Home ರಾಜ್ಯ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಿಂದಾಗಿ ಹಿಂದೂ ಧರ್ಮವು ಅಳಿವಿನ ಹಾದಿಯಲ್ಲಿದೆ: ಮಲ್ಲಿಕಾರ್ಜುನ ಖರ್ಗೆ

ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಿಂದಾಗಿ ಹಿಂದೂ ಧರ್ಮವು ಅಳಿವಿನ ಹಾದಿಯಲ್ಲಿದೆ: ಮಲ್ಲಿಕಾರ್ಜುನ ಖರ್ಗೆ

0

ಕಲಬುರಗಿ: ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಪಿಡುಗಿನ ಕಾರಣದಿಂದಾಗಿ ಹಿಂದೂ ಧರ್ಮವು ಅಳಿವಿನ ಹಾದಿಯಲ್ಲಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ವಿಜಯದಶಮಿ ದಿನದಂದು ಕಲಬುರಗಿಯ ಬುದ್ಧ ವಿಹಾರದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ 70ನೇ ‘ಧಮ್ಮ ಚಕ್ರ ಪ್ರವರ್ತನ ದಿನ’ (ಬೌದ್ಧ ಧರ್ಮ ಸ್ವೀಕರಿಸಿದ ದಿನ) ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ಭಾಷಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಲುವನ್ನು ನೆನಪಿಸಿದ ಖರ್ಗೆ, ಹಿಂದೂ ಧರ್ಮದಲ್ಲಿನ ಅನ್ಯಾಯ ಮತ್ತು ಅಸ್ಪೃಶ್ಯತೆಯನ್ನು ಖಂಡಿಸಿ 1935ರಲ್ಲೇ ತಾನು ಹಿಂದೂ ಆಗಿ ಹುಟ್ಟಿದ್ದರೂ ಹಿಂದೂ ಆಗಿ ಸಾಯುವುದಿಲ್ಲ ಎಂದು ಅಂಬೇಡ್ಕರ್ ಘೋಷಿಸಿದ್ದರು ಎಂದು ಸ್ಮರಿಸಿದರು.

ಇಂದಿಗೂ ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂಬುದಕ್ಕೆ ನಿದರ್ಶನಗಳನ್ನು ನೀಡಿದ ಅವರು, ಉತ್ತರಾಖಂಡದಲ್ಲಿ ತಾವು ಭಾಷಣ ಮಾಡಿದ ಸ್ಥಳವನ್ನು ಎರಡು ದಿನಗಳ ಬಳಿಕ ಶುಚಿಗೊಳಿಸಿರುವುದನ್ನು ಪ್ರಸ್ತಾಪಿಸಿದರು.

ತಕ್ಷಣವೇ ಸ್ವಚ್ಛಗೊಳಿಸಿದ್ದರೆ ಕೊಳೆ ತೆಗೆಯಲು ಎಂದು ಭಾವಿಸಬಹುದಿತ್ತು, ಆದರೆ ಎರಡು ದಿನಗಳ ಬಳಿಕ ಶುದ್ಧೀಕರಣ ಮಾಡುವುದು ಯಾವ ರೀತಿಯ ಮೂಢನಂಬಿಕೆ ಮತ್ತು ಮಾನಸಿಕ ಹಿಂಸೆ ಎಂದು ಅವರು ಪ್ರಶ್ನಿಸಿದರು.

ಇದೇ ವೇಳೆ ತಾರತಮ್ಯ ಧೋರಣೆಗಳನ್ನು ಟೀಕಿಸಿದ ಅವರು, “ನೀವು ಮಾರ್ಟಿನ್, ಮೊಹಮ್ಮದ್ ಅವರನ್ನು ಆಹ್ವಾನಿಸುತ್ತೀರಿ, ಆದರೆ ಮಲ್ಲಿಕಾರ್ಜುನನನ್ನು ಆಹ್ವಾನಿಸುವುದಿಲ್ಲ. ನನ್ನ ಜನರನ್ನು ಏಕೆ ಬಹಿಷ್ಕರಿಸುತ್ತೀರಿ? ನಮಗೆ ನೀರು ಅಥವಾ ಶಿಕ್ಷಣವನ್ನು ಏಕೆ ನೀಡುವುದಿಲ್ಲ? ನಾವೇನು ಮನುಷ್ಯರಲ್ವಾ? ಹಿಂದೂ ಧರ್ಮದೊಳಗೆ ಒಡಕುಗಳು ಮೂಡಲು ಇದೇ ಕಾರಣವಲ್ಲವೇ?” ಎಂದು ನೇರ ಪ್ರಶ್ನೆಗಳನ್ನು ಮುಂದsದರು.

ಧರ್ಮದ ಹೆಸರಿನಲ್ಲಿ ಜನರನ್ನು ದಾಸ್ಯದಲ್ಲಿಡಲಾಗಿತ್ತು ಎಂದ ಖರ್ಗೆ, ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಅಂಬೇಡ್ಕರ್ ಎಲ್ಲರಿಗೂ ವಿಮೋಚನೆಯ ಮಾರ್ಗ ತೋರಿಸಿಕೊಟ್ಟರು ಎಂದು ತಿಳಿಸಿದರು. ವಿದೇಶ ಮೂಲದ ಧರ್ಮಗಳನ್ನು ಸ್ವೀಕರಿಸಿದರೆ ದೇಶದ ಐಕ್ಯತೆಗೆ ಧಕ್ಕೆಯಾಗಬಹುದು ಎಂಬ ದೂರದೃಷ್ಟಿಯಿಂದಲೇ ಅವರು ಭಾರತದ ಪ್ರಾಚೀನ ಧರ್ಮವಾದ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಂಡರು ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

You cannot copy content of this page

Exit mobile version