Friday, June 14, 2024

ಸತ್ಯ | ನ್ಯಾಯ |ಧರ್ಮ

ಹೈದ್ರಾಬಾದ್ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ

ಹೈದ್ರಾಬಾದ್ ಕರ್ನಾಟಕದ ಬಗ್ಗೆ ತಾತ್ಸಾರ ಭಾವನೆ ಯಾಕೆ? ಪ್ರತ್ಯೇಕ ರಾಜ್ಯ ಕೇಳಿದ ತಕ್ಷಣ ಉರಿದು ಅಖಂಡ ಕರ್ನಾಟಕದ ಬಗ್ಗೆ ಪಾಠ ಮಾಡುವವರೇ, ಯಾವಾಗಲಾದರೂ ನೀವು ಹೈ.ಕ ದವರನ್ನು ನಮ್ಮವರು ಅಂತ ಭಾವಿಸಿದ್ದು ಇದೆಯೇ? ಉಕ ಪ್ರವಾಹಕ್ಕೆ ತತ್ತರಿಸಿ‌ ಹೋಗಿರುವಾಗ, ಅಲ್ಲಿಗೆ ಅಲ್ಪವಾದರೂ ಸಹಾಯವಾಯಿತು. ಅದೇ ಸಮಯದಲ್ಲಿ ಹೈದ್ರಾಬಾದ್ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳು ನಿಮಗೆ ನೆನಪು ಬರಲಿಲ್ಲ. ನಿಮ್ಮ ಅಖಂಡ ಕರ್ನಾಟಕದ‌ ಭಾವನೆ ಆಗ ಎಲ್ಲಿಗೆ ಹೋಗಿತ್ತು? ಕಾನೂನು ವಿದ್ಯಾರ್ಥಿ ಶಿವರಾಜ್‌ ಮೋತಿಯವರ ಪ್ರಶ್ನೆಗಳಿವು.

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಮಾಡಲು ಹೊರಡುತ್ತಿರುವವರು ಹೈದ್ರಾಬಾದ್ ಕರ್ನಾಟಕದ ಯಾವುದಾದರೂ ಒಂದು ಜಿಲ್ಲೆಯನ್ನು ಆಯ್ದು ಎರಡನೇ ರಾಜಧಾನಿ ಅಥವಾ ಪ್ರತ್ಯೇಕ ರಾಜ್ಯ ಮಾಡಲು ಮುಂದಾಗಬಾರದೇಕೆ?

ಕಲ್ಯಾಣ‌ ಎಂದು ಹೆಸರಿಡುತ್ತಲೇ ಎಷ್ಟೋ‌ ಅನುದಾನವನ್ನು ಕಡಿಮೆ‌ ಮಾಡಿದ ಕೀರ್ತಿ ಅಂದಿನ ಮುಖ್ಯಮಂತ್ರಿಗಳಿಗೆ ಖಂಡಿತವಾಗಿ ಸಲ್ಲಲೇಬೇಕು, ಈ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇದೆ.‌ ಏನಿಲ್ಲ, ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ ಅಷ್ಟೇ, ಇಲ್ಲದಿದ್ದರೆ ಬೆಂಗಳೂರಿನಂತಹ ಇನ್ನೊಂದು ಮಹಾನಗರ ರಾಜಧಾನಿಯಾಗಿ ಹುಟ್ಟಲಿ. ಅಂದರೆ ರಾಜ್ಯ ಒಂದೇ, ರಾಜಧಾನಿಗಳು ಎರಡು ಬೇಕು. ಆಗ ಮಾತ್ರ ನಮ್ಮ ಸಮಸ್ಯೆಗಳು ಬಗೆಹರಿಯಬಹುದು. ನಮ್ಮ ಭಾಗದ ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ ಹಾಗೂ ಅಭಿವೃದ್ಧಿಯ ವಿಷಯದಲ್ಲಿ ಸರಕಾರಕ್ಕೆ ಪ್ರಶ್ನಿಸುವ ಎದೆಗಾರಿಕೆಯ ಧೈರ್ಯವೇ ಇಲ್ಲ.

ನಾವು ಹಿಂದೆ ಹೈದರಾಬಾದ್ ಸಂಸ್ಥಾನದವರು.‌ ನಮ್ಮ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ತೆಲಂಗಾಣವು ಇಂದು ಪ್ರತ್ಯೇಕ ರಾಜ್ಯ ಆಗಿದೆ. ಮಹಾರಾಷ್ಟ್ರದಲ್ಲಿನ ನಮ್ಮ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ವಿದರ್ಭ ಪ್ರಾಂತ್ಯವು ಕೂಡ ವಿಶೇಷ ಸ್ಥಾನಮಾನ ಪಡೆದು ಅಭಿವೃದ್ಧಿ ಹೊಂದುತ್ತಿದೆ. ಆದರೆ ಮೂಲ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ನಂತರ ಕರ್ನಾಟಕ ರಾಜ್ಯ ಸೇರಿದ ನಮ್ಮ ಈ ಏಳು ಜಿಲ್ಲೆಗಳ (ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ) ಜನರಿಗೆ ಇನ್ನೂ ಸಾಂವಿಧಾನಿಕವಾಗಿ ಸಿಗಲೇ ಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿದಿದೆ ಎಂದು ಹಿರಿಯರು ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನಮ್ಮ ಭಾಗಕ್ಕೆ ಸಂವಿಧಾನದ ಕಲಂ ತಿದ್ದುಪಡಿ ತಂದು 371 ಜೆ ಕಲಂ ವಿಶೇಷ ಸ್ಥಾನಮಾನವನ್ನು ಯುಪಿಎ ಸರ್ಕಾರದಲ್ಲಿ ಜಾರಿಗೆ ತರಲಾಗಿದೆ. ಈ ಕಲಂ ಅನ್ವಯ ಅಭಿವೃದ್ಧಿ ಕಾರ್ಯ ಆರಂಭ ಆಗಬೇಕಿತ್ತು. ಆದರೆ ಇದುವರೆಗೂ 371 ಜೆ ಕಲಂ ವಿಶೇಷ ಸ್ಥಾನಮಾನ ಸಮರ್ಪಕವಾಗಿ ಜಾರಿಗೆ ಬಂದಿಲ್ಲ.

ರಾಯಚೂರಿಗೆ ಮಂಜೂರಾಗಿದ್ದ ಐಐಟಿಯನ್ನು ಧಾರವಾಡಕ್ಕೆ ಹೊತ್ತೊಯ್ದವರು ಯಾರೆಂದು ಪ್ರತ್ಯೇಕವಾಗಿ ಬಿಡಿಸಿ ಹೇಳುವ ಪ್ರಮೇಯವೇ ಇಲ್ಲ. ಕಲ್ಯಾಣ ಕರ್ನಾಟಕದ ಜನರ ಬಗ್ಗೆ ಈಗಲೂ ಕಿಂಚಿತ್ತು ಕಾಳಜಿಯಿಲ್ಲದವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೇಳಿದಾಗಲೂ, ಈಗಲೇ ಹೀಗೆ ಮುಂದೆ ಅವರು ಹೇಗೆಯೋ ಎಂದು ನಾವೇ ಅವರಿಗೆ ಇನ್ನಷ್ಟು ಕೊಬ್ಬಲು ಬಿಡಬಾರದೆಂದೇ ಆ ಕೂಗಿಗೆ ನಮ್ಮ ಭಾಗದವರು ಧ್ವನಿಗೂಡಿಸಲಿಲ್ಲ.

