Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಾ.ಕೃ.ಕುಟೀರದ ಪೂಜಾರಿ ಮತ್ತು ಮ.ಮೀ.ಬಿಲ್‌ ಮಸಲತ್ತು

ನಮೋ ಯಾರನ್ನೋ ಎದುರು ನೋಡುತ್ತ, ಶತಪಥ ಹಾಕುತ್ತ ಭಾರೀ  ಗಡಿಬಿಡಿಯಲ್ಲಿದ್ದ. ಮುಖದಲ್ಲಿ ಎಂದಿನ ವೀರಾವೇಶವಿರದೆ ಆತಂಕ ತುಂಬಿತ್ತು. ಆಗಾಗ ತನ್ನ ಪರ್ಸನಲ್‌ ಸೆಕ್ರೆಟರೀನ ಕರೆದು “ಬಂದ್ರಾ….ಬಂದ್ರ” ಎಂದು ವಿಚಾರಿಸುತ್ತಿದ್ದ.

ಹಿಂದಿನ ದಿನ ನಮೋ ಲ್ಯಾಪ್ ಟಾಪ್ ಹಿಡಿದು ತನ್ನ ವಿರೋಧಿಗಳಿಂದ ತನಗೆಷ್ಟು ಕೆಜಿ ಬೈಗುಳಗಳು ಬಂದಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ನಡೆಸಿ, ಕ್ಯಾಲುಕ್ಯುಲೇಟರ್ ರಲ್ಲಿ ಲೆಕ್ಕಾಚಾರ ಹಾಕುತ್ತಿದ್ದಾಗ  ಮೊಬೈಲ್  “ನಮಸ್ತೇ…ಸದಾ ವತ್ಸಲೇ ಮಾತೃಭೂಮೇ…” ಎಂಬ ರಿಂಗ್ ಟೋನ್ ಗುಣಗುಣಿಸಿತು. ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತನ ಕರೆ ಅದಾದ್ದರಿಂದ ಅವಸರದಲ್ಲಿ ಫೋನ್ ಎತ್ತಿ “ಜೈಹಿಂದ್‌ ….ಜೈ ಭಾರತ್ ಮಾತಾ…ಜೈ ಅಖಂಡ ಭಾರತ್”ಎಂದ. ಆ ಕಡೆಯಿಂದ  “ಸಾಹೇಬ್ರು ಏನ್  ಕಿಸಿತಿದ್ದೀರ?” ಎಂಬ ಕುಹಕ ಧ್ವನಿ ಕೇಳಿ ಬಂದಾಗ, ಏನೋ ಎಡವಟ್ಟು ಆಗಿರಬಹುದೆಂದು ಎದ್ದು ನಮೋ ಅಟೆನ್ ಷೆನಲ್ಲಿ ನಿಂತ.

“ಏನಿಲ್ಲ…ಪುರೋಹಿತರೇ…ಈ ದಿನ ಎನಿಮಿಗಳ ಒಟ್ಟು ಎಷ್ಟು ಕೆಜಿ ಬೈಗುಳ ಬಂದಿದೆಯೆಂದು ಚೆಕ್‌ ಮಾಡ್ತಿದ್ದೆ”

“ಅದ್ಯಾಕಯ್ಯ….ನಿನಗೊಬ್ಬನಿಗೆ ಅಷ್ಟೊಂದು ಬೈಗುಳ…ಲೇವಡಿ ಬರುತ್ತೆ?”

“ನನ್ನ ಕಂಡ್ರೆ ಅವರಿಗೆಲ್ಲ ಹೊಟ್ಟೆಉರಿ. ನಾನು ಕುಂತ್ರು ಬೈಯ್ತಾರೆ…ನಿಂತ್ರು ಬೈಯ್ತಾರೆ…ಭಾಷಣ ಮಾಡಿದ್ರಂತೂ ಮೈಮೇಲೆ ಬರ್ತಾರೆ”

“ನೀನು ಪೆದ್ದುಪೆದ್ದಾಗಿ ಮಾತಾಡಿದ್ರೆ ಬೈದೇ ಏನ್‌ ಮಾಡ್ತಾರೆ! (a+b)̄2 ನಲ್ಲಿ 2ab ಎಕ್ಸ್ಟ್ರಾ ಸಿಗ್ತು ಅಂತೀಯಾ….ನೀನೇನು ಬೀಜಗಣಿತ ಪಂಡಿತನೋ? ಮತ್ತೊಂದು ಸಲ ಚರಂಡಿಯಲ್ಲಿ ಪೈಪ್‌ ಇಳಿಸಿ ಗ್ಯಾಸ್‌ ತೆಗೆದು ಟೀ ಮಾಡಬಹುದು ಅಂತೀಯ! ಮೋಡ ಇದ್ರೆ ರಾಡಾರ್‌ ಸಿಗ್ನಲ್‌ ನಿಂದ ಬಚಾವಾಗಬಹುದು ಅಂತೀಯ! ಏನೋ ನಮ್ಮ ಪೂರ್ವಾಶ್ರಮದ ಛಾನ್ಸೆಲರ್‌ ಇದ್ದದ್ದರಿಂದ ಕಷ್ಟಪಟ್ಟು ಯೂನಿವರ್ಸಿಟಿಲೀ ಮಾಸ್ಟರ್‌ ಡಿಗ್ರಿ ಸರ್ಟಿಫಿಕೇಟ್‌ ಕೊಡಿಸಿದ್ದೀನಿ. ಇಟ್ಕೊಂಡ್‌ ಸುಮ್ನಿರದೆ….ಈ ತರ ಕಂಬಿ ಇಲ್ಲದ ರೈಲು ಯಾಕಪ್ಪ ಬಿಡಬೇಕು?”

“ಅದು…ಅದು…ನನ್ನ ಅಭಿಮಾನಿಗಳು…ಭಕ್ತರನ್ನು ಮೆಚ್ಚಿಸೋಕೆ ಅಷ್ಟೇ”

“ಮುಚ್ಚಯ್ಯ ಬಾಯಿ…ಭಕ್ತರನ್ನ ಮೆಚ್ಚಿಸೋದಿರಲಿ…ವಿವೇಕವಂತರು ನಮ್ಮ ದೇಶದ ನಾಯಕ ಹಿಂಗೆ…. ಹೆಬ್ಬೆಟ್ಟು ಗಿರಾಕಿ ಅಂತ ಎಲ್ಲಾ ಕಡೆ ಮಾನ ಮಾರ್ಯಾದೆ ತೆಗೀತಿದ್ದಾರೆ. ನಿಂಗೆ ಎಷ್ಟು ಹೇಳಿದ್ರು ಬುದ್ಧಿ ಬರಲ್ಲ. ಅದು ಬಿಡು….ನಾಳೆ ಬರ್ತೀನಿ…ಬಿಲ್‌ ಎಲ್ಲಾ ರೆಡಿ ಮಾಡಿಟ್ಟಿರು”

ಬಿಲ್ಲು ಎಂದ ಕೂಡಲೇ ನಮೋ ಗಲಿಬಿಲಿಗೊಂಡ. ಯಾವ ಬಿಲ್‌ ಬಗ್ಗೆ ಕೇಳ್ತಿದ್ದಾರೆ ತಿಳಿಯದೆ ತಲೆ ಕೆರೆದುಕೊಂಡ.

“ಸ್ವಾಮಿ…ಬಿಲ್ಲನ್ನೆಲ್ಲ ನನ್ನ ಪರ್ಸನೆಲ್‌ ಸೆಕ್ರೆಟರಿನೇ ನೋಡೋದು. ಅದೆಲ್ಲ ಪೇ ಆಗಿದೆ. ಬಾಕಿ ಯಾವ್ದು ಉಳಿಸಿಕೊಂಡಿಲ್ಲ….” ಅಂತ ಏನೋ ಹೇಳುತ್ತಿದ್ದವನಿಗೆ ಆ ಕಡೆಯಿಂದ “ಆಯ್ತು…ಅಲ್ಲೇ ಬಂದು ಚೆಕ್ ಮಾಡ್ತೀನಿ. ಫೋನಲ್ಲೇ ಚೆಕ್‌ ಮಾಡೋಕೆ ಆಗುತ್ತಾ?” ಎಂದು ಫೋನು ಕುಕ್ಕಿದ ಶಬ್ದ ಕೇಳಿ ಬಂತು.

ಗಡ್ಡ ನೀವಿಕೊಳ್ಳುತ್ತ ಯಾವ ಬಿಲ್ಲು ಎಂದು ಚಿಂತಿಸುತ್ತಿದ್ದಾಗ, “ನಿಮ್‌ ಸಾಹೇಬಂದು ಭಾಳ ಷೋಕಿ ಆಯ್ತು! ಆಶ್ರಮದಲ್ಲಿದ್ದಾಗ ಮೂರೊತ್ತು ಉಪ್ಪಿಟ್ಟು ತಿಂದ್ಕೊಂಡ್….ವಾರಕ್ಕೊಮ್ಮೆ ಹಾಕಿದ್ದ ಚಡ್ಡಿನಾ ಬದಲಿಸುತ್ತಿದ್ದದ್ದನ್ನ, ಈಗ ಮೆಮೊರಿ ಫೋಮ್‌ ಬೆಡ್ ಸಿಕ್ತು ಅಂತ ಎಲ್ಲಾ ಮರೆತಿರಬೇಕು. ಮಜಾ ಮಾಡ್ತಿರೋದು  ಜನರ ತೆರಿಗೆ ಹಣ ನೆನಪಿರಲಿ. ಎಲ್ಲವೂ ಮಿತಿಯಲ್ಲಿರಬೇಕು” ಎಂದು ಒಮ್ಮೆ ತನ್ನ ಪಿಎಗೆ ಪುರೋಹಿತ ಜಾಡಿಸಿದ್ದು ನೆನಪಿಗೆ ಬಂದು ಕೂಡಲೇ ಪಿಎಯನ್ನು ಬರಹೇಳಿದ.  

“ನೋಡು…ನನ್ನ ಡ್ರೆಸ್‌ ಡಿಸೈನರ್‌, ಕ್ಯಾಪ್‌ ಡಿಸೈನರ್‌, ಪೇಟ ಡಿಸೈನರ್, ದಾಡಿ ಡಿಸೈನರ್‌, ಷೂ ಡಿಸೈನರ್‌…ಇನ್ನು ಯಾರ್ಯಾರಿದ್ದಾರೊ ಅವರಿಗೆ ಪೇ ಮಾಡಿರೋ ಬಿಲ್ಲನ್ನೆಲ್ಲ ತರಿಸು. ಎಲ್ಲಾ ವರ್ಷದ್ದು ತಗೊಂಬಾ. ಪೂಜಾರಿ ಸಿಡುಕ. ಯಾವ ವರ್ಷದ್ದು ಕೇಳ್ತಾನೊ ಗೊತ್ತಿಲ್ಲ”

ಪಿಎ ಹಲ್ಲು ಕಿರಿಯುತ್ತ ನಿಂತಾಗ….

“ಯಾಕಪ್ಪ….ಅಕೌಂಟ್‌ ಸರಿಯಾಗಿ ಇಟ್ಟಿಲ್ವ…ಗೋಲ್‌ ಮಾಲ್‌ ಏನಾದ್ರೂ….”

“ಅಯ್ಯೋ…ಅದೇನಿಲ್ಲ ಸಾರ್….ಕಳೆದ ಒಂಭತ್ತು ವರ್ಷದ್ದು ಅಂದ್ರೆ…ಸುಮಾರು ಒಂದೆರೆಡು ಟ್ರಕ್‌ ಆಗುತ್ತೆ. ಹಂಗೆ ತಂದ್ರು ಅದನ್ನ ಎಲ್ಲಿ ಜೋಡಿಸೋದು?”

“ಹ್ಞು…ಒಂದು ಕೆಲ್ಸ ಮಾಡು. ಕಳೆದ ಎರಡು ವರ್ಷದ್ದು ಮಾತ್ರ ತರಿಸು. ಆಮೇಲೆ ನೋಡೋಣ”

ಸರಿ. ನಮೋನ ಅಪಾದಮಸ್ತಕ  ಷೋಕಿಗೆಂತ ಖರ್ಚು ಮಾಡಿದ ಬಿಲ್ಲುಗಳನ್ನು ತರಿಸಿ ಮನೆ ಆಫೀಸಿನ ರೂಮೊಂದರಲ್ಲಿ ಕಾಲಿಡಲು ಜಾಗವಿಲ್ಲದಂತೆ ಪಿಎ ಪೇರಿಸಿದ.

ಅತಿಥಿಗೃಹದ ಹೊರಗಡೆ ಯಾರೋ ಜೋರಾಗಿ ಮಾತನಾಡುವುದು ಕೇಳಿಬರುತ್ತಿದ್ದು, ಮೊದಲೇ ಟೆನ್ಶನಲ್ಲಿದ್ದ ನಮೋಗೆ ಪಿತ್ಥ ನೆತ್ತಿಗೇರಿ ಪಿಎಗೆ “ನನಗಿಂತ ಜೋರು ಬಾಯಿ!!….ಯಾರದು ನೋಡಿ ಬಾ” ಅಂದ. ಗೇಟಿನ ಬಳಿ ದೊಗಳೆ ಚಡ್ಡಿ ತೊಟ್ಟು, ಕೈಲಿ ಬಿದಿರು ಲಾಠಿ ಹಿಡಿದ ಒಬ್ಬ ಡೊಳ್ಳುಹೊಟ್ಟೆ ಆಸಾಮಿ ಪ್ರವೇಶ ನಿರಾಕರಿಸಿದ್ದಕ್ಕೆ ತಾರಮಾರ ಸೆಕ್ಯುರಿಟಿಯವರ ಮೇಲೆ ರೇಗುತ್ತಿದ್ದ. “ಚಡ್ಡಿ ಹಾಕ್ಕೊಂಡವ್ರನ್ನ ಒಳಗೆ ಬಿಡಲ್ಲ ಅಂತೀಯಾ? ಯಾವನಯ್ಯ ಅವ್ನು ನಿಮ್‌ ಸಾಮ್ರಾಟ…ಅವ್ನ ಕುರ್ಚಿಲೀ ಕೂಡಿಸಿದ್ದೇ ನಾನು…ಅವ್ನ ಹೊರಗೆ ಕರಿ…ನಾನ್ಯಾರು ಅಂತ ಗೊತ್ತಾಗುತ್ತೆ!” ಪಿಎಗೆ ಆದ ಎಡವಟ್ಟಿನ ಅರಿವಾಗಿ ಮಾ.ಕೃ.ಕುಟೀರದ ಪೂಜಾರಿಯ ಕ್ಷಮೆ ಕೇಳಿ ಒಳ ಬರಮಾಡಿಕೊಂಡ.

