Home ದೇಶ ಹಿಂದೂ ಧರ್ಮ ಎಲ್ಲರನ್ನೂ ಒಳಗೊಳ್ಳುವಂತದ್ದು, ಅಬ್ರಾಹ್ಮಿಕ್‌ ಧರ್ಮಗಳು ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಹೊಂದಿವೆ: ಮದ್ರಾಸ್ ಹೈಕೋರ್ಟ್

ಹಿಂದೂ ಧರ್ಮ ಎಲ್ಲರನ್ನೂ ಒಳಗೊಳ್ಳುವಂತದ್ದು, ಅಬ್ರಾಹ್ಮಿಕ್‌ ಧರ್ಮಗಳು ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಹೊಂದಿವೆ: ಮದ್ರಾಸ್ ಹೈಕೋರ್ಟ್

0

ಧರ್ಮ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯಾವುದೇ ಸಂಸ್ಥೆಗಳಿಗೆ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ (FCRA) ಅಡಿಯಲ್ಲಿ ನೋಂದಣಿ ನೀಡಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಕೊಡೈಕೆನಾಲ್‌ನಲ್ಲಿ ಝೆನ್ ಧ್ಯಾನ ಕೇಂದ್ರವನ್ನು ನಡೆಸುತ್ತಿರುವ ‘ಕಾನ್ಸಿಯೋನ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್’ಗೆ ಎಫ್‌ಸಿಆರ್‌ಎ ನೋಂದಣಿ ನಿರಾಕರಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಎಂ.ಡಿ. ಸುಮತಿ ಅವರಿದ್ದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಎಫ್‌ಸಿಆರ್‌ಎ ಕಾಯ್ದೆಯ ಸೆಕ್ಷನ್ 12(4)(a)(ii) ಧರ್ಮ ಪರಿವರ್ತನೆಗೆ ಸಂಬಂಧಿಸಿದ ನಿಯಮವಾಗಿದ್ದು, ಇದು ಎಲ್ಲಾ ಧರ್ಮಗಳ ಸಂಸ್ಥೆಗಳಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. “ಘರ್ ವಾಪ್ಸಿಯಲ್ಲಿ ತೊಡಗಿರುವ ಮೂಲಭೂತವಾದಿ ಹಿಂದೂ ಸಂಘಟನೆಗೂ ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಪಡೆಯಲು ಹಕ್ಕಿಲ್ಲ” ಎಂದ ನ್ಯಾಯಾಲಯ, ಧರ್ಮ ಪರಿವರ್ತನೆಗಾಗಿ ವಿದೇಶಿ ಹಣವನ್ನು ಮುಕ್ತವಾಗಿ ಬಳಸಲು ಬಿಟ್ಟರೆ ಅದು ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದೆ. ಭಾರತವು ‘ಮೆಲ್ಟಿಂಗ್ ಪಾಟ್’ ಅಲ್ಲ, ಬದಲಾಗಿ ವಿವಿಧತೆಯನ್ನು ಉಳಿಸಿಕೊಂಡಿರುವ ‘ಸಲಾಡ್ ಬೌಲ್’ ಎಂದು ನ್ಯಾಯಾಲಯ ಬಣ್ಣಿಸಿದೆ.

ತಮ್ಮ ಝೆನ್ ಧ್ಯಾನವು ಭಾರತದ ಧ್ಯಾನ ಪರಂಪರೆಯಿಂದ ಬಂದಿದ್ದು, ಇದರಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಲ್ಲ ಎಂದು ಟ್ರಸ್ಟ್ ವಾದಿಸಿತ್ತು. ಆದರೆ ಟ್ರಸ್ಟ್‌ನ ಸಂಸ್ಥಾಪಕರಾದ ರೆವರೆಂಡ್ ಫಾದರ್ ಅಮಾ ಸ್ವಾಮಿ ಅವರು ಕ್ರಿಶ್ಚಿಯನ್ ಪಾದ್ರಿಯಾಗಿದ್ದು, ಝೆನ್ ಬೌದ್ಧಧರ್ಮವು ಮಹಾಯಾನ ಬೌದ್ಧ ಪಂಥದ ಒಂದು ಶಾಖೆಯಾಗಿದೆ ಎಂದು ಕೋರ್ಟ್ ಗಮನಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಪೀಠ, “ಚಿರತೆ ತನ್ನ ಮೈಮೇಲಿನ ಚುಕ್ಕೆಗಳನ್ನು ಬದಲಾಯಿಸಲಾರದು” ಎಂಬ ಗಾದೆಯನ್ನು ಉಲ್ಲೇಖಿಸಿ, “ಹಿಂದೂ ಧರ್ಮವು ಎಲ್ಲರನ್ನೂ ಒಳಗೊಳ್ಳುವ ಗುಣವನ್ನು (ಇನ್‌ಕ್ಲೂಸಿವ್) ಹೊಂದಿದೆ, ಆದರೆ ಅಬ್ರಹಾಮಿಕ್ ಧರ್ಮಗಳು ಪ್ರತ್ಯೇಕತಾವಾದಿ (ಎಕ್ಸ್‌ಕ್ಲೂಸಿವ್) ಸ್ವಭಾವವನ್ನು ಹೊಂದಿವೆ” ಎಂದು ಅಭಿಪ್ರಾಯಪಟ್ಟಿತು.

ವಿದೇಶಿ ದೇಣಿಗೆ ಪಡೆಯುವುದು ಯಾವುದೇ ಸಂಸ್ಥೆಯ ಮೂಲಭೂತ ಅಥವಾ ಸಾಂವಿಧಾನಿಕ ಹಕ್ಕಲ್ಲ, ಬದಲಾಗಿ ಅದೊಂದು ಸವಲತ್ತು ಮಾತ್ರ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ವೇದಾಂತ, ಭಗವದ್ಗೀತೆ, ಉಪನಿಷತ್ತು ಹಾಗೂ ಯೋಗವನ್ನು ಬೋಧಿಸುವ ಭಾರತೀಯ ಜ್ಞಾನ ಪರಂಪರೆಯ ಸಂಸ್ಥೆಗಳನ್ನು ಧಾರ್ಮಿಕ ಸಂಸ್ಥೆಗಳೆಂದು ಪರಿಗಣಿಸದೆ ಶೈಕ್ಷಣಿಕ ಅಥವಾ ಸಾಂಸ್ಕೃತಿಕ ಸಂಸ್ಥೆಗಳಾಗಿ ನೋಡಬೇಕು ಎಂದು ಹೇಳಿತು.

ಕೊನೆಯಲ್ಲಿ ಟ್ರಸ್ಟ್ ಸಂಸ್ಥಾಪಕ ಆಮಾ ಸ್ವಾಮಿ (Ama Samy ಹೌದು ಸ್ವಾಮಿ) ಹೆಸರನ್ನು ಉಲ್ಲೇಖಿಸಿ ಹಾಸ್ಯದ ಧಾಟಿಯಲ್ಲಿ, “ಟ್ರಸ್ಟ್ ತನ್ನ ಧಾರ್ಮಿಕ ಗುರುತನ್ನು ಮರೆಮಾಚಲು ಯತ್ನಿಸಿದ್ದರಿಂದ ಆಡಳಿತ ಮಂಡಳಿಯು ಅವರಿಗೆ ‘ಇಲ್ಲ ಸ್ವಾಮಿ’ (Illa Samy – ಇಲ್ಲ ಸರ್) ಎಂದು ಹೇಳಬೇಕಾಯಿತು” ಎಂದು ತೀರ್ಪಿನಲ್ಲಿ ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿತು.

You cannot copy content of this page

Exit mobile version