Tuesday, November 25, 2025

ಸತ್ಯ | ನ್ಯಾಯ |ಧರ್ಮ

ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲಿ ನಿಧನ

ಕಲಬುರಗಿ: ಹಿರಿಯ ಐಎಎಸ್ ಅಧಿಕಾರಿ ಹಾಗು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ (51) ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಜೇವರ್ಗಿ ತಾಲೂಕಿನ ಗೌನಳ್ಳಿ ಬಳಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯಿಂದ ಕಲಬುರಗಿಯತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ್ದರಿಂದ ಅಪಘಾತ ಸಂಭವಿಸಿದೆ.

ಗೌನಳ್ಳಿಯ ಬಳಿ ಕಾರು ಪಲ್ಟಿ
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿಯ ಮೇಲೆ ಸಾಗುತ್ತಿದ್ದ ಇನ್ನೋವಾ ಕಾರಿನ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ ಪರಿಣಾಮ ಕಾರಿನಲ್ಲಿ ಇದ್ದ ಮೂವರು ಗಂಭೀರವಾಗಿ ಗಾಯಗೊಂಡರು. ಇವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಸ್ಥಿತಿಯಲ್ಲಿದ್ದ ಮಹಾಂತೇಶ್ ಬೀಳಗಿಯನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

ಗಂಭೀರ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿಗೆ ಮಣ್ಣೂರು/ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ವೈದ್ಯರ ಪ್ರಯತ್ನ ಫಲಿಸದೇ ಅವರು ಕೊನೆಯುಸಿರೆಳೆದರು. ಅಪಘಾತದಲ್ಲಿ ಮೃತಪಟ್ಟ ಇತರೆ ಇಬ್ಬರ ಗುರುತು ಪತ್ತೆ ಕಾರ್ಯ ಹಾಗೂ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಈ ಮೊದಲು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇರಿದಂತೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಮಹಾಂತೇಶ್ ಬೀಳಗಿ, ಪ್ರಸ್ತುತ ಬೆಸ್ಕಾಂನ ಎಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸರಳ ಸ್ವಭಾವ ಮತ್ತು ಕಾರ್ಯನಿಷ್ಠೆಗೆ ಹೆಸರುವಾಸಿಯಾಗಿದ್ದ ಈ ಹಿರಿಯ ಅಧಿಕಾರಿಯ ಅಕಾಲಿಕ ನಿಧನಕ್ಕೆ ಅಧಿಕಾರ ವಲಯದಲ್ಲಿ ಶೋಕದ ವಾತಾವರಣ ನೆಲೆಯೂರಿದೆ.

ಅಪಘಾತ ಸ್ಥಳಕ್ಕೆ ಅಧಿಕಾರಿಗಳ ದೌಡು
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್‌ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಮಾಹಿತಿ ಪಡೆದುಕೊಂಡರು. ಜೇವರ್ಗಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ನಿಖರ ಕಾರಣ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page