ಕಲ್ಯಾಣ ಕರ್ನಾಟಕ ಹಿಂದುಳಿದ ಜಿಲ್ಲೆಗಳನ್ನು ಹೊಂದಿದೆ. ಇಲ್ಲಿ ಜನಹಿತವಾದ ಮಹೋನ್ನತವಾದ ಯಾವ ಕಲ್ಯಾಣವೂ ಆಗುತ್ತಿಲ್ಲವಾದ್ದರಿಂದ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಎಲ್ಲಾ ವಿಧದಲ್ಲೂ ಇವು ಹಿಂದುಳಿದಿವೆ. ಈ ನಿಟ್ಟಿನಲ್ಲಿ ಜನಾರ್ದನ ರೆಡ್ಡಿಯವರು ನಮಗೂ ಒಂದು ಪ್ರಾದೇಶಿಕ ಪಕ್ಷ ಇರಲೆಂದು ಪಕ್ಷ ಕಟ್ಟಿದ್ದ ಪರಿ ಶ್ಲಾಘನೀಯವೂ ಆಗಿದೆ. ನಮ್ಮ ಭಾಗದ ಜನ ಎಚ್ಚೆತ್ತು ಕೊಂಡರೆ ಈ ವಿಷಯದಲ್ಲಿ ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹೊಸದೊಂದು ಚರಿತ್ರೆಯನ್ನು ಸೃಷ್ಟಿಸಬಹುದು.

ನಮಗೆ ಬಜೆಟಲ್ಲಿ ಪ್ರತಿಸಲವೂ ಅನ್ಯಾಯವಾಗುತ್ತಿದೆ. ನಮ್ಮ ಭಾಗದ ಶಾಸಕರಂತೂ ಮೌನವಾಗಿರುತ್ತಾರೆ. ಯಾರೂ ಪಕ್ಷಭೇದ ಮರೆತು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಮಾಡುವುದು ಕಂಡು ಬರುವುದಿಲ್ಲ. ಪರಿಹಾರ ಸಿಗಲಿಲ್ಲವೆಂದು ನಮ್ಮ ಹೈದ್ರಾಬಾದ್ ಕರ್ನಾಟಕಕ್ಕಾಗಿ ರಾಜೀನಾಮೆ‌ ಕೊಟ್ಟು ಹೊರ ಬರುವುದೂ ಇಲ್ಲ. ಅಷ್ಟೊಂದು ಅಧಿಕಾರಕ್ಕಾಗಿ ಅಂಟಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಪ್ರತ್ಯೇಕ ರಾಜ್ಯ ಆಗಬಹುದು. ಆದರೆ ಪ್ರತ್ಯೇಕ ರಾಜ್ಯ ಮಾಡುವ ಅಧಿಕಾರ ಸಂಸತ್ತು ಮತ್ತು ಪ್ರಧಾನಿಗಳಿಗಿದೆ. ನಮ್ಮ ಕೂಗು ದೆಹಲಿಗೆ ಕೇಳಿಸಿದ್ರೆ ಮಾತ್ರ ರಾಜ್ಯ ಸಿಗುತ್ತೆ.‌‌ ಈಗಾಗಲೇ ಸುಖಾಸುಮ್ಮನೇ ಸಿಎಂ ಸ್ಥಾನಕ್ಕಾಗಿ ಹೋರಾಡಿ, ಮಂಕುಬೂದಿ ಆಗಿದ್ದನ್ನು ನಾವ್ಯಾರೂ ಮರೆತಿಲ್ಲ.

