Saturday, June 15, 2024

ಸತ್ಯ | ನ್ಯಾಯ |ಧರ್ಮ

BMTC ಎಲೆಕ್ಟ್ರಿಕ್‌ ಬಸ್ಸುಗಳಿಗೆ ಮಲಯಾಳಿ ಡ್ರೈವರುಗಳು | ಸರ್ಕಾರದಿಂದ ರಾಜ್ಯದ ಯುವಕರಿಗೆ ಮೋಸ: ಆರ್‌ ಅಶೋಕ ಆಕ್ರೋಶ

ಬೆಂಗಳೂರು: ಬೆಂಗಳೂರಿನ ಬಿಎಮ್‌ಟಿಸಿ ಬಸ್ಸುಗಳಲ್ಲಿ ಕನ್ನಡ ಬಾರದ ಮಲಯಾಳಿ ಯುವಕರನ್ನು ಚಾಲಕರನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದ್ದು ಈ ಕುರಿತು ವಿಪಕ್ಷ ನಾಯಕ ಆರ್‌ ಅಶೋಕ ಪ್ರತಿಕ್ರಿಯಿಸಿದ್ದಾರೆ. ಅವರು ಸರ್ಕಾರವು ರಾಜ್ಯದ ಯುವಕರಿಗೆ ಸರ್ಕಾರ ಮೋಸ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಈಗ ಕೇರಳದ ಮಲೆಯಾಳಿ ಯುವಕರು ಹೆಚ್ಚೆಚ್ಚು ಮಂದಿ ಚಾಲಕರಾಗಿ ನೇಮಕಗೊಳ್ಳುತ್ತಿದ್ದಾರೆ. ಇದರಿಂದ ಕಂಡಕ್ಟರ್​​ಗಳಿಗೂ ಸಮಸ್ಯೆ ಎದುರಾಗಿದೆ. ಅವರಿಗೆ ಕನ್ನಡ ಬಾರದ ಕಾರಣ ಕರ್ತವ್ಯದ ಸಮಯದಲ್ಲಿ ಈ ಚಾಲಕರಿಗೆ ನಿರ್ದೇಶನ ನೀಡಲು ಕಷ್ಟವಾಗುತ್ತಿದೆ ಎಂದು ಕಂಡಕ್ಟರ್‌ಗಳು ದೂರುತ್ತಿರುವುದಾಗಿ ಇಂದು ಕನ್ನಡ ವಾಹಿನಿ ಟಿವಿ9 ವರದಿ ಮಾಡಿತ್ತು.

ಈಗ ವಿಷಯವು ಸೊಷಿಯಲ್‌ ಮೀಡಿಯಾದಲ್ಲಿ ವಿವಾದದ ಕೇಂದ್ರವಾಗಿದ್ದು, ಹಲವು ಕನ್ನಡ ಪರ ಹೋರಾಟಗಾರರು ಇಲಾಖೆಯ ಈ ಕ್ರಮವನ್ನು ವಿರೋಧಿಸುತ್ತಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಹೊರ ರಾಜ್ಯದ ಯುವಕರನ್ನು ಸರ್ಕಾರಿ ಇಲಾಖೆಗಳಲ್ಲಿ ನೇಮಿಸಿಕೊಳ್ಳುವುದರ ಹಿಂದಿನ ಔಚಿತ್ಯವನ್ನು ಅವರು ಪ್ರಶ್ನಿಸುತ್ತಿದ್ದಾರೆ.

BMTC ಯಲ್ಲಿ ಸುಮಾರು ಆರು ಸಾವಿರಕ್ಕೂ ಮಿಕ್ಕಿ ಬಸ್ಸುಗಳಿದ್ದು ಅವುಗಳಲ್ಲಿ  648 ಬಸ್ಸುಗಳನ್ನು ಗುತ್ತಿಗೆ ಆಧಾರದಲ್ಲಿ ಮೂರು ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆ ಬಸ್​ಗಳಿಗೆ ಕಂಡಕ್ಟರ್​​ಗಳು ಬಿಎಂಟಿಸಿಯಿಂದ, ಚಾಲಕರನ್ನು ಮಾತ್ರ ಖಾಸಗಿ ಕಂಪನಿಗಳಿಂದ ತೆಗೆದುಕೊಳ್ಳಲಾಗಿದೆ. ಆದರೆ ಒಂದು ‌ಕಂಪನಿ ಮಾತ್ರ ಚಾಲಕರಿಗೆ 22500 ರೂ. ಹಾಗೂ ವಸತಿ ವ್ಯವಸ್ಥೆ ಮಾಡುತ್ತೇವೆ ಎಂದು ಕೆಲಸಕ್ಕೆ ತೆಗೆದುಕೊಂಡು ಈಗ 18 ಸಾವಿರ ರೂಪಾಯಿ ಮಾತ್ರ ನೀಡುತ್ತಿದೆ ಎನ್ನಲಾಗಿದೆ ಎಂದು TV9 ತನ್ನ ವರದಿಯಲ್ಲಿ ತಿಳಿಸಿದೆ.

ಈ ಕಾರಣಗಳಿಂದಾಗಿ ಈ ಖಾಸಗಿ ಸಂಸ್ಥೆಗಳ ಬಸ್ಸಿನ ಚಾಲಕರು ಕೆಲಸ ಬಿಟ್ಟು ಹೋಗುತ್ತಿದ್ದು ಅವರ ಬದಲಿಗೆ ಮಲಯಾಳಿ ಚಾಲಕರನ್ನು ಕಡಿಮೆ ಸಂಬಳಕ್ಕೆ ನೇಮಿಸಿಕೊಳ್ಳಲಾಗುತ್ತಿದೆ. ಈ ಕನ್ನಡ ಬಾರದ ಚಾಲಕರು ಕನ್ನಡ ಮಾತ್ರ ತಿಳಿದಿರುವ ಕಂಡಕ್ಟರುಗಳ ಪಾಲಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಬೆಂಗಳೂರಿನಂತಹ ಟ್ರಾಫಿಕ್ಕಿನಿಂದ ಕೂಡಿದ ನಗರದಲ್ಲಿ ಡ್ರೈವಿಂಗ್‌ ಮಾಡಲು ಕಂಡಕ್ಟರ್‌ ಸಹಾಯವೂ ಬೇಕಾಗುತ್ತದೆ. ಆದರೆ ಈ ಮಲಯಾಳಿ ಡ್ರೈವರುಗಳಿಗೆ ಕನ್ನಡ ಬಾರದ ಕಾರಣ ಕಂಡಕ್ಟರ್‌ ಹೇಳಿದ್ದು ಅರ್ಥವಾಗದ ಅಪಘಾತಗಳು ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಈಗ ಈ ಕುರಿತು ವಿಪಕ್ಷ ನಾಯಕ ಆರ್‌ ಅಶೋಕ ಕೂಡಾ ಪ್ರತಿಕ್ರಿಯಿಸಿದ್ದು, “ಬಿಎಂಟಿಸಿ ಎಲಕ್ಟ್ರಿಕ್ ಬಸ್ ಚಾಲಕರ ಹುದ್ದೆಗೆ ಖಾಸಗಿ ಏಜೆನ್ಸಿ ಮೂಲಕ 22,500 ರೂಪಾಯಿ ವೇತನ ಕೊಟ್ಟು ಕೇರಳದ ಮಲಯಾಳಿ ಯುವಕರನ್ನು ನೇಮಕ ಮಾಡಿಕೊಂಡಿರುವ ಸರ್ಕಾರ, ಕರ್ನಾಟಕದ ನಿರುದ್ಯೋಗಿ ಯುವಕರಿಗೆ ಮಾತ್ರ ಯುವನಿಧಿ ಗ್ಯಾರೆಂಟಿ ಹೆಸರಿನಲ್ಲಿ ಪಂಗನಾಮ ಹಾಕಿದೆ. ಸಿಎಂ ಅವರೇ, ಬಿಎಂಟಿಸಿ ಬಸ್ಸು ಚಾಲಕರ ಹುದ್ದೆಗೆ ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳಲು ಕರ್ನಾಟಕದಲ್ಲಿ ಉದ್ಯೋಗಾಕಾಂಕ್ಷಿಗಳೇ ಇಲ್ಲವೇ? ಕನ್ನಡಿಗರ ತೆರಿಗೆ ಹಣದಲ್ಲಿ ನಡೆಯುವ ಬಿಎಂಟಿಸಿ ಸಂಸ್ಥೆಯ ದುಡ್ಡನ್ನು ಕರ್ನಾಟಕದ ಯುವಕರಿಗೆ ಉದ್ಯೋಗ ನೀಡಲು ಬಳಸದೆ ಕೇರಳದ ಪಾಲಾಗಲು ಬಿಡುವುದು ಯಾವ ಸೀಮೆ ನ್ಯಾಯ? ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ಕರ್ನಾಟಕದ ಯುವಕರ ಮೇಲೆ ಯಾಕಿಷ್ಟು ತಾತ್ಸಾರ?” ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ಕುರಿತು ಇಲಾಖೆ ಹಾಗೂ ಸರ್ಕಾರದ ಪ್ರತಿಕ್ರಿಯೆ ಇನ್ನಷ್ಟೇ ತಿಳಿದುಬರಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು