Tuesday, November 4, 2025

ಸತ್ಯ | ನ್ಯಾಯ |ಧರ್ಮ

ಸಂಸತ್ತಿನ ಪೂರ್ವಸೂರಿಗಳು – 14 : ಭಾರತದಲ್ಲಿ ಸ್ಮರಿಸಲೇಬೇಕಾದ ಮಹತ್ವದ ವ್ಯಕ್ತಿತ್ವ ಮಧು ಲಿಮಾಯೆ

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಹದಿನಾಲ್ಕನೆಯ ಲೇಖನ

ಸಮಾಜವಾದಿ ನಾಯಕರಾಗಿ, ದೇಶದ ಸಮಾಜವಾದಿ ಚಳುವಳಿಯನ್ನು ವಿವಿಧ ಹಂತಗಳ ಮೂಲಕ ಮುನ್ನಡೆಸಿದವರು ಮಧು ಲಿಮಾಯೆ.

ಮಧು ಲಿಮಾಯೆ ಆಧುನಿಕ ಭಾರತದ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರು. ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ಅದರ ನಂತರ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾವನ್ನು ವಿಮೋಚನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರೊಬ್ಬ ಕಡು ಸಮಾಜವಾದಿಯಾಗಿದ್ದರು, ವಿಶಿಷ್ಟ ಸಂಸದೀಯ ಪಟುವಾಗಿದ್ದರು, ನಾಗರಿಕ ಸ್ವಾತಂತ್ರ್ಯಗಳ ಪ್ರತಿಪಾದಕರಾಗಿದ್ದರು, ಅದ್ಭುತ ಬರಹಗಾರರಾಗಿದ್ದರು ಮತ್ತು ದೇಶದ ಸಾಮಾನ್ಯ ಜನರ ಏಳಿಗೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡವರಾಗಿದ್ದರು. ಪ್ರಜಾಸತ್ತಾತ್ಮಕ ಸಮಾಜವಾದಿ ಚಳವಳಿಯ ಕ್ರಿಯಾಶೀಲ ನಾಯಕರಾಗಿದ್ದರು ಲಿಮಾಯೆ. ತಮ್ಮ ಜೀವನದುದ್ದಕ್ಕೂ ತಾನು ನಂಬಿದ ಸಿದ್ಧಾಂತಕ್ಕೆ ಕಟಿಬದ್ಧರಾಗಿ ನಿಂತಿದ್ದರು.

ಸರಳತೆ, ದೃಢತೆ, ಉನ್ನತವಾದ ನೈತಿಕ ಮನೋಭಾವ, ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಯ ಸಿದ್ಧಾಂತಗಳು ಮೊದಲಾದವು ಅವರ ಮೇಲೆ ಗಾಢ ಪ್ರಭಾವ ಬೀರಿದ್ದವು. ಈ ತತ್ವಗಳನ್ನು ಅವರು ಹಿಂಬಾಲಿಸಿಕೊಂಡು ಅಳವಡಿಸಿಕೊಂಡರು. ಆದ್ದರಿಂದಲೇ ಅವರು ಇತರ ನಾಯಕರ ನಡುವೆ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡರು. ಒಬ್ಬ ಸಮಾಜವಾದಿ ನಾಯಕರಾಗಿ, ದೇಶದ ಸಮಾಜವಾದಿ ಚಳುವಳಿಯನ್ನು ವಿವಿಧ ಹಂತಗಳ ಮೂಲಕ ಮುನ್ನಡೆಸಿದರು.

ಸಂಸದರಾಗಿ
ಲಿಮಾಯೆ 1964 ರಿಂದ 1979 ರವರೆಗೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಭಾರತೀಯ ಸಂವಿಧಾನದ ವಿಶ್ವಕೋಶದಂತಿದ್ದ ಅವರು ಸಂಸತ್ತಿನಲ್ಲಿ ಸಂವಿಧಾನದ ಮೇಲೆ ಮಾಡಿದ ಭಾಷಣಗಳು ಮೈಲಿಗಲ್ಲುಗಳಾಗಿವೆ. ಆ ಭಾಷಣಗಳು ಕೇವಲ ಪಾಂಡಿತ್ಯ, ಪ್ರಬುದ್ಧತೆ ಮತ್ತು ತಿಳುವಳಿಕೆಗಳ ಕಾರಣದಿಂದ ಹಾಗೆ ಗುರುತಿಸಲ್ಪಟ್ಟಿರುವುದಲ್ಲ, ಬದಲಿಗೆ ಅವುಗಳಲ್ಲಿದ್ದ ಸಾಮಾನ್ಯ ಜನರ ಪರವಾದ ಕಾಳಜಿ ಮತ್ತು ಬದ್ಧತೆಗಳೇ ಅದಕ್ಕೆ ಕಾರಣ. ಲೋಕಸಭಾ ಸದಸ್ಯರಾಗಿ ಸ್ಪಷ್ಟ ಮತ್ತು ಜವಾಬ್ದಾರಿಯುತ ಸಂಸದೀಯ ಪಟು ಎಂಬ ನೆಲೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಅವರು ಮಾತಿಗೆ ನಿಂತರೆ, ಸಂಸದರೆಲ್ಲ ಪಕ್ಷಬೇಧ ಮರೆತು ಉತ್ಸಾಹದಿಂದ ಕೇಳಿಸಿಕೊಳ್ಳುತ್ತಿದ್ದರು. ಆರನೇ ಲೋಕಸಭೆಯಲ್ಲಿ ಅವರು ಮಂಡಿಸಿದ ಹಕ್ಕುಚ್ಯುತಿ ನಿರ್ಣಯದಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಪ್ಪಿತಸ್ತರೆಂದು ಸಾಬೀತಾಗಿ ಅವರ ಸದಸ್ಯತ್ವ ರದ್ದುಗೊಂಡು ಜೈಲು ಸೇರಿದ್ದರು.

ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರ ಪ್ರಕಾರ, “ಸದನದಲ್ಲಿ ತಮ್ಮ ಛಾಪು ಮೂಡಿಸಲು ಸಂಸದರಿಗೆ ಇರುವ ಅತ್ಯುತ್ತಮ ಮಾರ್ಗವೆಂದರೆ, ನಿಗದಿತ ಕಾರ್ಯಕಲಾಪಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಸದಸ್ಯರಿಗೆ ಲಭ್ಯವಿರುವ ಸಂಸದೀಯ ಸಾಧನಗಳನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳುವುದು ಎಂಬುದನ್ನು ತಮ್ಮ ಅನುಕರಣೀಯ ಕೆಲಸಗಳ ಮೂಲಕ ಮಾಡಿ ತೋರಿಸಿದವರು ಲಿಮಾಯೆ. ಐದನೇ ಲೋಕಸಭೆಯಲ್ಲಿ ಅವರ ಕಿರಿಯ ಸಹೋದ್ಯೋಗಿಗಳಲ್ಲಿ ಒಬ್ಬನಾಗಿ ನನಗೆ ಅವರನ್ನು ಬಹಳ ಹತ್ತಿರದಿಂದ ಕಾಣುವ ಮತ್ತು ಲೋಕಸಭೆಯಲ್ಲಿ ಅವರ ಅದ್ಭುತ ಹಸ್ತಕ್ಷೇಪಗಳನ್ನು ವಿಸ್ಮಯ ಮತ್ತು ಗೌರವಗಳೊಂದಿಗೆ ಗಮನಿಸುವ ಅಪೂರ್ವ ಅವಕಾಶ ದೊರಕಿತ್ತು. ಅವರಿಂದ ದೊರೆತ ಮಾರ್ಗದರ್ಶನ ಮತ್ತು ವಾತ್ಸಲ್ಯವನ್ನು ನಾನು ಯಾವಾಗಲೂ ಅನುಸರಿಸುತ್ತೇನೆ.”

ಲಿಮಾಯೆ ಅವರ ಮಾತುಗಳಲ್ಲೇ ಹೇಳುವುದಾದರೆ, “ಸಂಸತ್ತು ಸಾಮೂಹಿಕ ಮತ್ತು ಜನಪರ ಚಳುವಳಿಗಳಿಗೆ ಪರ್ಯಾಯ ವೇದಿಕೆಯಾಗಿರಲಿಲ್ಲ. ಬದಲಿಗೆ, ಸಾರ್ವಜನಿಕ ಸೇವೆ ಮತ್ತು ಕುಂದುಕೊರತೆಗಳ ನಿವಾರಣೆಗೆ ಅದೊಂದು ಹೆಚ್ಚುವರಿ ಸಾಧನವಾಗಿತ್ತು. ಅದನ್ನು ಸಾಮಾನ್ಯ ಜನರ ಆಶೋತ್ತರಗಳನ್ನು ಈಡೇರಿಸುವ ಸಾಧನವಾಗಿಯೇ ಬಳಸಬೇಕು.” ಲಿಮಾಯೆ ತನ್ನ ಅಪಾರ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಸದನದಲ್ಲಿ ಹಲವು ಪ್ರಮುಖ ವಿಷಯಗಳನ್ನು ಎತ್ತಿದ್ದರು. ಅನುಕರಣೀಯ ಶೈಲಿಯಲ್ಲಿ ಸದನದ ಚರ್ಚೆಗಳು ಮತ್ತು ಕಲಾಪಗಳನ್ನು ಶ್ರೀಮಂತಗೊಳಿಸಿದ ಕಾರಣಕ್ಕೆ ಅವರನ್ನು ಒಬ್ಬ ಅತ್ಯುತ್ತಮ ಸಂಸದೀಯ ಪಟು ಎಂದು ಸ್ಮರಿಸಲಾಗುತ್ತದೆ.

1922 ಮೇ 1 ರಂದು ಮಹಾರಾಷ್ಟ್ರದ ಪುಣೆಯ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಲಿಮಾಯೆ ಅವರ ಜನನ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1937 ರಲ್ಲಿ ಅವರು ಪುಣೆಯ ಫರ್ಗುಸನ್‌ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆಂದು ಸೇರಿಕೊಳ್ಳುತ್ತಾರೆ. ಈ ಅವಧಿಯಲ್ಲಿಯೇ ಅವರು ಸಮಾಜವಾದಿ ಚಿಂತನೆಗಳತ್ತ ಆಕರ್ಷಿತರಾಗುವುದು.

ವಿದ್ಯಾರ್ಥಿ ಚಳುವಳಿಯಲ್ಲಿ ತೊಡಗಿಸಿಕೊಳ್ಳುವ ಅವರು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ (AISF) ಸಕ್ರಿಯ ಕಾರ್ಯಕರ್ತರೂ ಆಗುತ್ತಾರೆ. ಮಾನವಕುಲವನ್ನು ವಸಾಹತುಶಾಹಿ, ಬಡತನ ಮತ್ತು ಅನ್ಯಾಯಗಳ ಸಂಕೋಲೆಗಳಿಂದ ಬಿಡುಗಡೆಗೊಳಿಸುವ ಲಿಮಾಯೆ ಅವರ ಜೀವನ ಯಾತ್ರೆಯು ಅಲ್ಲಿಂದಲೇ ಆರಂಭವಾಗುತ್ತದೆ.

1937 ರ ಮೇ ದಿನಾಚರಣೆಯ ಮೆರವಣಿಗೆಯಲ್ಲಿ ತನ್ನ 15ನೇ ಹುಟ್ಟುಹಬ್ಬದಂದು ಲಿಮಾಯೆ ಸೇರಿಕೊಳ್ಳುತ್ತಾರೆ. ಆ ಮೂಲಕ ರಾಜಕಾರಣಕ್ಕೆ ಪ್ರವೇಶ ಮಾಡುತ್ತಾರೆ. ಆ ಮೆರವಣಿಗೆಯ ಮೇಲೆ ಹಿಂದುತ್ವವಾದಿ ಮತ್ತು ಆರ್‌ಎಸ್‌ಎಸ್‌ ಸ್ವಯಂಸೇವಕರು ಹಿಂಸಾತ್ಮಕ ದಾಳಿ ನಡೆಸಿದ್ದರು. ಮೇರವಣಿಗೆಯ ನಾಯಕತ್ವ ವಹಿಸಿದ್ದ ಸೇನಾಪತಿ ಬಾಪಟ್‌ ಮತ್ತು ಎಸ್.ಎಂ. ಜೋಷಿ ಗಾಯಗೊಳ್ಳುತ್ತಾರೆ. ಪ್ರತಿರೋಧ ಮತ್ತು ಹೋರಾಟದ ರಾಜಕಾರಣದಲ್ಲಿ ಇದು ಲಿಮಾಯೆ ಅವರ ಮೊದಲ ಮುಖಾಮುಖಿಯಾಗಿತ್ತು. ಈ ಘಟನೆಯ ನಂತರ ಅವರು ಜೋಷಿ, ಎನ್‌.ಜಿ. ಗೋರೆ ಮತ್ತಿತರರೊಂದಿಗೆ ನಿಕಟ ಸಂಪರ್ಕಕ್ಕೆ ಬಂದು ರಾಷ್ಟ್ರೀಯ ಚಳುವಳಿ ಮತ್ತು ಸಮಾಜವಾದಿ ಸಿದ್ಧಾಂತದಲ್ಲಿ ಆಳವಾಗಿ ತೊಡಗಿಸಿಕೊಳ್ಳಲು ಆರಂಭಿಸುತ್ತಾರೆ.

