Saturday, August 23, 2025

ಸತ್ಯ | ನ್ಯಾಯ |ಧರ್ಮ

ಅವಹೇಳನಕಾರಿ ಹೇಳಿಕೆ ಪ್ರಕರಣ: ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಮಹೇಶ್‌ ತಿಮರೋಡಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಅನ್ನು ರದ್ದುಗೊಳಿಸುವಂತೆ ಕೋರಿ ಮಹೇಶ್‌ ಶೆಟ್ಟಿ ತಿಮರೋಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತಂತೆ ಕ್ರಿಮಿನಲ್ ಅರ್ಜಿ ಸಲ್ಲಿಸಿರುವ ತಿಮರೋಡಿ, ಬ್ರಹ್ಮಾವರ ಪೊಲೀಸರು ಮತ್ತು ಪ್ರಕರಣದ ದೂರುದಾರ ರಾಜೀವ್‌ ಕುಲಾಲ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ಈ ಅರ್ಜಿಯು ಇನ್ನೂ ವಿಚಾರಣೆಗೆ ನಿಗದಿಯಾಗಬೇಕಿದೆ.

ಅರ್ಜಿಯಲ್ಲಿ, ತಿಮರೋಡಿ ಅವರು “ರಾಜೀವ್ ಕುಲಾಲ್ ಮತ್ತು ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಆತನ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಮೂರನೇ ವ್ಯಕ್ತಿಯಾದ ಬಿ.ಎಲ್. ಸಂತೋಷ್ ಪರವಾಗಿ ಕುಲಾಲ್ ದೂರು ದಾಖಲಿಸಿದ್ದಾರೆ. ಆತ ದಾಖಲಿಸಿದ ದೂರಿನ ಆಧಾರದ ಮೇಲೆ, ಆಗಸ್ಟ್ 21, 2025 ರಂದು ಪೊಲೀಸರು ನನ್ನನ್ನು ಬಂಧಿಸಿದ್ದಾರೆ” ಎಂದು ಆಕ್ಷೇಪಿಸಿದ್ದಾರೆ.

ದೂರು ದಾಖಲಾದ ಕೂಡಲೇ ಪೊಲೀಸರು ತರಾತುರಿಯಲ್ಲಿ ತಮ್ಮ ಪತ್ನಿಗೆ ಮೊದಲ ನೋಟಿಸ್ ನೀಡಿದ್ದಾರೆ. ನಂತರ ಎರಡನೇ ನೋಟಿಸ್ ನೀಡಿದ್ದಾರೆ. ಈ ಎರಡೂ ನೋಟಿಸ್‌ಗಳನ್ನು ನೀಡುವಾಗ ನಿಗದಿತ ನಿಯಮಗಳನ್ನು ಪಾಲಿಸಿಲ್ಲ.

ತಮ್ಮನ್ನು ಬಂಧಿಸಲು ಸೂಕ್ತ ಕಾರಣವನ್ನೂ ನೀಡಿಲ್ಲ. ಬಂಧನದ ಮಾಹಿತಿ ಕುರಿತು ತಮ್ಮ ಕುಟುಂಬದವರಿಗೆ ಅರೆಸ್ಟ್ ಮೆಮೊ ಕೂಡ ನೀಡಿಲ್ಲ. ಆದ್ದರಿಂದ ಬಂಧನ ಪ್ರಕ್ರಿಯೆ ದೋಷಪೂರಿತವಾಗಿದ್ದು, ಎಫ್‌ಐಆರ್‌ ರದ್ದುಪಡಿಸಬೇಕು ಎಂದು ತಿಮರೋಡಿ ಅರ್ಜಿಯಲ್ಲಿ ಕೋರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page