ಬುಸುಗುಡುತ್ತ, ಚಿತ್ಪಾವನ ಸಮುದ್ರಸಿಂಹ ಮೀಸೆ ತಿರುಗಿಸುತ್ತ ಒಳ ಬಂದ ಪೂಜಾರಿಗೆ ನಮೋ ನೆಲಕ್ಕುರಳಿ ಉದ್ದಂಡ ನಮಸ್ಕರಿಸಿದ. ಕುರ್ಚಿ ಮೇಲೆ ಕಾಲು ಮೇಲೆ ಕಾಲಾಕಿ ಕೂತ ಪೂಜಾರಿಗೆ ನಮೋನ ಜಗಮಗಿಸುವ ದಿರಿಸನ್ನು ನೋಡಿ ರೇಜಿಗೆ ಹುಟ್ಟಿತು.  “ಏನಯ್ಯ…ನಿನ್‌ ಅವತಾರ. ಯಾವಾಗ್ಲೂ ಭಾಷಣ ಮಾಡೋಕೆ ರೆಡಿಯಾಗಿರ್ತೀಯ?” ಅಂದದ್ದಕ್ಕೆ, “ಒಂದೇ ನಿಮಷ…ಒಳಗೋಗಿ ಪೂರ್ವಾಶ್ರಮದ ಗಣವೇಷಧಾರಿಯಾಗಿ ಬರುತ್ತೇನೆ” ಎಂದು ನಮೋ ಹಲ್ಲು ಕಿರಿದ. “ಅದೆಲ್ಲ ಏನು ಬೇಡ. ಮೊದಲು ಬಿಲ್‌ ತೋರಿಸು. ಸದನಕ್ಕೆ ತೋರಿಸೊ ಮುಂಚೆ ಏನಾದರೂ ಕರೆಕ್ಷನ್‌ ಇದೆಯಾ ಒಮ್ಮೆ ನೋಡ್ತೇನೆ” ಅಂದ. ಅವನ ಮಾತಿಗೆ ನಮೋ ಹೌಹಾರಿದ. ಐಷಾರಾಮಿ ಬಟ್ಟೆಬರೆಗೆ ಆದ ಖರ್ಚನ್ನು ಸದನದಲ್ಲಿಟ್ಟರೆ ಪ್ರತಿಪಕ್ಷದವರು ತನ್ನನ್ನು ಸುಮ್ಮನೆ ಬಿಡುವರೇ? ಸಿಕ್ಕಿದ್ದೇ ಚಾನ್ಸೂಂತ ವಿರೋಧಿಗಳು ಪಾನ್‌ ಪರಾಗ್‌ ಪಾನ್‌ ಮಸಾಲ ಜಗಿಯುತ್ತ ಉಗಿಯಲು ಸಿದ್ದರಾಗುತ್ತಿರುವ ಟ್ರೈಲರ್‌ ಕಣ್ಮುಂದೆ ಹಾಗೆ ಹಾಯ್ದು ಕರ್ಚೀಫಲ್ಲಿ ಮುಖ ಒರೆಸಿಕೊಂಡ.

ಬಿಲ್ಲುಗಳನ್ನು ಒಟ್ಟಿದ್ದ ರೂಮಿಗೆ ಪೂಜಾರಿಯನ್ನು ಕರೆತಂದಾಗ, ತಾರಸಿವರೆಗೆ ಪೇರಿಸಿಟ್ಟ ಬಿಲ್ಲಿನ ಬೆಟ್ಟವನ್ನು ನೋಡಿ ಅವಾಕ್ಕಾದ ಪೂಜಾರಿ ಸಡನ್ನಾಗಿ ನಮೋ ಕಡೆಗೆ ತಿರುಗಿ ದುರುಗುಟ್ಟಿದ. ಪೂಜಾರಿಯ ಮೂಗಿನ ಹೊಳ್ಳೆ, ಕಿವಿಗಳಿಂದ ಹೊರಹೊಮ್ಮುತ್ತಿದ್ದ ಹೊಗೆಯನ್ನು ಕಂಡ ನಮೋಗೆ ಕೈಕಾಲು ನಡುಕ ಆರಂಭವಾಯಿತು.

“ಏನಯ್ಯ…ಇದು ಪೇಪರ್‌ ಗಳ ರಾಶಿ. ನಾನು ಕೇಳಿದ್ದು ಮಹಿಳಾ ಮೀಸಲಾತಿ ಬಿಲ್‌”

ನಮೋಗೆ ತಟ್ಟನೆ ಮುಖಭಂಗವಾದಂತಾಗಿ ಕೈಕೈ ಹಿಸುಕಿಕೊಂಡು “ಓಹ್…ಅದಾ…ವುಮೆನ್‌ ರಿಸೆರ್ವೇಶನ್‌ ಬಿಲ್”‌ ಎಂದು ತಡವರಿಸಿ, ಒಣಗಿದ ತುಟಿಗಳನ್ನು ನಾಲಿಗೆಯಿಂದ ಸವರುತ್ತ ಪಿಎಗೆ ಕರೆದು ಕಿವಿಯಲ್ಲಿ ಏನೋ ಉಸುರಿ ಬೇಗ ಬರುವಂತೆ ಸನ್ನೆ ಮಾಡಿದ. 