1939 ರಲ್ಲಿ ಆರಂಭವಾದ ಎರಡನೇ ಮಹಾಯುದ್ಧವನ್ನು ಅವರು, ದೇಶವನ್ನು ವಸಾಹತುಶಾಹಿ ಹಿಡಿತದಿಂದ ಮುಕ್ತಗೊಳಿಸಲು ಮತ್ತೊಂದು ಅವಕಾಶವಾಗಿ ಕಂಡಿದ್ದರು. 1940 ಅಕ್ಟೋಬರ್‌ ತಿಂಗಳಲ್ಲಿ ಯುದ್ಧ ವಿರೋಧಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಯುದ್ಧ ವಿರೋಧಿ ಭಾಷಣಗಳನ್ನು ನಡೆಸಿದ ಕಾರಣಕ್ಕೆ ಬಂಧನಕ್ಕೊಳಗಾಗುತ್ತಾರೆ. ಒಂದು ವರ್ಷಗಳ ಕಾಲ ಖಾಂದೇಶ್‌ನ ಧುಲೆ ಜೈಲಿನಲ್ಲಿ ಲಿಮಾಯೆ ಬಂಧನದಲ್ಲಿದ್ದರು. 1941 ಸೆಪ್ಟಂಬರ್‌ ತಿಂಗಳಲ್ಲಿ ಅವರು ಬಿಡುಗಡೆಗೊಳ್ಳುವುದು. ಅದರ ನಂತರ ಮಹಾರಾಷ್ಟ್ರದಾದ್ಯಂತ ರಾಷ್ಟ್ರ ಸೇವಾ ದಳ ಮತ್ತು ಯುವಜನ ಶಿಬಿರಗಳನ್ನು ಆಯೋಜಿಸುವ ಕೆಲಸಕ್ಕೆ ಲಿಮಾಯೆ ಧುಮುಕುತ್ತಾರೆ.

1942 ಆಗಸ್ಟ್‌ ತಿಂಗಳಲ್ಲಿ AICC ತನ್ನ ಬಾಂಬೆ ಸಮ್ಮೇಳನವನ್ನು ಆಯೋಜಿಸಿತ್ತು. ಅಲ್ಲಿ ಗಾಂಧೀಜಿ “ಕ್ವಿಟ್‌ ಇಂಡಿಯಾ” ಕರೆ ನೀಡುತ್ತಾರೆ. ಲಿಮಾಯೆ ಗಾಂಧಿಯನ್ನು ಹತ್ತಿರದಿಂದ ಕಾಣುವುದು ಅದೇ ಮೊದಲ ಸಲ. ಗಾಂಧಿ ಸಹಿತ ಹಲವಾರು ಹಿರಿಯ ನಾಯಕರು ಬಂಧನಕ್ಕೊಳಗಾಗುತ್ತಾರೆ.

ಲಿಮಾಯೆ ತನ್ನ ಕೆಲವು ಸಹಚರರೊಂದಿಗೆ ಭೂಗತರಾಗುತ್ತಾರೆ. ಅಚ್ಯತ್‌ ಪಟವರ್ಧನ್‌ ಮತ್ತು ಅರುಣಾ ಅಸಫ್‌ ಅಲಿ ಮೊದಲಾದವರೊಂದಿಗೆ ಸೇರಿಕೊಂಡು ಭೂಗತವಾಗಿ ಪ್ರತಿರೋಧ ಚಳುವಳಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಲಿಮಾಯೆ ನಂತರ ಒಂದು ಮುದ್ರಣಾಲಯವನ್ನು ಸ್ಥಾಪಿಸಿ, ಪಟವರ್ಧನ್‌ ಮತ್ತು ಜೋಷಿ ಸಂಪಾದಿಸುತ್ತಿದ್ದ ಮರಾಠಿ ಪತ್ರಿಕೆ ಕ್ರಾಂತಿಕಾರಿಯನ್ನು ಪ್ರಕಟಿಸಲು ಆರಂಭಿಸುತ್ತಾರೆ.

1943 ರಲ್ಲಿ ಜೋಷಿ ಜೊತೆಗೆ ಲಿಮಾಯೆ ಕೂಡ ಬಂಧನಕ್ಕೊಳಗಾಗುತ್ತಾರೆ. ಡಿಫೆನ್ಸ್‌ ಆಫ್‌ ಇಂಡಿಯನ್‌ ರೂಲ್‌ (DIR) ಅಡಿಯಲ್ಲಿ ಬಂಧಿಲ್ಪಟ್ಟಿದ್ದ ಅವರನ್ನು 1945 ರವರೆಗೆ ವಿಚಾರಣೆಯಿಲ್ಲದೆ ವರ್ಲಿ, ಯೆರವಾಡ ಮತ್ತು ವಿಸಾಪುರ ಜೈಲುಗಳಲ್ಲಿ ಬಂಧಿಸಿಡಲಾಗುತ್ತದೆ. ಜೈಲಿನಲ್ಲಿ ಅವರಿಂದ ಭೂಗತ ಚಟುವಟಿಕೆಗಳ ರಹಸ್ಯಗಳನ್ನು ಹೊರತೆಗೆಯಲು ಬ್ರಿಟಿಷ್‌ ಸರಕಾರ ತನ್ನೆಲ್ಲ ಪ್ರಯತ್ನಗಳನ್ನು ನಡೆಸುತ್ತದೆ. ಆದರೆ, ಪೊಲೀಸರ ಅತಿ ಕ್ರೂರ ದೌರ್ಜನ್ಯಗಳನ್ನು ಸಹಿಸಿಕೊಂಡು ಲಿಮಾಯೆ ಬಾಯಿ ಬಿಡುವುದಿಲ್ಲ.

1938 ರಿಂದ 1948 ರರೆಗೆ ಸುಮಾರು ಒಂದು ದಶಕದ ಕಾಲ ಲಿಮಾಯೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಸಮಾಜವಾದಿ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದರು. 1947 ರಲ್ಲಿ ನಡೆದ ಸಿಎಸ್‌ಪಿಯ ಕಾನ್ಪುರ ಸಮ್ಮೇಳನದಲ್ಲಿ ಅವರು ಭಾಗವಹಿಸಿಸಿದ್ದರು. ಆ ಸಮ್ಮೇಳನದಲ್ಲಿಯೇ ಸಮಾಜವಾದಿ ಪಕ್ಷದ ಹೆಸರಿನಿಂದ ಕಾಂಗ್ರೆಸ್‌ ಹೆಸರನ್ನು ತೆಗೆದು ಹಾಕುವುದು.

ಸಮಾಜವಾದಿ ಪಕ್ಷವನ್ನು ಮರುಕಟ್ಟುವಲ್ಲಿ ಲಿಮಾಯೆ ಮುಂಚೂಣಿಲ್ಲಿದ್ದರು. ಟ್ರೇಡ್‌ ಯೂನಿಯನ್‌ ಕಾರ್ಮಿಕರನ್ನು ಸಜ್ಜುಗೊಳಿಸುವಲ್ಲಿ ಯಶಸ್ವಿಯಾಗುವ ಅವರು ರೈತರು ಮತ್ತು ಯುವಕರನ್ನು ಸಮಾಜವಾದಿ ತೆಕ್ಕೆಗೆ ಕರೆ ತರುತ್ತಾರೆ. 1947 ರಲ್ಲಿ ಬಾರತೀಯ ಸಮಾಜವಾದಿ ಚಳುವಳಿಯ ಏಕೈಕ ಪ್ರತಿನಿಧಿಯಾಗಿ ಅಂತರಾಷ್ಟ್ರೀಯ ಸಮಾಜವಾದಿಗಳ ಆಂಟ್‌ವರ್ಪ್‌ (ಬೆಲ್ಜಿಯಂ) ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ. 1948 ರಲ್ಲಿ ನಡೆದ ನಾಸಿಕ್‌ ಸಮ್ಮೇಳನದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಆಯ್ಕೆಯಾಗುತ್ತಾರೆ. 1949 ರಲ್ಲಿ ನಡೆದ ಪಾಟ್ನಾ ಸಮ್ಮೇಳನದಲ್ಲಿ ಸಮಾಜವಾದಿ ಪಕ್ಷದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗುತ್ತಾರೆ.

1953 ರಲ್ಲಿ ಲಿಮಾಯೆ ಅವರು ಸಮಾಜವಾದಿ ಪಕ್ಷದ ವಿದೇಶಾಂಗ ವ್ಯಹವಾರಗಳ ಸಮಿತಿ ಮತ್ತು ರಂಗೂನಿನಲ್ಲಿ ಏಶಿಯನ್‌ ಸೋಶಿಯಲಿಸ್ಟ್‌ ಬ್ಯೂರೋದ ಕಾರ್ಯದರ್ಶಿಯಾಗಿದ್ದರು. 1953-54 ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಪ್ರಜಾ ಸೋಶಿಯಲಿಸ್ಟ್‌ ಪಾರ್ಟಿಯ ಮೊದಲ ಸಮ್ಮೇಳನದಲ್ಲಿ ಅದರ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಆಯ್ಕೆಯಾಗಿದ್ದರು.

1946 ರಲ್ಲಿ ತನ್ನ ಗುರುಗಳಾದ ರಾಮಮನೋಹರ್‌ ಲೋಹಿಯಾ ಆರಂಭಿಸಿದ ಗೋವಾ ವಿಮೋಚನಾ ಚಳುವಳಿಯಲ್ಲಿ ಕೂಡ ಲಿಮಾಯೆ ಭಾಗವಹಿಸುತ್ತಾರೆ. ವಸಾಹತುಶಾಹಿಯ ಕಟ್ಟಾ ವಿರೋಧಿಯಾಗಿದ್ದ ಲಿಮಾಯೆ 1955 ರಲ್ಲಿ ಸಾಮೂಹಿಕ ಸತ್ಯಾಗ್ರಹದ ಮೂಲಕ ಗೋವಾ ಪ್ರವೇಶಿಸುತ್ತಾರೆ.

