಎಷ್ಟು ಮೆಡೆಲ್ ಗಳಿವೆ?” ಎಂದರೆ, ಪ.ಸೆ “ಮೂವತ್ತೇಳು” ಎಂದ. ಅಂದರೆ ಒಂದು ಮೆಡೆಲ್ ನಾಪತ್ತೆ!!

“ಮಹಾಪ್ರಭುಗಳೇ…ಅದು ಪ್ಯಾಲೇಸ್ಟಿನಿಂದ ದೊರೆಕಿದ್ದು. ಪೂಜಾರಿಗಳು ಸಾಬರ ದೇಶದಿಂದ ಸನ್ಮಾನಗೊಂಡದ್ದಕ್ಕೆ ಬೇಸರಗೊಂಡಿದ್ದರು. ಹಾಗಾಗಿ ಅದನ್ನು ನಾಪತ್ತೆ ಮಾಡಿದ್ದೇವೆ” ಎಂದ ಪ.ಸೆ ಮಾತಿಗೆ ನಮೋ ತಲೆಯಾಡಿಸಿದರೂ ʼಅಫ್ಗನಿಸ್ತಾನ…ಸೌದಿ…ಕೂಡ ಸಾಬರ ನಾಡಲ್ಲವೇ?ʼ ಎಂಬ ಸಂಶಯ ಸುಳಿದು ತನಗೇಕೆ ಆ ಉಸಾಬರಿ ಎಂದು ಸುಮ್ಮನಾದ. ಅಷ್ಟೊತ್ತಿಗೆ ಹೆಡ್ ಪೂಜಾರಿಯ ಕರೆ ಬಂದಿದೆಯೆಂದು ಪ.ಸೆ. ಹೇಳಿದಾಗ ʼಈ ಶನಿ…ನೆಮ್ಮದಿಯಾಗಿರೋಕೆ ಬಿಡಲ್ಲʼ ಎಂದು ಗೊಣಗುವುದು ಪ.ಸೆ.ಯ ಕಿವಿಗೆ ಬಿದ್ದದ್ದು ಕಂಡು “ಪೂಜಾರಿಗಳು ನಮ್ಮ ತಂದೆ ಸಮಾನರು. ತಡಮಾಡದೇ ಮಾಯಕನ್ನಡಿ ಕನೆಕ್ಟ್ ಮಾಡಿ” ಎಂದು ತೇಪೆ ಹಾಕಿದ.

ಸಾ. ನಮೋ: ನಮಸ್ತೇ…ಸದಾ…

ಹೆ. ಪೂಜಾರಿ: ಏಯ್ ತಾಳಪ್ಪ. ಫಾರಿನ್ ಹೊಡ್ಕೊಂಡ್ ಮಜಾ ಮಾಡ್ತಿದ್ದೀಯ! ದೇಶದಲ್ಲಿ ಏನಾಗ್ತಿದೆ ಅನ್ನೋ ಪರಿಜ್ಞಾನ ನಿಂಗೆ ಇದೇಯ?

ಸಾ. ನಮೋ (ಒಣ ನಾಲಿಗೆ ಸವರುತ್ತ) : ಪೂಜಾರ್ರೇ…ಈಗಷ್ಟೇ ಫಾರಿನ್ ಟೂರಿಂದ ಬಂದೆ. ಫ್ರೆಶಪ್ ಆಗಿ ವರದಿ ನೋಡ್ತೇನೆ. ಸದ್ಯಕ್ಕೆ ಯಾವ ಎಲೆಕ್ಷನ್ ಇಲ್ವಲ್ಲ?

ಹೆ. ಪೂಜಾರಿ: ಯಾವಾಗಲೂ ಎಲೆಕ್ಷನ್ ಭಾಷಣಕ್ಕೆ ರೆಡಿಯಾಗಿ ನಿಂತಿರ್ತೀಯ! ಅಲ್ಲಿ ಮಣಿಪುರ ಹೊತ್ತಿ ಉರಿದು ಭಸ್ಮವಾಗಿದೆ. ನಿನ್ನ ಮೈಮೇಲೆ ಯಾವ ಹಾವು ಸತ್ತಿದೆ! ಬೇಗ ಹೊರಡು. ಅಲ್ಲೇ ಹೋಗಿ ಫ್ರೆಶಪ್ ಆಗು.

“ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡ್ತಾನಂತೆ…ಇವನ ಮುಂಡಾ ಮೋಚ್ತು” ಎಂದು ಕೊನೆಯಲ್ಲಿ ಪೂಜಾರಿ ಗೊಣಗಿದ್ದು ಕೇಳಿ ನಮೋ ಮುಖ ಬಿಳಿಚಿಕೊಂಡಿತು.

ಪೂಜಾರಿಯ ಅಣತಿಯಂತೆ ಅದಾಗಲೇ ತೊಡೆಕೂಸು ಗೋದಿ ಮೀಡಿಯಾಗಳು ಕ್ಯಾಮೆರಾ ಸಮೇತ ಬಸ್ಸು, ವ್ಯಾನುಗಳಲ್ಲಿ ಅರಮನೆಯ ಹೊರಗೆ ಕಾಯುತ್ತಿದ್ದರು. ಬಾಜಾಭಜಂತ್ರಿ ಸಮೇತ ʼ ಸಾಮ್ರಾಟ ನಮೋ ಮಣಿಪುರ್ಕೊ ಪದಾ ರಹಾಹೇ…ʼ ಎಂದು ಘೋಷಣೆ ಕೂಗುತ್ತ ಮೆರವಣಿಗೆ ಮಣಿಪುರದತ್ತ ಸಾಗಿತು.

ಸಾಮ್ರಾಟ ನಮೋನ ಭಾಷಣಕ್ಕಾಗಿ ಭಾರಿ ಜನಸ್ತೋಮಕ್ಕಾಗಿ ವ್ಯವಸ್ಥೆ ಮಾಡಿದ್ದರೂ, ಮೈದಾನದಲ್ಲಿ ನೊಣ ಹೊಡೆಯಲು ಜನರು ಇಲ್ಲದ್ದನ್ನು ನೋಡಿ ನಮೋಗೆ ನಿರಾಶೆಯಾಯಿತು. ಗುಂಪು ಗುಂಪಾಗಿ ಜನರೂ ಅಲ್ಲಲ್ಲಿ ನಿಂತಿದ್ದರೂ “ಗೋ ಬ್ಯಾಕ್…ನಮೋ. ಈಗ ಏಕೆ ಬಂದೆ?” ಎಂದು ಬರೆದ ಭಿತ್ತಿಪತ್ರಗಳನ್ನು ಹಿಡಿದು ನಿಂತಿದ್ದರು. ನೆರೆದ ಜನರಿಗಿಂತ ಹೆಚ್ಚಾಗಿದ್ದ ಅರಮನೆಯ ತೊಡೆಕೂಸು ಮಾಧ್ಯಮಗಳ ಪತ್ರಕರ್ತರೊಂದಿಗೆ ಮೆರವಣಿಗೆ ಮುಖ್ಯವೇದಿಕೆಯತ್ತ ಬರುತ್ತಿದ್ದಂತೆ ಲೌಡ್ ಸ್ಪೀಕರ್ ನಲ್ಲಿ ಹಾಡೊಂದು ಕೇಳ ಬರತೊಡಗಿತು.

ಹಿಂತಿರುಗಿ ಹೋಗು ಇಲ್ಲಿಂದ

ನನ್ನಮ್ಮನ ಅತ್ಯಾಚಾರ ಮಾಡಿ
ಬೆತ್ತಲೆ ಮೆರವಣಿಗೆ ಮಾಡಿದಾಗ ನೀನು ಬರಲಿಲ್ಲ…
ನಮ್ಮ ಮನೆ ಹೊತ್ತಿ ಉರಿದಾಗ ಬರಲಿಲ್ಲ…
ನನ್ನ ಸೋದರರು ಹೆಣಗಳಾಗಿ ಬಿದ್ದಾಗ ಬರಲಿಲ್ಲ…

ಈಗ ಬಂದೆ ಏಕೆ?

ನೆಮ್ಮದಿಯಿಂದ ಜನಗಳ ಮಧ್ಯೆ ಇಟ್ಟ
ಸನಾತನ ಕೊಳ್ಳಿಯಲ್ಲಿ ನಿನ್ನ ಪಾಲು ಎಷ್ಟು?

ಬರಬೇಕಾದಾಗ ಬರದವನು
ಈಗ ಬಂದದ್ದಾದರೂ ಏಕೆ?

ಹಿಂತಿರುಗು ಬೇಗ ಈ ನೆಲ ರೊಚ್ಚಿಗೇಳುವ ಮುನ್ನ.

ಹಾಡನ್ನು ಕೇಳುತ್ತಲೇ ಸಾಮ್ರಾಟ ನಮೋ ಮುಖ ಕಪ್ಪಿಟ್ಟಿತು. ಪಕ್ಕದಲ್ಲಿದ್ದ ಪ.ಸೆ ಯನ್ನು ದುರದುರನೆ ನೋಡುತ್ತಲೇ, ಅವನು ವೇದಿಕೆಗೆ ದೌಡಾಯಿಸಿ ಹಾಡನ್ನು ನಿಲ್ಲಿಸಿದ. 

ಕುಟೀರ ಸಿದ್ಧಪಡಿಸಿದ ಭಾಷಣವನ್ನು ಪ.ಸೆ ಕೊಡಲು ಹೋದಾಗ ಅದನ್ನು ನಿರಾಕರಿಸಿ, ಸಾ.ನಮೋ ತನ್ನ ಎಂದಿನ ಶೈಲಿಯಲ್ಲಿ ನಿರ್ಜನವಾಗಿದ್ದ ಮೈದಾನದತ್ತ ಸುತ್ತಲೂ ಗಾಳಿಯಲ್ಲಿ ಕೈಯಾಡಿಸಿ ತನ್ನ ಭಾಷಣ ಆರಂಭಿಸಿದ.

“ಮಣಿಪುರ ದೇಶದ ನನ್ನ ತಂದೆತಾಯಂದಿರೇ, ಅಣ್ಣತಮ್ಮಂದಿರೇ, ಅಕ್ಕತಂಗಿಯರೇ…” ಎಂದ ಕೂಡಲೇ ನೂರಾರು ಕ್ಯಾಮೆರಗಳು ಕ್ಲಿಕ್ಕಿಸಿದವು. ʼಮಣಿಪುರ ದೇಶದಲ್ಲಿ ಸಾಮ್ರಾಟ ನಮೋ ಅವರ ವೀರ ಸನ್ಯಾಸಿಯ ಭಾಷಣʼ ಎಂಬ ಶೀರ್ಷಿಕೆ ಹಾಕಿ ಟೀವಿಯಲ್ಲಿ ಸುದ್ದಿ ಲೈವ್‌ ಬಿತ್ತರವಾಗತೊಡಗಿತು.

“ನಮ್ಮ ಭರತಖಂಡ ಶಾಂತಿದೂತರ ನಾಡು. ಸತ್ಯ, ಅಹಿಂಸೆ ಅದರ ಮಣ್ಣಿನ ಗುಣ. ನಮ್ಮ ದೇಶ ಎಷ್ಟು ನೆಮ್ಮದಿ, ಸಂತೋಷದಿಂದ ಇದೆ ಎಂದರೆ, ನಾವು ಶೇಕಡ ಹದಿನೆಂಟು…ಇಪ್ಪತ್ತೆಂಟರಷ್ಟು ಹಾಕಿದರೂ ಪ್ರಜೆಗಳು ಉಸಿರೆತ್ತದೆ ತೆರಿಗೆ ಕಟ್ಟುತ್ತಿದ್ದಾರೆ. ಅಂದರೆ ಅಷ್ಟು ಸಂಪತ್ಭರಿತರಾಗಿದ್ದಾರೆ. ಸುಖದಲ್ಲಿ ತೇಲಾಡುತ್ತಿದ್ದಾರೆ. ಯಾಕೆಂದರೆ ಅಲ್ಲಿ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ” ಎಂದು ನಂಬಿ ಹೆಣ್ಣನ್ನು ಆದರಿಸುತ್ತಿದ್ದಾರೆ.

ಆದರೆ, ನಿಮ್ಮ ದೇಶಕ್ಕೆ ಏನಾಗಿದೆ? ಈ ಸುಂದರ ಮಣಿಪುರ ದೇಶದ ಸೋದರರಾದ ನೀವುಗಳು ಪರಸ್ಪರ ಯಾಕೆ ಕಚ್ಚಾಡುತ್ತಿದ್ದೀರ? ಈ ದೇಶದಲ್ಲಿ ಮಹಿಳೆಯರ ಮಾನಹರಣ ಏಕಾಗುತ್ತಿದೆ? ಯೋಚಿಸಿ…ನಿಮ್ಮ ದೇಶಕ್ಕೆ ಶಾಂತಿ, ನೆಮ್ಮದಿ, ಸಂಪತ್ತು ಮಹಿಳೆಯರನ್ನು ಗೌರವಿಸುವುದರಿಂದಲೇ ಬರಬೇಕು. ಚಿಂತೆ ಮಾಡಬೇಡಿ. ನಿಮ್ಮ ದೇಶದೊಂದಿಗೆ ನಾವಿದ್ದೇವೆ. ನಿಮಗೆ ಸಾವಿರಾರು ಕೋಟಿ ಧನಸಹಾಯ ಮಾಡುತ್ತೇವೆ. ಉರಿಯುತ್ತಿರುವ ಮಣಿಪುರ ದೇಶವನ್ನು ಪವಿತ್ರ ಗಂಗೆಯಿಂದ ನಂದಿಸಿ, ನಿಮ್ಮ ಬಾಳನ್ನು ಬೆಳಗುತ್ತೇವೆ. ಮಣಿಪುರ ದೇಶದ ಅಭಿವೃದ್ಧಿ, ನೆಮ್ಮದಿಗಾಗಿ ನಾನು ಸಾಮ್ರಾಟ ನಮೋ ಪ್ರಾಣ ಕೊಡಲು ಸಿದ್ದನಿದ್ದೇನೆ…..

ವೇದಿಕೆಯಲ್ಲಿ ಪುಂಖಾನುಪುಂಖವಾಗಿ ಕಂಬಿ ಇಲ್ಲದ ರೈಲನ್ನು ಸಾ. ನಮೋ ಬಿಡುತ್ತಿರುವಾಗ, ಪ್ರತಿಭಟಿಸಲು ಬಂದ ಜನರು ಭಾಷಣ ಕೇಳಿ ಅವಾಕ್ಕಾದರು. ಪದೇಪದೇ ನಮೋ, ಮಣಿಪುರವನ್ನು ʼದೇಶ…ದೇಶʼ ಎಂದು ಸಂಬೋಧಿಸುತ್ತಿದ್ದುದನ್ನು ಕೇಳಿ “ಈ ಸಾಮ್ರಾಟನಿಗೆ ಫಾರಿನ್ ಟೂರ್ ರೋಗ ಬಡಿದಿದೆ. ತನ್ನ ದೇಶದ ಜನರನ್ನೇ ಪರದೇಶಿಗಳೆಂದು ಕರೆಯುತ್ತಿದ್ದಾನೆ! ಎಂತಹ ಅವಿವೇಕಿ ನಮೋ!” ಎಂದು ಮಾತಾಡಿಕೊಂಡರು.

ಭಾಷಣ ಮುಗಿದು ಹೊರಡುವಾಗ ನಮೋ ಪ.ಸೆ ಯತ್ತ ಕಣ್ಣು ಮಿಟುಕಿಸಿದ. ಅವನ ಸಂಜ್ಞೆ ಅರ್ಥವಾಗದೆ ಪ.ಸೆ ಅವನ ಬಾಯಿಗೆ ತನ್ನ ಕಿವಿ ತುರುಕಿದ. “ಎಲ್ಲಯ್ಯ…ಯಾರು ಕಾಣ್ತಾಯಿಲ್ಲ! ಈ ದೇಶದಲ್ಲಿ ಪ್ರಧಾನಿ, ಅಧ್ಯಕ್ಷ, ರಾಜ…ಹೇಳೋರು ಕೇಳೋರು ಒಬ್ರು ಇಲ್ವ? ತಮ್ಮ ದೇಶದ ಅತ್ಯುನ್ನತ  ನಾಗರೀಕ ಗೌರವ ಮೆಡೆಲ್‌ ಕೊಡೋದಿಲ್ವ?” ಅಂದ ನಮೋ ಮಾತಿಗೆ ಪ.ಸೆ ಅಲ್ಲೇ ಮೂರ್ಛೆ ಹೋದ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page