ಪಟ್ನಾ: ಮಹಾರಾಷ್ಟ್ರ(Maharashtra) ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮುಖ್ಯ ಸೂತ್ರಧಾರ ಬಿಜೇಂದ್ರ ಗುಪ್ತನನ್ನು(Bijendra Gupta) ಮಹಾರಾಷ್ಟ್ರ ಪೊಲೀಸರು ಬಿಹಾರದಲ್ಲಿ ಕೊನೆಗೂ ಬಂಧಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಸುದೀರ್ಘ ಜಾಲಾಟದ ನಂತರ ಸೆರೆಹಿಡಿಯಲಾಗಿದೆ.
ದೇಶಾದ್ಯಂತ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬ ಶಂಕೆ ಇದ್ದು, ಈತನ ಬಂಧನದೊಂದಿಗೆ ದೊಡ್ಡ ಜಾಲವೇ ಬಯಲಿಗೆ ಬರುವ ಸಾಧ್ಯತೆಯಿದೆ. ತನಿಖೆ ವೇಳೆ ಈತನಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲವು ತಿಂಗಳ ತಲೆಮರೆಸಿಕೊಟ್ಟಿದ್ದ ಕಿಂಗ್‌ಪಿನ್
ಮಹಾರಾಷ್ಟ್ರ ಪೊಲೀಸರು ಈ ಹಿಂದೆ ಟಿಇಟಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೇಂದ್ರ ಗುಪ್ತನ ಹೆಂಡತಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಗುಪ್ತಾ ಮಾತ್ರ ಪೊಲೀಸರ ಕಣ್ಣಿಗೆ ಮಣ್ಣೆರಚಿ ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ.
ಆತನ ಪತ್ತೆಗಾಗಿ ಮಹಾರಾಷ್ಟ್ರ ಪೊಲೀಸರು ಬಿಹಾರದ ವಿವಿಧೆಡೆ ಹಲವು ಬಾರಿ ದಾಳಿ ನಡೆಸಿದ್ದರಾದರೂ ಆತ ತಪ್ಪಿಸಿಕೊಳ್ಳುತ್ತಿದ್ದ. ಇದೀಗ ಬಿಹಾರ ಪೊಲೀಸರ ನೆರವಿನಿಂದ ರಾಜ್ಯಾಂತರ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಟ್ರಾನ್ಸಿಟ್ ರಿಮಾಂಡ್ ಮೂಲಕ ಮಹಾರಾಷ್ಟ್ರಕ್ಕೆ ಕರೆತರಲಾಗುತ್ತಿದೆ.
ಪರೀಕ್ಷಾ ಅಕ್ರಮ ತಡೆಗೆ ಕೇಂದ್ರದಿಂದ ಕಠಿಣ ಕಾನೂನು ತಿದ್ದುಪಡಿ!
ಇನ್ನೊಂದೆಡೆ, ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ತೀವ್ರ ಸ್ವರೂಪದ ಕ್ರಮಕ್ಕೆ ಮುಂದಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ, 2024’ ಕ್ಕೆ ಪ್ರಮುಖ ತಿದ್ದುಪಡಿ ತರುವ ಕರಡು ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ. ಸಂಘಟಿತ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯಲ್ಲಿ ಭಾಗಿಯಾಗುವ ಅಪರಾಧಿಗಳಿಗೆ ಬರೋಬ್ಬರಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹10 ಕೋಟಿವರೆಗೂ ದಂಡ ವಿಧಿಸಲು ನೂತನ ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ. ಸದ್ಯ ಚಾಲ್ತಿಯಲ್ಲಿರುವ ಕಾನೂನಿನಲ್ಲಿ ವೈಯಕ್ತಿಕ ಅಕ್ರಮಕ್ಕೆ 3 ರಿಂದ 5 ವರ್ಷ ಶಿಕ್ಷೆ ಹಾಗೂ ಸಂಘಟಿತ ಅಪರಾಧಗಳಿಗೆ 5 ರಿಂದ 10 ವರ್ಷ ಜೈಲು ಮತ್ತು ₹1 ಕೋಟಿ ದಂಡ ವಿಧಿಸಲು ಅವಕಾಶವಿತ್ತು. ಇದೀಗ ದಂಡದ ಮೊತ್ತ ಹಾಗೂ ಶಿಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.