ಪೆಡ್ನೆಯಲ್ಲಿ ಪೋರ್ಚುಗೀಸ್‌ ಪೊಲೀಸರು ಸತ್ಯಾಗ್ರಹಿಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸುತ್ತಾರೆ. ಪರಿಣಾಮವಾಗಿ ಸಾವುನೋವುಗಳು ಸಂಭವಿಸುತ್ತವೆ. ಲಿಮಾಯೆ ಅವರನ್ನು ತೀವ್ರವಾಗಿ ಥಳಿಸಿ ಐದು ತಿಂಗಳ ಕಾಲ ಪೊಲೀಸ್‌ ಕಸ್ಟಡಿಯಲ್ಲಿ ಇರಿಸಲಾಗುತ್ತದೆ. ಡಿಸೆಂಬರ್‌ 1955 ರಲ್ಲಿ ಪೋರ್ಚುಗೀಸ್‌ ಮಿಲಿಟರಿ ಟ್ರಿಬ್ಯೂನಲ್‌ ಲಿಮಾಯೆ ಅವರಿಗೆ 12 ವರ್ಷಗಳ ಜೈಲು ಶಿಕ್ಷೆ ವಿಧಿಸುತ್ತದೆ. ಆದರೆ, ಲಿಮಾಯೆ ಅದಕ್ಕೆದುರಾಗಿ ಯಾವುದೇ ಪ್ರತಿವಾದವನ್ನು ಮಂಡಿಸುವುದಿಲ್ಲ ಮತ್ತು ಇಷ್ಟು ದೀರ್ಘ ಕಾಲದ ಶಿಕ್ಷೆಗೆದುರಾಗಿ ಮೇಲ್ಮನವಿಯನ್ನೂ ಸಲ್ಲಿಸುವುದಿಲ್ಲ.

ನಂತರ ಅವರು ಬರೆಯುತ್ತಾರೆ, “ಗಾಂಧೀಜಿ ನನ್ನ ಬದುಕನ್ನು ಅದೆಷ್ಟು ಆಳವಾಗಿ ಪರಿವರ್ತಿಸಿದರು, ನನ್ನ ವ್ಯಕ್ತಿತ್ವ ಮತ್ತು ಗುರಿಯನ್ನು ಅದೆಷ್ಟು ಆಳವಾಗಿ ರೂಪಿಸಿದರು ಎಂಬುದನ್ನು ನಾನು ಅರಿತುಕೊಳ್ಳುವುದು ಗೋವಾದಲ್ಲಿ.” ಗೋವಾ ವಿಮೋಚನಾ ಚಳುವಳಿಯ ಕಾಲದಲ್ಲಿ ಲಿಮಾಯೆ 19 ತಿಂಗಳುಗಳ ಕಾಲ ಪೋರ್ಚುಗೀಸರ ಸೆರೆಯಲ್ಲಿ ಕಳೆಯುತ್ತಾರೆ. ಗೋವಾ ಲಿಬರೇಷನ್‌ ಮೂವ್‌ಮೆಂಟ್‌ ಆಂಡ್‌ ಮಧು ಲಿಮಾಯೆ ಎಂಬ ಪುಸ್ತಕವನ್ನು ತನ್ನ ಜೈಲ್‌ ಡೈರಿಯಾಗಿ ಜೈಲಿನಲ್ಲಿಯೇ ಬರೆದು ಮುಗಿಸುತ್ತಾರೆ. 1996 ರಲ್ಲಿ ಗೋವಾ ಚಳುವಳಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಆ ಪುಸ್ತಕವನ್ನು ಪ್ರಕಟಿಸಲಾಗುತ್ತದೆ.

1957 ರಲ್ಲಿ ಪೋರ್ಚುಗೀಸ್‌ ಬಂಧನದಿಂದ ಬಿಡುಗಡೆಗೊಳ್ಳುವ ಲಿಮಾಯೆ, ನಂತರದಲ್ಲಿ ಜನರನ್ನು ಸಜ್ಜುಗೊಳಿಸುವ ತನ್ನ ಕೆಲಸವನ್ನು ಮುಂದುವರಿಸುತ್ತಾರೆ. ಅದಕ್ಕಾಗಿ ಸಮಾಜದ ವಿವಿಧ ವರ್ಗಗಳ ಬೆಂಬಲವನ್ನು ಕೋರುತ್ತಾರೆ. ಗೋವಾ ವಿಮೋಚನೆಗೆ ಭಾರತ ಸರಕಾರ ದೃಢವಾದ ಹೆಜ್ಜೆಗಳನ್ನು ಇಡಬೇಕೆಂದು ಒತ್ತಾಯಿಸುತ್ತಾರೆ. ಸಾಮೂಹಿಕ ಸತ್ಯಾಗ್ರಹದ ಒತ್ತಡಕ್ಕೆ ಮಣಿಯುವ ಭಾರತ ಸರಕಾರ ಮಿಲಿಟರಿ ಕಾರ್ಯಾಚರಣೆ ನಡೆಸಲು ನಿರ್ಬಂಧಿತವಾಗುತ್ತದೆ. ಆ ಮೂಲಕ 1961 ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾ ವಿಮೋಚನೆಗೊಂಡು ಭಾರತದ ಭಾಗವಾಗುತ್ತದೆ.

