Wednesday, January 28, 2026

ಸತ್ಯ | ನ್ಯಾಯ |ಧರ್ಮ

ಅಜಿತ್ ಪವಾರ್ ಸಾವು : ‘ದುಷ್ಕೃತ್ಯದ ಶಂಕೆ’ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ

ಬಾರಾಮತಿಯಲ್ಲಿ ನಡೆದ ವಿಮಾನ ಅವಘಡದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ದುರ್ಮರಣಕ್ಕೀಡಾದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಘಟನೆ ಕೇವಲ ಅಪಘಾತವಲ್ಲ, ಇದರ ಹಿಂದೆ ದುಷ್ಕೃತ್ಯದ ಸಾಧ್ಯತೆಯಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, “ಅಜಿತ್ ಪವಾರ್ ಅವರ ನಿಧನದ ಸುದ್ದಿ ನನಗೆ ತೀವ್ರ ಆಘಾತ ತಂದಿದೆ. ಇದು ಸಾಮಾನ್ಯ ಅಪಘಾತವಾಗಿರುವಂತೆ ಕಾಣುತ್ತಿಲ್ಲ. ಇದರ ಹಿಂದೆ ಯಾವುದೋ ಪಿತೂರಿ ಇರಬಹುದೆಂಬ ಶಂಕೆ ಇದೆ. ದೇಶದಲ್ಲಿ ರಾಜಕೀಯ ನಾಯಕರಿಗೂ ಸುರಕ್ಷತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.

ಕೇಂದ್ರ ತನಿಖಾ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡಿವೆ ಎಂದು ಆರೋಪಿಸಿದ ಅವರು, ಈ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಅಜಿತ್ ಪವಾರ್ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ತೊರೆದು ವಿರೋಧ ಪಕ್ಷಗಳ ಒಕ್ಕೂಟಕ್ಕೆ ಸೇರ್ಪಡೆಯಾಗುವ ಬಗ್ಗೆ ಚಿಂತನೆ ನಡೆಸುತ್ತಿದ್ದರು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಅಂಶವನ್ನು ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ, ಪಕ್ಷಾಂತರದ ಕುರಿತು ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ಈ ವಿಷಯದಲ್ಲಿ ಮಮತಾ ಬ್ಯಾನರ್ಜಿ ಮಾತ್ರವಲ್ಲದೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಹಾಗೂ ವಂಚಿತ್ ಬಹುಜನ ಆಘಾಡಿ ನಾಯಕ ಪ್ರಕಾಶ್ ಅಂಬೇಡ್ಕರ್ ಕೂಡ ಸಮಗ್ರ ಹಾಗೂ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದಾರೆ.

ಬುಧವಾರ ಬೆಳಿಗ್ಗೆ ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಲಿಯರ್‌ಜೆಟ್ 45 ವಿಮಾನವು ಲ್ಯಾಂಡಿಂಗ್ ಪ್ರಯತ್ನದ ವೇಳೆ ಪತನಗೊಂಡಿದ್ದು, ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page