Home ಅಪಘಾತ ಛತ್ತೀಸ್‌ಗಢದಲ್ಲಿ ಭೀಕರ ರೈಲು ಅಪಘಾತ, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ರೈಲು; 7 ಸಾವು,...

ಛತ್ತೀಸ್‌ಗಢದಲ್ಲಿ ಭೀಕರ ರೈಲು ಅಪಘಾತ, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ರೈಲು; 7 ಸಾವು, 17 ಮಂದಿ ಗಂಭೀರ

0

ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ದೊಡ್ಡ ರೈಲು ಅಪಘಾತ ಸಂಭವಿಸಿದೆ. ಬಿಲಾಸ್‌ಪುರ-ಕಟ್ನಿ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಮತ್ತು ಒಂದು ಗೂಡ್ಸ್ ರೈಲು ಪರಸ್ಪರ ನೇರವಾಗಿ ಭೀಕರವಾಗಿ ಡಿಕ್ಕಿ ಹೊಡೆದಿವೆ. ಈ ಅಪಘಾತದಲ್ಲಿ 7 ಜನರು ಸಾವಿಗೀಡಾಗಿದ್ದಾರೆ.

ಈ ದುರ್ಘಟನೆಯು ಇಂದು ಸಂಜೆ ಸುಮಾರು 4 ಗಂಟೆಗೆ ಪ್ಯಾಸೆಂಜರ್ ರೈಲು ವಿರುದ್ಧ ದಿಕ್ಕಿನಿಂದ ಬರುತ್ತಿದ್ದಾಗ ಸಂಭವಿಸಿದೆ. ಡಿಕ್ಕಿಯ ಹೊಡೆತ ಎಷ್ಟು ಪ್ರಬಲವಾಗಿತ್ತೆಂದರೆ, ಪ್ರಯಾಣಿಕರ ರೈಲಿನ ಬೋಗಿಗಳು ತೀವ್ರವಾಗಿ ಹಾನಿಗೊಳಗಾಗಿ ಗೂಡ್ಸ್ ರೈಲಿನ ಮೇಲೆ ಹತ್ತಿ ನಿಂತವು.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಬಿಲಾಸ್‌ಪುರದ ಜಿಲ್ಲಾಧಿಕಾರಿ (ಡಿಸಿ) ಸಂಜಯ್ ಅಗರವಾಲ್ ಅವರು ಮಾಹಿತಿ ನೀಡಿ, “ಬಿಲಾಸ್‌ಪುರ ಸಮೀಪದಲ್ಲಿ ಒಂದು ಲೋಕಲ್ ರೈಲು ಮತ್ತು ಗೂಡ್ಸ್ ರೈಲಿನ ಕೊನೆಯ ಮತ್ತು ಮೊದಲ ಬೋಗಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ, ಅಪಘಾತದ ಬಗ್ಗೆ ಮಾಹಿತಿ ನೀಡಿದ ಐಜಿ ಸಂಜೀವ್ ಶುಕ್ಲಾ ಅವರು, “ಮೆಮು ರೈಲಿನ ಇಂಜಿನ್ ಮತ್ತು ಗೂಡ್ಸ್ ರೈಲಿನ ಹಿಂಭಾಗದ ಕೊನೆಯ ಬೋಗಿಯ ನಡುವೆ ಡಿಕ್ಕಿ ಸಂಭವಿಸಿದೆ. ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇದರ ಜೊತೆಗೆ, ಒಬ್ಬ ವ್ಯಕ್ತಿ ಒಳಗೆ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ,” ಎಂದಿದ್ದಾರೆ.

ಈ ದುರ್ಘಟನೆಯು ಬಿಲಾಸ್‌ಪುರ-ಕಟ್ನಿ ವಿಭಾಗದಲ್ಲಿ, ಕೋರ್ಬಾ ಪ್ಯಾಸೆಂಜರ್ ರೈಲು ಲಾಲ್ ಖದಾನ್ ಪ್ರದೇಶದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಾಗ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕೆಲವು ಬೋಗಿಗಳು ಒಂದರ ಮೇಲೊಂದು ಹತ್ತಿದ್ದು, ಹಲವು ಬೋಗಿಗಳು ಹಳಿ ತಪ್ಪಿವೆ. ಓವರ್‌ಹೆಡ್ ವಿದ್ಯುತ್ ತಂತಿ ಮತ್ತು ಸಿಗ್ನಲಿಂಗ್ ವ್ಯವಸ್ಥೆಗೆ ತೀವ್ರ ಹಾನಿಯಾಗಿದೆ. ಇದರಿಂದ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ರೈಲ್ವೆ ರಕ್ಷಣಾ ತಂಡ, ಆರ್‌ಪಿಎಫ್ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ. ತುರ್ತು ವೈದ್ಯಕೀಯ ತಂಡಗಳು ಕೂಡ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿವೆ. ಈ ಅಪಘಾತದಿಂದಾಗಿ ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದೆ. ಅಪಘಾತದ ನಂತರ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

You cannot copy content of this page

Exit mobile version