ಸಮಾಜವಾದಿ ಚಳುವಳಿಯ ಅತ್ಯಂತ ಕ್ರಿಯಾಶೀಲ ನಾಯಕರಲ್ಲಿ ಒಬ್ಬರಾಗಿದ್ದ ಲಿಮಾಯೆ, ಸಮಾಜವಾದಿ ಆದರ್ಶಗಳನ್ನು ಭಾರತದ ರಾಷ್ಟ್ರೀಯ ನೀತಿಗೆ ಅಳವಡಿಸಲು ಅವಿಶ್ರಾಂತ ಶ್ರಮಿಸಿದವರು. ಆಧುನಿಕ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಅವರ ಕೊಡುಗೆ ನಿಜಕ್ಕೂ ಅಪಾರ.

1958 ಏಪ್ರಿಲ್‌ ತಿಂಗಳಲ್ಲಿ ಶೇರ್ಗಾಟಿ (ಗಯಾ)ದಲ್ಲಿ ನಡೆದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಲಿಮಾಯೆ ಅದರ ಚೇರ್ಮೆನ್ ಆಗಿ ಆಯ್ಕೆಯಾಗುತ್ತಾರೆ. ಅವರ ಅಧಿಕಾರಾವಧಿಯಲ್ಲಿ ಸ್ಪಷ್ಟವಾದ ಮತ್ತು ಗಟ್ಟಿಯಾದ ನೀತಿಗಳ ಮೂಲಕ ಸಂಘಟನಾತ್ಮಕ ಬಲವರ್ಧನೆಗೆ ಹಲವು ಪ್ರಯತ್ನಗಳನ್ನು ಅವರು ಮಾಡುತ್ತಾರೆ. ಸಮಾಜವಾದದ ಮೇಲಿನ ಅವರ ನಂಬಿಕೆ ಅಂಧಶ್ರದ್ದೆಯೋ ತೋರಿಕೆಗೋ ಆಗಿರಲೇ ಇಲ್ಲ. ಅದು ಅವರ ಬದುಕಿನ ಭಾಗವಾಗಿಯೇ ಇತ್ತು. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯು ಕೊನೆಗೊಳ್ಳದೆ, ಸಾಮಾಜಿಕ ನ್ಯಾಯ ಎಂಬುದು ಬಹುಜನರಿಗೆ ಮರೀಚಿಕೆಯಾಗಿಯೇ ಉಳಿಯುತ್ತದೆ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

1959 ರಲ್ಲಿ ನಡೆದ ಬನಾರಸ್‌ ಸಮ್ಮೇಳನದಲ್ಲಿ ಲಿಮಾಯೆ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಅಧಿಕಾರಾವಧಿಯಲ್ಲಿ ಸಮಾಜವಾದಿ ಪಕ್ಷವು ಹಿಂದುಳಿದ ವರ್ಗಗಳಿಗೆ ವಿಶೇಷ ಅವಕಾಶಗಳನ್ನು ಒದಗಿಸುವ ಕುರಿತು ನಿರ್ಣಯವನ್ನು ಅಂಗೀಕರಿಸಿತು. 1964 ರಲ್ಲಿ ಎಸ್‌ಪಿ ಮತ್ತು ಪಿಎಸ್‌ಪಿ ವಿಲೀನದ ನಂತರ, 1967 ರಲ್ಲಿ ಅವರು ಹೊಸದಾಗಿ ರೂಪುಗೊಂಡ ಸಂಯುಕ್ತ ಸಮಾಜವಾದಿ ಪಕ್ಷದ ಸಂಸದೀಯ ಮಂಡಳಿಯ ಅಧ್ಯಕ್ಷರಾಗುತ್ತಾರೆ. 1967 ರಲ್ಲಿ ಅವರು ನಾಲ್ಕನೇ ಲೋಕಸಭೆಯಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ನಾಯಕರಾಗಿದ್ದರು.

