Thursday, June 13, 2024

ಸತ್ಯ | ನ್ಯಾಯ |ಧರ್ಮ

ಮಜಾಕ್ ಮಜಾಕ್ ಮೇ ಚಲೇ ಗಯೇ: ವಾಸ್ತವ್ ಅವರ ಹಾಸ್ಯಪ್ರಜ್ಞೆ

ಹಾಸ್ಯ ವೇದಿಕೆಗಳಲ್ಲಿ, ಮಜಾಕ್ ಮಜಾಕ್ ಮೇ ಸಬ್ ಆಗಯೇ ಅಂತಲೇ ಮಾತು ಶುರು ಮಾಡುತ್ತಿದ್ದ ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವ್ ಮಜಾಕ್ ಮೇ ಚಲೇ ಗಯೇ ಎನ್ನುತ್ತ ಬದುಕಿನ ವೇದಿಕೆಯಿಂದಲೇ ನಿರ್ಗಮಿಸಿದ್ದಾರೆ. ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದ ರಾಜು, ಈಗ ಅವರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿ ಹೋಗಿದ್ದಾರೆ.

ಸತ್ಯಪ್ರಕಾಶ್ ಶ್ರೀವಾಸ್ತವ್ ಅಂದ್ರೆ ಯಾರಿಗೂ ಗೊತ್ತಾಗದೇ ಇರಬಹುದು. ಆದರೆ, ರಾಜು ಶ್ರೀವಾಸ್ತವ್ ಎಂಬ ಹೆಸರಿನಿಂದಲೇ ಕಾಮಿಡಿ ಶೋಗಲಲ್ಲಿ ಫೇಮಸ್ ಆಗಿದ್ದವರು ರಾಜು. ನಮಗೆ ರಾಜು ಎಂದಾಕ್ಷಣ ಅದರಲ್ಲೂ ಕಾಮಿಡಿ ಎಂದಾಕ್ಷಣ ನೆನಪಾಗುವ ಹೆಸರು ಮೇರಾ ನಾಮ್ ಜೋಕರ್ ನ ರಾಜು. ಅಲ್ಲಿ ಸರ್ಕಸ್ ನಲ್ಲಿ ನಗಿಸುವ ರಾಜು ಎಂಬ ಹೆಸರಿಟ್ಟುಕೊಂಡು, ಹೆಚ್ಚು ಸರ್ಕಸ್ ಮಾಡದೆಯೇ ಸುಲಭವಾಗಿ ಎಲ್ಲರನ್ನೂ ನಗಿಸುತ್ತಿದ್ದವರು ರಾಜು ಶ್ರೀವಾಸ್ತವ್.