ಹೈದ್ರಾಬಾದ್ ಕರ್ನಾಟಕದ ಬಗ್ಗೆ ಈ ‌ರೀತಿಯ ತಾತ್ಸಾರ ಭಾವನೆ ಯಾಕೆ? ಪ್ರತ್ಯೇಕ ರಾಜ್ಯ ಕೇಳಿದ ತಕ್ಷಣ ಉರಿದು ಅಖಂಡ ಕರ್ನಾಟಕದ ಬಗ್ಗೆ ಪಾಠ ಮಾಡುವವರೇ, ಯಾವಾಗಲಾದರೂ ನೀವು ಹೈ.ಕದವರನ್ನು ನಮ್ಮವರು ಅಂತ ಭಾವಿಸಿದ್ದು ಇದೆಯೇ? ಹೈದ್ರಾಬಾದ್ ಕರ್ನಾಟಕ ಪ್ರತ್ಯೇಕ ಅಂತ ಕೇಳಿದ ತಕ್ಷಣವೇ ರಾಜ್ಯ ಒಡೆಯುವವರು, ಅದು ಇದು ಅಂತೆಲ್ಲ ಹೇಳ್ತೀರಲ್ವ‌‌.? ಉ.ಕ ಪ್ರವಾಹಕ್ಕೆ ತತ್ತರಿಸಿ‌ ಹೋಗಿರುವಾಗ, ಅಲ್ಲಿಗೆ ಅಲ್ಪವಾದರೂ ಸಹಾಯವಾಯಿತು. ಅದೇ ಸಮಯದಲ್ಲಿ ಹೈದ್ರಾಬಾದ್ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳು ನಿಮಗೆ ನೆನಪು ಬರಲಿಲ್ಲ. ನಿಮ್ಮ ಅಖಂಡ ಕರ್ನಾಟಕದ‌ ಭಾವನೆ ಆಗ ಎಲ್ಲಿಗೆ ಹೋಗಿತ್ತು ಹೇಳಿ ನೋಡುವಾ.? ನಿಮ್ಮ ಭಾಗದ ರಾಜಕಾರಣಿಗಳಿಗೆ ಕೇಳಿ ಅಂತ ಉಪದೇಶ ನೀಡಲು ಮಾತ್ರ ಬರಬೇಡಿ.

ನಿಮ್ಮಲ್ಲಿ‌ ಮಾನವೀಯತೆ ನಶಿಸಿದ ಮೇಲೆ ನಾವಿನ್ನು ಕಠೋರ ಹೃದಯದಿಂದಲೇ, ವಿಷಾದದೊಂದಿಗೆ‌ ಹೈದ್ರಾಬಾದ್ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ ಎಂದು ಕೇಳಿಯೇ ಕೇಳುತ್ತೇವೆ.

ದಶಕಗಳ ಸುದೀರ್ಘ ಹೋರಾಟದ ಫಲವಾಗಿ ಸಾಂವಿಧಾನಿಕ ತಿದ್ದುಪಡಿಯಿಂದ 371(ಜೆ) ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರೆತ ವಿಶೇಷ ಮೀಸಲಾತಿಗೆ ಸಂಬಂಧಿಸಿದಂತೆ ವೈದ್ಯಕೀಯ ಕೋಟಾದ ವಿಚಾರವಾಗಿ ಭಾಷೆಯನ್ನು ಮುಂದಿಟ್ಟುಕೊಂಡು ವೈದ್ಯಕೀಯ ಪ್ರವೇಶಗಳನ್ನು ನಿರಾಕರಿಸಿ, ಮೀಸಲಾತಿಯನ್ನು ಪ್ರಶ್ನಿಸಿ ಉಚ್ಚ  ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾವೆ ಹೂಡಿದ್ದ ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ರೆಡ್ಡಿಯಂತಹವರನ್ನು ಆತನ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಸೇರಿ ಎಲ್ಲಾ ವ್ಯವಹಾರಗಳನ್ನು ಜಿಲ್ಲೆಯಿಂದ ಹೊರ ಹಾಕಬೇಕಾಗಿತ್ತು. ಆ ಪ್ರಯತ್ನವೂ ನಮ್ಮ ರಾಜಕಾರಣಿಗಳಿಂದ ನಡೆಯಲಿಲ್ಲ, ಅದು ಸಾಧ್ಯವೂ ಕೂಡ ಆಗಲಿಲ್ಲ.

ಇದನ್ನೂ ಓದಿhttp://ಉರಿ ನಂಜು ಕಡೆಗಣಿಸುವ ಹಾಗಿತ್ತೇ?

ಹೈದರಾಬಾದ್ ಕರ್ನಾಟಕ ಭಾಗದ ಹಿತಾಸಕ್ತಿಗಾಗಿ ಮತ್ತು ನಮ್ಮ ಇಡೀ ರಾಜ್ಯಕ್ಕೆ ಧಕ್ಕೆ ಬಾರದಂತೆ ಬಸವಾದಿ ಶರಣರ ತತ್ವಕ್ಕೆ ಅನುಗುಣವಾಗಿ ಕಲ್ಯಾಣ ಕರ್ನಾಟಕ ನಿರ್ಮಿಸಲು ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಕುರಿತು ಚುನಾವಣಾ ಆಯೋಗದಲ್ಲಿ ಹೊಸ ಪಕ್ಷದ ನೋಂದಣಿಗೆ ದೆಹಲಿ ಮಟ್ಟದಲ್ಲಿ ಪ್ರಯತ್ನಿಸುತ್ತಿರುವವರಿಗೆ ನಮ್ಮ ಭಾಗದ ಏಳಿಗೆಗಾಗಿ ನಮ್ಮವರು ಮಾಡುವ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲ ಸೂಚಿಸೋಣ! ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟ ಮಾದರಿಯನ್ನು ಮುಂದಿನ ದಿನಗಳಲ್ಲಿ ನಾವೇಕೆ ಅನುಸರಿಸಬಾರದು? ಅನ್ನುವ ಗಂಭೀರವಾದ  ಪ್ರಶ್ನೆ‌ಯನ್ನು ರಾಯಚೂರು ಜಿಲ್ಲೆಯ ಮಾನ್ವಿಯ ಖ್ಯಾತ ಹಿರಿಯ ಪತ್ರಕರ್ತರಾದ ಬಸವರಾಜ‌ ಭೋಗಾವತಿಯವರು ಐದು ವರ್ಷಗಳ ಹಿಂದೆಯೇ ಎತ್ತಿದ್ದಾರೆ.

ಕಲ್ಯಾಣ ಕರ್ನಾಟಕ ಅಂತ ಹೆಸರಿಗಷ್ಟೇ ಘೋಷಣೆ ಮಾಡಿ ಏನು ಉದ್ಧಾರ ಮಾಡಿದ್ದಾರೆ? ಪ್ರತ್ಯೇಕ ರಾಜ್ಯ ಮಾಡಿಯಾದರೂ ಉದ್ಧರಿಸಬಹುದೇನೂ ಎಂಬ ಆಶಾಭಾವನೆಯೊಂದಿಗೆ, ನಮ್ಮ ಭಾಗವನ್ನು ಕಲ್ಯಾಣ ಮಾಡದೇ, ಆಸೆ ತೋರಿಸಿ ಮೋಸ ಮಾಡುತ್ತಾ ಈಗಲೂ ಅಭಿವೃದ್ಧಿ ವಿಷಯದಲ್ಲಿ ಕೂಡ ನಮ್ಮನ್ನು ತುಳಿಯುತ್ತಾ, ಅನ್ಯಾಯ ಮಾಡುತ್ತಿರುವ ನೀವು ನಮ್ಮ ಭಾಗದ ಸಮಸ್ತ ಜನತೆಗೆ ದ್ರೋಹ ಬಗೆಯುತ್ತಿದ್ದೀರಿ!

ಮತ್ತೊಂದು ಚುನಾವಣೆ ಬಂದಿದೆ. ನಮ್ಮ ನಿರೀಕ್ಷೆಯನ್ನು ಈಡೇರಿಸುವ ಭರವಸೆ ನೀಡುವ ಅಭ್ಯರ್ಥಿಗಳಿಗೆ ಮತಚಲಾಯಿಸೋಣ.  

ಶಿವರಾಜ್ ಮೋತಿ

ಕಾನೂನು ವಿದ್ಯಾರ್ಥಿ

ಹಟ್ಟಿ ಚಿನ್ನದ ಗಣಿ, ರಾಯಚೂರು ಜಿಲ್ಲೆ

ಇದನ್ನೂ ಓದಿ-http://ರಂಗಭೂಮಿಗೆ ಪಕ್ಷ ರಾಜಕಾರಣದ ಧೂಳು?

Related Articles

ಇತ್ತೀಚಿನ ಸುದ್ದಿಗಳು