ಪ್ರಜಾಪ್ರಭುತ್ವ ಮೌಲ್ಯಗಳು
ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವವಾದಿ ಮೌಲ್ಯಗಳ ಮೇಲೆ ಅಚಲ ನಂಬಿಕೆಯಿಟ್ಟಿದ್ದ ಲಿಮಾಯೆ, ಸಂಸದೀಯ ಸಾರ್ವಭೌಮತ್ವವನ್ನು ರಕ್ಷಿಸಲು ಅವಿರತವಾಗಿ ಹೋರಾಡಿದರು. ತಮ್ಮ ಬರಹಗಳು, ಭಾಷಣಗಳು ಮತ್ತು ಚಟುವಟಿಕೆಗಳ ಮೂಲಕ, ಹಲವು ವಿಧಗಳಲ್ಲಿ ಪ್ರಜಾಪ್ರಭುತ್ವ ಪರಂಪರೆಯನ್ನು ಸಂರಕ್ಷಿಸಲು ಪ್ರಯತ್ನಿಸಿದರು. ಆರೋಗ್ಯಕರ ಪ್ರಜಾಪ್ರಭುತ್ವ ನೀತಿ ಮತ್ತು ಆಚರಣೆಗಳಿಗೆ ಬದ್ಧರಾಗಿದ್ದ ಅವರು ತಮ್ಮ ತತ್ವಗಳ ಮೇಲೂ ಅಂತಹದ್ದೇ ಬದ್ಧತೆಯನ್ನು ಹೊಂದಿದ್ದರು. ಪ್ರಕ್ಷುಬ್ಧ ರಾಜಕೀಯ ಪರಿಸ್ಥಿತಿಯಲ್ಲಿಯೂ ತಮ್ಮ ಮೌಲ್ಯಗಳನ್ನು ರಾಜಿ ಮಾಡಿಕೊಳ್ಳಲಿಲ್ಲ. ಐದನೇ ಲೋಕಸಭೆಯನ್ನು ವಿಸ್ತರಿಸುವ ಕುರಿತು ಅವರು ಜೈಲಿನಿಂದಲೇ ನಡೆಸಿದ ಪ್ರತಿಭಟನೆ ಇದಕ್ಕೆ ಸಾಕ್ಷಿ ನೀಡುತ್ತದೆ.

ದೇಶದ ಸ್ವಾತಂತ್ರ್ಯ ಚಳುವಳಿಗೆ ನೀಡಿದ ಕೊಡುಗೆಗಾಗಿ ಭಾರತ ಸರಕಾರವು ಲಿಮಾಯೆ ಅವರನ್ನು ಗೌರವಿಸಿ ಅವರಿಗೆ ಪಿಂಚಣಿ ಘೋಷಿಸಿತು. ಆದರೆ ಅವರು ಪಿಂಚಣಿಯನ್ನು ನಿರಾಕರಿಸುತ್ತಾರೆ. ಸಂಸತ್ ಸದಸ್ಯರಿಗೆ ನೀಡಲಾಗುವ ಪಿಂಚಣಿ ಯೋಜನೆಯನ್ನೂ ಅವರು ನಿರಾಕರಿಸುತ್ತಾರೆ. ಒಬ್ಬ ನಿಷ್ಠಾವಂತ ಸಮಾಜವಾದಿಯಾಗಿದ್ದ ಲಿಮಾಯೆ, ತಮ್ಮ ನಿಸ್ವಾರ್ಥ ಮನೋಭಾವವನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರು.

ಲಿಮಾಯೆ ಅದ್ಭುತ ಬರಹಗಾರರಾಗಿದ್ದರು. ಇಂಗ್ಲಿಷ್‌, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಅವರು ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ದಿನಪತ್ರಿಕೆಗಳಿಗೆ ಬರೆದ ಲೇಖನಗಳ ಸಂಖ್ಯೆ ಸಾವಿರ ದಾಟುತ್ತದೆ.

1952 ಮೇ 15 ರಂದು ಪ್ರೊ. ಚಂಪಾ ಗುಪ್ತೆ ಅವರನ್ನು ಲಿಮಾಯೆ ವಿವಾಹವಾಗುತ್ತಾರೆ. ಲಿಮಾಯೆ ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಚಂಪಾ ಸ್ಪೂರ್ತಿಯ ಸೆಲೆಯಾಗಿದ್ದರು, ಮಹಾ ಬೆಂಬಲವಾಗಿ ನಿಂತಿದ್ದರು. 1995 ಜನವರಿ 8 ರಂದು ತನ್ನ ಅಲ್ಪಕಾಲದ ಅನಾರೋಗ್ಯದಿಂದ ನವದೆಹಲಿಯಲ್ಲಿ ಲಿಮಾಯೆ ನಿಧನರಾದರು.

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page