Sunday, June 23, 2024

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರ, ರಾಯಗಢ ಇರ್ಶಲವಾಡಿ ಭೂಕುಸಿತ: 119 ಗ್ರಾಮಸ್ಥರು ನಾಪತ್ತೆ, 20 ಶವಗಳು ಪತ್ತೆ

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಇರ್ಶಲವಾಡಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಮತ್ತೊಮ್ಮೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಮೊನ್ನೆ ಇಲ್ಲಿ ನಡೆದ ಭಾರೀ ಭೂಕುಸಿತದಿಂದಾಗಿ, ಅನೇಕ ಮನೆಗಳು ಅವಶೇಷಗಳಡಿಯಲ್ಲಿ ಹೂತುಹೋಗಿದ್ದವು, ಇದರಿಂದಾಗಿ ಇದುವರೆಗೆ 16 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ

ಮುಂಬಯಿಯಿಂದ ಸುಮಾರು 80 ಕಿಮೀ ದೂರದಲ್ಲಿರುವ ಕರಾವಳಿ ಜಿಲ್ಲೆಯ ಖಲಾಪುರ್ ತೆಹಸಿಲ್‌ನ ಬೆಟ್ಟದ ಇಳಿಜಾರಿನಲ್ಲಿರುವ ಬುಡಕಟ್ಟು ಹಳ್ಳಿಯಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಗ್ರಾಮದ ಒಟ್ಟು 228 ನಿವಾಸಿಗಳ ಪೈಕಿ ಸುಮಾರು 16 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, 93 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಅದೇ ಸಮಯದಲ್ಲಿ, 119 ಗ್ರಾಮಸ್ಥರು ಇನ್ನೂ ನಾಪತ್ತೆಯಾಗಿದ್ದಾರೆ.

ಕಾಣೆಯಾದವರಲ್ಲಿ ಹೆಚ್ಚಿನವರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅಥವಾ ಭತ್ತದ ನಾಟಿ ಕೆಲಸಕ್ಕೆ ಹೋಗಿದ್ದವರು ಸೇರಿದ್ದಾರೆ. ಅಧಿಕಾರಿಗಳ ಪ್ರಕಾರ, ಭೂಕುಸಿತದಿಂದ ಊರಿನ ಸುಮಾರು 50 ಮನೆಗಳ ಪೈಕಿ 17 ಮನೆಗಳು ನಾಶವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಾಯಗಢ ಪೊಲೀಸರು ಮತ್ತು ಆಡಳಿತದ ತಂಡದೊಂದಿಗೆ ಎರಡನೇ ದಿನವೂ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಶುಕ್ರವಾರ ಬೆಳಿಗ್ಗೆ ಎನ್‌ಡಿಆರ್‌ಎಫ್‌ನ ಕನಿಷ್ಠ ನಾಲ್ಕು ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿ ಹೇಳಿದರು.

ಥಾಣೆ ವಿಪತ್ತು ನಿರ್ವಹಣಾ ಪಡೆ (ಟಿಡಿಆರ್‌ಎಫ್), ಸ್ಥಳೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಯಗಢ ಪೊಲೀಸರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ರಾಯಗಢ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ ಅವರ ಪ್ರಕಾರ, ಶೋಧ ಕಾರ್ಯಾಚರಣೆಯು ಬೆಳಿಗ್ಗೆ 6.30ಕ್ಕೆ ಪ್ರಾರಂಭವಾಯಿತು. ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು, “ಶೋಧ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗೆ ಸಹಾಯ ಮಾಡಲು ನಾವು ಸ್ನಿಫರ್ ಡಾಗ್‌ಗಳ ತಂಡವನ್ನು ಸಹ ಕರೆಸಿದ್ದೇವೆ.” ರೆಸ್ಕ್ಯೂ ಮತ್ತು ಶೋಧ ತಂಡಗಳು ಗುರುವಾರ 16 ಶವಗಳನ್ನು ಹೊರತೆಗೆದು 21 ಜನರನ್ನು ರಕ್ಷಿಸಿವೆ. ಮೃತರಲ್ಲಿ ಒಂದರಿಂದ ನಾಲ್ಕು ವರ್ಷದೊಳಗಿನ ನಾಲ್ವರು ಮಕ್ಕಳು ಹಾಗೂ 70 ವರ್ಷದ ವೃದ್ಧರೂ ಸೇರಿದ್ದಾರೆ. ಏಳು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೂಕುಸಿತ ನಡೆದ ಪ್ರದೇಶವು ಗುಡ್ಡಗಾಡು ಪ್ರದೇಶವಾಗಿರುವುದರಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಉಪಕರಣಗಳನ್ನು ಸಾಗಿಸುವುದು ಕಷ್ಟವಾಗುತ್ತಿದೆ. ಅಲ್ಲದೆ ಗುಡ್ಡದ ತುದಿಯಲ್ಲಿ ಭಾರೀ ಮಳೆ, ಮಂಜು ಮತ್ತು ಗಾಳಿ ಕೂಡಾ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು