ಮತದಾರರ ಪಟ್ಟಿ ತಿರುಚಿದ ಆರೋಪ: ಚುನಾವಣಾ ಆಯೋಗದ ಐಟಿ ಮುಖ್ಯಸ್ಥೆ ಸೀಮಾ ಖನ್ನಾ ವಿರುದ್ಧ ಸಂಸದೆ ಮಹುವಾ ಮೊಯಿತ್ರಾ ದೂರು

ಚುನಾವಣಾ ಆಯೋಗದ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಮಹಾನಿರ್ದೇಶಕಿ (ಡಿಜಿ) ಸೀಮಾ ಖನ್ನಾ ಅವರು ಚುನಾವಣಾ ನೋಂದಣಿ ಅಧಿಕಾರಿಗಳ (ಇಆರ್‌ಒ) ಶಾಸನಬದ್ಧ ಅಧಿಕಾರಗಳನ್ನು ಮೊಟಕುಗೊಳಿಸಿ, ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನು ಕೈಬಿಡಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಜನಪ್ರತಿನಿಧಿ ಕಾಯ್ದೆ 1950 ರ ಸೆಕ್ಷನ್ 32 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೀಮಾ ಖನ್ನಾ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ. ಜನವರಿ 22, 2026 ರಂದು ಜಾರಿಗೆ ತರಲಾದ ‘ECINET’ ವೇದಿಕೆಯ ಮೂಲಕ ಕೇಂದ್ರ ಮಟ್ಟದಲ್ಲಿ ಐಟಿ ನಿಯಂತ್ರಣ ಹೇರಲಾಗಿದ್ದು, ಇದರಿಂದ ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಮತದಾರರ ಹೆಸರುಗಳನ್ನು ಪರಿಶೀಲಿಸುವ ಮತ್ತು ಸೇರ್ಪಡೆ/ತೆಗೆದುಹಾಕುವ ಅಧಿಕಾರ ಕಸಿದುಕೊಳ್ಳಲಾಗಿದೆ ಎಂದು ಅವರು ದೂರಿದ್ದಾರೆ.

ಇತ್ತೀಚೆಗೆ ಗೋವಾದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಧಿಕಾರಿಗಳು ಅರ್ಹರೆಂದು ಗುರುತಿಸಿದ್ದ 97 ಮತದಾರರ ಹೆಸರುಗಳು ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಮತದಾರರ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಿಸುತ್ತಿರುವ ಬಗ್ಗೆ ಮತ್ತು ಕ್ಷೇತ್ರ ಅಧಿಕಾರಿಗಳ ಅಧಿಕಾರ ಮೊಟಕುಗೊಳಿಸಿರುವ ಬಗ್ಗೆ ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿ ಆಕ್ಷೇಪಣೆ ದಾಖಲಿಸಿದ್ದರು ಎಂಬ ಮಾಧ್ಯಮ ವರದಿಗಳನ್ನೂ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಚುನಾವಣಾ ಆಯೋಗದ ಮುಖ್ಯಸ್ಥರೊಂದಿಗೆ ಶಾಮೀಲಾಗಿ ಕ್ರಿಮಿನಲ್ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ದಾಖಲೆಗಳು, ಆಂತರಿಕ ನೋಟ್ ಶೀಟ್‌ಗಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು