Home ಅಪರಾಧ 180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, 350 ಅಶ್ಲೀಲ ವಿಡಿಯೋ: ಆರೋಪಿಯ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

180 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ, 350 ಅಶ್ಲೀಲ ವಿಡಿಯೋ: ಆರೋಪಿಯ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು

0

ಮುಂಬೈ: ಒಬ್ಬಿಬ್ಬರಲ್ಲ, ಬರೋಬ್ಬರಿ 180 ಬಾಲಕಿಯರನ್ನು ಬಲೆಗೆ ಬೀಳಿಸಿ ಲೈಂಗಿಕವಾಗಿ ಶೋಷಿಸಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಆರೋಪಿಯ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ್ದಾರೆ.

ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಪರಾಟ್ವಾಡಾ ಪಟ್ಟಣದ 19 ವರ್ಷದ ಅಯಾಜ್ ಎಂಬಾತ ಈ ಕೃತ್ಯದ ಆರೋಪಿ. ಈತ ಸುಮಾರು 180 ಬಾಲಕಿಯರನ್ನು ಪ್ರೀತಿ ಹಾಗೂ ಇತರ ಆಮಿಷಗಳ ಮೂಲಕ ಟ್ರ್ಯಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಸುಮಾರು 350 ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ್ದ ಎಂದು ತಿಳಿದುಬಂದಿದೆ.

ಆರೋಪಿ ಅಯಾಜ್ ಹುಡುಗಿಯರನ್ನು ನಂಬಿಸಿ ಮುಂಬೈ ಮತ್ತು ಪುಣೆ ನಗರಗಳಿಗೆ ಕರೆದೊಯ್ಯುತ್ತಿದ್ದನು. ಬಳಿಕ ಅವರ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಸುಂದರವಾಗಿದ್ದ ಬಾಲಕಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುವ ಮೂಲಕ ಹಣ ಸಂಪಾದಿಸುತ್ತಿದ್ದನು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಲವು ವಿಡಿಯೋಗಳನ್ನು ಈತ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದರಿಂದ ವಿಷಯ ಬಹಿರಂಗಗೊಂಡಿದೆ.

ಈ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಸಂಸದ ಅನಿಲ್ ಬೋಂಡೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತ ಮುನ್ಸಿಪಲ್ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ, ಬುಧವಾರ ಆರೋಪಿಯ ಅಕ್ರಮ ನಿವಾಸವನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ. ಸಮಾಜದಲ್ಲಿ ಇಂತಹ ವಿಕೃತ ಕೃತ್ಯ ಎಸಗುವವರಿಗೆ ಇದೊಂದು ಎಚ್ಚರಿಕೆಯ ಸಂದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಆರೋಪಿಯನ್ನು ಬಂಧಿಸಲಾಗಿದ್ದು, ಸೈಬರ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

You cannot copy content of this page

Exit mobile version