ಈಗಿನ ಪರಿಸ್ಥಿತಿಯಲ್ಲಿ ನಮಗೆ ಕಾಮಿಡಿ ಶೋಗಳಿಗೆ ಬರವಿಲ್ಲ. ಟಿವಿ, ಮೊಬೈಲು, ಇಂಟರ್ ನೆಟ್ ಎಲ್ಲ ಕಡೆ ಸಿನಿಮಾ, ವೆಬ್ ಸೀರೀಸ್, ಶಾರ್ಟ್ ಫಿಲ್ಮ್, ಸ್ಕಿಟ್ಸ್, ರೀಲ್ಸ್ ಮುಂತಾದ ಪ್ರಕಾರಗಳಲ್ಲಿ ನಮಗೆ ಕಾಮಿಡಿಯ ಭರಪೂರ ಮನರಂಜನೆ ಸಿಗುತ್ತದೆ. ಆದರೆ ಅಂದಿನ ಕಾಲದಲ್ಲಿ ಸಿನಿಮಾ, ಟಿವಿ ಧಾರಾವಾಹಿಯ ಕೆಲವು ಕಾಮಿಡಿ ಸೀರಿಯಲ್ ಗಳನ್ನು ಬಿಟ್ಟರೆ ಬೇರೆಲ್ಲೂ ಕಾಮಿಡಿಯ ಟಚ್ ಸಿಗುತ್ತಿರಲಿಲ್ಲ. ಅಂತಹ ಕಾಲದಲ್ಲಿ ರಾಜು ಶ್ರೀವಾಸ್ತವ್, ಸೋನಿ ಟಿವಿಯ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋನಿಂದ ಪ್ರಚಲಿತರಾದರು. ಆ ಶೋನಿಂದ ಬೆಳಕಿಗೆ ಬಂದ ಹಲವು ಪ್ರತಿಭೆಗಳಲ್ಲಿ ರಾಜು ಪ್ರಮುಖರು. ತಮ್ಮ ಮಿಮಿಕ್ರಿ, ಕಂಟೆಂಟ್ ಮತ್ತು ಮಾತನಾಡುವ ಶೈಲಿ, ಆಂಗಿಕ ಭಾಷೆಗಳಿಂದ ರಾಜು ಬಹು ಬೇಗನೆ ಜನಪ್ರಿಯರಾದರು. ನಂತರ ಭಾರತದ ಪ್ರಮುಖ ಕಾಮಿಡಿಯನ್ ಗಳಲ್ಲಿ ಒಬ್ಬರಾಗಿ ಕಾಮಿಡಿ ಪ್ರಪಂಚದಲ್ಲಿ ತಮ್ಮದೇ ಆದ ರಾಜ್ ನಡೆಸಿದ್ದರು ರಾಜು. ಹಾಗಂತ ರಾಜು ಶ್ರೀವಾಸ್ತವ್ ಅಲ್ಲಿಯವರೆಗೆ ಜನಕ್ಕೆ ಗೊತ್ತೇ ಇರಲಿಲ್ಲ ಅಂತಲ್ಲ. 80ರ ದಶಕದಲ್ಲೇ ಬಾಲಿವುಡ್ ಚಿತ್ರಗಳಲ್ಲಿ ಪೋಷಕ ನಟರಾಗಿ, ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದ ರಾಜು, ಸಲ್ಮಾನ್ ಖಾನ್ ರ ಶಾರೂಖ್ ಖಾನ್ ರ ಬಾಜಿಗರ್ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಕಾಮಿಡಿ ಶೋಗಳಿಂದ ರಾಜು ಅವರ ಹೆಸರು ಹೆಚ್ಚಿನ ಜನರನ್ನು ತಲುಪಿತು. ಅದರಲ್ಲೂ ಅಮಿತಾಬ್ ಬಚ್ಚನ್ ಅವರನ್ನು ಅವರು ಮಿಮಿಕ್ರಿ ಮಾಡುವ ರೀತಿ ಎಲ್ಲರಿಗೂ ಪ್ರಿಯ. ತಮ್ಮ ಕಾಮಿಡಿ ಶೋ ಹಿಟ್ ಆದಮೇಲೆ ಟಿವಿ ಮನರಂಜನೆಯಲ್ಲಿ ರಾಜು ಅನೇಕ ಕಡೆ ತಮ್ಮ ಛಾಪು ಮೂಡಿಸಿದ್ದರು. ನಾಚ್ ಬಲಿಯೇ, ಕಾಮಿಡಿ ನೈಟ್ಸ್ ವಿಥ್ ಕಪಿಲ್, ಬಿಗ್ ಬಾಸ್ ಸೇರಿದಂತೆ ಅನೇಕ ಕಡೆ ರಾಜು ಜನಪ್ರಿಯರಾಗಿದ್ದರು. ಕಾಮಿಡಿ ಹೆಸರಿನಲ್ಲಿ ಅಶ್ಲೀಲತೆಯ ವೈಭವೀಕರಣ ಮಾಡುವುದನ್ನು ವಿರೋಧಿಸುತ್ತಿದ್ದ ರಾಜು ಕ್ಲೀನ್ ಜೋಕ್ ಗಳಿಗೆ ಹೆಸರಾಗಿದ್ದವರು.

 ತಮ್ಮ ವಿನೂತನ ಹಾಸ್ಯ ಪ್ರಜ್ಞೆಯಿಂದ ಎಲ್ಲರನ್ನೂ ಹೊಟ್ಟೆನೋವು ಬರುವಂತೆ ನಗಿಸುತ್ತಿದ್ದ ರಾಜು, ಇತ್ತೀಚೆಗೆ ಎದೆ ನೋವು ಅಂತ ಆಸ್ಪತ್ರೆ ಸೇರಿದವರು ಮತ್ತೆ ಅಲ್ಲಿಂದ ಜೀವಂತವಾಗಿ ಬರಲೇ ಇಲ್ಲ. ಆದರೆ, ಮೇರಾ ನಾಮ್ ರಾಜು ಎಂದು ಘಂಟಾಘೋಷವಾಗಿ ಜಗತ್ತಿನೆದುರು ಹೇಳುತ್ತಾ ಎಲ್ಲರನ್ನೂ ನಗಿಸುತ್ತಿದ್ದ ರಾಜು ಶ್ರೀವಾಸ್ತವ್, ಈಗ ತಮ್ಮ ಶೋ ಸಮಯ ಮುಗಿಯಿತು ಎಂದು ಎದ್ದು ಹೋಗಿದ್ದಾರೆ. ಜಗತ್ತನ್ನು ನಗಿಸುತ್ತಿದ್ದ ಈ ಜನಪ್ರಿಯ ಸ್ಟ್ಯಾಂಡ್ ಅಪ್ ಕಾಮಿಡಿಯನ್ ರಾಜು ಅವರಿಗೆ, ಇಂದು, ಒಂದು ಸ್ಟ್ಯಾಂಡಿಂಗ್ ಒವೇಷನ್ ನೀಡಿ ಅವರನ್ನು ಗೌರವಿಸೋಣ.

Related Articles

ಇತ್ತೀಚಿನ ಸುದ್ದಿಗಳು