“ಅದು ಸರಿ…ಪೂಜಾರ್ರೇ…ಈಗ್ಯಾಕೆ ಅದು ಅಂತ. ಪೂರ್ವಾಶ್ರಮದಲ್ಲಿ ನಮಗೆ ಹೆಣ್ಣು – ತಾಯಿ, ಹೆಂಡತಿ, ಮಗಳು, ಸೊಸೆ ಯಾರೇ ಆಗಿರಲಿ. ಅವರು ಗಂಡಿನ ಸೇವೆಗೆ ಮಾತ್ರ ಮೀಸಲು. ಅವರೆಲ್ಲಾ ಶೂದ್ರರಿಗೆ ಸಮಾನ…ಹಾಗೆಂದು ನಮ್ಮ ಸನಾತನ ಧರ್ಮದಲ್ಲೇ ಹೇಳಿದೆ ಅಂತೆಲ್ಲ ಪಾಠ ಮಾಡಿದ್ರೀ. ಈಗ ಅವ್ರಿಗೆ ರಿಸರ್ವೇಶನ್‌ ಅಂತಿದ್ದೀರಾ! ನಾಳೆ ನಮ್ಮ ತಲೆ ಮೇಲೆ ಬಂದು ಕೂತರೆ ಏನ್‌ ಮಾಡೋದು?”

“ಅದಕ್ಕೆ ನಿನ್ನ ತಲೆಯಲ್ಲಿ ನಿನ್ನ ಭಕ್ತರ ಹಾಗೆ ಮೆದುಳಿಲ್ಲ ಅನ್ನೋದು. ಅಲ್ಲಯ್ಯ…ಚುನಾವಣೆ ಹತ್ರ ಬರ್ತಿದೆ ಜನರನ್ನು ಮರುಳು ಮಾಡೋಕೆ ಏನಾದ್ರೂ ಹೊಸ ಪ್ಲಾನ್‌ ಮಾಡಿದ್ದೀಯ?”

“ಪ್ಲಾನ್‌ ಮಾಡೋದು ಏನಿದೆ? ಪಾಕಿಸ್ತಾನ, ಮುಸ್ಲಿಮ್‌, ರಾಮ ಮಂದಿರ, ಕಾಶ್ಮೀರ, ಪುಲ್ವಾಮ…ಎಲ್ಲಾ ರೆಡಿ ಇದೆಯಲ್ಲ!”

“ನೀನು ಫಾರಿನ್‌ ಟೂರ್‌ ಹೊಡ್ಕೊಂಡ್‌…ದೇಶದಲ್ಲಿ ಆಕ್ತಿರೋ ಡೆವಲಂಪ್‌ ಮೆಂಟ್ನ ಗಮನಿಸಿಲ್ಲ ಅನ್ಸುತ್ತೆ. ನಂಗೆ ಬಂದಿರೋ ಇಂಟೆಲಿಜೆನ್ಸ್‌ ರಿಪೋರ್ಟ್‌ ಪ್ರಕಾರ ಅವೆಲ್ಲಾ ಔಟ್‌ ಡೇಟೆಡ್‌ ಆಗಿವೆ. ಜನರಿಗೆ ಹೇಳಿದ್ದೇ ಹೇಳಿ ಹೇಳಿ ಅವರಿಗೂ ಸಾಕಾಗಿದೆ. ಈಗೇನಿದ್ರೂ ಹೊಸದನ್ನ ಹೊಸೀಬೇಕು”

“ಯುಸಿಸಿ, ಒನ್‌ ನೇಷನ್‌ ಒನ್‌ ಎಲೆಕ್ಷನ್‌…ಮತ್ತೆ ಭಾರತ ಅಂತ ಹೊಸನಾಮಕರಣ….ಸನಾತನ ಧರ್ಮ  ರಕ್ಷಣೆ ಇದೆಯಲ್ಲ”

“ಅದು ವರ್ಕೌಟ್‌ ಆಗೋದು ಡೌಟು. ಯಾವುದಕ್ಕು ಮ.ಮೀ. ಬಿಲ್ನೂ‌ ತಂದ್ರೆ…ಚದುರಿ ಹೋಗಿರೊ ಜನರನ್ನ ಒಗ್ಗೂಡಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬಹುದು”

“ಅದು ಸರಿ…ಆದ್ರೆ ಮನುಸ್ಮೃತಿನಾ ಚೆನ್ನಾಗಿ ಕಂಠಪಾಠ ಮಾಡಿರೋ ನಮ್ಮ ಸಂಚಾಲಕರು, ನಮ್ಮ ಕಮಲಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಯೋಗಿಬಾಬಾ ಈ ಮ.ಮೀ.ಬಿಲ್ಲನ್ನು ವಿರೋಧಿಸಿದರೆ ಪ್ರಚಾರಕ್ಕೆ ತೊಂದ್ರೆ ಆಗುತ್ತಲ್ವ…ಪುರೋಹಿತರೇ?”

“ಅದು ನಂಗೆ ಗೊತ್ತು…ಅದಕ್ಕೂ ಒಂದ್‌ ಐಡಿಯಾ ಮಾಡಿದ್ದೀನಿ. ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದ, ಸಮಗ್ರತೆ ತೆಗೆದು ಹಾಕೋಣ”

“ಅಯ್ಯೋ! ಅದಷ್ಟು ಸುಲಭನಾ! ಜನ ತಿರುಗಿ ಬಿದ್ರೆ?”

“ಅದಕ್ಕೆ ನಿನ್ನ ಶತದಡ್ಡ ಅನ್ನೋದು. ನೋಡು…ಸಂವಿಧಾನದ ಅಪರಿಷ್ಕೃತ ಹಳೇ ಪಠ್ಯನ ಹಂಚೋದು. ವಿರೋಧಿಗಳು ಗೊಣಗಾಡಿದರೂ ಮೂಲ ಬದಲಾವಣೆಗೆ ಕೈ ಹಾಕಿಲ್ಲಾಂತ ಸಮಾಧಾನ ಪಡ್ತಾರೆ. ನಮ್ಮವರಿಗೆ ಸನಾತನಕ್ಕೆ ಒಗ್ಗದ ಜಾತ್ಯತೀತ, ಸಮಾಜವಾದ, ಸಮಗ್ರತೆನಾ ಎರೆಸ್‌ ಮಾಡಿದ್ದೀವಿ ಅಂತ ನಾನು ಹೇಳಿದ್ರೆ ನಂಬ್ತಾರೆ. ಅಲ್ಲಿಗೆ ಒಂದೇ ಬಲೆಲೀ ಇಬ್ಬರನ್ನು ಕೆಡವಿದ ಹಾಗಾಗುತ್ತೆ”

ಎಷ್ಟಾದರೂ ಪುರೋಹಿತನ ಬ್ರೈನ್…ನಮೋ ಅವನ ಮಾತಿಗೆ ಮೆಚ್ಚುಗೆಯಿಂದ ತಲೆದೂಗಿ, ಕೈ ಜೋಡಿಸಿ ತಲೆ ತಗ್ಗಿಸಿ  ನಿಂತ. ಪುರೋಹಿತ  ಜೋರಾಗಿ ನಗುತ್ತ ನಮೋ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ.

ಚಂದ್ರಪ್ರಭ ಕಠಾರಿ

ಇದನ್ನೂ ಓದಿ-ವಿಶ್ವ ದೊಡ್ಡಣ್ಣ ಮತ್ತು ವಿಶ್ವಗುರುವಿನ ವಾಯುವಿಹಾರ

Related Articles

ಇತ್ತೀಚಿನ ಸುದ್ದಿಗಳು